ರೈಲಿನ ವಾಶ್ ಬೇಸನ್ ಮೇಲೆ ಪಿಸ್ತೂಲ್ ಬಿಟ್ಟು ಹೋದ ಕಾನ್‌ಸ್ಟೇಬಲ್ ಮುಂದೇನಾಯ್ತು ಗೊತ್ತಾ!
ಮಂಡ್ಯ, ಡಿಸೆಂಬರ್ 19: ಬೇಜವಾಬ್ದಾರಿ ಸಶಸ್ತ್ರ ಪೊಲೀಸ್ ಪೇದೆಯೋರ್ವ ರೈಲಿನ ಶೌಚಾಲಯದಲ್ಲಿ ಪಿಸ್ತೂಲ್ ಮರೆತು ಬಂದ ಕಾರಣ ರೈಲ್ವೆ ಬೋಗಿಯೊಳಗೆ ಕೆಲ ಕಾಲ ಆತಂಕದ ಪರಿಸ್ಥತಿ ನಿರ್ಮಾಣವಾಗಿತ್ತು.
ಮಂಡ್ಯ ಜಿಲ್ಲಾ ಸಶಸ್ತ್ರ ಪೊಲೀಸ್ ಪೇದೆಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ನಾಗರಾಜು ಎಂಬುವರೇ ರೈಲಿನ ಶೌಚಾಲಯದಲ್ಲಿ ಪಿಸ್ತೂಲ್ ಮರೆತು ಬಂದು ಆತಂಕ ಸೃಷ್ಠಿಸಿದವರಾಗಿದ್ದಾರೆ.

ವಿಶೇಷ ಸರ್ಕಾರಿ ಅಭಿಯೋಜಕರ ಅಂಗರಕ್ಷಕರಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ನಾಗರಾಜು, ಬೆಂಗಳೂರಿನಿಂದ ಮಂಡ್ಯಕ್ಕೆ ಮಧ್ಯಾಹ್ನ ಕಾಚಿಗುಡಿ ಎಕ್ಸ್‌ಪ್ರೆಸ್ ರೈಲಿನಲ್ಲಿ ಪ್ರಯಾಣಿ ಮಾಡಿದ್ದರು. ಈ ವೇಳೆ ಅವರು ಶೌಚಾಲಯಕ್ಕೆ ಹೋಗಿದ್ದಾರೆ. ಶೌಚ ಮುಗಿಸಲು ಸೊಂಟದ ಬೆಲ್ಟ್‌ನಲ್ಲಿದ್ದ ಪಿಸ್ತೂಲನ್ನು ತೆಗೆದು ಅಲ್ಲಿನ ವಾಸ್‌ಬೇಸಿನ್ ಕಟ್ಟೆ ಮೇಲಿಟ್ಟಿದ್ದಾರೆ. ನಂತರ ಸ್ವಚಗೊಳಿಸಿಕೊಂಡು ಪಿಸ್ತೂಲ್ ಶೌಚಾಲಯದಲ್ಲೇ ಬಿಟ್ಟು ಹೊರ ಬಂದಿದ್ದಾರೆ.
ಪ್ರಯಾಣಿಕರೊಬ್ಬರು ರೈಲಿನ ಶೌಚಾಲಯಕ್ಕೆ ಹೋಗಿ ಅಲ್ಲಿ ಪಿಸ್ತೂಲ್ ಇರುವುದನ್ನು ಕಂಡು ಗಾಭರಿಗೊಂಡು ಹೊರಗೋಡಿಬಂದಿದ್ದಾರೆ. ಸಹ ಪ್ರಯಾಣಿಕರಿಗೂ ಈ ವಿಚಾರ ತಿಳಿಸಿದ್ದಾರೆ. ಘಟನೆಯಿಂದಾಗಿ ಕೆಲ ಕಾಲ ರೈಲು ಬೋಗಿಯೊಳಗೆ ಗೊಂದಲದ ವಾತಾವರಣ ನಿರ್ಮಾಣವಾಗಿದೆ. ಪ್ರಯಾಣಿಕರೆಲ್ಲರೂ ಆತಂಕಕ್ಕೆ ಒಳಗಾಗಿದ್ದಾರೆ.
ಅಷ್ಟರಲ್ಲಿ ರೈಲುಗಾಡಿ ಮಂಡ್ಯ ರೈಲು ನಿಲ್ದಾಣಕ್ಕೆ ಆಗಮಿಸುತ್ತಿದ್ದಂತೆ ಈ ವಿಚಾರವನ್ನು ರೈಲ್ವೆ ಪೊಲೀಸರಿಗೆ ತಿಳಿಸಿದ್ದಾರೆ. ತಕ್ಷಣ ಎಚ್ಚೆತ್ತ ರೈಲ್ವೆ ಪೊಲೀಸರು ತಪಾಸಣೆ ನಡೆಸಿ ರೈಲಿನ ಶೌಚಾಲಯದಲ್ಲಿದ್ದ ಪಿಸ್ತೂಲನ್ನು ವಶಕ್ಕೆ ಪಡೆದು ಪರಿಶೀಲನೆ ನಡೆಸಿದ್ದಾರೆ. ಪಿಸ್ತೂಲ್ ಮೇಲಿನ ಸಂಖ್ಯೆಯನ್ನು ಬೆಂಗಳೂರಿನ ರೈಲ್ವೆ ಕಂಟ್ರೋಲ್ ರೂಂಗೆ ಮಾಹಿತಿ ನೀಡಿದ್ದಾರೆ. ರೈಲ್ವೆ ಪೊಲೀಸರು ಉನ್ನತಾಧಿಕಾರಿಗಳೆ ಸುದ್ಧಿ ಮುಟ್ಟಿಸಿದ್ದು, ನಂತರ ಮಂಡ್ಯ ಜಿಲ್ಲಾ ಸಶಸ್ತ್ರ ಪೊಲೀಸ್ ಪಡೆಗೆ ಸೇರಿದ ಪಿಸ್ತೂಲ್ ಆಗಿದೆ ತಿಳಿದುಬಂದಿದೆ.
ತಕ್ಷಣ ಮಂಡ್ಯ ಜಿಲ್ಲಾ ಪೊಲೀಸ್ ಅಧೀಕ್ಷರಿಗೆ ಮಾಹಿತಿ ನೀಡಿದ್ದು, ಅವರೂ ಸಹ ಮಾಹಿತಿಯನ್ನಾಧರಿಸಿ ಡಿಆರ್‌ನಲ್ಲಿ ತಪಾಸಣೆ ನಡೆಸಿದಾಗ ಸದರಿ ಪಿಸ್ತೂಲ್ ಪೇದೆ ನಾಗರಾಜು ಅವರಿಗೆ ನೀಡಿದ್ದು, ಅವರು ವಿಶೇಷ ಅಭಿಯೋಜಕರ ಅಂಗರಕ್ಷಕರಾಗಿರುವುದು ದಾಖಲೆಗಳಿಂದ ತಿಳಿದು ಬಂದಿದೆ.
ಪೇದೆ ಅಮಾನತ್ತು :
ಜಿಲ್ಲಾ ಸಶಸ್ತ್ರ ಪೊಲೀಸ್ ಪೇದೆ ನಾಗರಾಜು ಅವರನ್ನು ಕರ್ತವ್ಯ ಲೋಪದ ಹಿನ್ನೆಲೆಯಲ್ಲಿ ಜಿಲ್ಲಾ ಪೊಲೀಸ್ ಅಧೀಕ್ಷಕ ಎನ್.ಯತೀಶ್ ಅಮಾನತ್ತು ಮಾಡಿ ಆದೇಶ ಹೊರಡಿಸಿ, ಇಲಾಖಾ ತನಿಖೆಗೆ ಒಳಪಡಿಸಿದ್ದಾರೆ.












Click it and Unblock the Notifications