ಮೇಲುಕೋಟೆ: 300 ಕೋಟಿ ರೂಪಾಯಿ ವೆಚ್ಚದಲ್ಲಿ ರಸ್ತೆ, ಕೆರೆಗಳ ಅಭಿವೃದ್ಧಿಗೆ ಟೆಂಡರ್ ಆಗಿದೆ: ಸಿ.ಎಸ್.ಪುಟ್ಟರಾಜು
ಮಂಡ್ಯ, ಮಾರ್ಚ್, 17: ಮೇಲುಕೋಟೆ ವಿಧಾನಸಭಾ ಕ್ಷೇತ್ರಕ್ಕೆ ಸೇರಿದ ದುದ್ದ ಹೋಬಳಿಗೆ ಸುಮಾರು 300 ಕೋಟಿ ರೂಪಾಯಿ ವೆಚ್ಚದಲ್ಲಿ ರಸ್ತೆ ಮತ್ತು ಕೆರೆಗಳ ಅಭಿವೃದ್ಧಿ ಕಾಮಗಾರಿಗೆ ಟೆಂಡರ್ ಆಗಿದೆ ಎಂದು ಶಾಸಕ ಸಿ.ಎಸ್.ಪುಟ್ಟರಾಜು ಆನಕುಪ್ಪೆ ಗ್ರಾಮದಲ್ಲಿ ಹೇಳಿದರು.
ಮೇಲುಕೋಟೆ ತಾಲೂಕಿನ ಆನಕುಪ್ಪೆ ಗ್ರಾಮದಲ್ಲಿ ಶುಕ್ರವಾರ ನಡೆದ ಜಿ.ಮಲ್ಲೀಗೆರೆ ಕಾರ್ಯಕರ್ತರ ಸಭೆಯಲ್ಲಿ ಅವರು ಮಾತನಾಡಿ, ದುದ್ದ ಹೋಬಳಿಯ ಶಿವಳ್ಳಿ, ಗಾಣದಾಳು, ಹೊಳಲು, ಮಾರನಚಾಕನಹಳ್ಳಿ, ಹೆಚ್.ಮಲ್ಲೀಗೆರೆ ಕೆರೆಗಳು ಸೇರಿದಂತೆ ಇನ್ನೂ 24 ಕೆರೆಗಳ ಹೂಳೆತ್ತಿಸಿ ಅವುಗಳಿಗೆ ವಿಶ್ವೇಶ್ವರಯ್ಯ ನಾಲೆ ನೀರನ್ನು ಹರಿಸಿ ತುಂಬಿಸಲಾಗುವುದು ಎಂದು ತಿಳಿಸಿದರು.

ಜಿ.ಮಲ್ಲೀಗೆರೆಯಿಂದ ಹೊನ್ನೇಮಡು, ಚಿಕ್ಕಗಂಗವಾಡಿ ಬಳಿ 7.5 ಕೋಟಿ ರೂಪಾಯಿ ವೆಚ್ಚದಲ್ಲಿ ಸೇತುವೆ ನಿರ್ಮಿಸಿ ಅದಕ್ಕೆ ಹೊಂದಿಕೊಂಡಂತೆ ಚೆಕ್‌ಡ್ಯಾಂ ನಿರ್ಮಿಸಲಾಗುವುದು. 365 ದಿನವೂ ಅಲ್ಲಿ ನೀರು ನಿಲ್ಲುವಂತೆ ಮಾಡಿ ಶ್ರೀ ಆನಕುಪ್ಪಮ್ಮ ದೇವಿ ದರ್ಶನಕ್ಕೆ ಬರುವ ಭಕ್ತರು ಸ್ನಾನ ಮಾಡಿಕೊಂಡು ದೇಗುಲಕ್ಕೆ ತೆರಳಲು ಅನುಕೂಲ ಕಲ್ಪಿಸಿಕೊಡಲಾಗುವುದು ಎಂದು ನುಡಿದರು.
4.50 ಕೋಟಿ ರೂ. ವೆಚ್ಚದಲ್ಲಿ ರಸ್ತೆ ಅಭಿವೃದ್ಧಿ
ಮಲ್ಲೀಗೆರೆಯಿಂದ ಚಿಕ್ಕಗಂಗವಾಡಿ ಹೊನ್ನೇಮಡುವಿನಲ್ಲಿ 4.50 ಕೋಟಿ ರೂಪಾಯಿ ವೆಚ್ಚದಲ್ಲಿ ರಸ್ತೆ ಅಭಿವೃದ್ಧಿ ನಡೆಯುತ್ತಿದೆ. ಬೆಂಗಳೂರು-ಮೈಸೂರು ಹೆದ್ದಾರಿಯಿಂದ ಹೊಳಲು, ಮಲ್ಲನಾಯಕನಕಟ್ಟೆ, ಶಿವಳ್ಳಿ ಮಾರ್ಗವಾಗಿ ಮೇಲುಕೋಟೆಗೆ ತೆರಳುವ ರಸ್ತೆಗಳ ಗುಂಡಿ ಬಿದ್ದಿದ್ದವು. ಆ ಗುಂಡಿಗಳನ್ನು ಮುಚ್ಚುವ ಕಾಮಗಾರಿ ಆರಂಭಗೊಂಡಿದೆ. ಹಾಗೆಯೇ ದುದ್ದ ಕೇಂದ್ರ ವ್ಯಾಪ್ತಿಯ ಎಲ್ಲಾ ರಸ್ತೆ ಕಾಮಗಾರಿಗಳು ಪೂರ್ಣಗೊಂಡಿವೆ ಎಂದು ತಿಳಿಸಿದರು.
ಕ್ಷೇತ್ರ ಬಿಟ್ಟು ಎಲ್ಲಿಯೂ ಓಡಿ ಹೋಗಲ್ಲ
ನಾನು ಕ್ಷೇತ್ರ ಬಿಟ್ಟು ಎಲ್ಲಿಯೂ ಓಡಿ ಹೋಗುವುದಿಲ್ಲ. ನಾನು ಶಾಸಕ, ಸಂಸದ, ಸಚಿವನಾದ ಸಂದರ್ಭದಲ್ಲೂ ಜನರ ಮಧ್ಯೆ ನಿಂತು ಕೆಲಸ ಮಾಡಿದ್ದೇನೆ. ಅಹಂಕಾರವನ್ನು ಸ್ವಾರ್ಥಕ್ಕಾಗಿ ಎಂದಿಗೂ ಉಪಯೋಗಿಸಿಕೊಂಡಿಲ್ಲ. ಜನರ ಹಿತ ಮತ್ತು ಕ್ಷೇತ್ರದ ಅಭಿವೃದ್ಧಿಗೆ ನನ್ನ ಅಹಂಕಾರವನ್ನು ಧಾರೆ ಎರೆದಿದ್ದೇನೆ ಎಂದರು.

ಬೇರೆಯವರಂತೆ ಕದ್ದು ಓಡಿ ಹೋಗುವ ಜಾಯಮಾನ ನನ್ನದಲ್ಲ. ಕೊರೊನಾ ಸಂಕಷ್ಟ ಪರಿಸ್ಥಿತಿಯಲ್ಲೂ ನನ್ನ ಪ್ರಾಣವನ್ನು ಒತ್ತೆ ಇಟ್ಟು ಜನರ ಸಂಕಷ್ಟಗಳಿಗೆ ಸ್ಪಂದಿಸಿದ್ದೇನೆ ಎಂದರು.
50 ಕೋಟಿ ರೂ. ಖರ್ಚು ಮಾಡಿದ್ದೇನೆ
ಮೃತಪಟ್ಟವರ ಅಂತ್ಯಸಂಸ್ಕಾರವನ್ನು ಗೌರವದಿಂದ ನಡೆಯುವಂತೆ ಕ್ರಮವಹಿಸಿದ್ದೇನೆ. ಭಾರಿ ಮಳೆ ಎದುರಾದ ಸಮಯದಲ್ಲಿ ಕೆರೆತೊಣ್ಣೂರು ಸೇರಿದಂತೆ ಹಲವಾರು ಕೆರೆಗಳ ಸುರಕ್ಷತೆಗೆ ಧಕ್ಕೆಯಾಗದಂತೆ ಎಚ್ಚರವಹಿಸಿ ಕ್ಷೇತ್ರವನ್ನು ಅಭಿವೃದ್ಧಿಯತ್ತ ಮುನ್ನಡೆಸುತ್ತೇನೆ. ಕ್ಷೇತ್ರದ ಒಂದೊಂದು ಪಂಚಾಯಿತಿಗೆ 50 ಕೋಟಿ ರೂಪಾಯಿ ಖರ್ಚು ಮಾಡಿದ್ದೇನೆ. ದುದ್ದ ಹೋಬಳಿಯನ್ನು ಸಂಪೂರ್ಣ ನೀರಾವರಿ ವ್ಯಾಪ್ತಿಗೆ ಒಳಪಡಿಸಿದ್ದು, ಒಂದು ಪಿಯು ಕಾಲೇಜನ್ನು ತೆರೆದಿದ್ದೇನೆ ಎಂದರು.
ಜಿ.ಮಲ್ಲೀಗೆರೆ, ವಿ.ಸಿ.ಫಾರಂ, ಹಟ್ನಾದಲ್ಲಿ ವಿದ್ಯುತ್ ಉಪಕೇಂದ್ರಗಳನ್ನು ಸ್ಥಾಪಿಸಿ ಗ್ರಾಮೀಣ ಜನರಿಗೆ ವಿದ್ಯುತ್ ಕೊರತೆಯಾಗದಂತೆ ಕ್ರಮ ಕೈಗೊಂಡಿದ್ದೇನೆ. ಯಾರು ಏನೇ ಬಂದು ಹೇಳಿದರೂ ಅದನ್ನು ನಂಬಬೇಡಿ. ಕ್ಷೇತ್ರದ ಜನರಿಗಾಗಿ ನಾನೇನು ಮಾಡಿದ್ದೇನೆ ಎನ್ನುವುದು ನಿಮಗೆಲ್ಲರಿಗೂ ಗೊತ್ತಿದೆ. ಅಪಪ್ರಚಾರಗಳಿಗೆ ಕಿವಿಗೊಡಬೇಡಿ. ನನ್ನ ಮೇಲೆ ವಿಶ್ವಾಸವಿಟ್ಟು ಮತ್ತೊಮ್ಮೆ ಗೆಲ್ಲಿಸಿದರೆ ಇನ್ನೂ ಹೆಚ್ಚಿನ ಸೇವೆ ಮಾಡಲು ಸಿದ್ಧನಿದ್ದೇನೆ ಎಂದು ಹೇಳಿದರು.
ದೇವಿಗೆ ಬೆಳ್ಳಿಕಿರೀಟ ಸಮರ್ಪಣೆ
ಜೆಡಿಎಸ್ ಮುಖಂಡ ಹೊಸಹಳ್ಳಿ ಬಾಲರಾಜು ಅವರು ಶಾಸಕ ಸಿ.ಎಸ್.ಪುಟ್ಟರಾಜು ಅವರಿಗೆ ಬೆಳ್ಳಿಕಿ ರೀಟವನ್ನು ಉಡುಗೊರೆಯಾಗಿ ನೀಡಿದ್ದರು, ಆದರೆ .ಪುಟ್ಟರಾಜು ಆ ಕಿರಿಟವನ್ನು ಶ್ರೀ ಆನಕುಪ್ಪಮ್ಮ ದೇವಿಗೆ ನೀಡಿದರು.
ಈ ಸಂದರ್ಭದಲ್ಲಿ ಮಾಜಿ ಶಾಸಕ ಜಿ.ಬಿ.ಶಿವಕುಮಾರ್, ಮನ್‌ಮುಲ್ ಅಧ್ಯಕ್ಷ ಬಿ.ಆರ್.ರಾಮಚಂದ್ರ, ಜೆಡಿಎಸ್ ಮುಖಂಡ ಬಾಲರಾಜು, ಮುದಗಂದೂರು ಗ್ರಾಮ ಪಂಚಾಯತಿ ಅಧ್ಯಕ್ಷ ಶಂಕರೇಗೌಡ, ಜಿಲ್ಲಾ ಪಂಚಾಯತಿ ಮಾಜಿ ಸದಸ್ಯ ಸಿ.ಮಾದಪ್ಪ, ತಾಲೂಕು ಪಂಚಾಯತಿ ಮಾಜಿ ಸದಸ್ಯರಾದ ಬೆಟ್ಟಸ್ವಾಮಿ, ಚಿಕ್ಕಹೊನ್ನೇಗೌಡ, ಕವಿತಾ ಜ್ಞಾನಮೂರ್ತಿ, ಹಿಂದುಳಿದ ವರ್ಗಗಳ ಮುಖಂಡ ಬದರಿನಾರಾಯಣ, ಬೇವುಕಲ್ಲು ಗ್ರಾಮ ಪಂಚಾಯತಿ ಅಧ್ಯಕ್ಷ ವಿಶ್ವೇಶ್ವರಯ್ಯ ಸೇರಿದಂತೆ ಮತ್ತಿರರು ಇದ್ದರು.












Click it and Unblock the Notifications