ಮಂಡ್ಯ: ಟಿಕೆಟ್ ಕೈ ತಪ್ಪುವ ಜೊತೆಗೆ ಸುಮಲತಾಗೆ ಹೊಸ ತಲೆನೋವು!

ಮಂಡ್ಯ, ಫೆಬ್ರವರಿ 29; ಈ ಬಾರಿಯ ಲೋಕಸಭೆ ಚುನಾವಣೆಯಲ್ಲಿ ಮಂಡ್ಯದ ಟಿಕೆಟ್ ಯಾರಿಗೆ? ಎಂದು ಇಂಡಿಯಾವೇ ಕಾದು ನೋಡುತ್ತಿದೆ. ಬಿಜೆಪಿ ಮತ್ತು ಜೆಡಿಎಸ್‌ನ ಮೈತ್ರಿ ಬಿಜೆಪಿ ಬೆಂಬಲಿತ ಹಾಲಿ ಸಂಸದೆ ಸುಮಲತಾಗೆ ಟಿಕೆಟ್ ತಪ್ಪಿಸುತ್ತದೆಯೇ? ಎಂಬುದು ಪ್ರಶ್ನೆ.

ಬಿಜೆಪಿ-ಜೆಡಿಎಸ್ ಮೈತ್ರಿಯಲ್ಲಿ ಮಂಡ್ಯ ಯಾರಿಗೆ? ಎಂಬುದು ಇನ್ನು ಅಂತಿಮವಾಗಿಲ್ಲ. ಆದರೆ ಕೆಲವು ಜೆಡಿಎಸ್ ನಾಯಕರು ಟಿಕೆಟ್ ನಮಗೆ ಎಂದು ಹೇಳುತ್ತಿದ್ದಾರೆ. ಬಿಜೆಪಿಗೆ ಬೆಂಬಲ ಘೋಷಣೆ ಮಾಡಿರುವ ಸುಮಲತಾ ಮಂಡ್ಯ ಬಿಟ್ಟು ಹೋಗುವುದಿಲ್ಲ ಎಂದು ಹೇಳಿದ್ದಾರೆ.

Sumalatha Facing New Challenge In Mandya Seat

ಮಂಡ್ಯದಲ್ಲಿ ಟಿಕೆಟ್ ಕೈ ತಪ್ಪುವ ಜೊತೆಗೆ ಸುಮಲತಾಗೆ ಹೊಸ ತಲೆನೋವು ಶುರುವಾಗಿದೆ. ಅದು ಬಿಜೆಪಿ ನಾಯಕರ ಅಸಮಾಧಾನ. 2019ರ ಚುನಾವಣೆಯಲ್ಲಿ ಪಕ್ಷೇತರ ಅಭ್ಯರ್ಥಿಯಾಗಿದ್ದ ಸುಮಲತಾಗೆ ಬಿಜೆಪಿ ಬೆಂಬಲಿಸಿತ್ತು. ಪಕ್ಷದ ಅಭ್ಯರ್ಥಿಯೇ ಕಣಕ್ಕಿಳಿದಿರಲಿಲ್ಲ.

ಎಸ್. ಸಚ್ಚಿದಾನಂದ ಸೈಲೆಂಟ್: 2023ರ ವಿಧಾನಸಭೆ ಚುನಾವಣೆಗೂ ಮೊದಲು ಮಂಡ್ಯ ಜಿಲ್ಲೆಯಲ್ಲಿ ಬಿಜೆಪಿ ಪಕ್ಷವನ್ನು ಬಲಪಡಿಸುವ ಕಾರ್ಯತಂತ್ರದ ಭಾಗವಾಗಿ ಕೆಪಿಸಿಸಿ ಮಾಜಿ ಸದಸ್ಯ ಎಸ್‌. ಸಚ್ಚಿದಾನಂದ ಸೇರಿ ಹಲವರನ್ನು ಬಿಜೆಪಿಗೆ ಕರೆದುಕೊಂಡು ಬರಲಾಗಿತ್ತು. ಎಸ್. ಸಚ್ಚಿದಾನಂದ ಸುಮಲತಾ ಆಪ್ತರಲ್ಲಿ ಒಬ್ಬರು.

2019ರಲ್ಲಿ ಮಂಡ್ಯದಲ್ಲಿ ಸುಮಲತಾ 703,660 ಮತಗಳನ್ನು ಪಡೆದು, ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರವನ್ನು ಎದುರು ಹಾಕಿಕೊಂಡು, ಮೈತ್ರಿ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ (577,784 ಮತ) ವಿರುದ್ಧ ಗೆಲ್ಲುವಲ್ಲಿ ಎಸ್. ಸಚ್ಚಿದಾನಂದ ಪಾತ್ರವೂ ಬಹಳ ಮುಖ್ಯವಾಗಿತ್ತು.

2022ರಲ್ಲಿ ಬಿಜೆಪಿಗೆ ಬಂದ ಎಸ್‌. ಸಚ್ಚಿದಾನಂದ 2023ರ ವಿಧಾನಸಭೆ ಚುನಾವಣೆಯಲ್ಲಿ ಶ್ರೀರಂಗಪಟ್ಟಣದಲ್ಲಿ ಟಿಕೆಟ್ ಪಡೆದರು. 42,306 ಮತಗಳನ್ನು ಪಡೆದು 3ನೇ ಸ್ಥಾನಗಳಿಸಿದರು. ಜೆಡಿಎಸ್‌ನ ರವೀಂದ್ರ ಶ್ರೀಕಂಠಯ್ಯ (61,680 ಮತ), ಕಾಂಗ್ರೆಸ್‌ನ ರಮೇಶ್ ಬಂಡಿಸಿದ್ದೇಗೌಡ (72,817 ಮತ) ಭಾರೀ ಪೈಪೋಟಿ ನಡೆದಿತ್ತು.

ಚುನಾವಣೆಯಲ್ಲಿ ತಮ್ಮ ಸೋಲಿಗೆ ಸುಮಲತಾ ಸರಿಯಾಗಿ ಬೆಂಬಲ ನೀಡದಿರುವುದು ಕಾರಣ ಎಂಬುದು ಎಸ್‌. ಸಚ್ಚಿದಾನಂದ ಮತ್ತು ಅವರ ಬೆಂಬಲಿಗರ ಅಸಮಾಧಾನಕ್ಕೆ ಕಾರಣ. ನಾಮಪತ್ರ ಸಲ್ಲಿಸುವಾಗ ಬಂದಿದ್ದು ಬಿಟ್ಟರೆ ಬಳಿಕ ಸುಮಲತಾ ಸರಿಯಾಗಿ ಪ್ರಚಾರದಲ್ಲಿ ಪಾಲ್ಗೊಳ್ಳಲಿಲ್ಲ. ಎಸ್‌. ಸಚ್ಚಿದಾನಂದ ಸೋಲು ಕಂಡರು.

ಈಗ ಬಿಜೆಪಿಯಿಂದ ಸುಮಲತಾ ಅಭ್ಯರ್ಥಿಯಾದರೆ ಈ ಅಸಮಾಧಾನ ಹೆಚ್ಚಾಗಿ ಸುಮಲತಾಗೆ ಹಿನ್ನಡೆ ಆಗಬಹುದು ಎಂಬುದು ಲೆಕ್ಕಾಚಾರವಾಗಿದೆ. 2019ರಲ್ಲಿ ಇದ್ದಷ್ಟು ಜನಪ್ರಿಯತೆ ಈಗ ಸುಮಲತಾ ಅವರಿಗೆ ಇಲ್ಲ. ಬಿಜೆಪಿ ಮುಖಂಡರೇ ಅವರ ವಿರುದ್ಧ ನಿಂತರೆ ಚುನಾವಣಾ ಚಿತ್ರಣ ಬದಲಾಗಲಿದೆ.

ಎಸ್‌. ಸಚ್ಚಿದಾನಂದ ನಟ ದರ್ಶನ್ ಆಪ್ತರು. ಮಂಡ್ಯದಲ್ಲಿ ಡಿ-25 ಕಾರ್ಯಕ್ರಮ ಆಯೋಜನೆ ಮಾಡಿದ್ದು ಸಹ ಇದೇ ಎಸ್‌. ಸಚ್ಚಿದಾನಂದ. ಮಂಡ್ಯ ಚುನಾವಣೆ ಕುರಿತು ಕಳೆದ ವಾರ ಸುಮಲತಾ ನಡೆಸಿದ ಸಭೆಯಲ್ಲಿ ಎಸ್‌. ಸಚ್ಚಿದಾನಂದ ಪಾಲ್ಗೊಂಡಿದ್ದರು. ಆದರೆ ದರ್ಶನ್ ಆಹ್ವಾನದ ಮೇರೆಗೆ ಹೋದರು ಎಂಬುದು ಬಿಟ್ಟರೆ ಸ್ವಯಂ ಆಸಕ್ತಿಯಿಂದ ಹೋಗಿಲ್ಲ ಎಂಬುದು ಅವರ ಆಪ್ತ ವಲಯದ ಮಾತು. ಅಲ್ಲಿಗೆ ಅಸಮಾಧಾನ ಇನ್ನೂ ಶಮನವಾಗಿಲ್ಲ.

ಮಂಡ್ಯ ಲೋಕಸಭಾ ಕ್ಷೇತ್ರದಲ್ಲಿ ಮಳವಳ್ಳಿ (ಕಾಂಗ್ರೆಸ್), ಮದ್ದೂರು (ಕಾಂಗ್ರೆಸ್), ಮೇಲುಕೋಟೆ (ಸರ್ವೋದಯ ಪಕ್ಷ), ಮಂಡ್ಯ (ಕಾಂಗ್ರೆಸ್), ಶ್ರೀರಂಗಪಟ್ಟಣ (ಕಾಂಗ್ರೆಸ್), ನಾಗಮಂಗಲ (ಕಾಂಗ್ರೆಸ್), ಕೆ. ಆರ್. ಪೇಟೆ (ಕಾಂಗ್ರೆಸ್) ಶಾಸಕರು ಇದ್ದಾರೆ. ಜೆಡಿಎಸ್‌ನ ಭದ್ರಕೋಟೆ 2023ರ ವಿಧಾನಸಭೆ ಚುನಾವಣೆಯಲ್ಲಿ ಛಿದ್ರಗೊಂಡಿದೆ.

ಬಿಜೆಪಿಗೆ ಮಂಡ್ಯದಲ್ಲಿ ಹೇಳಿಕೊಳ್ಳುವಂತಹ ಪ್ರಭಾವವಿಲ್ಲ. ಆದ್ದರಿಂದ ಚಿಕ್ಕಪುಟ್ಟ ಅಸಮಾಧಾನಗಳು ಸಹ ಚುನಾವಣೆಯಲ್ಲಿ ಸೋಲನ್ನು ತರಬಹುದು. ಬಿಜೆಪಿ-ಜೆಡಿಎಸ್ ಮೈತ್ರಿ ಎಷ್ಟರ ಮಟ್ಟಿಗೆ ಮಂಡ್ಯದಲ್ಲಿ ಸುಮಲತಾಗೆ ಸಹಾಯಕವಾಗಲಿದೆ? ಎಂಬ ಲೆಕ್ಕಾಚಾರ ನಡೆಯುತ್ತಲೇ ಇದೆ.

ಫೆಬ್ರವರಿ 11ರಂದು ಬಿಜೆಪಿಯ ಹಿರಿಯ ನಾಯಕ ಅಮಿತ್ ಶಾ ಮೈಸೂರಿಗೆ ಆಗಮಿಸಿದ್ದರು. ಲೋಕಸಭೆ ಚುನಾವಣೆ ಹಿನ್ನಲೆಯಲ್ಲಿ ಅವರು ಮಂಡ್ಯ ಕ್ಷೇತ್ರದ ಸೀಟು ಹಂಚಿಕೆ ಕುರಿತು ಮೈಸೂರು ಕ್ಲಸ್ಟರ್ ವಿಭಾಗದ ಪ್ರಮುಖರೊಂದಿಗೆ ಸಭೆಯನ್ನು ನಡೆಸಿದ್ದರು. ಆದರೆ ಅಂತಿಮವಾಗಿ ಮಂಡ್ಯ ಯಾರಿಗೆ ಎಂಬ ಗುಟ್ಟು ಬಿಟ್ಟುಕೊಡಲಿಲ್ಲ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+