ಮಂಡ್ಯ ಜಿಲ್ಲೆಯ ಶ್ರೀಮಂತ ಭಿಕ್ಷುಕಿ ನಿಧನ
ಮಂಡ್ಯ, ಸೆಪ್ಟೆಂಬರ್ 10: ಶ್ರೀರಂಗಪಟ್ಟಣದಲ್ಲಿ ಭಿಕ್ಷಾಟನೆ ಮಾಡಿ ಲಕ್ಷಾಂತರ ರೂಪಾಯಿ ಸಂಗ್ರಹಿಸಿ ಸುದ್ದಿಯಾಗಿದ್ದ ವೃದ್ಧೆ ಸಾವಿತ್ರಿ (65) ಅವರು ವಯೋಸಹಜ ಅನಾರೋಗ್ಯದಿಂದಾಗಿ ಬುಧವಾರ ಪಟ್ಟಣದಲ್ಲಿ ವಿಧಿವಶರಾಗಿದ್ದಾರೆ ಎಂದು ತಿಳಿದುಬಂದಿದೆ.
ಅನಾಥರಾಗಿದ್ದ ಸಾವಿತ್ರಿ ಅವರ ಆರೋಗ್ಯ ಹದಗೆಟ್ಟಿದ್ದನ್ನು ಗಮನಿಸಿದ ಸ್ಥಳೀಯರು, ಅವರನ್ನು ತಕ್ಷಣ ಪಟ್ಟಣದ ಸಾರ್ವಜನಿಕ ಆಸ್ಪತ್ರೆಗೆ ಸೇರಿಸಿ ಚಿಕಿತ್ಸೆ ಕೊಡಿಸಿದ್ದರು. ಆದರೆ, ವಯೋಸಹಜ ಕಾಯಿಲೆಗಳಿಂದ ಬಳಲುತ್ತಿದ್ದ ಅವರು ಚಿಕಿತ್ಸೆ ಫಲಕಾರಿಯಾಗದೆ ಕೊನೆಯುಸಿರೆಳೆದಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ.

ಮಾನವೀಯತೆ ಮೆರೆದ ಸ್ಥಳೀಯರು
ಸಾವಿತ್ರಿ ಅವರ ನಿಧನದ ನಂತರ, ಸ್ಥಳೀಯ ಪ್ರಮುಖರಾದ ವೇದ ಬ್ರಹ್ಮ ಡಾ. ಭಾನುಪ್ರಕಾಶ್ ಶರ್ಮಾ, ಸಮಾಜ ಸೇವಕಿ ಸರಸ್ವತಿ ಹಾಗೂ ಅಭಿಷೇಕ್ ಮುಂತಾದವರು ಮುಂದೆ ನಿಂತು ಅವರ ಅಂತಿಮ ಸಂಸ್ಕಾರದ ಜವಾಬ್ದಾರಿಯನ್ನು ವಹಿಸಿಕೊಂಡರು. ಬ್ರಾಹ್ಮಣ ಸಂಪ್ರದಾಯದ ಪ್ರಕಾರ ಪಟ್ಟಣದ ಶಂಭುಲಿಂಗಯ್ಯನ ಕಟ್ಟೆ ಸ್ಮಶಾನದಲ್ಲಿ ಧಾರ್ಮಿಕ ವಿಧಿವಿಧಾನಗಳೊಂದಿಗೆ ಅಂತ್ಯಕ್ರಿಯೆ ನೆರವೇರಿಸಿ ಸಾರ್ವಜನಿಕವಾಗಿ ಮಾನವೀಯತೆ ಮೆರೆದಿದ್ದಾರೆ.
ಕಸದ ರಾಶಿಯಲ್ಲಿ ಪತ್ತೆಯಾಗಿದ್ದ ಲಕ್ಷಾಂತರ ರೂಪಾಯಿ..
ಇತ್ತೀಚೆಗಷ್ಟೇ ಸಾವಿತ್ರಿ ಅವರ ಮನೆಗೆ ತೆರಳಿದ್ದಾಗ ಅಲ್ಲಿ ಅಚ್ಚರಿ ಸಂಗತಿಯೊಂದು ಬೆಳಕಿಗೆ ಬಂದಿತ್ತು. ಅವರ ಮನೆಯಲ್ಲಿದ್ದ ಕಸದ ರಾಶಿಯ ನಡುವೆ ನೋಟುಗಳು ಹಾಗೂ ನಾಣ್ಯಗಳ ರೂಪದಲ್ಲಿದ್ದ ಲಕ್ಷಾಂತರ ರೂಪಾಯಿ ಹಣ ಪತ್ತೆಯಾಗಿತ್ತು. ಅಷ್ಟೇ ಅಲ್ಲದೆ, ಈ ಕಸದ ರಾಶಿಯಲ್ಲಿ ಒಂದು ಅಮೆರಿಕನ್ ಡಾಲರ್ ಸಹ ದೊರೆತಿದ್ದು ಎಲ್ಲರ ಆಶ್ಚರ್ಯಕ್ಕೆ ಕಾರಣವಾಗಿತ್ತು.
ಸಾವಿತ್ರಿ ಜೀವನದ ಹಿನ್ನೆಲೆ
ಸಾವಿತ್ರಿ ಅವರು ತಮ್ಮ ತಾಯಿಯೊಂದಿಗೆ ಜೀವನ ನಡೆಸುತ್ತಿದ್ದರು. ಇಬ್ಬರಿಗೂ ಸರ್ಕಾರದಿಂದ ವೃದ್ಧಾಪ್ಯ ವೇತನ (ಪಿಂಚಣಿ) ದೊರೆಯುತ್ತಿತ್ತು. ಇದರ ಜೊತೆಗೆ, ಶ್ರೀರಂಗಪಟ್ಟಣದ ಪ್ರಸಿದ್ಧ ಧಾರ್ಮಿಕ ಕ್ಷೇತ್ರಗಳಾದ ಶ್ರೀ ರಂಗನಾಥಸ್ವಾಮಿ ದೇವಾಲಯ, ಕಾವೇರಿ ಸ್ನಾನಘಟ್ಟ ಗಂಗಾಧರೇಶ್ವರ ಸ್ವಾಮಿ ದೇವಾಲಯಗಳ ಬಳಿ ಭಿಕ್ಷಾಟನೆ ಮಾಡುವ ಮೂಲಕ ಇಬ್ಬರೂ ಹಣ ಸಂಗ್ರಹಿಸುತ್ತಿದ್ದರು. ಈ ಮೂಲಕವೇ ಅವರು ಲಕ್ಷಾಂತರ ರೂಪಾಯಿಗಳನ್ನು ಕೂಡಿಟ್ಟಿದ್ದರು ಎನ್ನಲಾಗಿದೆ.
ಸಾವಿತ್ರಿ ಅವರ ತಾಯಿ ಕೂಡ ಇತ್ತೀಚೆಗಷ್ಟೇ ವಿಧಿವಶರಾಗಿದ್ದರು. ಆಗಲೂ ಸಹ ಸ್ಥಳೀಯರೇ ಮುತುವರ್ಜಿ ವಹಿಸಿ ಅವರ ಅಂತ್ಯಸಂಸ್ಕಾರವನ್ನು ನೆರವೇರಿಸಿದ್ದರು. ತಾಯಿಯ ಅಗಲಿಕೆಯ ನಂತರ ಸಂಪೂರ್ಣ ಅನಾಥರಾಗಿದ್ದ ಸಾವಿತ್ರಿ ಅವರು, ಇದೀಗ ತಾಯಿಯ ಹಾದಿಯಲ್ಲೇ ಇಹಲೋಕ ತ್ಯಜಿಸಿದ್ದಾರೆ. ಸ್ಥಳೀಯ ಸಮಾಜ ಸೇವಕರು ತೋರಿದ ಈ ಕಾಳಜಿ ಮತ್ತು ಧಾರ್ಮಿಕ ಗೌರವಕ್ಕೆ ಮೆಚ್ಚುಗೆಗಳ ಸುರಿಮಳೆ ಹರಿದುಬರುತ್ತಿದೆ.


Click it and Unblock the Notifications
