ಮದ್ದೂರಲ್ಲಿ ಅನೈತಿಕ ಸಂಬಂಧಕ್ಕೆ ರೌಡಿಶೀಟರ್ ಬಲಿ
ಮದ್ದೂರು, ಜೂನ್ 28: ಅನೈತಿಕ ಸಂಬಂಧದ ಹಿನ್ನೆಲೆಯಲ್ಲಿ ರೌಡಿಯೋರ್ವನನ್ನು ದುಷ್ಕರ್ಮಿಗಳು ನಡುರಸ್ತೆಯಲ್ಲೇ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿ ಹತ್ಯೆ ಮಾಡಿರುವ ಘಟನೆ ತಾಲ್ಲೂಕಿನ ಆತಗೂರು ಹೋಬಳಿ ವಡ್ಡರದೊಡ್ಡಿ ಗ್ರಾಮದಲ್ಲಿ ಗುರುವಾರ ರಾತ್ರಿ ನಡೆದಿದೆ.
ರಾಮನಗರ ಜಿಲ್ಲೆ, ಚನ್ನಪಟ್ಟಣ ತಾಲ್ಲೂಕಿನ ಕುಕ್ಕೂರುದೊಡ್ಡಿ ಗ್ರಾಮದ ನಿಂಗಯ್ಯನ ಪುತ್ರ ರಾಕೇಶ್ (25) ಕೊಲೆಯಾದವನು. ಈತ ಗುರುವಾರ ರಾತ್ರಿ ವಡ್ಡರದೊಡ್ಡಿ ಗ್ರಾಮದ ಕೃಷ್ಣಪ್ಪ ಎಂಬುವರ ಮನೆ ಬಳಿ ಬೈಕಿನಲ್ಲಿ ತೆರಳುತ್ತಿದ್ದ ವೇಳೆ ಅಡ್ಡಗಟ್ಟಿದ ದುಷ್ಕರ್ಮಿಗಳ ಗುಂಪು ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿದೆ. ಹಲ್ಲೆಯಿಂದ ತೀವ್ರವಾಗಿ ಗಾಯಗೊಂಡು ಬೈಕಿನಿಂದ ಕುಸಿದುಬಿದ್ದ ರಾಕೇಶನ ತಲೆ ಮೇಲೆ ಕಲ್ಲು ಎತ್ತಿ ಹಾಕಿ ಕೊಲೆ ಮಾಡಿ ಸ್ಥಳದಿಂದ ಪರಾರಿಯಾಗಿದ್ದಾರೆ.
ಕೊಲೆಯಾದ ರಾಕೇಶ್ ಹಣಕಾಸು ಸಂಸ್ಥೆಗಳಿಂದ ವಾಹನಗಳ ಮೇಲೆ ಸಾಲ ಪಡೆದು ಮರುಪಾವತಿ ಮಾಡದ ವ್ಯಕ್ತಿಗಳ ವಾಹನಗಳನ್ನು ಜಪ್ತಿ ಮಾಡುವ ಕೆಲಸ ಮಾಡುತ್ತಿದ್ದನೆನ್ನಲಾಗಿದೆ. ಈ ಮಧ್ಯೆ ರಾಕೇಶ್ ವಡ್ಡರದೊಡ್ಡಿ ಗ್ರಾಮದ ವಿವಾಹಿತೆಯೊಂದಿಗೆ ಅನೈತಿಕ ಸಂಬಂಧ ಹೊಂದಿದ್ದು, ರಾತ್ರಿ ವೇಳೆ ಗ್ರಾಮಕ್ಕೆ ಬಂದು ವಾಪಸ್ಸಾಗುತ್ತಿದ್ದನ್ನು ಕಂಡ ದುಷ್ಕರ್ಮಿಗಳು ಈತನ ಕೊಲೆಗೆ ಸಂಚು ರೂಪಿಸಿದ್ದರು.

ಗುರುವಾರ ರಾತ್ರಿ ತಾಲ್ಲೂಕಿನ ನಿಡಘಟ್ಟದ ಬಾರೊಂದರಲ್ಲಿ ಮೂರು ಜನರೊಂದಿಗೆ ರಾಕೇಶ್ ಮದ್ಯ ಸೇವನೆ ಮಾಡುತ್ತಿದ್ದ ವೇಳೆ ಸಣ್ಣ ಪ್ರಮಾಣದ ಗಲಾಟೆ ನಡೆದಿದೆ. ನಂತರ ವಡ್ಡರದೊಡ್ಡಿಗೆ ಬರುತ್ತಿದ್ದ ವೇಳೆ ಹತ್ಯೆ ಮಾಡಲಾಗಿದೆ. ಹತ್ಯೆಗೊಳಗಾಗಿರುವ ರಾಕೇಶ್ ವಿರುದ್ಧ ಈ ಹಿಂದೆ ನಿಡಘಟ್ಟದ ವೈನ್ ಸ್ಟೋರ್ ನೌಕರ ಅಭಿ ಹಾಗೂ ವಡ್ಡರದೊಡ್ಡಿಯ ಮಹಿಳೆ ಮೇಲೆ ಹಲ್ಲೆ ನಡೆಸಿ ಕೊಲೆಗೆ ವಿಫಲ ಯತ್ನ ನಡೆಸಿದ ಘಟನೆ ಹಾಗೂ ದೊಂಬಿ ಪ್ರಕರಣದಲ್ಲಿ ಮದ್ದೂರು ಹಾಗೂ ಕೆಸ್ತೂರು ಪೊಲೀಸ್ ಠಾಣೆಗಳಲ್ಲಿ ಪ್ರಕರಣ ದಾಖಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಕೆಸ್ತೂರು ಪೊಲೀಸರು ಪ್ರಕರಣ ದಾಖಲಿಸಿದ್ದು, ಆರೋಪಿಗಳ ಪತ್ತೆಗೆ ಜಾಲ ಬೀಸಿದ್ದಾರೆ. ಡಿವೈಎಸ್ ಪಿ ಶೈಲೇಂದ್ರಕುಮಾರ್, ಸಿಪಿಐ ಎನ್.ವಿ.ಮಹೇಶ್, ಕೆಸ್ತೂರು ಪಿಎಸ್ಐ ಸಂತೋಷ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಮದ್ದೂರು ಸಾರ್ವಜನಿಕ ಆಸ್ಪತ್ರೆಯಲ್ಲಿ ರಾಕೇಶನ ಶವ ಪರೀಕ್ಷೆ ನಂತರ ವಾರಸುದಾರರ ವಶಕ್ಕೆ ಒಪ್ಪಿಸಲಾಯಿತು.












Click it and Unblock the Notifications