ಮಂಡ್ಯದಲ್ಲಿ ಅಶೋಕ್ "ಗೋ-ಬ್ಯಾಕ್" ಅಭಿಯಾನ; ರಾಜ್ಯ BJP ನಾಯಕರು ಮಾಡಿದ್ದೇನು?
ಮಂಡ್ಯ ಜಿಲ್ಲೆಗೆ ಆರ್. ಅಶೋಕ್ ಉಸ್ತುವಾರಿ ಆಗಿ ನೇಮಕವಾದಾಗಿನಿಂದಲೂ, ಅವರಿಗೆ ಒಂದಲ್ಲ ಒಂದು ರೀತಿಯ ಸಮಸ್ಯೆಗಳು ಎದುರಾಗುತ್ತಲೇ ಇವೆ. ಇದೀಗ ಸ್ವಪಕ್ಷದವರೇ ಆರ್. ಅಶೋಕ್ ವಿರುದ್ಧ ಅಭಿಯಾನ ನಡೆಸಲು ಕಾರಣ ಏನೆಂದು ಇಲ್ಲಿ ತಿಳಿಯಿರಿ.
ಮಂಡ್ಯ, ಜನವರಿ, 29: ಹೊಂದಾಣಿಕೆ ರಾಜಕಾರಣ ಆರೋಪಕ್ಕೆ ಗುರಿಯಾಗಿರುವ ಮಂಡ್ಯ ಜಿಲ್ಲಾ ಉಸ್ತುವಾರಿ ಸಚಿವ ಆರ್.ಅಶೋಕ್ ವಿರುದ್ಧ ಸ್ವಪಕ್ಷೀಯರೇ ವಿರೋಧ ವ್ಯಕ್ತಪಡಿಸಿ ಗೋ-ಬ್ಯಾಕ್ ಅಭಿಯಾನ ನಡೆಸಿದ್ದರು. ಈ ಕುರಿತಂತೆ ರಾಜ್ಯ ಬಿಜೆಪಿ ನಾಯಕರು ಹೈಕಮಾಂಡ್ ಗಮನಕ್ಕೆ ತಂದಿದ್ದಾರೆ.
ಮಂಡ್ಯ ಜಿಲ್ಲೆಯೊಳಗೆ ಆರ್.ಅಶೋಕ್ ಜಿಲ್ಲಾ ಉಸ್ತುವಾರಿ ನೇಮಕದ ಹಿಂದೆ ದಿಢೀರನೆ ಆಕ್ರೋಶ ವ್ಯಕ್ತವಾಗಿದೆ. ಇದನ್ನು ಸ್ವತಃ ಸಚಿವ ಆರ್.ಅಶೋಕ್ ಅವರೇ ನಿರೀಕ್ಷಿಸಿರಲಿಲ್ಲ. ಈ ಬೆಳವಣಿಗೆ ರಾಜ್ಯ ನಾಯಕರಿಗೂ ತೀವ್ರ ತಲೆಬಿಸಿ ಉಂಟುಮಾಡಿದೆ. ಅಶೋಕ್ ವಿರುದ್ಧ ಪಕ್ಷದೊಳಗೆ ಕೇಳಿಬರುತ್ತಿರುವ ಆರೋಪಗಳಿಗೆ ಉತ್ತರಿಸಲಾಗದೆ ಬೇಸತ್ತಿರುವ ಬಿಜೆಪಿ ನಾಯಕರು ನಡೆದಿರುವ ವಿದ್ಯಮಾನಗಳ ಕುರಿತಂತೆ ಹೈಕಮಾಂಡ್‌ಗೆ ವಿಸ್ತೃತವಾದ ವರದಿಯನ್ನು ಸಲ್ಲಿಸಿದ್ದಾರೆ. ಉಸ್ತುವಾರಿ ಸಚಿವರ ಕುರಿತಂತೆ ಮುಂದಿನ ತೀರ್ಮಾನವನ್ನು ದೆಹಲಿ ನಾಯಕರ ಹೆಗಲಿಗೇರಿಸಿ ಜವಾಬ್ದಾರಿ ಕಳೆದುಕೊಂಡಿದ್ದಾರೆ.
ಅಮಿತ್ ಶಾ ನೇತೃತ್ವದಲ್ಲಿ ಮಂಡ್ಯದಲ್ಲಿ ನಡೆದ ಜನಸಂಕಲ್ಪ ಯಾತ್ರೆ ನಿರೀಕ್ಷೆಗೂ ಮೀರಿದ ಯಶಸ್ಸು ಕಂಡಿತ್ತು. ಇದು ಬಿಜೆಪಿ ಮುಖಂಡರು-ಕಾರ್ಯಕರ್ತರಲ್ಲಿ ಅಪರಿಮಿತ ಉತ್ಸಾಹ, ಹುಮ್ಮಸ್ಸನ್ನು ಹೆಚ್ಚಿಸಿತ್ತು. ಬಿಜೆಪಿ ಮತಗಳಿಕೆಯ ಪ್ರಮಾಣವೂ ಏರಿಕೆಯಾಗುವ ಮುನ್ಸೂಚನೆ ಸಿಕ್ಕಿತ್ತು. ಹಳೇ ಮೈಸೂರು ಭಾಗದಲ್ಲಿ ಹೊಂದಾಣಿಕೆ ರಾಜಕಾರಣಕ್ಕೆ ಅವಕಾಶವಿಲ್ಲ ಎಂದು ಅಮಿತ್ ಶಾ ಖಡಕ್ಕಾಗಿ ಹೇಳಿದ್ದರು.

ಅಶ್ವತ್ಥ್ ನಾರಾಯಣ್ ಸಮರ್ಥ ನಾಯಕ
ಈ ಬೆಳವಣಿಗೆಗಳ ಹಿನ್ನೆಲೆಯಲ್ಲಿ ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್. ಅಶ್ವತ್ಥ್ ನಾರಾಯಣ ಅವರಿಗೆ ಹಳೇ ಮೈಸೂರು ಭಾಗದ ಚುನಾವಣಾ ನಾಯಕತ್ವ ನೀಡಬಹುದು. ರಾಮನಗರ ಜಿಲ್ಲಾ ಉಸ್ತುವಾರಿ ಸಚಿವರಾಗಿರುವ ಅವರಿಗೆ ಹೆಚ್ಚುವರಿಯಾಗಿ ಮಂಡ್ಯ ಜಿಲ್ಲಾ ಉಸ್ತುವಾರಿ ಹುದ್ದೆಯನ್ನು ನೀಡಬಹುದೆಂದು ಪಕ್ಷದ ಮುಖಂಡರು-ಕಾರ್ಯಕರ್ತರು ನಿರೀಕ್ಷೆಯಲ್ಲಿದ್ದರು.
ಡಾ.ಸಿ.ಎನ್. ಅಶ್ವತ್ಥ್ ನಾರಾಯಣ ಅವರು ಕಾಂಗ್ರೆಸ್ ಮತ್ತು ಜೆಡಿಎಸ್ ನಾಯಕರನ್ನು ಎದುರಿಸಬಲ್ಲ ಸಮರ್ಥ ನಾಯಕ. ಅವರಿಂದ ಪಕ್ಷ ಇನ್ನಷ್ಟು ಶಕ್ತಿಶಾಲಿಯಾಗಿ, ಸಂಘಟನಾತ್ಮಕವಾಗಿ ಬೆಳವಣಿಗೆ ಕಾಣುವ ಆಶಾಭಾವನೆ ಸ್ಥಳೀಯ ಬಿಜೆಪಿಯವರಲ್ಲಿತ್ತು. ಅಶ್ವತ್ಥ್ ನಾರಾಯಣ ಅವರೂ ಸಹ ಆಗಾಗ ಮಂಡ್ಯಕ್ಕೆ ಬರುವುದು, ಸಭೆಗಳನ್ನು ನಡೆಸುವುದರೊಂದಿಗೆ ಮುಖಂಡರು, ಕಾರ್ಯಕರ್ತರ ಉತ್ಸಾಹವನ್ನು ಹೆಚ್ಚಿಸುತ್ತಿದ್ದರು.

ಆರ್.ಅಶೋಕ್ "ಗೋ ಬ್ಯಾಕ್" ಅಭಿಯಾನ
ಜಿಲ್ಲಾ ಉಸ್ತುವಾರಿ ಸಚಿವರಾಗಿ ಆರ್.ಅಶೋಕ್ ಅವರನ್ನು ನೇಮಕ ಮಾಡಿದ್ದು ಬಿಜೆಪಿಯನ್ನು ಕಟ್ಟಿ ಬೆಳೆಸುವ ಉತ್ಸಾಹದಲ್ಲಿದ್ದ ಮುಖಂಡರು-ಕಾರ್ಯರ್ತರ ಕನಸಿಗೆ ತಣ್ಣೀರೆರಚಿತು. ಇದು ಅನಿರೀಕ್ಷಿತ ಆಘಾತವನ್ನು ಉಂಟುಮಾಡಿತು. ಅದನ್ನು ಅವರಿಂದ ಸಹಿಸಿಕೊಳ್ಳಲಾಗಲಿಲ್ಲ. ಅದನ್ನು ತಕ್ಷಣವೇ ಬಾಯ್ಕಾಟ್ ಆರ್.ಅಶೋಕ್, ಗೋಬ್ಯಾಕ್ ಆರ್.ಅಶೋಕ್ ಅಭಿಯಾನದ ಮೂಲಕ ಆಕ್ರೋಶ ಹೊರಹಾಕಿದರು ಎಂದು ತಿಳಿದುಬಂದಿದೆ.

ಬಿಜೆಪಿ ನಾಯಕರ ನಡುವೆ ಮುನಿಸು?
ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷವನ್ನು ಎದುರಿಸುವ ಸಮರ್ಥ ನಾಯಕರು ಈ ಜಿಲ್ಲೆಗೆ ಬೇಕೇ ವಿನಃ ಒಂದು ಪಕ್ಷದೊಂದಿಗೆ ಹೊಂದಾಣಿಕೆ ರಾಜಕಾರಣ ಮಾಡಿಕೊಂಡು ಹೋಗುವವರು ಜಿಲ್ಲೆಗೆ ಬೇಕಿಲ್ಲ ಎಂಬ ಮಾತುಗಳು ಬಿಜೆಪಿ ವಲಯದಲ್ಲೇ ವ್ಯಕ್ತವಾಗುತ್ತಿವೆ. ಆದರೆ, ಇದನ್ನು ಬಹಿರಂಗವಾಗಿ ಹೇಳುವ ಗೋಜಿಗೆ ಯಾರೂ ಮುಂದಾಗುತ್ತಿಲ್ಲ. ಪದ್ಮನಾಭನಗರದಲ್ಲಿ ತಮ್ಮ ರಾಜಕೀಯ ಭವಿಷ್ಯವನ್ನು ಕಾಪಾಡಿಕೊಳ್ಳುವ ಸಲುವಾಗಿ ಮಂಡ್ಯ ಜಿಲ್ಲೆಯೊಳಗೆ ಜೆಡಿಎಸ್ ಬಗ್ಗೆ ಮೃದು ಧೋರಣೆ ಅನುಸರಿಸುತ್ತಿದ್ದಾರೆಂಬ ಆರೋಪಗಳು ಸಾರ್ವಜನಿಕವಾಗಿಯೇ ವ್ಯಕ್ತವಾಗುತ್ತಿವೆ. ಈ ಆರೋಪಗಳಿಗೆ ಉತ್ತರಿಸುವುದು ಮತ್ತು ಅರಗಿಸಿಕೊಳ್ಳುವುದು ಬಿಜೆಪಿಯವರಿಗೆ ಕಷ್ಟವಾಗುತ್ತಿದೆ.
ಅಶೋಕ್‌ರನ್ನು ಜಿಲ್ಲಾ ಉಸ್ತುವಾರಿ ಸಚಿವರನ್ನಾಗಿ ನೇಮಕ ಮಾಡಿದ ಬಳಿಕ ಬಿಜೆಪಿಯೊಳಗೆ ಸೂತಕದ ಛಾಯೆ ಆವರಿಸಿದೆ. ಪಕ್ಷದ ಕಾರ್ಯಚಟುವಟಿಕೆಗಳು ಚುರುಕು ಪಡೆದುಕೊಳ್ಳುತ್ತಿಲ್ಲ. ಬಿಜೆಪಿಯ ಬಹುತೇಕ ಮುಖಂಡರು, ಕಾರ್ಯಕರ್ತರಲ್ಲಿ ಗೊಂದಲ, ಅಸಮಾಧಾನ ಆವರಿಸಿದೆ. ಅವರೆಲ್ಲರೂ ಮುಂದಿನ ಬೆಳವಣಿಗೆಗಳನ್ನು ಎದುರುನೋಡುತ್ತಿದ್ದಾರೆ.

ಆರ್.ಅಶೋಕ್ ವಿರುದ್ಧವೇ ಅಸಮಾಧಾನ
ಆರ್.ಅಶೋಕ್ ಎರಡು ಬಾರಿ ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದರು. ಆದರೆ, ಎಂದೂ ಅವರು ಬಿಜೆಪಿಯನ್ನು ಜಿಲ್ಲೆಯೊಳಗೆ ಸಮರ್ಥವಾಗಿ ಕಟ್ಟಿ ಬೆಳೆಸುವ ಪ್ರಯತ್ನಕ್ಕಿಳಿಯಲೇ ಇಲ್ಲವೆಂಬ ಅಸಮಾಧಾನ, ಕೊರಗು ಬಿಜೆಪಿಯವರಲ್ಲಿದೆ. ಕಾಂಗ್ರೆಸ್ ಅದರಲ್ಲೂ ಜೆಡಿಎಸ್ ಪಕ್ಷ ಮತ್ತು ನಾಯಕರ ವಿರುದ್ಧ ರಾಜಕೀಯವಾಗಿ ಟೀಕೆ-ಟಿಪ್ಪಣಿ ಮಾಡಿದಂತಹ ಉದಾಹರಣೆಗಳೇ ಇಲ್ಲ. ಕಾಂಗ್ರೆಸ್ ಪಕ್ಷಕ್ಕಿಂತಲೂ ಜೆಡಿಎಸ್‌ನವರೊಂದಿಗೆ ಸಮನ್ವಯತೆ ಸಾಧಿಸುತ್ತಾ ಹೊಂದಾಣಿಕೆಯೊಂದಿಗೆ ನಡೆಯುತ್ತಿದ್ದರು. ಈ ನೆಲದಲ್ಲಿ ಬಿಜೆಪಿ ಬೆಳವಣಿಗೆ ಸಾಧಿಸದಿರುವುದಕ್ಕೆ ನಾಯಕರ ಇಂತಹ ನಡವಳಿಕೆಗಳೇ ಕಾರಣ ಎಂಬ ನೋವು ಕಾರ್ಯಕರ್ತರಲ್ಲಿತ್ತು.

ಕೇಂದ್ರ ನಾಯಕರ ಸೂಚನೆ ಏನು?
ಇದೆಲ್ಲವನ್ನೂ ಹಿಂದಿನಿಂದಲೂ ಪಕ್ಷದೊಳಗಿರುವ ಮುಖಂಡರು, ಕಾರ್ಯಕರ್ತರು ನೋಡಿಕೊಂಡೇ ಬಂದಿದ್ದರು. ಆದ್ದರಿಂದ ಚುನಾವಣಾ ಸಮಯದಲ್ಲಿ ಅಶೋಕ್ ಅವರಿಗೆ ಉಸ್ತುವಾರಿ ನೀಡಿ ನೇಮಿಸಿದ್ದು ಅವರ ನಡುವೆಯೇ ಆಕ್ರೋಶ ಒಮ್ಮೆಲೆ ಭುಗಿಲೆದ್ದಿದೆ. ಅವರು ಸಚಿವರಾಗಿದ್ದ ಸಮಯದಲ್ಲೆಲ್ಲಾ ಪಕ್ಷದ ಕಾರ್ಯಕರ್ತರ ನೋವುಗಳಿಗೆ ಸ್ಪಂದಿಸಲಿಲ್ಲ. ತಮ್ಮ ಹಿಂಬಾಲಕರ ಹಿತ ಕಾಯುವುದಕ್ಕಷ್ಟೇ ಗಮನವನ್ನು ಕೇಂದ್ರೀಕರಿಸಿದರು. ಪಕ್ಷದ ಬೆಳವಣಿಗೆಗೆ ಯಾವುದೇ ಸಹಕಾರವನ್ನು ನೀಡಲಿಲ್ಲ. ಈಗ ಜಿಲ್ಲೆಯೊಳಗೆ ಬಿಜೆಪಿಗೆ ಹೊಸ ಶಕ್ತಿ ಬಂದಿದೆ. ಹಳೇ ಮೈಸೂರು ಭಾಗದಲ್ಲಿ ಹೊಂದಾಣಿಕೆ ರಾಜಕಾರಣಕ್ಕೆ ಅವಕಾಶವಿಲ್ಲ ಎಂದು ಕೇಂದ್ರ ನಾಯಕರು ಸೂಚನೆ ನೀಡಿದ್ದರು. ಇದರ ನಡುವೆಯೂ ಹೊಂದಾಣಿಕೆ ಮಾಡಿಕೊಳ್ಳುವವರನ್ನೇ ಜಿಲ್ಲಾ ಉಸ್ತುವಾರಿ ಸಚಿವರನ್ನಾಗಿ ನೇಮಿಸಿರುವುದರ ಹಿಂದಿನ ಕಾಣದ ಕೈ ಯಾವುದು ಎನ್ನುವುದು ಬಿಜೆಪಿಗರ ಪ್ರಶ್ನೆಯಾಗಿದೆ.












Click it and Unblock the Notifications