ಮಂಡ್ಯ; ಕಡತಗಳಿಗೆ ಸಹಿ ಹಾಕುವಂತಿಲ್ಲ, ಆದರೂ ಇಂಜಿನಿಯರ್!
ಮಂಡ್ಯ, ಜುಲೈ, 26 : ಎಂ.ಬಿ. ರಾಜು ಎಂಬುವವರು ಮಂಡ್ಯದಲ್ಲಿ ಲೋಕೋಪಯೋಗಿ ಇಲಾಖೆಗೆ ಎಕ್ಸಿಕ್ಯುಟೀವ್ ಇಂಜಿನಿಯರ್ ಆಗಿ ಅಧಿಕಾರ ವಹಿಸಿಕೊಂಡಿದ್ದರು. ಅಧಿಕಾರ ವಹಿಸಿಕೊಂಡ ಒಂದು ವರ್ಷದಲ್ಲಿಯೇ ಅವರನ್ನು ಸರ್ಕಾರ ಬೇರೆಡೆಗೆ ವರ್ಗಾವಣೆ ಮಾಡಿದೆ. ಅವರ ಜಾಗಕ್ಕೆ ಭಾಸ್ಕರ್ ಅವರನ್ನು ನೇಮಿಸಿದ್ದು, ಇದೀಗ ಆಕ್ರೋಶಕ್ಕೆ ಕಾರಣವಾಗಿದೆ. ರಾಜು ತಮ್ಮ ವರ್ಗಾವಣೆ ಪ್ರಶ್ನಿಸಿ ಹೈಕೋರ್ಟ್ ಮೆಟ್ಟಿಲೇರಿದ್ದಾರೆ.
ಇಲಾಖೆಯಲ್ಲಿ ಭಾಸ್ಕರ್ ಎಕ್ಸಿಕ್ಯುಟೀವ್ ಇಂಜಿನಿಯರ್ ಆಗಿದ್ದರೂ, ಕಡತಗಳಿಗೆ ಸಹಿ ಹಾಕುವ ಅಧಿಕಾರ ಅವರಿಗಿಲ್ಲ. ಇದರಿಂದ ನಗರದ ರಸ್ತೆ, ಸೇತುವೆ ಸೇರಿದಂತೆ ಇನ್ನಿತರ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಲು ಸಾಧ್ಯವಾಗುತ್ತಿಲ್ಲ. ಎರಡೂವರೆ ವರ್ಷದ ಬಳಿಕ ಬಂದಿರುವ ಕಾಮಗಾರಿಯ 21 ಕೋಟಿ ರೂಪಾತಿ ಹಣವನ್ನು ಗುತ್ತಿಗೆದಾರರು ಪಡೆದುಕೊಳ್ಳಲಾಗದೆ ಪರಿತಪಿಸುವಂತಾಗಿದೆ.
ಕಳೆದ 7-8 ತಿಂಗಳ ಹಿಂದೆ ಎಂ. ಬಿ. ರಾಜು ಮಂಡ್ಯ ಲೋಕೋಪಯೋಗಿ ಇಲಾಖೆಗೆ ಎಕ್ಸಿಕ್ಯುಟೀವ್ ಇಂಜಿನಿಯರ್ ಆಗಿ ಅಧಿಕಾರ ವಹಿಸಿಕೊಂಡಿದ್ದರು. ಹುದ್ದೆಗೆ ಬಂದು ಒಂದು ವರ್ಷವಾಗುವ ಮುನ್ನವೇ ಸರ್ಕಾರ ಅವರನ್ನು ಬೇರೆಡೆಗೆ ವರ್ಗಾವಣೆ ಮಾಡಿದ್ದು, ಆ ಹುದ್ದೆಗೆ ಭಾಸ್ಕರ್ ಎಂಬುವರನ್ನು ನೇಮಕ ಮಾಡಿ ಆದೇಶ ಹೊರಡಿಸಿತು. ಸರ್ಕಾರದ ಆದೇಶವನ್ನು ವಿರೋಧಿಸಿ ಎಂ. ಬಿ. ರಾಜು ಹೈಕೋರ್ಟ್ ಮೆಟ್ಟಿಲೇರಿದರು.
ಅಧಿಕಾರ ಸ್ವೀಕರಿಸಿ ಒಂದು ವರ್ಷವಾಗುವ ಮುನ್ನವೇ ವರ್ಗಾವಣೆ ಮಾಡಿರುವ ಸರ್ಕಾರದ ಆದೇಶವನ್ನು ರದ್ದುಗೊಳಿಸುವಂತೆ ಹಾಗೂ ನೂತನ ಎಕ್ಸಿಕ್ಯುಟೀವ್ ಇಂಜಿನಿಯರ್‌ಗೆ ಹುದ್ದೆಯಲ್ಲಿ ಕುಳಿತು ಕರ್ತವ್ಯ ನಿರ್ವಹಿಸುವ, ಕಡತಗಳು, ಚೆಕ್‌ಗಳಿಗೆ ಸಹಿ ಹಾಕುವ ಅಧಿಕಾರವನ್ನು ಮೊಟಕುಗೊಳಿಸುವಂತೆ ತಡೆಯಾಜ್ಞೆ ತರುವಲ್ಲಿ ಯಶಸ್ವಿಯಾದರು.

ಕಚೇರಿಯಲ್ಲಿ ನೊಣ ಹೊಡೆಯುವ ಪರಿಸ್ಥಿತಿ
ಸಹಾಯಕ ಕಾರ್ಯಪಾಲಕ ಅಭಿಯಂತರರಾಗಿದ್ದ ಭಾಸ್ಕರ್ ಬಡ್ತಿ ಪಡೆದು ಪಿಡಬ್ಲ್ಯುಡಿ ಇಲಾಖೆಯ ಕಾರ್ಯನಿರ್ವಾಹಕ ಹುದ್ದೆಗೆ ನೇಮಕಗೊಂಡಿದ್ದಾರೆ. ಆದರೆ ಹೈಕೋರ್ಟ್ ತಡೆಯಾಜ್ಞೆ ನೀಡಿರುವುದರಿಂದ ಇಂದಿಗೂ ಅವರು ಕಾರ್ಯನಿರ್ವಾಹಕ ಹುದ್ದೆಯಲ್ಲಿ ಕೂರುವ ಅದೃಷ್ಟ ಕೂಡಿಬಂದಿಲ್ಲ. ಯಾವುದೇ ಕಡತಗಳಿಗೆ, ಚೆಕ್‌ಗಳಿಗೆ ಸಹಿ ಹಾಕಲಾಗದೆ ಸುಮ್ಮನೆ ಅವರಿವರ ಕುರ್ಚಿಯಲ್ಲಿ ಕುಳಿತು ಹೋಗುತ್ತಿದ್ದಾರೆ. ಸಭೆಗಳು, ಕಾರ್ಯಕ್ರಮಗಳಿಗೆ ಹಾಜರಾಗುವುದಷ್ಟೇ ಅವರ ಕೆಲಸವಾಗಿದೆ.

ನೆನೆಗುದಿಗೆ ಬಿದ್ದ ಅಭಿವೃದ್ಧಿ ಚಟುವಟಿಕೆಗಳು
ಭಾರೀ ಮಳೆಯಿಂದಾಗಿ ಜಿಲ್ಲೆಯ ಹಲವೆಡೆ ರಸ್ತೆಗಳು, ಸೇತುವೆಗಳು ಹಾನಿಗೊಳಗಾಗಿವೆ. ಅವುಗಳನ್ನು ಅಭಿವೃದ್ಧಿಪಡಿಸುವುದಕ್ಕೆ ಟೆಂಡರ್ ಕರೆಯಬೇಕಿದೆ. ಕಾರ್ಯನಿರ್ವಾಹಕ ಅಭಿಯಂತರರಿಗೆ ಅಧಿಕಾರವೇ ಇಲ್ಲದಿರುವುದರಿಂದ ಅಭಿವೃದ್ಧಿ ಚಟುವಟಿಕೆಗಳೆಲ್ಲವೂ ನೆನೆಗುದಿಗೆ ಬಿದ್ದಿವೆ. ರಾಜ್ಯ ಸರ್ಕಾರದ ಗೊಂದಲದ ನಡೆಯಿಂದ ನೂತನ ಎಕ್ಸಿಕ್ಯುಟೀವ್ ಇಂಜಿನಿಯರ್ ಭಾಸ್ಕರ್ ಸುಮ್ಮನೆ ಕುಳಿತು ಸಂಬಳ ಎಣಿಸಿಕೊಳ್ಳುವಂತಾಗಿದೆ. ರಾಜ್ಯ ಸರ್ಕಾರ ಲೋಕೋಪಯೋಗಿ ಇಲಾಖೆ ಕಾರ್ಯನಿರ್ವಾಹಕ ಇಂಜಿನಿಯರ್ ಎಂ. ಬಿ. ರಾಜು ವಿರುದ್ಧ ಯಾವುದೇ ಆರೋಪಗಳಿರದಿದ್ದರೂ ಒಂದು ವರ್ಷ ಪೂರೈಸುವ ಮುನ್ನವೇ ಬೇರೆಡೆಗೆ ವರ್ಗಾವಣೆ ಮಾಡಿತ್ತು. ವರ್ಗಾವಣೆಗೆ ಸರ್ಕಾರ ಆತುರ ತೋರಿದ್ದೇಕೆ ಎನ್ನುವ ಪ್ರಶ್ನೆಗೆ ಯಾರ ಬಳಿಯೂ ಉತ್ತರವಿಲ್ಲದಂತಾಗಿದೆ.

ಹೈಕೋರ್ಟ್ ಮೆಟ್ಟಿಲೇರಿದ ಎಂ. ಬಿ. ರಾಜು
ಸರ್ಕಾರದ ಈ ಆದೇಶದ ವಿರುದ್ಧ ಎಂ. ಬಿ. ರಾಜು ನ್ಯಾಯಾಲಯದ ಮೆಟ್ಟಿಲೇರಿದರು. ವರ್ಗಾವಣೆಯನ್ನು ನಿಯಮಾನುಸಾರ ಮಾಡಿಲ್ಲ ಎಂಬ ಆರೋಪವನ್ನು ಮುಂದಿಟ್ಟು ನ್ಯಾಯಾಲಯದದಲ್ಲಿ ವಾದ ಮಂಡಿಸಿದ್ದಾರೆ. ಮಂಡ್ಯ ಪಿಡಬ್ಲ್ಯುಡಿ ಇಲಾಖೆಯಲ್ಲಿ ನಿಗದಿತ ಅವಧಿವರೆಗೆ ಕಾರ್ಯನಿರ್ವಹಿಸುವುದಕ್ಕೂ ಮುನ್ನವೇ ತಮ್ಮನ್ನು ವರ್ಗಾವಣೆ ಮಾಡಿಸಿ ಆ ಹುದ್ದೆಗೆ ಭಾಸ್ಕರ್ ಅವರನ್ನು ನೇಮಿಸಿರುವ ಉದ್ದೇಶವೇನು? ಎಂದು ಹೈಕೋರ್ಟ್‌ನಲ್ಲಿ ಪ್ರಶ್ನಿಸಿದ್ದಾರೆ. ರಾಜ್ಯ ಸರ್ಕಾರದ ದಿಢೀರ್ ವರ್ಗಾವಣೆ ಕ್ರಮವನ್ನು ತೀವ್ರವಾಗಿ ವಿರೋಧಿಸಿದ್ದಾರೆ.

ಭಾಸ್ಕರ್ ವಿರುದ್ಧ ಅನುಮಾನದ ಅಲೆಗಳು
ಭಾಸ್ಕರ್ ರಾಜಕೀಯ ಪ್ರಭಾವ ಬಳಸಿ ಎಂ. ಬಿ. ರಾಜುರನ್ನು ಹುದ್ದೆಯಿಂದ ಎತ್ತಂಗಡಿ ಮಾಡಿಸಿದ್ದಾರೆ ಎಂಬ ಆರೋಪ ಕೇಳಿಬರುತ್ತಿದೆ. ಆ ಹಿನ್ನೆಲೆಯಲ್ಲಿ ಭಾಸ್ಕರ್‌ಗೆ ಕರ್ತವ್ಯ ನಿರ್ವಹಿಸಲು ಸಾಧ್ಯವಾಗದ ರೀತಿಯಲ್ಲಿ ಕಾನೂನು ಸಂಕೋಲೆಯಿಂದ ಕೈ ಕಟ್ಟಿಹಾಕಲಾಗಿದೆ ಎಂಬ ಆರೋಪವೂ ಇದೆ. ಅಲ್ಲದೇ ಅಲ್ಲಿನ ಸ್ಥಳೀಯರು ಕೂಡ ಭಾಸ್ಕರ್ ಅಧಿಕಾರದ ಬಗ್ಗೆ ಅನುಮಾನವನ್ನು ವ್ಯಕ್ತಪಡಿಸಿದ್ದಾರೆ.












Click it and Unblock the Notifications