ಸುಡುಗಾಡು ಭಾಗ್ಯ’ ಕರುಣಿಸಿದ ಸಿಎಂ: ಮಂಡ್ಯದಲ್ಲಿ ಆಕ್ರೋಶ

By: ಮಂಡ್ಯ ಪ್ರತಿನಿಧಿ
Subscribe to Oneindia Kannada

ಮಂಡ್ಯ, ಸೆಪ್ಟೆಂಬರ್ 13: ರಾಜ್ಯದ ಜನತೆಗೆ ಇನ್ನಿಲ್ಲದ ಭಾಗ್ಯ'ಗಳನ್ನು ನೀಡಿ ಭಾಗ್ಯ'ಗಳ ಸರದಾರ ಎನಿಸಿಕೊಂಡಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ, ರಾಜ್ಯದ ರೈತರು ಹಾಗೂ ಜನತೆಗೆ ಸುಡುಗಾಡು ಭಾಗ್ಯ'ವನ್ನೂ ಕರುಣಿಸಿದ್ದಾರೆ ಎಂದು ಮಹದಾಯಿ, ಕಳಸಾ ಬಂಡೂರಿ ರೈತ ಹೋರಾಟ ಒಕ್ಕೂಟದ ಹುಬ್ಬಳ್ಳಿ ಜಿಲ್ಲಾ ಘಟಕದ ಅಧ್ಯಕ್ಷ ವಿಜಯ್ ಕುಲಕರ್ಣಿ ಹರಿಹಾಯ್ದಿದ್ದಾರೆ.

ನಗರದ ಸರ್ ಎಂ.ವಿ. ಪ್ರತಿಮೆ ಎದುರು ಜಿಲ್ಲಾ ರೈತ ಹಿತರಕ್ಷಣಾ ಸಮಿತಿ ನಡೆಸುತ್ತಿರುವ ಧರಣಿಯಲ್ಲಿ ಮಾತನಾಡಿದ ಅವರು, ಕುಡಿಯುವ ನೀರು ಕೇಳಿದರೆ ಪೊಲೀಸರನ್ನು ಬಿಟ್ಟು ದೌರ್ಜನ್ಯ ನಡೆಸುತ್ತಾರೆ. ಕನ್ನಡಿಗರು ಸಿಡಿದೆದ್ದರೆ ಯಾವ ಸರ್ಕಾರವೂ ಉಳಿಯುವುದಿಲ್ಲ ಎಂದು ಎಚ್ಚರಿಕೆ ನೀಡಿದರು.[ಮಂಡ್ಯ ಧರಣಿಯಲ್ಲಿ ಮಹದಾಯಿ, ಕಳಸಾ ಬಂಡೂರಿ ರೈತ ಒಕ್ಕೂಟ]

Mandya protest

ರೈತರ ಹಿತವನ್ನು ಕಾಪಾಡದ ಸರ್ಕಾರ ಒಂದು ಹೆಣ್ಣಿಗೆ ಹೆದರಿ ನೀರು ಬಿಡುವುದು ದುರಂತ. ನೀರು ಹರಿಸಲು ಸಾಧ್ಯವಿಲ್ಲ ಎಂಬ ಕಠಿಣ ಸಂದೇಶವನ್ನು ಸರ್ಕಾರ ಸುಪ್ರೀಂ ಕೋರ್ಟ್ ಗೆ ನೀಡಬೇಕು. ರಾಜ್ಯದ ಜನರು ನಿಮ್ಮ ಜತೆ ಇರುತ್ತಾರೆ ಎಂದು ಹೇಳಿದರು.

ದಪ್ಪ ಚರ್ಮದ ರಾಜಕಾರಣಿಗಳಿಗೆ ರೈತರ ಶಾಂತಿಯುತ ಹೋರಾಟ, ಚಳವಳಿ ಕೇಳುವುದಿಲ್ಲ. ಆದ್ದರಿಂದ ರಾಜಕಾರಣಿಗಳಿಗೆ ಬಾರುಕೋಲಿನಿಂದ ಬಾರಿಸುವ ಮೂಲಕ ಚಳವಳಿ ನಡೆಸಬೇಕು. ರಾಜ್ಯದ ಸಂಸದರು, ಶಾಸಕರು, ಮುಖ್ಯಮಂತ್ರಿ ಸಾಮೂಹಿಕ ರಾಜೀನಾಮೆ ನೀಡುವ ಮೂಲಕ ಕೇಂದ್ರ ಸರ್ಕಾರದ ಗಮನ ಸೆಳೆಯಬೇಕು. ಕಾವೇರಿ, ಮಲಪ್ರಭಾ, ಕಳಸಾ ಬಂಡೂರಿ ಯೋಜನೆಗಳಿಗೆ ಶಾಶ್ವತ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಎಲ್ಲರೂ ಪ್ರಧಾನಿ ಮೇಲೆ ಒತ್ತಡ ಹೇರಬೇಕು ಎಂದರು.[ತಮಿಳು ಭಾಷಿಕರಿಗೆ ಮಂಡ್ಯದಲ್ಲಿ ರಕ್ಷಣೆ ಕೊಡ್ತೀವಿ]

ತಮಿಳುನಾಡಿನಲ್ಲಿ ಪೊಲೀಸರು ಪ್ರತಿಭಟನೆಗೆ ಕುಮ್ಮಕ್ಕು ನೀಡುತ್ತಿದ್ದಾರೆ. ಇಲ್ಲಿನ ರಾಜಕಾರಣಿಗಳಿಗೆ ನ್ಯಾಯ ಕೇಳುವ ಶಕ್ತಿ ಇಲ್ಲ, ಪೊಲೀಸರಿಂದ ಗೋಲಿಬಾರ್ ನಡೆಸುವ ಮೂಲಕ ಚಳವಳಿಗಾರರನ್ನು ಬಲಿ ಪಡೆಯುತ್ತಿದ್ದಾರೆ ಎಂದು ಮಹದಾಯಿ, ಕಳಸಾ ಬಂಡೂರಿ ರೈತ ಹೋರಾಟ ಒಕ್ಕೂಟದ ಮುಖಂಡ ಗಿರೀಶ್ ಮಟ್ಟಣ್ಣನವರ್ ಕಿಡಿ ಕಾರಿದರು.

ನಗರದ ಸರ್ ಎಂ.ವಿ. ಪ್ರತಿಮೆ ಬಳಿ ರೈತ ಹಿತರಕ್ಷಣಾ ಸಮಿತಿ ವತಿಯಿಂದ ನಡೆಯುತ್ತಿರುವ ಧರಣಿಯಲ್ಲಿ ಮಾತನಾಡಿದ ಅವರು, ರಾಜ್ಯದ ರೈತರು ಹಾಗೂ ಜನತೆಗೆ ಕುಡಿಯುವ ನೀರೊದಗಿಸದ ಸರ್ಕಾರ ಹೋರಾಟಗಾರರ ಮೇಲೆ ದೌರ್ಜನ್ಯ ನಡೆಸಿದೆ ಎಂದು ಗುಡುಗಿದರು.['ಗಂಟೆಗೊಂದು ಮಾತಾಡುವ ಸಿದ್ದರಾಮಯ್ಯನ್ನ ನಾವು ನಂಬಲ್ಲ']

ನಾವು ಹೊರರಾಜ್ಯದ ನೀರನ್ನು ಕೇಳುತ್ತಿಲ್ಲ, ಕಾವೇರಿ, ಕಬಿನಿ, ಹೇಮಾವತಿ, ಮಹದಾಯಿ, ಹಾರಂಗಿ ಜಲಾಶಯ ಭಾಗದ ಜನರಿಗೆ ಕುಡಿಯಲು ನೀರು ಕೇಳುತ್ತಿದ್ದೇವೆ. ಕಷ್ಟದಲ್ಲಿರುವ ರೈತರನ್ನು ಕಾಪಾಡುವ ನಿಟ್ಟಿನಲ್ಲಿ ಸರ್ಕಾರ ನಡೆದುಕೊಳ್ಳಬೇಕು. ತಮಿಳುನಾಡಿಗೆ ನೀರು ಹರಿಸಬಾರದು. ನಮ್ಮ ರಾಜ್ಯದ ನೀರನ್ನು ನಾವೇ ಕುಡಿಯಲು ಬೇಕು ಎಂದು ಕೇಳಲು ರಾಜಕಾರಣಿಗಳಿಗೆ ಶಕ್ತಿಯಿಲ್ಲ ಎಂದು ದೂರಿದರು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Mahadayi farmer association supports and partcipated in Mandya protest. Protesters angry on Chief ministers Siddaramaiah.
Please Wait while comments are loading...