Prajwal Revanna Case: ಜೆಡಿಎಸ್ ಜೊತೆ ಮೈತ್ರಿ ಮುಂದುವರೆಸದಂತೆ ಬಿಜೆಪಿ ಮಾಜಿ ಸಂಸದ ಒತ್ತಾಯ
ಹಾಸನದ ಪ್ರಜ್ವಲ್ ರೇವಣ್ಣ ಪ್ರಕರಣ ರಾಷ್ಟ್ರ ಮತ್ತು ಅಂತರಾಷ್ಟ್ರೀಯ ಮಟ್ಟದಲ್ಲಿ ಕುಖ್ಯಾತಿ ಪಡೆದಿದ್ದು, ಈ ಪ್ರಕರಣದಿಂದ ಬಿಜೆಪಿ ಪಕ್ಷಕ್ಕೆ ತೀವ್ರ ಮುಜುಗರ ಉಂಟುಮಾಡಿರುವ ಕಾರಣ ಮೈತ್ರಿಯಿಂದ ಜೆಡಿಎಸ್‌ನ್ನು ದೂರ ಇಡುವಂತೆ ಮಾಜಿ ಸಂಸದ ಎಲ್.ಆರ್ ಶಿವರಾಮೇಗೌಡ ಒತ್ತಾಯಿಸಿದರು.
ಮಂಡ್ಯದಲ್ಲಿ ಸುದ್ಧಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಇದು ಪ್ರಸ್ತುತ ನಡೆಯುತ್ತಿರುವ ಲೋಕಸಭಾ ಚುನಾವಣೆ ಮೇಲೆ ತೀವ್ರ ಪರಿಣಾಮ ಬೀರುವ ಸಾಧ್ಯತೆಗಳಿದ್ದು, ತಕ್ಷಣ ಜೆಡಿಎಸ್‌ನಿಂದ ಮೈತ್ರಿ ಹೊರಬರಬೇಕು ಎಂದು ಆಗ್ರಹಿಸಿದರು.

ಈ ಪ್ರಕರಣದ ಮುಜುಗರ ತಪ್ಪಿಸುವ ಸಲುವಾಗಿ ವರಿಷ್ಠರು ಈಗಾಗಲೇ ಜೆಡಿಎಸ್‌ನಿಂದ ಅಂತರ ಕಾಯ್ದುಕೊಳ್ಳುವಂತೆ ಸೂಚಿಸಿದ್ದಾರೆ. ಬಿಜೆಪಿ ಇದರ ಬಗ್ಗೆ ಹೆಚ್ಚು ತಲೆ ಕೆಡಿಸಿಕೊಳ್ಳುವುದಿಲ್ಲ ಎಂದು ಹೇಳಿದರು.
ಸಂತ್ರಸ್ತೆಯರ ನೆರವಿಗೆ ಬರಲಿ
ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅವರು ಸಂತ್ರಸ್ತೆಯರ ನೆರವಿಗೆ ಧಾವಿಸಬೇಕು. ಈ ಪ್ರಕರಣದಲ್ಲಿ ತಪ್ಪಿತಸ್ಥರ ವಿರುದ್ಧ ಶಿಕ್ಷೆ ಆಗುವಂತೆ ಹೋರಾಟ ರೂಪಿಸಬೇಕು. ಅದರಲ್ಲಿ ನಾವೂ ಪಾಲ್ಗೊಳ್ಳುತ್ತೇವೆ ಎಂದರು.
ಯಾವುದೇ ವಿಚಾರವಾದರೂ ಕುಮಾರಸ್ವಾಮಿಯವರು ದಿಢೀರನೇ ಹೋರಾಟಕ್ಕೆ ಇಳಿಯುತ್ತಾರೆ. ಆದರೆ ಹಾಸನದ ಪ್ರಕರಣದಲ್ಲಿ ಕೇವಲ ವಿಪಕ್ಷಗಳ ವಿರುದ್ಧ ಟೀಕೆಗಳನ್ನು ಮಾಡುತ್ತಿದ್ದಾರೆ. ಇಂತಹ ಮಿಥ್ಯಾರೋಪವನ್ನು ಬಿಟ್ಟು ನೈಜ ಹೋರಾಟಕ್ಕೆ ಇಳಿಯಲಿ ಎಂದು ಒತ್ತಾಯಿಸಿದರು.
ದೇವೇಗೌಡರು ಇಂತಹದ್ದನ್ನು ನೋಡಬೇಕು
ಹಿಂದೆ ನಾಗಮಂಗಲದ ಗಂಗಾಧರಸ್ವಾಮಿ ಪ್ರಕರಣದಲ್ಲಿ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರು ನನ್ನ ವಿರುದ್ಧ ಆತನ ಫೋಟೋ ತಲೆ ಮೇಲೆ ಇಟ್ಟುಕೊಂಡು ಪ್ರತಿಭಟನೆ ಮಾಡಿದ್ದರು. ಆದರೆ ಇಂದು ಇಂತಹ ಇಳಿ ವಯಸ್ಸಿನಲ್ಲಿ ತನ್ನ ಮನೆಯಲ್ಲೇ ದೊಡ್ಡ ಘಟನೆ ನಡೆದುಹೋಗಿದೆ. ಇಂತಹುದ್ದನ್ನು ಈ ವಯಸ್ಸಿನಲ್ಲಿ ನೋಡಬೇಕಾದ ದುಸ್ಥಿತಿ ಬಂದೊದಗಿದೆ ಎಂದು ತಿಳಿಸಿದರು.
ಗಂಗಾಧರಮೂರ್ತಿ ಕೊಲೆ ಪ್ರಕರಣದಲ್ಲಿ ನನ್ನ ಪಾತ್ರವೇನೂ ಇರಲಿಲ್ಲ. ಆದರೂ ನನ್ನನ್ನು ಬಂಧಿಸುವಂತೆ ಹೋರಾಟ ಮಾಡಿದ್ದರು. ನ್ಯಾಯಾಲಯ ನನಗೆ ಕ್ಲೀನ್‌ಚಿಟ್ ನೀಡಿತ್ತು. ಆ ಪ್ರಕರಣದಲ್ಲಿ ನಾನೂ ಕೂಡ ಸಂತಸ್ತನಾಗಿದ್ದೇನೆ. ಜೆಡಿಎಸ್‌ನಲ್ಲಿದ್ದ ಎಷ್ಟೋ ಮಂದಿ ನನ್ನಂತೆಯೇ ಒಂದಲ್ಲ ಒಂದು ಕಾರಣಕ್ಕೆ ಸಂತ್ರಸ್ಥರಾಗಿದ್ದಾರೆ ಎಂದರು.
ಒಕ್ಕಲಿಗ ನಾಯಕರ ಕಡೆಗಣನೆ
ದೇವೇಗೌಡರ ಕುಟುಂಬದಿಂದ ಒಕ್ಕಲಿಗ ನಾಯಕರು ತುಳಿತಕ್ಕೆ ಒಳಗಾಗಿದ್ದಾರೆ. ಹಾಸನದಲ್ಲಿ ಈ ಕುಟುಂಬದ ಸದಸ್ಯನಿಂದ ಹೆಣ್ಣು ಮಕ್ಕಳು ಹೇಗೆ ನೊಂದಿದ್ದಾರೋ ಅದೇ ರೀತಿ ನಾವೂ ನೊಂದಿದ್ದೇವೆ. ಕುಮಾರಸ್ವಾಮಿಯವರು ಆ ನೊಂದ ಮಹಿಳೆಯರಿಗೆ ಸಾಂತ್ವನ ಹೇಳುವ ಕೆಲಸ ಮಾಡಬೇಕು ಎಂದು ಹೇಳಿದರು.
ಚುನಾವಣೆಗೂ ಮುನ್ನ ಹಾಸನದಲ್ಲಿ ಪ್ರಚಾರ ಮಾಡುವ ವೇಳೆ ಪ್ರಜ್ವಲ್ ನನ್ನ ಮಗನಿದ್ದಂತೆ ಆತ ಏನೇ ಮಾಡಿರಲಿ, ನಾನು ಸರಿಪಡಿಸುತ್ತೇನೆ. ಅವನಿಗೆ ಆಶೀರ್ವಾದ ಮಾಡಿ ಎಂದು ಕುಮಾರಸ್ವಾಮಿ ಕೇಳಿದ್ದರು. ಆದರೆ ಲೈಂಗಿಕ ಹಗರಣ ಹೊರ ಬಂದ ನಂತರ ರೇವಣ್ಣ ಕುಟುಂಬಕ್ಕೂ ನಮಗೂ ಸಂಬಂಧವಿಲ್ಲ ಎಂದು ಹೇಳಿದ್ದಾರೆ ಎಂದರು.
ಜೆಡಿಎಸ್‌ಗಾಗಿ ನಾನೂ ಸೇರಿದಂತೆ ಹಲವರು ದುಡಿದಿದ್ದೇವೆ. ಕೋಟ್ಯಾಂತರ ರೂಪಾಯಿ ಹಣ ಕಳೆದುಕೊಂಡಿದ್ದೇನೆ. ವಿಧಾನಸಭಾ ಚುನಾವಣೆಯಲ್ಲಿ ನನಗೆ ಟಿಕೆಟ್ ನೀಡದೆ ಸುರೇಶ್‌ಗೌಡರಿಗೆ ನೀಡಿದರು. ನಂತರ ಕೇವಲ 5 ತಿಂಗಳ ಅವಧಿಗೆ ಸಂಸದನಾದೆ. ನಂತರ ತಮ್ಮ ಮಗನಿಗೆ ಟಿಕೆಟ್ ಕೊಟ್ಟರು. ನನಗೇನೂ ಕೊಟ್ಟರು ಎಂದು ಪ್ರಶ್ನೆ ಮಾಡಿದರು.
ಕೇವಲ ಬಾಯಿಮಾತಿಯಿಂದ ಆಡಿದ ಸಣ್ಣ ತಪ್ಪುನ್ನು ಗಮನಿಸಿ ಅರ್ಧ ಗಂಟೆಯಲ್ಲೇ ನನ್ನನ್ನು ಪಕ್ಷದಿಂದ ಹೊರ ಹಾಕಿದರು. ಇಂತಹ ದೊಡ್ಡ ಪ್ರಕರಣದಲ್ಲಿ ಭಾಗಿಯಾಗಿರುವ ಪ್ರಜ್ವಲ್ ಅಮಾನತ್ತಿಗೆ ಸಭೆ ಮಾಡಿ ನಂತರ ತೀರ್ಮಾನ ಮಾಡಿದ್ದಾರೆ. ಇದು ಯಾವ ನ್ಯಾಯ ಎಂದರು.












Click it and Unblock the Notifications