150 ವಸತಿ ಗೃಹಗಳ ಕಾಮಗಾರಿ ಸಂಪೂರ್ಣ ಕಳಪೆ- ನಗರಸಭೆ ವಿಶೇಷ ಸಭೆಯಲ್ಲಿ ಅಧಿಕಾರಿಗಳ ವಿರುದ್ಧ ಆಕ್ರೋಶ
ಮಂಡ್ಯ, ಮಾರ್ಚ್ 28: ನಗರದ ಲೇಬರ್ ಕಾಲೋನಿ ಹಾಗೂ ಮುಸ್ಲಿಂ ಬ್ಲಾಕ್‌ನಲ್ಲಿ ಕೊಳಚೆ ನಿವಾಸಿಗಳಿಗೆ ನಿರ್ಮಿಸಿರುವ 150 ವಸತಿ ಗೃಹಗಳ ಕಾಮಗಾರಿ ಸಂಪೂರ್ಣ ಕಳಪೆಯಿಂದ ಕೂಡಿದೆ.
ಯಾವುದೇ ಮೂಲಸೌಲಭ್ಯಗಳನ್ನೇ ಕಲ್ಪಿಸದೆ ಮನೆಗಳನ್ನು ನಿರ್ಮಿಸಿದ್ದು, ನಿರ್ಮಾಣ ಹಂತದಲ್ಲಿರುವಾಗಲೇ ಈ ಬಗ್ಗೆ ದೂರು ಸಲ್ಲಿಸಿದರೂ ಕ್ರಮ ಕೈಗೊಳ್ಳದ ಕೊಳಗೇರಿ ಮಂಡಳಿ ಅಧಿಕಾರಿಗಳ ವಿರುದ್ಧ ನಗರಸಭೆ ಸಾಮಾನ್ಯಸಭೆಯಲ್ಲಿ ಸದಸ್ಯರು ಆಕ್ರೋಶ ವ್ಯಕ್ತಪಡಿಸಿದರು.

ಮಂಗಳವಾರ ನಗರಸಭೆ ಧರಣಪ್ಪ ಸಭಾಂಗಣದಲ್ಲಿ ಅಧ್ಯಕ್ಷ ಹೆಚ್.ಎಸ್.ಮಂಜು ಅಧ್ಯಕ್ಷತೆಯಲ್ಲಿ ನಡೆದ ಸಾಮಾನ್ಯಸಭೆಯಲ್ಲಿ ವಿಷಯ ಪ್ರಸ್ತಾಪಗೊಂಡಿತು. ಈ ವೇಳೆ ಸದಸ್ಯ ನಾಗೇಶ್ ಮಾತನಾಡಿ, ಕೊಳಗೇರಿ ಮಂಡಳಿ ವತಿಯಿಂದ ನಿರ್ಮಿಸಲಾಗಿರುವ ಮನೆಗಳು ವಾಸಕ್ಕೆ ಯೋಗ್ಯವಿಲ್ಲ.
ಹಲವಾರು ಮನೆಗಳಿಗೆ ಬಾಗಿಲು, ಕಿಟಕಿಗಳನ್ನೇ ಅಳವಡಿಸಿಲ್ಲ. ವಿದ್ಯುತ್ ವ್ಯವಸ್ಥೆ, ರಸ್ತೆ, ಒಳಚರಂಡಿ ಸೇರಿದಂತೆ ಮೂಲಸೌಲಭ್ಯಗಳನ್ನೇ ಕಲ್ಪಿಸದೆ ನಿವಾಸಿಗಳನ್ನು ಸಂಕಷ್ಟಕ್ಕೆ ಸಿಲುಕಿಸಿದ್ದಾರೆ ಎಂದು ಅಧಿಕಾರಿಗಳ ವಿರುದ್ಧ ಹರಿಹಾಯ್ದರು.
ಮನೆಯ ಒಳಭಾಗದಲ್ಲಿ ಮರದ ವಾಸ್ಕಾಲ್‌ಗಳನ್ನು ಅಳವಡಿಸಿಲ್ಲ, ಸಜ್ಜಗಳನ್ನು ನಿರ್ಮಿಸಿಲ್ಲ. ಕಿಟಕಿಗಳನ್ನು ಸಮರ್ಪಕವಾಗಿ ಅಳವಡಿಸಿಲ್ಲ. ಮನೆಯ ಮೇಲ್ಭಾಗದಲ್ಲಿ ಪ್ಯಾರಾಪಿಟ್ ವಾಲ್ ನಿರ್ಮಾಣ ಮಾಡಿಲ್ಲ. ಇದರಿಂದಾಗಿ ಮಳೆ ಬಂತೆಂದರೆ ಮನೆಯೊಳಗೆ ನೀರು ಸರಾಗವಾಗಿ ಹರಿದುಬರುತ್ತದೆ. ಇಂತಹ ಪರಿಸ್ಥಿತಿಯೊಳಗೆ ನಿವಾಸಿಗಳು ವಾಸ ಮಾಡುವುದಾದರೂ ಹೇಗೆ ಎಂದು ಸದಸ್ಯರು ಪ್ರಶ್ನಿಸಿದರು.

ಟೆಂಡರ್ದಾರರಿಗೆ ಹಣ ಪಾವತಿಸುವುದಿಲ್ಲ
ಇದಕ್ಕೆ ಉತ್ತರಿಸಿದ ಕೊಳಗೇರಿ ಅಧಿಕಾರಿಗಳು ಯಾವ ಯಾವ ಮನೆಗಳಿಗೆ ಬಾಗಿಲು-ಕಿಟಕಿ ಅಳವಡಿಸಿಲ್ಲವೋ ಅವುಗಳಿಗೆ ಟೆಂಡರ್ದಾರರಿಗೆ ಹಣ ಪಾವತಿಸುವುದಿಲ್ಲ ಎಂದಾಗ ಮತ್ತಷ್ಟು ಆಕ್ರೋಶಗೊಂಡ ಸದಸ್ಯರು, ನೀವು ಟೆಂಡರ್ದಾರರಿಗೆ ಹಣ ಕೊಡುತ್ತೀರಾ, ಗೊತ್ತಿಲ್ಲ. ನಿವಾಸಿಗಳು ಏನು ಮಾಡಬೇಕು. ನಿಮ್ಮ ಬೇಜವಾಬ್ದಾರಿತನಕ್ಕೆ ಅವರು ಬಲಿಯಾಗಬೇಕಾ ಎಂದು ಖಾರವಾಗಿ ಹೇಳಿದರು.
ಮನೆಗಳ ನಿರ್ಮಾಣ ಕಳಪೆಯಿಂದ ಕೂಡಿರುವುದಾಗಿ ನಿವಾಸಿಗಳಿಂದ ಬಂದ ದೂರನ್ನು ಆಧರಿಸಿ ವರ್ಷದ ಹಿಂದೆಯೇ ಪತ್ರ ಬರೆದರೂ ಕೊಳಗೇರಿ ಮಂಡಳಿ ಅಧಿಕಾರಿಗಳು ಇದುವರೆಗೂ ಯಾವುದೇ ಕ್ರಮವನ್ನು ಕೈಗೊಂಡಿಲ್ಲ. ಈಗಲೂ ಕಳಪೆ ಕಾಮಗಾರಿ ಕುರಿತು ಪರಿಶೀಲನೆ ನಡೆಸದೆ ನಿರ್ಲಕ್ಷ್ಯ ವಹಿಸಿದ್ದಾರೆ ಎಂದು ದೂರಿದಾಗ ಅಧಿಕಾರಿಗಳು ವೌನ ವಹಿಸಿದರು.
ಬಾಗಿಲು ಇಲ್ಲ, ಕಿಟಕಿ ಇಲ್ಲ ಎಂದರೆ ಏನರ್ಥ ?
ಇದರಿಂದ ಕೋಪಗೊಂಡ ಅಧ್ಯಕ್ಷ ಹೆಚ್.ಎಸ್.ಮಂಜು, ಏನು ಮಾತನಾಡುತ್ತೀರಿ ನೀವು? ಮನೆಗಳನ್ನು ನಿರ್ಮಿಸುವುದು ಅಂದರೆ ಕಾಂಕ್ರೀಟ್ ಚಪ್ಪರ ಹಾಕಿ ಬಂದಂತೆ ಎಂದು ತಿಳಿದುಕೊಂಡಿದ್ದೀರಾ. ವಿದ್ಯುತ್ ಸೌಲಭ್ಯವಿಲ್ಲ, ಬಾಗಿಲು ಇಲ್ಲ, ಕಿಟಕಿ ಇಲ್ಲ ಎಂದರೆ ಏನರ್ಥ. ನೀವೆಲ್ಲಾ ಏನು ಮಾಡುತ್ತಿದ್ದೀರಿ ಎಂದು ಕೊಳಗೇರಿ ಅಧಿಕಾರಿಗಳ ವಿರುದ್ಧ ಗುಡುಗಿದರು.
ಈ ವೇಳೆ ಉತ್ತರಿಸಿದ ಅಧಿಕಾರಿಗಳು ಕೇಂದ್ರ ಮತ್ತು ರಾಜ್ಯಸರ್ಕಾರಗಳ ಅನುದಾನದ ಜೊತೆ ನಿವಾಸಿಗಳು 70,800 ರೂಪಾಯಿ ಹಣವನ್ನು ಪಾವತಿಸಬೇಕು. ಈ ಹಣವನ್ನು ಪಾವತಿಸಿದರೆ ಸೌಲಭ್ಯಗಳನ್ನು ಕಲ್ಪಿಸಿಕೊಡುವುದಾಗಿ ಅಧಿಕಾರಿಗಳು ತಿಳಿಸಿದರು.
ಲೇಬರ್ ಕಾಲೋನಿ ಹಾಗೂ ಮುಸ್ಲಿಂ ಬ್ಲಾಕ್‌ನಲ್ಲಿ ಕೊಳಚೆ ನಿವಾಸಿಗಳಿಗೆ ನಿರ್ಮಿಸಿರುವ 150 ವಸತಿಗೃಹಗಳ ನಿರ್ಮಾಣ ಕಾಮಗಾರಿ ಬಗ್ಗೆ ನಾಳೆ (ಬುಧವಾರ)ಯೇ ಪರಿಶೀಲನೆ ನಡೆಸಲಾಗುವುದು. ಕಾಮಗಾರಿಗೆ ಸಂಬಂಧಿಸಿದಂತೆ ಟೆಂಡರ್ದಾರರು, ಅಧಿಕಾರಿಗಳು ಸ್ಥಳದಲ್ಲಿ ಹಾಜರಿರಬೇಕು ಎಂದು ಶಾಸಕ ಎಂ.ಶ್ರೀನಿವಾಸ್ ಸೂಚನೆ ನೀಡಿದರು.
ಈ ಸಭೆಯಲ್ಲಿ ಉಪಾಧ್ಯಕ್ಷೆ ಇಷ್ರತ್ ಫಾತೀಮಾ, ಆಯುಕ್ತ ಆರ್.ಮಂಜುನಾಥ್, ಸ್ಥಾಯಿ ಸಮಿತಿ, ಅಧ್ಯಕ್ಷೆ ಮೀನಾಕ್ಷಿ ಪುಟ್ಟಸ್ವಾಮಿ ಉಪಸ್ಥಿತರಿದ್ದರು.












Click it and Unblock the Notifications