ಬಲಿಷ್ಠ ಭಾರತ ನಿರ್ಮಾಣಕ್ಕೆ ವಿಷಮುಕ್ತ ಆಹಾರ ಸೇವನೆ ಅಗತ್ಯ- ಕೆ.ಜಿ. ಅನಂತರಾವ್
ಮಂಡ್ಯ ಜನವರಿ 10: ಬಲಿಷ್ಠ ಭಾರತ ಕಟ್ಟಬೇಕಾದರೆ ವಿಷಮುಕ್ತ ಆಹಾರವನ್ನು ಸೇವಿಸಿ, ಸದೃಢ ಆರೋಗ್ಯ ಕಾಪಾಡಿಕೊಳ್ಳಬೇಕು ಎಂದು ತೆರಿಗೆ ಸಲಹೆಗಾರರಾದ ಸಾವಯವ ಕೃಷಿಕ ಕೆ.ಜಿ. ಅನಂತರಾವ್ ಹೇಳಿದ್ದಾರೆ.
ಸರ್ ಎಂ.ವಿ. ಕ್ರೀಡಾಂಗಣದ ಬಳಿ ನಡೆದ ಸಾವಯವ ಕೃಷಿಕರಿಗೆ ಅಭಿನಂದನೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಇತ್ತೀಚಿನ ದಿನಗಳಲ್ಲಿ ಮಣ್ಣಿಗೆ ಕ್ರಿಮಿನಾಶ, ಕೀಟನಾಶಕ, ಕಳೆನಾಶಕಗಳಂತಹ ರಾಸಾಯನಿಕಗಳನ್ನು ಬಳಸಿ ಮಣ್ಣನ್ನು ಸಂಪೂರ್ಣವಾಗಿ ಸಾಯಿಸಲಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.
ಕೀಟನಾಶಕಗಳ ಬಳಕೆಯಿಂದ ಉತ್ತಮ ಗುಣಮಟ್ಟದ ಆಹಾರ ಬೆಳೆಯಲು ಸಾಧ್ಯವಾಗುತ್ತಿಲ್ಲ. ಇಂತಹ ವಿಷಯುಕ್ತ ಆಹಾರವನ್ನು ಸೇವಿಸಿ ಎಲ್ಲರೂ ಒಂದಲ್ಲ ಒಂದು ಕಾಯಿಲೆಯಿಂದ ಬಳಲುತ್ತಿದ್ದಾರೆ. ಇದನ್ನು ತಪ್ಪಿಸಲು ವಿಷಮುಕ್ತ ಆಹಾರ ಸೇವೆನೆಯೊಂದೆ ಸಾಧನ ಎಂದು ಸಲಹೆ ನೀಡಿದರು.

ಸಾವಯವ ಅಥವಾ ನೈಸರ್ಗಿಕ ಕೃಷಿ ಉತ್ಪನ್ನಗಳನ್ನು ಹುಡುಕಿ ಅದನ್ನು ಪಡೆದು ಸೇವಿಸುವುದು ಅನಿವಾರ್ಯವಾಗಿದೆ. ಇಲ್ಲದಿದ್ದರೆ ಮತ್ತಷ್ಟು ಸಮಸ್ಯೆಯ ಸುಳಿಯಲ್ಲಿ ಸಿಲುಕಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ಹಾಲು ಹೆಚ್ಚಳ ಸೇರಿದಂತೆ ವಿವಿಧ ಕಾರಣಗಳಿಗಾಗಿ ಸೀಮೆ ಹಸುಗಳಿಗೆ ರಾಸಾಯನಿಕ ಚುಚ್ಚುಮದ್ದನ್ನು ನೀಡಲಾಗುತ್ತಿದೆ. ಇದು ಸಹ ಮನುಷ್ಯನ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತದೆ. ದೇಸೀ ತಳಿಯ ಹಸುಗಳಿಂದ ಹಾಲನ್ನು ಪಡೆದು ಸ್ವೀಕರಿಸುವುದು ಉತ್ತಮ ಎಂದು ಸಲಹೆ ನೀಡಿದರು.
ಬಂಜೆತನ ನಿವಾರಣೆಗೆ ಪ್ರತಿಯೊಂದು ಪಶು ಚಿಕಿತ್ಸಾಲಯಗಳಲ್ಲೂ ಚಿಕಿತ್ಸೆ ದೊರೆಯುತ್ತಿರುವುದು ಶ್ಲಾಘನೀಯ. ಸರ್ಕಾರಿ ಆಸ್ಪತ್ರೆಗಳಲ್ಲೂ ಇದು ಲಭ್ಯವಿದ್ದು, ರೈತರು ಇದರ ಪ್ರಯೋಜನ ಪಡೆದುಕೊಳ್ಳಬೇಕು. ದೇಸೀ ತಳಿಯ ಬೀಜಗಳನ್ನು ಸಹ ಸಂರಕ್ಷಣೆ ಮಾಡುವುದು ಅಗತ್ಯ. ಅದನ್ನು ರೈತರಿಂದ ಮಾತ್ರ ಸಾಧ್ಯ. ಮುಂದಿನ ದಿನಗಳಲ್ಲಿ ನಮ್ಮ ಮಕ್ಕಳಿಗೆ ಸಿಗುವ ರೀತಿಯಲ್ಲಿ ನೋಡಿಕೊಳ್ಳುವುದು ಅತ್ಯಾವಶ್ಯಕ ಎಂದು ಪ್ರತಿಪಾದಿಸಿದರು.
ನಂಜಮ್ಮ ಮೋಟೇಗೌಡ ಚಾರಿಟಬಲ್ ಟ್ರಸ್ಟ್‌ನ ಕೆ.ಟಿ. ಹನುಮಂತು ಮಾತನಾಡಿ, ಮಾಜಿ ಪ್ರಧಾನಿ ಚೌದರಿ ಚರಣ್‌ಸಿಂಗ್ ಅವರು ತಮ್ಮ ಇಡೀ ಜೀವನವನ್ನು ರೈತರ ಏಳಿಗೆಗಾಗಿ ಮುಡಿಪಿಟ್ಟಿದ್ದರು. ಡಿಸೆಂಬರ್ 23ರಂದು ಅವರು ಹುಟ್ಟಿದ ದಿನವನ್ನು ರೈತರ ದಿನವನ್ನಾಗಿ ಆಚರಿಸಲಾಗುತ್ತಿದೆ ಎಂದು ವಿವರಿಸಿದರು.
ಇತ್ತೀಚಿನ ದಿನಗಳಲ್ಲಿ ಒಂದಷ್ಟು ಮಂದಿ ರೈತರು ಕೃಷಿಯಿಂದ ವಿಮುಖರಾದರೆ, ಮತ್ತಷ್ಟು ಜನ ಅತಿಯಾದ ರಾಸಾಯನಿಕ ಬಳಕೆ ಮಾಡಿಕೊಂಡು ಕೃಷಿ ಮಾಡುತ್ತಿದ್ದಾರೆ. ಮತ್ತೆ ಕೆಲವರು ಸಾವಯವ, ನೈಸರ್ಗಿಕ ಕೃಷಿ ಮಾಡಿ ಬದುಕನ್ನು ಕಟ್ಟಿಕೊಳ್ಳುತ್ತಿದ್ದಾರೆ. ಸಾವಯವ ಕೃಷಿಯಿಂದಾಗಿ ರೈತರ ಆತ್ಮಹತ್ಯೆ ಪ್ರಕರಣಗಳೂ ಸಹ ಕಡಿಮೆಯಾಗಿದೆ ಎಂದು ಹೇಳಿದರು.
ಅನ್ನ ನೀಡುವ ರೈತ ಮತ್ತು ಗಡಿ ಕಾಯುವ ಯೋಧರ ಕಾರ್ಯ ಅನನ್ಯವಾದದ್ದು. ಒಬ್ಬರು ಗಡಿಯಲ್ಲಿ ಸೇವೆ ಮಾಡದಿದ್ದರೆ ನಾವು ನೆಮ್ಮದಿಯಿಂದ ನಿದ್ದೆ ಮಾಡಲಾಗದು, ಮತ್ತೆ ಅನ್ನ ನೀಡುವ ರೈತ ಸಹ ನಮಗೆ ಆಹಾರ ಉತ್ಪಾದನೆ ಮಾಡಿಕೊಡದಿದ್ದಲ್ಲಿ ತೊಂದರೆ ಅನುಭವಿಸಬೇಕಾಗುತ್ತದೆ. ಈ ಹಿನ್ನೆಲೆಯಲ್ಲಿ ಇಬ್ಬರನ್ನೂ ನೆನೆಯುವು ಅಗತ್ಯ ಎಂದರು.
ರೈತರು ಬಹಳಷ್ಟು ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಡಾ. ಸ್ವಾಮಿನಾಥನ್ ವರದಿಯನ್ನು ಅನುಷ್ಠಾನಗೊಳಿಸುವಲ್ಲಿ ಸರ್ಕಾರ ಮೀನಾ ಮೇಷ ಎಣಿಸುತ್ತಿದೆ. ಅವರು ಕೃಷಿಯಲ್ಲಿ ಬಹಳಷ್ಟು ಅಧ್ಯಯನ ನಡೆಸಿ ಸರ್ಕಾರಕ್ಕೆ ವರದಿ ನೀಡಿದ್ದಾರೆ. ಅದನ್ನು ಅನುಷ್ಠಾನಗೊಳಿಸಿದರೆ ರೈತರ ಒಂದಷ್ಟು ಸಮಸ್ಯೆಗಳೂ ಸಹ ನಿವಾರಣೆಯಾಗಲಿವೆ. ತಕ್ಷಣ ಸ್ವಾಮಿನಾಥನ್ ವರದಿ ಅನುಷ್ಠಾನಗೊಳಿಸಿ ರೈತರಿಗೆ ಅನುಕೂಲ ಮಾಡಿಕೊಡಬೇಕು ಎಂದು ಸರ್ಕಾರವನ್ನು ಒತ್ತಾಯಿಸಿದರು.
ಕಾರ್ಯಕ್ರಮದಲ್ಲಿ ಮನ್‌ಮುಲ್ ನಿರ್ದೇಶಕಿ ಸುಜಾತ ಕೃಷ್ಣ, ಪ್ರತಿಬಾಂಜಲಿ ಡೇವಿಡ್, ಮುಖಂಡರಾದ ಸಂತೋಷ್, ಮೋಹನ್‌ಕುಮಾರ್, ಜಿ.ವಿ. ನಾಗರಾಜು, ಸಂತೆಕಲಸಗೆರೆ ಬಸವರಾಜು ಇತರರು ಭಾಗಿಯಾಗಿದ್ದರು. ಇದೇ ವೇಳೆ ಪ್ರಗತಿ ಪರ ರೈತರನ್ನು ಸನ್ಮಾನಿಸಿ ಗೌರವಿಸಲಾಯಿತು.












Click it and Unblock the Notifications