ಮಿಮ್ಸ್ ಅವ್ಯವಸ್ಥೆ ಬಿಚ್ಚಿಟ್ಟ ನಗರಸಭೆ ಸದಸ್ಯರು: ಇನ್ಮುಂದೆ 3 ದಿನದಲ್ಲಿ ಎಂಆರ್‌ಐ ಸ್ಕ್ಯಾನಿಂಗ್ ವರದಿ
ಮಂಡ್ಯ, ಜನವರಿ 17: ಕೊರೊನಾ ಸಮಯದಲ್ಲಿ ಕೊಟ್ಟ ಹಾಸಿಗೆಗಳು ಹೆಗ್ಗಣಗಳ ಪಾಲಾಗುತ್ತಿದೆ. ಹೆರಿಗೆ ವಾರ್ಡ್‌ನೊಳಗಿರುವವರ ಗೋಳು ಕೇಳೋರಿಲ್ಲ. ಎಂಆರ್‌ಐ ಸ್ಕ್ಯಾನಿಂಗ್ ರಿಪೋರ್ಟ್ ಸಕಾಲಕ್ಕೆ ಸಿಗುತ್ತಿಲ್ಲ, ಬಡವರಿಗೆ ಐಸಿಯು ಬೆಡ್ ಕೊಡುತ್ತಿಲ್ಲ, ಔಷಧಗಳನ್ನು ಹೊರಗೆ ಬರೆದುಕೊಡುವುದಾದರೆ ಆಸ್ಪತ್ರೆಯೊಳಗಿನ ಔಷಧಗಳು ವ್ಯರ್ಥವೇ..? ಎಂದು ನಗರಸಭೆ ಸಾಮಾನ್ಯ ಸಭೆಯಲ್ಲಿ ಸದಸ್ಯರು ಒಕ್ಕೊರಲಿನಿಂದ ಮಿಮ್ಸ್ ಅಧಿಕಾರಿಗಳನ್ನು ಪ್ರಶ್ನಿಸಿದರು.
ಮಂಗಳವಾರ ನಗರಸಭೆಯ ಧರಣಪ್ಪ ಸಭಾಂಗಣದಲ್ಲಿ ಅಧ್ಯಕ್ಷ ಹೆಚ್.ಎಸ್.ಮಂಜು ಅಧ್ಯಕ್ಷತೆಯಲ್ಲಿ ನಡೆದ ಸಾಮಾನ್ಯಸಭೆಯಲ್ಲಿ ಸದಸ್ಯ ಶ್ರೀಧರ್ ಜಿಲ್ಲಾಸ್ಪತ್ರೆಯೊಳಗಿನ ಲೋಪ-ದೋಷಗಳನ್ನು ವಿವರಿಸಿದರು. ಇದಕ್ಕೆ ಸದಸ್ಯರು ಧನಿಗೂಡಿಸಿ ಆಸ್ಪತ್ರೆ ಅವ್ಯವಸ್ಥೆ ಬಗ್ಗೆ ಕಿಡಿಕಾರಿದರು.
ಇದಕ್ಕೆ ಉತ್ತರಿಸಿದ ಆರ್‌ಎಂಒ ವೆಂಕಟೇಶ್, ಆಸ್ಪತ್ರೆಯಲ್ಲಿ ವೈದ್ಯರು, ದಾದಿಯರ ಕೊರತೆ ಬಹಳಷ್ಟಿದೆ. 280 ಶೌಚಾಲಯಗಳಿಗೆ 16 ಜನರಷ್ಟೇ ಸ್ವಚ್ಛತಾ ನೌಕರರಿದ್ದಾರೆ. 120 ನಾನ್ ಕ್ಲಿನಿಕಲ್ ಸಿಬ್ಬಂದಿ ನೇಮಕಕ್ಕೆ ಸರ್ಕಾರಕ್ಕೆ ಪ್ರಸ್ತಾವನೆ ಕಳುಹಿಸಲಾಗಿದೆ ಎಂದು ಹೇಳಿದರು.

ಮಿಮ್ಸ್ ಅವ್ಯವಸ್ಥೆ ವಿರುದ್ಧ ನಗರಸಭೆ ಸದಸ್ಯರ ಕಿಡಿ
ಎಂಆರ್‌ಐ ಸ್ಕ್ಯಾನಿಂಗ್ ವರದಿಯನ್ನು ನೀಡಲು ಎಷ್ಟು ಸಮಯ ಬೇಕು ಎಂದು ಸದಸ್ಯರು ಕೇಳಿದಾಗ, ದಿನಕ್ಕೆ 25 ಎಂಆರ್‌ಐ, 50 ಸಿಟಿ ಸ್ಕ್ಯಾನ್ ಆಗುತ್ತದೆ. ಮೂವರು ರೇಡಿಯಾಲಜಿ ವೈದ್ಯರು ಮಾತ್ರ ಆಸ್ಪತ್ರೆಯಲ್ಲಿದ್ದಾರೆ. ಇದರಿಂದಾಗಿ ವರದಿ ನೀಡುವುದಕ್ಕೆ ವಿಳಂಬವಾಗುತ್ತಿದೆ ಎಂದು ವೆಂಕಟೇಶ್ ತಿಳಿಸಿದಾಗ, ವರದಿ ಯಾವಾಗ ಸಿಗುತ್ತದೆ ಎಂಬ ಬಗ್ಗೆ ನಿಖರ ಮಾಹಿತಿಯನ್ನು ನೀಡದೆ ಅದನ್ನು ಕೇಳುವವರ ಮೇಲೆ ಸಿಬ್ಬಂದಿ ದರ್ಪ ತೋರುತ್ತಾರೆ ಎಂದು ಸದಸ್ಯರು ಪ್ರತಿಯಾಗಿ ದೂರಿದರು. ಆಗ ಡಾ. ವೆಂಕಟೇಶ್ ಇನ್ನು ಮುಂದೆ ಎಂಆರ್‌ಐ ಸ್ಕ್ಯಾನಿಂಗ್ ಆದ ಮೂರು ದಿನಗಳೊಳಗೆ ವರದಿ ದೊರಕಿಸಿಕೊಡುವುದಾಗಿ ಭರವಸೆ ನೀಡಿದರು.

ಹೆರಿಗೆ ವಾರ್ಡ್ ದುರಸ್ತಿಗೆ 1.17 ಕೋಟಿ ರೂ ಪ್ರಸ್ತಾವನೆ
ಮಳೆ ಬಂದರೆ ಹೆರಿಗೆ ವಾರ್ಡ್‌ನೊಳಗೆ ನೀರು ತುಂಬಿಕೊಳ್ಳುತ್ತದೆ. ಅಲ್ಲಿನ ಗರ್ಭಿಣಿಯರು, ಬಾಣಂತಿಯರ ಗತಿ ಏನು. ಈ ವ್ಯವಸ್ಥೆ ಸರಿಪಡಿಸುವಂತೆ ಹಿಂದೆ ಇದ್ದ ಮಿಮ್ಸ್ ನಿರ್ದೇಶಕರಿಗೂ ಪತ್ರ ಮೂಲಕ ತಿಳಿಸಿದ್ದೆ. ಇದುವರೆಗೂ ಕ್ರಮ ವಹಿಸಿಲ್ಲ ಎಂದು ಸದಸ್ಯೆ ಸೌಭಾಗ್ಯ ದನಿ ಎತ್ತಿದರು. ಹೆರಿಗೆ ವಾರ್ಡ್‌ನಲ್ಲಿರುವುದೇ 18 ಬೆಡ್‌ಗಳು. ದಿನಕ್ಕೆ 25 ಹೆರಿಗೆಗಳಾಗುತ್ತವೆ. ಅನಿವಾರ್ಯ ಸಂದರ್ಭದಲ್ಲಷ್ಟೇ ಇಬ್ಬಿಬ್ಬರನ್ನು ಒಂದು ಹಾಸಿಗೆ ಮೇಲೆ ಮಲಗಿಸಲಾಗುತ್ತದೆ. ಉಳಿದಂತೆ ಬೇರಡೆ ಹಾಸಿಗೆ ಕೊಟ್ಟು ಅನುಕೂಲ ಮಾಡಿಕೊಡಲಾಗುತ್ತಿದೆ ಎಂದು ಡಾ.ವೆಂಕಟೇಶ್ ಸಮಜಾಯಿಷಿ ನೀಡಿದರು.
ಹೆರಿಗೆ ವಾರ್ಡ್ ಇರುವ ಕಲ್ಲು ಕಟ್ಟಡ ಪಾರಂಪರಿಕ ಕಟ್ಟಡವಾಗಿದೆ. ಇದನ್ನು ದುರಸ್ತಿಪಡಿಸಲು ನಿರ್ಮಿತಿ ಕೇಂದ್ರದ ಮೂಲಕ 1.17 ಕೋಟಿ ರೂಪಾಯಿ ವೆಚ್ಚದ ಪ್ರಸ್ತಾವನೆಯನ್ನು ಸರ್ಕಾರಕ್ಕೆ ಕಳುಹಿಸಲಾಗಿದೆ. ಸರ್ಕಾರದ ಮಂಜೂರಾತಿ ದೊರಕಿದ ಕೂಡಲೇ ದುರಸ್ತಿಗೆ ಕ್ರಮ ವಹಿಸಲಾಗುವುದು. ಮುಂದಿನ ಮಳೆಗಾಲದ ವೇಳೆಗೆ ಕಟ್ಟಡವನ್ನು ಸುಸ್ಥಿತಿಗೆ ತರಲಾಗುವುದು ಎಂದು ಡಾ.ವೆಂಕಟೇಶ್ ಉತ್ತರಿಸಿದರು.

ಖಾಸಗಿ ನರ್ಸಿಂಗ್‌ಹೋಂಗಳಿಗೆ ಅನುಕೂಲವಾಗಲು ವರದಿ ವಿಳಂಬ
ಸದಸ್ಯ ನಹೀಂ ಮಾತನಾಡಿ, ಕೊರೊನಾ ಸಮಯದಲ್ಲಿ ಬಂದ ನೂರಾರು ಹಾಸಿಗೆಗಳನ್ನು ಏನು ಮಾಡಿದ್ದೀರಿ. ಆ ಬೆಡ್‌ಗಳನ್ನು ಗರ್ಭಿಣಿಯರು, ಬಾಣಂತಿಯರ ಉಪಯೋಗಕ್ಕೆ ಬಳಸುತ್ತಿಲ್ಲವೇಕೆ. ಮಂಚಗಳನ್ನು ಜೋಡಿಸಿ ಒಂದೊಂದು ಬೆಡ್‌ಗೆ ಇಬ್ಬರು ಬಾಣಂತಿಯರನ್ನು ಮಲಗಿಸಿ ಅಮಾನವೀಯವಾಗಿ ನಡೆಸಿಕೊಳ್ಳುವುದು ಸರಿಯೇ ಎಂದು ಪ್ರಶ್ನಿಸಿದರು. ಇದಕ್ಕೆ ದನಿಗೂಡಿಸಿದ ಸದಸ್ಯ ಶಿವಲಿಂಗಪ್ಪ, ಕೊರೊನಾ ಸಮಯದಲ್ಲಿ ಕೊಟ್ಟ ಬೆಡ್‌ಗಳು ಹೆಗ್ಗಣಗಳ ಪಾಲಾಗುತ್ತಿವೆ. ಖಾಸಗಿ ನರ್ಸಿಂಗ್‌ಹೋಂಗಳಿಗೆ ಅನುಕೂಲ ಮಾಡಿಕೊಡುವುದಕ್ಕಾಗಿಯೇ ಎಂಆರ್‌ಐ ಸ್ಕ್ಯಾನಿಂಗ್ ವರದಿ ನೀಡುವುದನ್ನು ವಿಳಂಬ ಮಾಡುತ್ತಿರುವಿರಾ ಎಂದು ಕಿಡಿಕಾರಿದರು.
ಎಂಆರ್‌ಐ ಸ್ಕ್ಯಾನಿಂಗ್ ವರದಿ ಶೀಘ್ರ ನೀಡುವುದರಲ್ಲಿ ವೈದ್ಯರ ನಡುವೆ ಸಮನ್ವಯದ ಕೊರತೆ ಇದೆ ಎಂದು ಆರ್‌ಎಂಒ ಡಾ.ವೆಂಕಟೇಶ್ ಹೇಳಿದಾಗ, ಅದನ್ನು ಸರಿಪಡಿಸಬೇಕಾದವರು ಯಾರು. ನಿಮ್ಮ ಲೋಪಕ್ಕೆ ಗಂಭೀರ ಸ್ಥಿತಿಯಲ್ಲಿರುವ ರೋಗಿಗಳು ಬಲಿಯಾಗಬೇಕೇ ಎಂದು ಸದಸ್ಯರು ದೂಷಿಸಿದರು.

ನಗರ ಸಭೆ ಸದಸ್ಯರ ಪ್ರಶ್ನೆಗೆ ಉತ್ತರಿಸದ ಮಿಮ್ಸ್ ಅಧಿಕಾರಿ
ಅಧ್ಯಕ್ಷ ಹೆಚ್.ಎಸ್.ಮಂಜು ಹಾಗೂ ಸದಸ್ಯ ನಹೀಂ ಮಾತನಾಡಿ, ತುರ್ತು ಚಿಕಿತ್ಸೆಗೆ ಬರುವ ಬಡ ರೋಗಿಗಳು ಐಸಿಯು ಬೆಡ್ ಕೇಳಿದರೆ ಇಲ್ಲ ಎನ್ನುತ್ತೀರಿ. ಅವರನ್ನು ನಾಯಿಗಳನ್ನು ಅಟ್ಟುವಂತೆ ಹೊರಗಟ್ಟುತ್ತೀರಿ. ಅದೇ ನಾವು ಐಸಿಯು ಬೆಡ್ ಕೇಳಿದರೆ ಕಳುಹಿಸಿ ಎನ್ನುತ್ತೀರಿ. ಹಾಗಾದರೆ ಆಸ್ಪತ್ರೆ ಐಸಿಯು ಬೆಡ್‌ಗಳು ರಾಜಕಾರಣಿಗಳು, ಪ್ರಭಾವಿಗಳಿಗೆ ಮಾತ್ರನಾ ಇರುವುದು. ಮೊದಲು ನಿಮ್ಮ ಕಾರ್ಯವೈಖರಿಯನ್ನು ಸರಿಪಡಿಸಿ. ಬಡ ರೋಗಿಗಳಿಗೆ ಸ್ಪಂದಿಸುವ ಮಾನವೀಯ ಗುಣವನ್ನು ಬೆಳೆಸಿಕೊಳ್ಳಿ ಎಂದು ಬುದ್ಧಿಮಾತು ಹೇಳಿದರು.
ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯಲು ಬರುವ ಬಹಳಷ್ಟು ರೋಗಿಗಳಿಗೆ ವೈದ್ಯರು ಹೊರಗಡೆಗೆ ಔಷಧಗಳನ್ನು ಬರೆದುಕೊಡುತ್ತಾರೆ. ಹಾಗಾದರೆ ಆಸ್ಪತ್ರೆಯಲ್ಲಿ ನೀಡುವ ಔಷಧಗಳು ಉಪಯೋಗಕ್ಕೆ ಬಾರದವೇ. ಅವುಗಳನ್ನು ತರಿಸುವ ಉದ್ದೇಶವಾದರೂ ಏನು ಎಂದು ಸದಸ್ಯ ಎಂ.ಪಿ.ಅರುಣ್‌ಕುಮಾರ್ ಪ್ರಶ್ನಿಸಿದಾಗ ಡಾ.ವೆಂಕಟೇಶ್ ಅವರಿಂದ ಸಮರ್ಪಕ ಉತ್ತರ ಬರಲೇ ಇಲ್ಲ. ಮಂಗಳವಾರ ನಡೆದ ಸಭೆಯಲ್ಲಿ
ಉಪಾಧ್ಯಕ್ಷೆ ಇಶ್ರತ್ ಫಾತೀಮಾ, ನಗರಸಭೆ ಆಯುಕ್ತ ಮಂಜುನಾಥ್ ಉಪಸ್ಥಿತರಿದ್ದರು.












Click it and Unblock the Notifications