Sumalatha: ಬಿಜೆಪಿಗೆ ಸುಮಲತಾ ಬೆಂಬಲ: ಇದು ಮಂಡ್ಯ ಜನತೆಗೆ ಬಗೆಯುತ್ತಿರುವ ದ್ರೋಹ ಎಂದ ಸಿಪಿಐಎಂ
ಮಂಡ್ಯ, ಮಾರ್ಚ್ 10: ಮಂಡ್ಯ ಸಂಸದೆ ಸುಮಲತಾ ಅಂಬರೀಶ್ ಕೇಂದ್ರದ ನರೇಂದ್ರ ಮೋದಿ ಸರ್ಕಾರಕ್ಕೆ ನನ್ನ ಸಂಪೂರ್ಣ ಬೆಂಬಲ ನೀಡುತ್ತೇನೆ ಎಂದು ಘೋಷಿಸಿದ್ದಾರೆ. ನೇರವಾಗಿ ಬಿಜೆಪಿ ಸೇರದಿದ್ದರೂ, ಬೆಂಬಲ ನೀಡುವುದಾಗಿ ಘೋಷಿಸಿದ್ದು, ಮಂಡ್ಯ ರಾಜಕಾರಣದಲ್ಲಿ ಹೊಸ ಅಲೆಗಳು ಏಳುತ್ತಿವೆ. ಇದರ ಬೆನ್ನಲ್ಲೇ. ಈ ನಿರ್ಧಾರಕ್ಕೆ ಭಾರತ ಕಮ್ಯುನಿಸ್ಟ್ ಪಕ್ಷ (ಮಾರ್ಕ್ಸ್‌ವಾದಿ)ದ ಮಂಡ್ಯ ಜಿಲ್ಲಾ ಸಮಿತಿ ಆಕ್ಷೇಪ ವ್ಯಕ್ತಪಡಿಸಿದೆ.
ಈ ಬಗ್ಗೆ ಪತ್ರಿಕಾ ಪ್ರಕಟಣೆ ಹೊರಡಿಸಿರುವ ಪಕ್ಷವು, "ಮಂಡ್ಯ ಲೋಕಸಭಾ ಸದಸ್ಯರೂ, ಸಿನಿಮಾ ನಟರೂ ಆದ ಸುಮಲತಾ ಅಂಬರೀಶ್ ಅವರು ಬಿಜೆಪಿಗೆ ಬೆಂಬಲಿಸಲು ತೀರ್ಮಾನಿಸಿರುವುದು ಮಂಡ್ಯ ಜಿಲ್ಲೆಯ ಜನತೆಗೆ ಬಗೆದ ದ್ರೋಹವಾಗಿದೆ. ಇದನ್ನು ಜಿಲ್ಲೆಯ ಜನತೆ ಕ್ಷಮಿಸುವುದಿಲ್ಲ, ಲಾಭಕ್ಕಾಗಿ ಕೋಮುವಾದಿಯಾದ ಸುಮಲತಾ ಅವರ ನಡೆಯನ್ನು ಭಾರತ ಕಮ್ಯುನಿಸ್ಟ್ ಪಕ್ಷ (ಮಾರ್ಕ್ಸ್‌ವಾದಿ) ಸಿಪಿಐ(ಎಂ) ಮಂಡ್ಯ ಜಿಲ್ಲಾ ಸಮಿತಿ ಬಲವಾಗಿ ಖಂಡಿಸುತ್ತದೆ" ಎಂದಿದೆ.

ಮಂಡ್ಯದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ್ದ ಸಂಸದೆ ಸುಮಲತಾ, "ನನ್ನ ಹಿತೈಷಿಗಳು ಮತ್ತು ಬೆಂಬಲಿಗರನ್ನು ಸಂಪರ್ಕಿಸಿದ ನಂತರ, ನಾನು ಒಂದು ನಿರ್ಧಾರಕ್ಕೆ ಬಂದಿದ್ದೇನೆ. ಈ ದಿನದಿಂದ ನಾನು ಕೇಂದ್ರದ ನರೇಂದ್ರ ಮೋದಿ ಸರ್ಕಾರಕ್ಕೆ ನನ್ನ ಸಂಪೂರ್ಣ ಬೆಂಬಲವನ್ನು ನೀಡುತ್ತೇನೆ. ಪಕ್ಷೇತರ ಸಂಸದೆಯಾಗಿ ನಾಲ್ಕು ವರ್ಷಗಳಲ್ಲಿ ಹಲವಾರು ಸವಾಲುಗಳನ್ನು ಎದುರಿಸಿದೆ. ವಿಶೇಷವಾಗಿ ಸಾರ್ವಜನಿಕ ಸಭೆಗಳನ್ನು ನಡೆಸುವಲ್ಲಿ ಅಡೆತಡೆಗಳನ್ನು ಎದುರಿಸಿದ್ದೇನೆ. ನನಗೆ ಪಕ್ಷವೊಂದರ ಬೆಂಬಲದ ಅಗತ್ಯವಿದೆ" ಎಂದು ತಿಳಿಸಿದ್ದರು.
ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿರುವ ಸಿಪಿಐಎಂ. "ಸುಮಲತಾ ಅವರು ಪಕ್ಷೇತರ ಎಂಬ ಹೆಸರಿನ ನಾಟಕ ಮಾಡಿ ಜಿಲ್ಲೆಯ ಜನರ, ಪ್ರಗತಿಪರರ, ಪ್ರಗತಿಪರ ಸಂಘಟನೆಗಳ ಹಾಗೂ ಬದುಕಿನುದ್ದಕ್ಕೂ ಕೋಮುವಾದಿ ಶಕ್ತಿಗಳ ವಿರುದ್ಧ ಹೋರಾಡುತ್ತಿರುವ ವ್ಯಕ್ತಿಗಳ ಮತ ಪಡೆದರು. ಈಗ ಅಧಿಕಾರ ಮತ್ತು ಅಂತಸ್ತಿಗಾಗಿ ಬಿಜೆಪಿ ಎಂಬ ಒಂದು ಫ್ಯಾಸಿಸ್ಟ್ ಪಕ್ಷವನ್ನು ಬೆಂಬಲಿಸುವುದು ಅವರನ್ನು ನಂಬಿ ಬೆಂಬಲಿಸಿದ ಎಲ್ಲರ ಬೆನ್ನಿಗೂ ಚೂರಿ ಹಾಕುವ ಕೆಲಸವಾಗಿದೆ" ಎಂದು ಕಿಡಿಕಾರಿದೆ.

"ನಟ ಅಂಬರೀಶ್ ಅವರ ಹೆಸರಿನಲ್ಲಿ ಮತಯಾಚಿಸಿದ ಸುಮಲತಾ ಅಂಬರೀಶ್ ಅವರಿಗೆ ಅವರೋಬ್ಬ ಎಲ್ಲಾ ಜಾತಿ ಧರ್ಮಗಳನ್ನು ಮೀರಿದ ಜಾತ್ಯತೀತ ಕಲಾವಿದರಾಗಿದ್ದರು. ಅವರು ಬಿಜೆಪಿಯ ಆಮಿಷಗಳಿಗೆ ಎಂದೂ ಬಲಿಯಾಗಿರಲಿಲ್ಲ ಎಂಬುದು ನೆನಪಾಗಲಿಲ್ಲವೆ..? . ಅಂಬರೀಶ್ ಅವರ ಜಾತ್ಯತೀತ ನಂಬಿಕೆಗೆ ದ್ರೋಹ ಬಗೆಯುತ್ತಿರುವ ನಿಮ್ಮನ್ನು ಅಂಬರೀಶ್ ಅವರ ಅಭಿಮಾನಿಗಳು ಮಂಡ್ಯ ಜಿಲ್ಲೆಯ ದುಡಿಯುವ ಮಣ್ಣಿನ ಮಕ್ಕಳು ಎಂದೂ ಕ್ಷಮಿಸುವುದಿಲ್ಲ. ನೀವು ಈಗ ತಿಂದಿರುವ ಕೇಸರಿ ಉಪ್ಪಿಗೆ ಸಾಕಷ್ಟು ನೀರು ಕುಡಿಯಬೇಕಾಗುತ್ತದೆ" ಎಂದು ಸಿಪಿಐ(ಎಂ) ತೀವ್ರವಾಗಿ ವಾಗ್ದಾಳಿ ನಡೆಸಿದೆ.
'ಬಿಜೆಪಿ ಒಂದು ಅನಾಗರಿಕ, ಮಹಿಳಾ ವಿರೋಧಿ, ಮನುವಾದಿ ರಾಜಕೀಯ ಪಕ್ಷ. ಜಿಲ್ಲೆಯ ಜನರಿಗೆ ಬದುಕು ಕಲ್ಪಿಸಿದ ಟಿಪ್ಪು ಅವರಿಗೆ ಪ್ರತಿಕ್ಷಣವೂ ಅವಮಾನ ಮಾಡುತ್ತಾ, ಜಿಲ್ಲೆಯ ಒಕ್ಕಲಿಗರನ್ನು ಬ್ರಿಟಿಷರ ಏಜೆಂಟರು ಎಂದು ಬಿಂಬಿಸಿ ಅವಮಾನ ಮಾಡುತ್ತಿರುವ ಪಕ್ಷ. ಇಂತಹ ಪಕ್ಷಕ್ಕೆ ಕೇವಲ ಅಧಿಕಾರ ಮತ್ತು ಅಂತಸ್ತಿನ ಕಾರಣಕ್ಕೆ ಬೆಂಬಲಿಸುತ್ತಿರುವ ನಿಮ್ಮ ವಿವೇಚನೆಗೆ ಗೆದ್ದಲು ಹಿಡಿದಿದೆಯೆ..?" ಎಂದು ಪ್ರಶ್ನಿಸಿದೆ. ಜೊತೆಗೆ ಸುಮಲತಾ ಅವರ ಅವಕಾಶವಾದಿ, ಸ್ವಾರ್ಥಪರ ತೀರ್ಮಾನವನ್ನು ಜಿಲ್ಲೆಯ ಜನತೆ ಬೆಂಬಲಿಸಬಾರದು ಎಂದು ಪಕ್ಷ ಮನವಿ ಮಾಡಿದೆ.
ಇದರ ಜೊತೆಗೆ ರಾಜ್ಯದಲ್ಲಿ ಶಾಂತಿಯುತ ಮತ್ತು ನ್ಯಾಯಸಮ್ಮತ ಚುನಾವಣೆಗೆ ಕ್ರಮಕೈಗೊಳ್ಳಬೇಕು. ಬಿಜೆಪಿ ನೇತೃತ್ವದ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಅಧಿಕಾರ ದುರುಪಯೋಗ ಮಾಡದಂತೆ ಅಗತ್ಯ ಕ್ರಮವನ್ನು ಕೈಗೊಳ್ಳುವಂತೆ ಭಾರತದ ಚುನಾವಣಾ ಆಯೋಗಕ್ಕೆ ಮನವಿ ಮಾಡಿದೆ. ವಿಧಾನಸಭೆ ಚುನಾವಣೆ ಹತ್ತಿರವಾಗುತ್ತಿರುವಂತೆ ಆಡಳಿತಾರೂಢ ಬಿಜೆಪಿ ಪಕ್ಷವು ಧಾರ್ಮಿಕ ಹಾಗೂ ಜಾತಿಯ ವಿಚಾರಗಳಲ್ಲಿ ಜನರನ್ನು ವಿಭಜಿಸಲು ಪ್ರಯತ್ನಿಸುತ್ತಿರುವ ಕಾರಣ, ಚುನಾವಣಾ ಆಯೋಗವು ಈ ಚುನಾವಣೆಯನ್ನು ಅತ್ಯಂತ ಸೂಕ್ಷ್ಮವೆಂದು ಪರಿಗಣಿಸಬೇಕು ಎಂದಿದೆ.












Click it and Unblock the Notifications