ಬಿಜೆಪಿಯತ್ತ ಸಂಸದರ ಒಲವು: ಮಂಡ್ಯದಲ್ಲಿ ಕುತೂಹಲ ಕೆರಳಿಸಿದ ಸುಮಲತಾ ಬೆಂಬಲಿಗರ ನಡೆ!
ಮಂಡ್ಯ, ಮಾರ್ಚ್ 10: ಸಂಸದೆ ಸುಮಲತಾ ಅಂಬರೀಶ್ ಅವರು ಬಿಜೆಪಿಗೆ ಬೆಂಬಲ ಸೂಚಿಸುವುದರೊಂದಿಗೆ ಮಂಡ್ಯ ಜಿಲ್ಲೆಯ ರಾಜಕಾರಣದಲ್ಲಿ ಹೊಸ ಸಂಚಲನ ಸೃಷ್ಟಿಯಾಗಿದೆ. ಇದುವರೆಗೂ ಸುಮಲತಾ ಅಂಬರೀಶ್ ಅವರನ್ನು ಬೆಂಬಲಿಸುತ್ತಿರುವ ನಾಯಕರು, ಕಾರ್ಯಕರ್ತರು ಜೆಡಿಎಸ್, ಕಾಂಗ್ರೆಸ್, ರೈತಸಂಘದಲ್ಲಿದ್ದು ಅವರ ನಡೆಯೇನು ಎಂಬುದು ಕುತೂಹಲಕ್ಕೆ ಕಾರಣವಾಗಿದೆ.
ಕಳೆದ ಲೋಕಸಭಾ ಚುನಾವಣೆಯಲ್ಲಿ ಸ್ವಾಭಿಯಾನಿಯಾಗಿ ಚುನಾವಣೆ ಎದುರಿಸಿದ ವೇಳೆ ಬಿಜೆಪಿ ಅಭ್ಯರ್ಥಿಯನ್ನು ಕಣಕ್ಕಿಳಿಸದೆ ಪ್ರತ್ಯಕ್ಷವಾಗಿ ಸುಮಲತಾ ಅವರಿಗೆ ಬೆಂಬಲ ನೀಡಿತ್ತು. ಇದಲ್ಲದೆ, ರೈತ ಸಂಘ ಸೇರಿದಂತೆ ಜೆಡಿಎಸ್ ಮತ್ತು ಕಾಂಗ್ರೆಸ್‌ನಲ್ಲಿದ್ದ ಕೆಲವು ನಾಯಕರು ಹಾಗೂ ಕಾರ್ಯಕರ್ತರು ತಮ್ಮ ಪಕ್ಷದ ನಾಯಕರ ಆದೇಶವನ್ನು ತಿರಸ್ಕರಿಸಿ ಸುಮಲತಾ ಅವರ ಬೆಂಬಲಕ್ಕೆ ನಿಂತಿದ್ದರು.
ಇದರ ಪರಿಣಾಮವೇ ಭಾರೀ ವಿರೋಧ, ಪೈಪೋಟಿ ನಡುವೆ ಸುಮಲತಾ ಅವರು ಅತ್ಯಧಿಕ ಮತಗಳಿಂದ ಗೆಲುವು ಸಾಧಿಸಲು ಸಾಧ್ಯವಾಗಿತ್ತು. ಇಲ್ಲಿ ತನಕ ಪಕ್ಷೇತರ ಸಂಸದೆಯಾಗಿದ್ದ ಸುಮಲತಾ ಅಂಬರೀಶ್ ಅವರು ಇನ್ನು ಮುಂದೆ ಬಿಜೆಪಿಗೆ ಬೆಂಬಲ ನೀಡುವುದರೊಂದಿಗೆ ಬಿಜೆಪಿಯಲ್ಲಿ ಒಬ್ಬರಾಗುವುದರಿಂದ ರಾಜಕೀಯವಾಗಿ ಈ ಹಿಂದಿಗಿಂತಲೂ ಹೆಚ್ಚಿನ ವಿರೋಧಿಗಳು ಹುಟ್ಟಿಕೊಳ್ಳುವುದು ಖಚಿತವಾಗಲಿದೆ.
ಇದುವರೆಗೆ ಅವರಿಗೆ ಜೆಡಿಎಸ್ ಮಾತ್ರ ವಿರೋಧಿಯಾಗಿತ್ತು. ಆದರೆ ಮುಂದಿನ ದಿನಗಳಲ್ಲಿ ಕಾಂಗ್ರೆಸ್ ಕೂಡ ವಿರೋಧಿಯಾಗಲಿದೆ. ಹೀಗಾಗಿ ಜಿಲ್ಲೆಯಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ ಎರಡು ಪಕ್ಷಗಳ ವಿರೋಧದ ನಡುವೆ ರಾಜಕಾರಣ ಹೇಗೆ ಮಾಡುತ್ತಾರೆ ಎನ್ನುವುದೇ ಕುತೂಹಲಕಾರಿಯಾಗಿದೆ.

ಮಂಡ್ಯದ ಏಳು ಕ್ಷೇತ್ರಗಳಲ್ಲಿ ಜೆಡಿಎಸ್ ಪ್ರಾಬಲ್ಯ
ಮಂಡ್ಯದಲ್ಲಿ ಜೆಡಿಎಸ್ ಪ್ರಾಬಲ್ಯ ಸಾಧಿಸಿದೆ. ಏಳು ವಿಧಾನಸಭಾ( ಮದ್ದೂರು, ಮಂಡ್ಯ, ನಾಗಮಂಗಲ, ಮಳವಳ್ಳಿ, ಶ್ರೀರಂಗಪಟ್ಟಣ, ಮೇಲುಕೋಟೆ ಮತ್ತು ಕೆ.ಆರ್.ಪೇಟೆ) ಕ್ಷೇತ್ರಗಳ ಪೈಕಿ ಸದ್ಯ ಆರು ಕ್ಷೇತ್ರಗಳಲ್ಲಿ ಜೆಡಿಎಸ್ ಶಾಸಕರಿದ್ದಾರೆ. ಇನ್ನೊಂದು ಕ್ಷೇತ್ರ ಕೆ.ಆರ್.ಪೇಟೆಯಲ್ಲಿ ಬಿಜೆಪಿ ಗೆಲುವು ಪಡೆದಿದ್ದರೂ. ಶಾಸಕ ಡಾ.ನಾರಾಯಣಗೌಡ ಅವರು ಕಾಂಗ್ರೆಸ್‌ನತ್ತ ಒಲವು ತೋರಿರುವ ವದಂತಿಗಳಿವೆ. ಈಗ ಸುಮಲತಾ ಅವರು ಬಿಜೆಪಿಗೆ ಬೆಂಬಲ ನೀಡಿರುವ ಕಾರಣ ನಾರಾಯಣಗೌಡರ ನಡೆಯಲ್ಲಿ ಬದಲಾವಣೆಯಾಗುತ್ತಾ ಗೊತ್ತಿಲ್ಲ.
ಈ ಬಾರಿಯ (2023) ವಿಧಾನಸಭಾ ಚುನಾವಣೆಯಲ್ಲಿ ಜೆಡಿಎಸ್‌ನ್ನು ಮಣಿಸಿ ತಮ್ಮ ಪ್ರಾಬಲ್ಯ ಸಾಧಿಸಲು ಕಾಂಗ್ರೆಸ್ ಮುಂದಾಗಿದೆ. ಜೊತೆಗೆ ರೈತ ಸಂಘವೂ ಮೇಲುಕೋಟೆ ಮತ್ತು ಶ್ರೀರಂಗಪಟ್ಟಣದಲ್ಲಿ ಸ್ಪರ್ಧೆ ಮಾಡುವ ತೀರ್ಮಾನ ಕೈಗೊಂಡಿದೆ. ಆದರೆ ಜಿಲ್ಲೆಯಲ್ಲಿರುವ ರೈತ ಸಂಘದ ನಾಯಕರು ಒಂದು ಹಂತದಲ್ಲಿ ಸುಮಲತಾ ಅವರನ್ನು ಬೆಂಬಲಿಸಿಕೊಂಡು ಬಂದವರು. ಈಗಿನ ಸುಮಲತಾ ಅವರ ನಿಲುವಿಗೆ ರೈತಸಂಘದ ನಾಯಕರು ಯಾವ ರೀತಿಯಲ್ಲಿ ಪ್ರತಿಕ್ರಿಯೆ ನೀಡುತ್ತಾರೆ ಎನ್ನುವುದು ಮುಂದಿನ ದಿನಗಳಲ್ಲಿ ಗೊತ್ತಾಗಬೇಕಿದೆ.

ಸುಮಲತಾ ಯಾರಿಗೆ ಲಾಭ? ಯಾರಿಗೆ ನಷ್ಟ?
ಸುಮಲತಾ ಅವರು ಬಿಜೆಪಿಯತ್ತ ಮುಖ ಮಾಡಿರುವುದರಿಂದ ಯಾರಿಗೆ ಲಾಭ? ಯಾರಿಗೆ ನಷ್ಟ? ಎಂಬ ಲೆಕ್ಕಾಚಾರಗಳನ್ನು ಹಾಕಿದ್ದೇ ಆದರೆ ಮಂಡ್ಯದಲ್ಲಿ ಬಿಜೆಪಿ ಸಂಘಟನೆಗೊಳ್ಳಲು ಅನುಕೂಲವಾಗಲಿದೆ. ಇದುವರೆಗೆ ಮೂರನೇ ಸ್ಥಾನದಲ್ಲಿದ್ದ ಬಿಜೆಪಿ ಕಾಂಗ್ರೆಸ್ ಮತ್ತು ಜೆಡಿಎಸ್‌ಗೆ ಪೈಪೋಟಿ ನೀಡುವ ಮಟ್ಟಿಗೆ ಬೆಳೆಯಬಹುದು. ಬೇರೆ ಪಕ್ಷದಲ್ಲಿರುವ ಅಂಬರೀಶ್ ಅಭಿಮಾನಿಗಳು ಸುಮಲತಾ ಅವರನ್ನು ಬೆಂಬಲಿಸಿ ಬಿಜೆಪಿಗೆ ಬರಬಹುದು ಅಥವಾ ಸಹಕಾರ ನೀಡಬಹುದು.

ಸುಮಲತಾ ಸಹಾಯದಿಂದ ಮಂಡ್ಯದಲ್ಲಿ ನೆಲೆಯೂರುತ್ತಾ ಬಿಜೆಪಿ..?
ಮಂಡ್ಯದಲ್ಲಿ ಪಕ್ಷ ನೆಲೆಯೂರ ಬೇಕಾಗಿರುವುದರಿಂದ ಸುಮಲತಾ ಅವರಿಗೆ ಸಹಕಾರ ನೀಡಿ ಅಭಿವೃದ್ಧಿ ಕಾರ್ಯಗಳಿಗೆ ಹಸಿರು ನಿಶಾನೆ ದೊರೆಯಬಹುದು. ಮೋದಿ ಆಗಮನದೊಂದಿಗೆ ಬಿಜೆಪಿ ಮಂಡ್ಯಕ್ಕೆ ಗ್ರ್ಯಾಂಡ್ ಎಂಟ್ರಿ ಕೊಡುವುದರೊಂದಿಗೆ ರಾಜಕೀಯ ಚಟುವಟಿಕೆ ಬಿರುಸುಗೊಳ್ಳಬಹುದು. ಪಕ್ಷದ ಹೆಚ್ಚಿನ ಜವಬ್ದಾರಿಗಳನ್ನು ಸುಮಲತಾ ಅವರಿಗೆ ನಾಯಕರು ವಹಿಸಬಹುದು.
ಮುಂದಿನ ದಿನಗಳಲ್ಲಿ ಅದರಲ್ಲೂ ಚುನಾವಣೆ ಹತ್ತಿರವಾಗುತ್ತಿದ್ದಂತೆಯೇ ಪ್ರಭಾವಿ ನಾಯಕರು ಸುಮಲತಾ ಅವರಿಗೆ ಬೆಂಬಲ ಸೂಚಿಸಿ ಬಿಜೆಪಿಯತ್ತ ಒಲವು ತೋರಬಹುದು. ಸುಮಲತಾ ಅವರಿಗೂ ಒಂದಷ್ಟು ಕ್ಷೇತ್ರಗಳನ್ನು ಗೆಲ್ಲಿಸಿಕೊಂಡು ಬರುವ ಶಕ್ತಿ ಇರುವುದರಿಂದ ಮಂಡ್ಯದಲ್ಲಿ ಪ್ರಭಾವಿ ನಾಯಕಿಯಾಗಿ ಹೊರಹೊಮ್ಮಬಹುದು.

ಮಂಡ್ಯ ರಾಜಕಾರಣದತ್ತ ಎಲ್ಲರ ಚಿತ್ತ
ಸದ್ಯಕ್ಕೆ ಸುಮಲತಾ ಅವರು ಬಿಜೆಪಿಗೆ ಬೆಂಬಲ ಸೂಚಿಸಿದ್ದಾರೆ ಎನ್ನುವುದೇ ರಾಜಕೀಯದಲ್ಲಿ ಸಂಚಲನ ಎಬ್ಬಿಸಿದೆ. ಆದರೆ ಇಲ್ಲಿವರೆಗೆ ಏನೆಲ್ಲ ಬೆಳವಣಿಗೆಗಳು ಆಗಿವೆಯೋ ಅವು ಯಾವುದೂ ಮುಖ್ಯವಲ್ಲ. ಮುಂದೇನು ಆಗುತ್ತದೆ ಎಂಬುದೇ ಬಹುಮುಖ್ಯವಾಗಿದೆ. ಈಗಾಗಲೇ ಒಂದಷ್ಟು ನಾಯಕರು ಬಿಜೆಪಿಗೆ ಸೇರ್ಪಡೆಯಾಗಿದ್ದರೆ ಇನ್ನು ಕೆಲವರು ಗೊಂದಲದಲ್ಲಿದ್ದಾರೆ.
ಹೀಗಾಗಿ ಮಂಡ್ಯ ರಾಜಕಾರಣದತ್ತ ಎಲ್ಲರ ದೃಷ್ಟಿ ನೆಟ್ಟಿದ್ದು, ಏನೆಲ್ಲ ರಾಜಕೀಯ ಬೆಳವಣಿಗೆ ಆಗಲಿವೆ? ಸುಮಲತಾ ಅವರ ಪಾತ್ರಗಳೇನು? ಅವರನ್ನು ಬೆಂಬಲಿಸಿ ಪಕ್ಷಕ್ಕೆ ಯಾರೆಲ್ಲ ಬರುತ್ತಾರೆ ಎಂಬುದನ್ನು ನೋಡಬೇಕಾದರೆ ಸ್ವಲ್ಪ ದಿನ ಕಾಯಲೇ ಬೇಕಾಗಿದೆ.y












Click it and Unblock the Notifications