ಐತಿಹಾಸಿಕ ವೈರಮುಡಿ ಉತ್ಸವಕ್ಕೆ ಸಜ್ಜಾದ ಮೇಲುಕೋಟೆ: ಬ್ರಹ್ಮೋತ್ಸವದ ಸಂಪೂರ್ಣ ವಿವರ
ಮಂಡ್ಯ, ಮಾರ್ಚ್ 14: ವಿಶ್ವ ವಿಖ್ಯಾತ ಮೇಲುಕೋಟೆ ಚೆಲುವನಾರಾಯಣಸ್ವಾಮಿಯ ವೈರಮುಡಿ ಬ್ರಹ್ಮೋತ್ಸವವು ಮಾ 16ರಿಂದ 28ರವರೆಗೆ ವೈಭವದಿಂದ ನಡೆಯಲಿದ್ದು, ಇದಕ್ಕಾಗಿ ಧಾರ್ಮಿಕ ದತ್ತಿ ಇಲಾಖೆಯು ಸರ್ವ ಸಿದ್ಧತೆಯನ್ನು ಮಾಡಿಕೊಂಡಿರುವುದರಿಂದ ಮೇಲುಕೋಟೆಯಲ್ಲಿ ಜಾತ್ರಾ ಸಂಭ್ರಮ ಮನೆ ಮಾಡಿದೆ. ವೈರಮುಡಿ ಬ್ರಹ್ಮೋತ್ಸವ ಮಾ.21ರಂದು ನಡೆಯಲಿದ್ದು, ಮಾ.16ರಿಂದಲೇ ಜಾತ್ರಾ ಸಂಬಂಧ ಧಾರ್ಮಿಕ ಕಾರ್ಯಕ್ರಮಗಳು ಆರಂಭವಾಗಲಿವೆ.
ವೈರಮುಡಿ ಬ್ರಹ್ಮೋತ್ಸವದ ಸಂಬಂಧ ಏನೇನು ಕಾರ್ಯಕ್ರಮಗಳು ನಡೆಯಲಿವೆ ಎಂಬುದನ್ನು ನೋಡುವುದಾದರೆ, ಮಾರ್ಚ್ 16 ರಂದು ಶ್ರೀವೈರಮುಡಿ ಬ್ರಹ್ಮೋತ್ಸವಕ್ಕೆ ಅಂಕುರಾರ್ಪಣ, ಮೃತ್ತಿಕಾ ಸಂಗ್ರಹಣ, 17ರಂದು ಕಲ್ಯಾಣೋತ್ಸವ ಧಾರಾಮಹೋತ್ಸವ- ಅದಿವಾಸರ- ರಕ್ಷಾಬಂಧನ- ಧ್ವಜಪ್ರತಿಷ್ಠೆ, 18 ರಂದು 1 ನೇ ತಿರುನಾಳ್- ಧ್ವಜಾರೋಹಣ, ಶ್ರೀ ರಾಮಾನುಜಾಚಾರ್ಯರಿಗೆ ಅಭಿಷೇಕ, ಭೇರೀತಾಡನ- ತಿರುಪ್ಪರೈ -ಹಂಸವಾಹನ- ಯಾಗಶಾಲಾಪ್ರವೇಶ,

19 ರಂದು 2ನೇ ತಿರುನಾಳ್ ಶೇಷವಾಹನ ಪಡೆಯೇತ್ತ, 20 ರಂದು 3 ನೇ ತಿರುನಾಳ್- ನಾಗವಲ್ಲೀಮಹೋತ್ಸವ- ನರಂಧೋಳಿಕಾರೋಹಣ- ಚಂದ್ರಮಂಡಲವಾಹನ- ಪಡಿಯೇತ್ತ, 21 ರಂದು 4 ನೇ ತಿರುನಾಳ್ ಶ್ರೀ ವೈರಮುಡಿ ಕಿರೀಟಧಾರಣ ಮಹೋತ್ಸವ ( ರಾತ್ರಿ 8.30 ರಿಂದ ಮುಂಜಾನೆ 4.00 ಗಂಟೆಯ ವರೆಗೆ) ನಡೆಯಲಿದೆ.
ಮಾ. 22 ರಂದು 5 ನೇ ತಿರುನಾಳ್- ಪ್ರಹ್ಲಾದ ಪರಿಪಾಲನ- ಗರುಡವಾಹನ- ವಿಶೇಷ ಪಡಿಯೇತ್ತ, 23 ರಂದು 6 ನೇ ತಿರುನಾಳ್ - ಗಜೇಂದ್ರ ಮೋಕ್ಷ -ಆನೆವಸಂತ - ಕುದುರೆವಾಹನ- ಆನೆವಾಹನ -ವಿಶೇಷ ಪಡಿಯೇತ್ತ, 24 ರಂದು 7ನೇ ತಿರುನಾಳ್- ಶ್ರೀ ಮನ್ಮಹಾರೋಥೋತ್ಸವ, ಯಾತ್ರಾದಾನ, ರಥೋತ್ಸವ, ಶ್ರೀ ಚೆಲುವನಾರಾಯಣಸ್ವಾಮಿ ಮತ್ತು ಶ್ರೀ ರಾಮಾನುಜರಿಗೆ ಅಭಿಷೇಕ ಅಮ್ಮನವರ ಸನ್ನಿಧಿಯಲ್ಲಿ, ಬಂಗಾರ ಪಲ್ಲಕ್ಕಿ ಉತ್ಸವ, 25 ರಂದು 8ನೇ ತಿರುನಾಳ್- ಪಂಗುನ್ಯುತ್ತರ, ತೆಪ್ಪೋತ್ಸವ- ಡೋಲೋತ್ಸವ- ಕುದುರೆ ವಾಹನ- ಕಳ್ಳರಸುಲಿಗೆ ಕಾರ್ಯಕ್ರಮ ನಡೆಯುತ್ತದೆ.
ಮಾ.28ರಂದು ಜಾತ್ರೆಗೆ ತೆರೆ
ಮಾ. 26 ರಂದು 9ನೇ ತಿರುನಾಳ್- ಶ್ರೀ ನಾರಾಯಣಸ್ವಾಮಿ ಜಯಂತಿ, ಸಂಧಾನಸೇವೆ -ಚೂರ್ಣಅಭಿಷೇಕ- ಅವಭೃತ - ಪಟ್ಟಾಭಿಷೇಕ -ಪುಷ್ಪಮಂಟಪರೋಹಣ (ಸಮರಭೂಪಾಲವಾಹನ)- ಪಡಿಮಾಲೆ - ಪೂರ್ಣಾಹುತಿ, ಶಾತ್ತುಮೊರೈ, ಕುಂಭಪ್ರೋಕ್ಷಣೆ, 27 ರಂದು 10 ನೇ ತಿರುನಾಳ್ -ಶ್ರೀ ನಾರಾಯಣಸ್ವಾಮಿಗೆ ಮಹಾಭಿಷೇಕ -ಪುಷ್ಪಯಾಗ- ಕತ್ತಲುಪ್ರದಕ್ಷಣೆ- ಹನುಮಂತವಾಹನ- ಉದ್ವಾಸನಪ್ರಬಂಧ, 28 ರಂದು ಶ್ರೀ ಅಮ್ಮನವರಿಗೆ ಮತ್ತು ಶ್ರೀಯೋಗಾನರಸಿಂಹಸ್ವಾಮಿಗೆ ಮಹಾಭಿಷೇಕ- ಶೇರ್ತಿಸೇವೆ -ಕೊಡೈತಿರುನಾಳ್ ಉತ್ಸವದೊಂದಿಗೆ ತೆರೆ ಬೀಳಲಿದೆ.

ಇನ್ನು ವೈರಮುಡಿ ಉತ್ಸವ ನಡೆಯುತ್ತಿರುವ ಮೇಲುಕೋಟೆಯು ಮಂಡ್ಯ ಜಿಲ್ಲೆಯ ಪಾಂಡವಪುರ ತಾಲೂಕಿಗೆ ಸೇರಿದ್ದು, ಮಂಡ್ಯದಿಂದ 28 ಕಿ.ಮೀ. ದೂರದಲ್ಲಿದೆ. ಸಮುದ್ರ ಮಟ್ಟದಿಂದ ಸುಮಾರು ಮೂರು ಸಾವಿರ ಅಡಿಯಷ್ಟು ಎತ್ತರದಲ್ಲಿದೆ. ಇದು ಭಾರತದಲ್ಲಿರುವ ಪವಿತ್ರ ಕ್ಷೇತ್ರಗಳ ಪೈಕಿ ಒಂದಾಗಿದ್ದು, ದಕ್ಷಿಣ ಭಾರತದ ಪ್ರಮುಖ ನಾಲ್ಕು ವೈಷ್ಣವ ಕ್ಷೇತ್ರ ಇದಾಗಿದೆ.
ಇನ್ನು ವೈರಮುಡಿ ಎಂಬುವುದು ವಜ್ರ ಖಚಿತ ಕಿರೀಟವಾಗಿದ್ದು, ಇದು ಶ್ರೀಮಾನ್ ನಾರಾಯಣನ ಕಿರೀಟವೆಂದೂ ದ್ವಾಪರಯುಗದಲ್ಲಿ ಕೃಷ್ಣನ ಮೂಲಕ ಚೆಲುವರಾಯನಿಗೆ ಗರುಡನಿಂದ ತೊಡಿಸಿದನೆಂಬುವುದು ಒಂದೆಡೆಯಾದರೆ, ಮತ್ತೊಂದೆಡೆ ವೈಕುಂಠದಿಂದ ರಾಕ್ಷಸ ವಿರೋಚನ ಕದ್ದಿದ್ದ ನಾರಾಯಣನ ಕಿರೀಟವನ್ನು ಗರುಡ ರಾಕ್ಷಸನೊಂದಿಗೆ ಹೋರಾಡಿ ಮರಳಿ ತಂದು ಚೆಲುವರಾಯನಿಗೆ ಅರ್ಪಿಸಿದನೆಂದು ಹೇಳಲಾಗಿದ್ದು, ಇದನ್ನು ಚೆಲುವರಾಯಸ್ವಾಮಿಗೆ ಧರಿಸುವ ಸಂದರ್ಭ ನಡೆಯುವ ಉತ್ಸವವೇ ವೈರಮುಡಿ ಬ್ರಹ್ಮೋತ್ಸವವಾಗಿದೆ.

ವೈರಮುಡಿ ಆಚರಣೆ ಬಂದಿದ್ದೇಗೆ?
ಇನ್ನು ವೈರಮುಡಿ ಉತ್ಸವ ಆಚರಣೆ ಹೇಗೆ ಬಂತು ಎಂಬುದನ್ನು ನೋಡುವುದಾದರೆ, ಅಯೋಧ್ಯೆಯಲ್ಲಿ ದಶರಥ ಮಹಾರಾಜ ತನ್ನ ಮಾನಸ ಪುತ್ರ ಶ್ರೀರಾಮಚಂದ್ರನಿಗೆ ಪಟ್ಟಾಭಿಷೇಕ ಮಾಡಲು ನಿರ್ಧರಿಸಿ, ಪಾಲ್ಗುಣ ಮಾಸದ ಪುಷ್ಯ ನಕ್ಷತ್ರದ ಶುಭದಿನವನ್ನು ಗೊತ್ತು ಮಾಡಿ ಅರಮನೆಯಲ್ಲಿ ಪಟ್ಟಾಭಿಷೇಕಕ್ಕೆ ಬೇಕಾದ ಎಲ್ಲಾ ರೀತಿಯ ಸಕಲ ಸಿದ್ಧತೆಗಳನ್ನು ಮಾಡಿದ್ದನು. ಇನ್ನೇನು ಪಟ್ಟಾಭಿಷೇಕ ನಡೆಯಬೇಕೆನ್ನುವಷ್ಟರಲ್ಲಿ ಕೈಕೇಯಿಯ ಕುತಂತ್ರದಿಂದಾಗಿ ಶ್ರೀರಾಮ ವನವಾಸಕ್ಕೆ ತೆರಳಬೇಕಾಯಿತು. ಆದರೆ ತನ್ನ ಅಣ್ಣ ಶ್ರೀರಾಮನ ಪಟ್ಟಾಭಿಷೇಕವನ್ನು ಕಣ್ಣಾರೆ ನೋಡಬೇಕೆನ್ನುವ ಬಯಕೆಯಲ್ಲಿದ್ದ ಸಹೋದರ ಲಕ್ಷ್ಮಣನಿಗೆ ತನ್ನ ಆಸೆ ಈಡೇರಲಿಲ್ಲವಲ್ಲ ಎಂಬ ಕೊರಗು ಸದಾ ಕಾಡುತ್ತಿತ್ತು.
ಮುಂದೆ ಕಲಿಯುಗದಲ್ಲಿ ರಾಮಾನುಜರಾಗಿ ಜನಿಸಿದ ಲಕ್ಷ್ಮಣ ತನ್ನ ಬಯಕೆಯನ್ನು ಈಡೇರಿಸಿಕೊಳ್ಳುವ ಸಲುವಾಗಿ ಆದಿಶೇಷನ ಶ್ರೀರಾಮನ ಆರಾಧ್ಯದೈವ ಚೆಲುವರಾಯಸ್ವಾಮಿಗೆ ಮೇಲುಕೋಟೆಯಲ್ಲಿ ಶ್ರೀರಾಮನ ಪಟ್ಟಾಭಿಷೇಕಕ್ಕೆ ನಿಗದಿಪಡಿಸಿದ ಫಾಲ್ಗುಣ ಮಾಸದ ಪುಷ್ಯ ನಕ್ಷತ್ರದ ಶುಭದಿನದಂದೇ ವೈರಮುಡಿ ಕಿರೀಟ ಧರಿಸುವ ಮೂಲಕ ತನ್ನ ಮನದ ಇಚ್ಛೆಯನ್ನು ನೆರವೇರಿಸಿಕೊಂಡನಂತೆ. ಅಂದಿನಿಂದ ಈ ಸುದಿನವನ್ನು ಪ್ರತಿವರ್ಷವೂ ವೈರಮುಡಿ ಬ್ರಹ್ಮೋತ್ಸವವಾಗಿ ಆಚರಿಸಿಕೊಂಡು ಬರಲಾಗುತ್ತಿದ್ದು ಜಾತ್ರೆಯಾಗಿ ಭಕ್ತರನ್ನು ಸೆಳೆಯುತ್ತಿದೆ.
ಬೆಳ್ಳಿ ಪಲ್ಲಕಿಯಲ್ಲಿ ಕಿರೀಟದ ಮೆರವಣಿಗೆ
ವೈರಮುಡಿ ಕಿರೀಟವು ಮೈಸೂರು ರಾಜರ ಆಡಳಿತದಲ್ಲಿ ರಾಜಾಶ್ರಯದಲ್ಲಿತ್ತಾದರೂ ಬಳಿಕ ಸರ್ಕಾರದ ವಶಕ್ಕೆ ಹಸ್ತಾಂತರಿಸಲಾಯಿತು. ಈಗ ಮಂಡ್ಯದ ಸರ್ಕಾರಿ ಖಜಾನೆಯಲ್ಲಿದ್ದು, ಉತ್ಸವದ ಸಂದರ್ಭ ವೈರಮುಡಿ, ರಾಜಮುಡಿ ಕಿರೀಟವನ್ನು ಬಿಗಿ ಭದ್ರತೆಯಲ್ಲಿ ಮೇಲುಕೋಟೆಗೆ ತರಲಾಗುತ್ತದೆಯಲ್ಲದೆ, ಬಳಿಕ ದ್ವಾರದ ಹನುಮಂತನ ಗುಡಿಯ ಬಳಿಯಿಂದ ಬೆಳ್ಳಿ ಪಲ್ಲಕಿಯಲ್ಲಿರಿಸಿ ಪೂಜಿಸಿ ಮೆರವಣಿಗೆಯಲ್ಲಿ ಕೊಂಡೊಯ್ಯಲಾಗುತ್ತದೆ ಇದುವೇ ವೈರಮುಡಿ ಜಾತ್ರೆಯಾಗಿದ್ದು ಈ ಸಂದರ್ಭ ಸಹಸ್ರಾರು ಸಂಖ್ಯೆಯಲ್ಲಿ ಭಕ್ತರು ನೆರೆಯುವುದು ವಿಶೇಷವಾಗಿದೆ.












Click it and Unblock the Notifications