ಕಾಂಗ್ರೆಸ್ ಸರ್ಕಾರ ಕೆಡವಲು ಯಾರಿಗೂ ಸಾಧ್ಯವಿಲ್ಲ; ಶಾಸಕ ರವಿಕುಮಾರ್
ಮುಡಾ ಸೈಟು ಹಂಚಿಕೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಸಿಎಂ ಸಿದ್ದರಾಮಯ್ಯ ವಿರುದ್ಧ ಪ್ರಾಸಿಕ್ಯೂಷನ್‌ಗೆ ಅನುಮತಿ ಕೊಟ್ಟಿರುವ ಬೆನ್ನಲ್ಲೇ ಬಿಜೆಪಿ ನಾಯಕರು ಕಾಂಗ್ರೆಸ್ ಶಾಸಕರಿಗೆ ಆಮಿಷ ಒಡ್ಡುತ್ತಿದ್ದಾರೆ ಎಂದು ಮಂಡ್ಯ ಶಾಸಕ ರವಿಕುಮಾರ್ ಆರೋಪಿಸಿದ್ದಾರೆ. ಯಾರು ಏನೇ ಮಾಡಿದರೂ ರಾಜ್ಯ ಸರ್ಕಾರವನ್ನು ಅಲುಗಾಡಿಸಲು ಯಾರಿಗೂ ಸಾಧ್ಯವಿಲ್ಲ ಎಂದು ಹೇಳಿದ್ದಾರೆ.
ಮಂಡ್ಯದಲ್ಲಿ ಮಾತನಾಡಿರುವ ಶಾಸಕ ಪಿ. ರವಿಕುಮಾರ್, ಕಾಂಗ್ರೆಸ್ ಸರ್ಕಾರ ಕೆಡವಲು ತೆರೆಮರೆಯ ಪ್ರಯತ್ನ ನಡೆಯುತ್ತಿದ್ದು, ರಾಜ್ಯಪಾಲರು ಕೂಡ ಬಿಜೆಪಿ ನಾಯಕರ ಆಜ್ಞೆಯಂತೆ ನಡೆದುಕೊಳ್ಳುತ್ತಿದ್ದಾರೆ ಎಂದು ಆರೋಪಿಸಿದರು. ಬಿಜೆಪಿ ಪಕ್ಷದವರು ಕಾಂಗ್ರೆಸ್ ಶಾಸಕರಿಗೆ 50 ರಿಂದ 100 ಕೋಟಿ ರೂಪಾಯಿ ಆಮಿಷ ಒಡ್ಡುತ್ತಿದ್ದಾರೆ, ಸುಮಾರು 50 ಶಾಸಕರನ್ನು ಸೆಳೆಯಲು ಪ್ರಯತ್ನ ಮಾಡಲಾಗುತ್ತಿದೆ ಎಂದು ಗಂಭೀರ ಆರೋಪ ಮಾಡಿದ್ದಾರೆ.

ನನಗೂ ಒಬ್ಬ ಕರೆ ಮಾಡಿ 100 ಕೋಟಿ ರೂಪಾಯಿ ರೆಡಿ ಇದೆ ಎಂದು ಹೇಳಿದ, ನಾನು ಆತನಿಗೆ ನಿನ್ನ ನೂರು ಕೋಟಿ ನೀನೆ ಇಟ್ಕೊಳಯ್ಯ, ನಿನಗೆ ಐಟಿ, ಇಡಿ ಅಧಿಕಾರಿಗಳು ಹಿಡಿಯಲ್ವ ಎಂದು ಕೇಳಿದ್ದೇನೆ ಎಂದರು.
ರಾಜ್ಯಪಾಲರ ವಿರುದ್ಧ ಟೀಕೆ
ಬಿಜೆಪಿ ಏಟೆಂಟರಂತಾಗಿರುವ ರಾಜ್ಯಪಾಲರು ಬೆಳಗ್ಗೆ ಎದ್ದ ಕೂಡಲೇ ರಾಜಕೀಯ ಮಾಡುತ್ತಿದ್ದಾರೆ. ಈ ಮೂಲಕ ಕಾಂಗ್ರೆಸ್ ಸರ್ಕಾರವನ್ನು ಅಸ್ಥಿರಗೊಳಿಸುವ ಪ್ರಯತ್ನ ನಡೆಯುತ್ತಿದೆ ಎಂದು ಆರೋಪಿಸಿದರು. ಬೀದಿಯಲ್ಲಿ ಹೋಗುವವರು ದೂರು ಕೊಟ್ಟ ತಕ್ಷಣ ಸಿಎಂ ಮೇಲೆ ಪ್ರಾಸಿಕ್ಯೂಷನ್ ಕೊಡಿ ಅಂತ ಕಾನೂನು ಎಲ್ಲಿದೆ. ರಾಜ್ಯಪಾಲರು ಸಂವಿಧಾನವನ್ನು ದುರುದ್ದೇಶಕ್ಕೆ ಬಳಸಿಕೊಳ್ಳಬಹುದಾ ಎಂದು ಪ್ರಶ್ನಿಸಿದರು.
ಏನ್ ಹೇಳಿದ್ರು ಕೇಳ್ಕೊಂಡು ಇರೋಕೆ ನಾವೇನು ಮಂಗನ ಮಕ್ಕಳಲ್ಲ. ರಾಜ್ಯಪಾಲರು ಸರ್ಕಾರ ಅಸ್ತಿರಗೊಳಿಸುವ ರೀತಿ ನಡೆದುಕೊಳ್ಳುತ್ತೀರೋದು ಸರಿಯಲ್ಲ. ಬಿಜೆಪಿ ತಂತ್ರ ವಿಫಲಗೊಳಿಸಲು ಕಾಂಗ್ರೆಸ್ ರಣತಂತ್ರ ಮಾಡುತ್ತಿದೆ. ರಾಜ್ಯಪಾಲರು ಕೇಂದ್ರ ಸರ್ಕಾರದ ಕೈಗೊಂಬೆಯಾಗಿ ನಡೆದುಕೊಳ್ಳುತ್ತಿದ್ದಾರೆ. ಇದರ ವಿರುದ್ಧ ರಾಜ್ಯದ ಜನರು ದಂಗೆ ಏಳದೆ ಇನ್ನೇನು ಮಾಡುತ್ತಾರೆ ಎಂದು ಎಚ್ಚರಿಕೆ ನೀಡಿದರು.
ಪ್ರಾಸಿಕ್ಯೂಷನ್ ಬಗ್ಗೆ ರಾಜ್ಯಪಾಲರಿಗೆ ಕಾಮನ್‌ಸೆನ್ಸ್ ಇರಬೇಕಿತ್ತು. ಬೀದಿಲಿ ಹೋಗೋರೆಲ್ಲ ಪ್ರಾಸಿಕ್ಯೂಷನ್ ಕೊಡಿ ಎಂದು ಅಂತ ಲೆಟರ್ ಕೊಟ್ಟರೆ ರಾಜ್ಯ ನಡೆಸೋದು ಹೇಗೆ?. 17ಆ ಅಡಿಯಲ್ಲಿ ಸರಿಯಾಗಿ ನಮೂದಾಗಿದೆ ತನಿಖಾಧಿಕಾರಿ ಕೇಳಿದ್ರೆ ಮಾತ್ರ ಕೊಡಬೇಕು. ಈ ಕಾನೂನು ಮಾಡಿದ್ದೆ ಬಿಜೆಪಿಯವರು ಎಂದರು.
ದೆಹಲಿಯಲ್ಲಿ ಅಮಿತ್ ಷಾ ಅವರನ್ನು ಕುಮಾರಸ್ವಾಮಿ, ದೇವೇಗೌಡರು ಸಂಪರ್ಕಿಸಿದ್ದರು. ಬೆಳಗ್ಗೆಯೇ ಮುಖ್ಯಮಂತ್ರಿ ವಿರುದ್ದ ಪ್ರಾಸಿಕ್ಯೂಷನ್ ತನಿಖೆಗೆ ಅನುಮತಿ ಕೊಟ್ಟಿದ್ದಾರೆ. ಪ್ರಾಸಿಕ್ಯೂಷನ್ ಅನುಮತಿಯನ್ನು ತನಿಖಾ ಸಂಸ್ಥೆಗಳು ಕೇಳಬೇಕು ಎಂದರು. ಪ್ರಧಾನಿಗಳು ದುಡ್ಡು ಹೊಡೆದಿದ್ದಾರೆ ಎಂದು ನಾನು ಹೇಳುತ್ತೇನೆ. ಅವರ ವಿರುದ್ಧ ಪ್ರಾಸಿಕ್ಯೂಷನ್‌ಗೆ ಅನುಮತಿ ಕೊಡ್ತಾರಾ. ರಾಜ್ಯಪಾಲರು ಮಾಡಿರೋದೇ ಕಾನೂನು ಬಾಹಿರ ಎಂದರು.
ಯಾರು ಏನೇ ಮಾಡಿದರೂ ಸರ್ಕಾರವನ್ನು ಕೆಡವಲು ಸಾಧ್ಯವಿಲ್ಲ, 136 ಶಾಸಕರು ಒಗ್ಗಟ್ಟಾಗಿದ್ದೇವೆ, ಸಿಎಂ ಬದಲಾವಣೆ ಪ್ರಶ್ನೆಯೇ ಇಲ್ಲ ಎಂದು ಸಿಎಂ ಸಿದ್ದರಾಮಯ್ಯ ಅವರ ಬೆಂಬಲಕ್ಕೆ ನಿಂತಿದ್ದಾರೆ.












Click it and Unblock the Notifications