ಮಂಡ್ಯದಲ್ಲಿ ಹೆಲ್ಮೆಟ್ ಧರಿಸದಿದ್ರೆ ದಂಡದ ಬದಲಿಗೆ ಬೈಕ್ ಸೀಜ್: ಶಾಸಕರ ಎಚ್ಚರಿಕೆ
ಮಂಡ್ಯ, ಅಕ್ಟೋಬರ್ 03: ಸಾರ್ವಜನಿಕರ ಹಿತದೃಷ್ಠಿಯಿಂದ ನಗರದೊಳಗೆ ಸುಗಮ ಸಂಚಾರ ವ್ಯವಸ್ಥೆಯನ್ನು ಜಾರಿಗೊಳಿಸಲು ಹಲವು ಸುಧಾರಣಾ ಕ್ರಮಗಳನ್ನು ಅನುಷ್ಠಾನಗೊಳಿಸಲಾಗುತ್ತಿದೆ ಎಂದು ಶಾಸಕ ಪಿ.ರವಿಕುಮಾರ್ ಗಾಣಿಗ ತಿಳಿಸಿದರು.
ಪೊಲೀಸ್ ಇಲಾಖೆ, ನಗರಸಭೆ ಅಧಿಕಾರಿಗಳು, ಸಾರಿಗೆ ಅಧಿಕಾರಿಗಳೊಂದಿಗೆ ನಗರದ ಜಿಲ್ಲಾ ಪೊಲೀಸ್ ಅಧೀಕ್ಷಕರ ಕಚೇರಿ ಸಭಾಂಗಣದಲ್ಲಿ ಸಭೆ ನಡೆಸಿದ ಬಳಿಕ ಸುದ್ಧಿಗಾರರೊಂದಿಗೆ ಮಾತನಾಡಿದ ಅವರು, ಹದಗೆಟ್ಟಿರುವ ಸಂಚಾರ ವ್ಯವಸ್ಥೆಯನ್ನು ಸುವ್ಯವಸ್ಥೆಗೆ ತರುವುದಕ್ಕೆ ಕಟ್ಟುನಿಟ್ಟಿನ ಕ್ರಮಗಳನ್ನು ಜಾರಿಗೊಳಿಸುವುದು ಅನಿವಾರ್ಯವಾಗಿದೆ ಎಂದರು.

ನಾಳೆಯಿಂದ ಹೆಲ್ಮೆಟ್ ಧರಿಸದವರಿಗೆ ದಂಡ ವಿಧಿಸುವುದಿಲ್ಲ. ಬದಲಿಗೆ ಅವರು ಹೆಲ್ಮೆಟ್ ಖರೀದಿಸುವವರೆಗೆ ವಾಹನವನ್ನು ವಶದಲ್ಲಿಟ್ಟುಕೊಳ್ಳಲಾಗುವುದು ಎಂದು ಕಟ್ಟುನಿಟ್ಟಿನ ಸೂಚನೆ ನೀಡಿದರು.
ಹೆಲ್ಮೆಟ್ ರಹಿತ ಚಾಲನೆಗೆ ದಂಡವಿಲ್ಲ
ಹೆಲ್ಮೆಟ್ ಬಗ್ಗೆ ಜಾಗೃತಿಯನ್ನು ಹಲವಾರು ವರ್ಷಗಳಿಂದ ಮೂಡಿಸಲಾಗಿದೆ. ಇನ್ನು ಮುಂದೆ ಹೆಲ್ಮೆಟ್ ಧರಿಸದೆ ಸಂಚರಿಸಿದಲ್ಲಿ ದಂಡ ವಿಧಿಸದೆ ಹೆಲ್ಮೆಟ್ ಖರೀದಿಸುವವರೆಗೆ ವಾಹನವನ್ನು ವಶದಲ್ಲಿಟ್ಟುಕೊಳ್ಳಲಾಗುವುದು. ಸಾರ್ವಜನಿಕರ ಸುರಕ್ಷತೆ ದೃಷ್ಠಿಯಿಂದ ಎಲ್ಲರೂ ಹೆಲ್ಮೆಟ್ ಧರಿಸಬೇಕು. ಯಾವುದೇ ಶಿಫಾರಸ್ಸುಗಳಿಗೂ ಮಣಿಯುವುದಿಲ್ಲ ಎಂದು ಕಟ್ಟುನಿಟ್ಟಿನ ಸೂಚನೆ ನೀಡಿದರು.
ಕಾರಿನಲ್ಲಿ ಸೀಟ್ ಬೆಲ್ಟ್ ಹಾಕದವರಿಗೆ ಆರಂಭದಲ್ಲಿ ಎಚ್ಚರಿಕೆ ನೀಡಲಾಗುವುದು. ಅವರಿಗೆ ಯಾವುದೇ ದಂಡ ವಿಧಿಸಲಾಗುವುದಿಲ್ಲ ಎಂದ ರವಿಕುಮಾರ್ ಅವರು, ಕುಟುಂಬದವರು ಪ್ರಯಾಣ ಮಾಡುತ್ತಿದ್ದ ಸಂದರ್ಭದಲ್ಲಿ ಕಾರನ್ನು ನಿಲ್ಲಿಸಿ, ಅವರಿಗೆ ಎಚ್ಚರಿಕೆ ನೀಡಿ ಕಳುಹಿಸಲಾಗುವುದು ಎಂದು ಹೇಳಿದರು.

ಬೀದಿ ಬದಿ ವ್ಯಾಪಾರಿಗಳಿಗೆ ಪರ್ಯಾಯ ವ್ಯವಸ್ಥೆ
ಬೀದಿ ಬದಿ ವ್ಯಾಪಾರಿಗಳಿಗೆ ಅನುಕೂಲವಾಗುವಂತೆ ನಗರದ ಆರು ಕಡೆಗಳಲ್ಲಿ ಹೈಟೆಕ್ ಮಾದರಿಯ ವ್ಯವಸ್ಥೆಯನ್ನು ಜಾರಿಗೊಳಿಸಲಾಗುವುದು. ಪ್ರಾಯೋಗಿಕವಾಗಿ ಗುತ್ತಲು ರಸ್ತೆಯ ಕುವೆಂಪು ಶತಮಾನೋತ್ಸವ ಶಾಲೆ ಬಳಿ 10*10 ಅಳತೆಯ ಜಾಗದಲ್ಲಿ ಅಲ್ಲಿನ ವ್ಯಾಪಾರಸ್ಥರಿಗೆ ವ್ಯಾಪಾರ ಮಾಡಲು ವ್ಯವಸ್ಥೆ ಮಾಡಿಕೊಡಲಾಗುವುದು. ಮೇಲ್ಚಾವಣಿ, ಬೆಳಕಿನ ವ್ಯವಸ್ಥೆ ಕಲ್ಪಿಸಲಾಗುವುದು ಇದು ಯಶಸ್ವಿಯಾದಲ್ಲಿ ಉಳದೆಡೆಯೂ ಜಾರಿಗೊಳಿಸಲಾಗುವುದು ಎಂದು ತಿಳಿಸಿದರು.
ಸ್ಟೇಡಿಯಂ ರಸ್ತೆಯಲ್ಲಿ ಫುಡ್‌ಸ್ಟ್ರೀಟ್
ಸ್ಟೇಡಿಯಂ ಪಕ್ಕದ ರಸ್ತೆಯಲ್ಲಿ ಫುಡ್‌ಸ್ಟ್ರೀಟ್ ಆಗಿ ಅಭಿವೃದ್ಧಿಪಡಿಸಲು ನಿರ್ಧರಿಸಲಾಗಿದ್ದು, ಮಕ್ಕಳು ಮಹಿಳೆಯರಿಗೆ ಮನರಂಜನೆಗೆ ಒತ್ತು ನೀಡಲಾಗುವುದು. ಉದ್ಯಾನಗಳಲ್ಲಿ ಕುಡುಕರು ಮತ್ತು ರೌಡಿಗಳ ಹಾವಳಿ ಹೆಚ್ಚುತ್ತಿರುವ ಬಗ್ಗೆ ದೂರುಗಳು ಬಂದಿದ್ದು, ಇದನ್ನು ಮಟ್ಟ ಹಾಕಲು ಕ್ರಮ ವಹಿಸಲಾಗುವುದು ಎಂದರು.
ಸಿಸಿ ಟಿವಿ ಕಣ್ಗಾವಲಿನಲ್ಲಿ ನಗರ
ನಗರದೊಳಗೆ ಪ್ರಸ್ತುತ 16 ಕಡೆಗಳಲ್ಲಿ ಸಿಸಿಟಿವಿ ಕ್ಯಾಮೆರಾಗಳಿದ್ದು, ಉಳಿದಂತೆ ನಗರದೊಳಗೆ ಆಯಕಟ್ಟಿನ ಸ್ಥಳಗಳಲ್ಲಿ ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಲಾಗುವುದು. ಇದರ ಮೂಲಕ ಅಪರಾಧಗಳ ತಡೆಗೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುವುದು. ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಿದ ನಂತರ ಅವುಗಳ ನಿರ್ವಹಣೆಯನ್ನು ಪೊಲೀಸ್ ಇಲಾಖೆ ಮತ್ತು ನಗರಸಭೆ ಮಾಡುತ್ತವೆ ಎಂದು ವಿವರಿಸಿದರು.
ಮುಲಾಜಿಲ್ಲದೆ ಪ್ರಕರಣ ದಾಖಲು
ಸಾರಿಗೆ ಇಲಾಖೆ ಬಸ್‌ಗಳನ್ನು ಎಲ್ಲೆಂದರಲ್ಲಿ ನಿಯಮಬಾಹಿರವಾಗಿ ನಿಲುಗಡೆ ಮಾಡುತ್ತಿರುವುದು ಗಮನಕ್ಕೆ ಬಂದಿದೆ. ಈ ಬಗ್ಗೆ ಸಾರಿಗೆ ಅಧಿಕಾರಿಗಳಿಗೂ ಸೂಚನೆ ನೀಡಲಾಗಿದೆ. ಮುಂದುವರಿದಲ್ಲಿ ಯಾವುದೇ ಮುಲಾಜಿಲ್ಲದೆ ಚಾಲಕರ ವಿರುದ್ಧ ಪ್ರಕರಣ ದಾಖಲಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
2.20 ಕೋಟಿ ರೂ ವೆಚ್ಚದಲ್ಲಿ ರಸ್ತೆ ಅಭಿವೃದ್ಧಿ
ಗೌರಿಶಂಕರ ಕಲ್ಯಾಣ ಮಂಟಪದಿಂದ ನಗರದ ಬೆಸಗರಹಳ್ಳಿ ರಾಮಣ್ಣ ವೃತ್ತದವರೆಗೆ 2.20 ಕೋಟಿ ರೂ. ವೆಚ್ಚದಲ್ಲಿ ರಸ್ತೆ ಅಭಿವೃದ್ಧಿ ಮಾಡಲಾಗುವುದು. ಇದರ ಮಧ್ಯೆ ಕನ್ನಿಕಾಪರಮೇಶ್ವರ ದೇವಾಲಯದ ವೃತ್ತ, ಹೊಸಹಳ್ಳಿ ವೃತ್ತ, ಬೆಸಗರಹಳ್ಳಿ ರಾಮಣ್ಣ ವೃತ್ತವನ್ನು ಅತ್ಯಾಧುನಿಕ ರೀತಿಯಲ್ಲಿ ಅಭಿವೃದ್ಧಿಪಡಿಸಲು ಚಿಂತನೆ ನಡೆಸಲಾಗಿದೆ. ಜೊತೆಗೆ ರಸ್ತೆಯಲ್ಲಿ ಪುಟ್‌ಪಾತ್ ಒತ್ತುವರಿ ತೆರವುಗೊಳಿಸಿ ಬಸ್‌ಬೇಗಳನ್ನು ನಿರ್ಮಿಸಲಾಗುವುದು. ಡೆಲ್ಟಾ ವತಿಯಿಂದ 1.50 ಕೋಟ ರೂ. ಅನುದಾನ ಬರುವ ನಿರೀಕ್ಷೆ ಇದೆ. ಈ ಹಣದಲ್ಲಿ ಅತ್ಯಾಧುನಿಕ ರೀತಿಯಲ್ಲಿ ರಸ್ತೆ ಅಭಿವೃದ್ಧಿ ಮಾಡಲು ಯೋಜನೆ ರೂಪಿಸಲಾಗಿದೆ ಎಂದರು.
ನಗರದ ಹೊರ ವಲಯದ ಅಮರಾವತಿ ಹೊಟೇಲ್‌ನಿಂದ ಕಲ್ಲಹಳ್ಳಿಯ ಜ್ಯೋತಿ ಇಂಟರ್‌ನ್ಯಾಷನಲ್ ಹೊಟೇಲ್‌ವರೆಗಿನ ಮುಖ್ಯರಸ್ತೆಯನ್ನು 30 ಕೋಟಿ ರೂ. ವೆಚ್ಚದಲ್ಲಿ ಹೆದ್ದಾರಿ ಪ್ರಾಧಿಕಾರದವರು ಅಭಿವೃದ್ಧಿಪಡಿಸಲು ಯೋಜನೆ ರೂಪಿಸಿದ್ದಾರೆ. ಶೀಘ್ರ ರಸ್ತೆ ಅಭಿವೃದ್ಧಿ ಕಾಮಗಾರಿ ಪ್ರಾರಂಭವಾಗಲಿದೆ. ಇದರಲ್ಲಿ ಹೈಟೆಕ್ ಮಾದರಿಯಲ್ಲಿ ಪುಟ್‌ಪಾತ್ ನಿರ್ಮಾಣ, ಬಸ್‌ಬೇಗಳ ನಿರ್ಮಾಣ ಮಾಡಲಾಗುವುದು ಎಂದರು.
ಮಹಾವೀರ ವೃತ್ತದ ಬಳಿ ಅಂಡರ್‌ಪಾಸ್ ನಿರ್ಮಿಸಲಾಗುವುದು. ಜೆ.ಸಿ. ವೃತ್ತದಿಂದ ಹೊಳಲು ವೃತ್ತದವರೆಗೆ ಸಿಮೆಂಟ್ ರಸ್ತೆ ಮಾಡಿ ನಂತರ ಎರಡೂ ಕಡೆ ಚರಂಡಿ ನಿರ್ಮಿಸುವ ಯೋಜನೆ ರೂಪಿಸಲಾಗುವುದು ಎಂದು ಹೇಳಿದರು.
ಇನ್ನು ಗುತ್ತಲು ಕೆರೆಯನ್ನು 7.50 ಕೋಟಿ ರೂ. ವೆಚ್ಚದಲ್ಲಿ ಅಭಿವೃದ್ಧಿಪಡಿಸಿ ಚರಂಡಿ ನೀರು ಕೆರೆಗೆ ಸೇರದಂತೆ ಕ್ರಮ ವಹಿಸಲಾಗುವುದು. ಕೆರೆ ಏರಿ ಮೇಲೆ ವಾಕಿಂಗ್ ಟ್ರಾಕ್ ನಿರ್ಮಿಸಿ ವಾಯುವಿಹಾರಿಗಳಿಗೆ ಅನುಕೂಲ ಮಾಡಿಕೊಡಲಾಗುವುದು ಎಂದು ತಿಳಿಸಿದರು.












Click it and Unblock the Notifications