ಮಂಡ್ಯ: ಒಡೆದು ಎರಡು ವರ್ಷವಾದರೂ ದುರಸ್ತಿಯಾಗದ ಕೆರೆಕಟ್ಟೆಗಳು, ನೀರಿಗಾಗಿ ಶುರುವಾಯ್ತು ಹಾಹಾಕಾರ
ಮಂಡ್ಯ, ಜನವರಿ 11: ಕೆರೆಗಳು ಕೃಷಿಕರಿಗೆ ವರದಾನವಾಗಿದ್ದು, ಅವುಗಳತ್ತ ನಿರ್ಲಕ್ಷ್ಯ ವಹಿಸಿದ್ದರಿಂದಲೇ ಇವತ್ತು ನಾವು ಹತ್ತು ಹಲವು ಸಮಸ್ಯೆಗಳನ್ನು ಎದುರಿಸುತ್ತಿದ್ದೇವೆ. ಈಗಾಗಲೇ ಅಂತರ್ಜಲದ ಸಮಸ್ಯೆ ಎದುರಾಗಿ ಕೃಷಿ ಚಟುವಟಿಕೆ ಕುಂಠಿತವಾಗಿದೆ. ಜನಜಾನುವಾರುಗಳು ನೀರಿಲ್ಲದೆ ಪರದಾಡುವಂತಾಗಿದೆ. ಈಗಾಗಲೇ ಸರ್ಕಾರ ಹೆಚ್ಚಿನ ನಿಗಾ ವಹಿಸದ ಕಾರಣಗಳಿಂದ ಕೆರೆಗಳು ಮುಚ್ಚಿ ಹೋಗಿವೆ. ಅಳಿದುಳಿದ ಕೆರೆಗಳನ್ನು ದುರಸ್ತಿಗೊಳಿಸದ ಕಾರಣಗಳಿಂದ ಅವು ನೇಪಥ್ಯತಕ್ಕೆ ಸರಿಯುತ್ತಿವೆ.
ನಾವು ಕೆರೆಗಳ ಬಗ್ಗೆ ಹೆಚ್ಚಿನ ಆಸಕ್ತಿ ವಹಿಸದೆ ಅವುಗಳ ಸಂರಕ್ಷಣೆಗೆ ಮುಂದಾಗದೆ ಹೋದ ಕಾರಣಗಳಿಂದ ಇವತ್ತು ಬರಿದಾದ ಕೆರೆಗಳನ್ನು ನೋಡುವಂತಹ ಪರಿಸ್ಥಿತಿಗೆ ಬಂದಿದ್ದೇವೆ. ಒಂದು ವೇಳೆ ಕೆರೆಗಳನ್ನು ಸಂರಕ್ಷಿಸಿ, ಅವುಗಳನ್ನು ಅಭಿವೃದ್ಧಿಗೊಳಿಸಿದ್ದರೆ, ಮಳೆಗಾಲದಲ್ಲಿ ಹರಿದು ಪೋಲಾಗುವ ನೀರು ಕೆರೆಯಲ್ಲಿ ಸಂಗ್ರಹಗೊಂಡು ಅಂತರ್ಜಲ ವೃದ್ಧಿಯಾಗುತ್ತಿತ್ತು. ಆದರೆ ಅದ್ಯಾಕೋ ಗೊತ್ತಿಲ್ಲ ನಮ್ಮ ಸರ್ಕಾರ ಬೇರೆ ಕಾರ್ಯಗಳತ್ತ ವಹಿಸಿದಷ್ಟು ಆಸಕ್ತಿಯನ್ನು ಕೆರೆಗಳ ಅಭಿವೃದ್ಧಿಗೆ ವಹಿಸುತ್ತಿಲ್ಲ ಎಂಬುದಕ್ಕೆ ಹತ್ತು ಹಲವು ನಿದರ್ಶನಗಳು ನಮ್ಮ ಮುಂದಿವೆ.

ಮಂಡ್ಯ ಜಿಲ್ಲೆಯಲ್ಲಿ ಮುಂಗಾರು ಮಳೆ ಕೊರತೆಯಿಂದ ಈ ಬಾರಿ ಕೆರೆಗಳು ಭರ್ತಿಯಾಗಿಲ್ಲ. ಆದರೆ 2021ರಲ್ಲಿ ಸುರಿದ ಮಳೆಗೆ ಬಹುತೇಕ ಕೆರೆಗಳು ಭರ್ತಿಯಾಗಿದ್ದವು. ನದಿಗಳು ತುಂಬಿ ಹರಿದಿದ್ದವು. ಅದೇ ವರ್ಷ ಭಾರೀ ಮಳೆಗೆ ಕೆಲವು ಕಡೆಗಳಲ್ಲಿದ್ದ ಕೆರೆಗಳು ಕೋಡಿ ಬಿದ್ದು ಕಟ್ಟೆಗಳು ಒಡೆದು ಹೋಗಿದ್ದವು. ಇದರಿಂದ ಕೆರೆಯಲ್ಲಿದ್ದ ನೀರು ಹರಿದು ಹೋಗಿ ರೈತರ ಕೃಷಿ ಭೂಮಿಯೆಲ್ಲವೂ ನಾಶವಾಗಿತ್ತು. ಆದರೆ ಮಳೆ ಕಡಿಮೆಯಾಗುತ್ತಿದ್ದಂತೆಯೇ ಎಲ್ಲವೂ ಸರಿಹೋಗಿತ್ತು. ಆದರೆ ಇವತ್ತಿಗೂ ಸರಿಹೋಗದೆ ಇರುವುದು ಒಡೆದ ಕೆರೆಗಳು ಎನ್ನುವುದು ಬೇಸರದ ಸಂಗತಿಯಾಗಿದೆ.
ಕೆ.ಆರ್.ಪೇಟೆ ವ್ಯಾಪ್ತಿಯ ಕೆರೆಗಳಿಗೆ ಹಾನಿ
ಇದಕ್ಕೆ ನಿದರ್ಶನ ಎಂಬಂತೆ ಕೆ.ಆರ್.ಪೇಟೆ ತಾಲೂಕಿನ ಸಂತೇಬಾಚಹಳ್ಳಿ ಹೋಬಳಿಯಲ್ಲಿ ಹಲವಾರು ಕೆರೆಕಟ್ಟೆಗಳು 2021ರಲ್ಲಿ ಸಂಭವಿಸಿದ ಅತಿವೃಷ್ಠಿಯಿಂದ ಒಡೆದುಹೋಗಿದ್ದವು. ಆದರೆ ಅತಿವೃಷ್ಟಿಯಾಗಿ ಎರಡು ವರ್ಷಕಳೆದಿದ್ದು ಇದುವರೆಗೆ ಕೆರೆಯ ಕಟ್ಟೆಯನ್ನು ದುರಸ್ತಿ ಮಾಡದ ಕಾರಣದಿಂದಾಗಿ ಇವತ್ತು ಕೆರೆ ನೀರಿಲ್ಲದೆ ಮೈದಾನದಂತಾಗಿದೆ. ಒಂದು ವೇಳೆ ಈ ಹಿಂದೆಯೇ ಕೆರೆಯನ್ನು ದುರಸ್ತಿಪಡಿಸಿದ್ದರೆ ಬಹುಶಃ ಒಂದಷ್ಟು ನೀರನ್ನು ಸಂಗ್ರಹಿಸಿಡಲು ಸಾಧ್ಯವಾಗುತ್ತಿತ್ತಲ್ಲದೆ, ಬರಗಾಲದ ಈ ಸಮಯದಲ್ಲಿ ಅನುಕೂಲವಾಗುತ್ತಿತ್ತು.

ಇವತ್ತು ಸಂತೇಬಾಚಹಳ್ಳಿ ಹೋಬಳಿ ತಾಲೂಕಿನ ಅತ್ಯಂತ ಬರಪೀಡಿತ ಪ್ರದೇಶವಾಗಿ ಗೋಚರವಾಗುತ್ತಿದೆ. ಈ ಹೋಬಳಿಯಲ್ಲಿ ಕುಡಿಯುವ ನೀರಿಗೂ ಅಭಾವವಿದ್ದು ಇಲ್ಲಿನ ಸಾವಿರಾರು ಯುವಕರು ಹೊಟ್ಟೆಪಾಡಿಗಾಗಿ ಕೆಲಸ ಹುಡುಕಿಕೊಂಡು ದೂರದ ಮುಂಬೈ, ಪುಣೆ ಮತ್ತು ಬೆಂಗಳೂರಿನಂತಹ ಮಹಾನಗರಗಳಿಗೆ ವಲಸೆ ಹೋಗುತ್ತಿದ್ದಾರೆ. ಇನ್ನೊಂದೆಡೆ ರೈತರು ಕೃಷಿ ಮಾಡಲು ಸಾಧ್ಯವಾಗದೆ ಆಕಾಶದತ್ತ ದೃಷ್ಟಿ ನೆಟ್ಟಿದ್ದಾರೆ. ಜತೆಗೆ ತಮ್ಮೊಂದಿಗೆ ಹೆಗಲುಕೊಟ್ಟು ದುಡಿಯುವ ಜಾನುವಾರುಗಳಿಗೂ ಕುಡಿಯಲು ನೀರಿಲ್ಲದಂತಾಗಿದೆ.
ನೀರಿಲ್ಲದ ಕೆರೆಗಳಿಂದ ರೈತರಿಗೆ ಸಂಕಷ್ಟ
ಕೆ.ಆರ್.ಪೇಟೆ ತಾಲೂಕಿನಲ್ಲಿ ಹತ್ತಾರು ಕೆರೆಗಳಿದ್ದು, ಅವುಗಳ ಪೈಕಿ ಬಹಳಷ್ಟು ಕೆರೆಗಳು 2021ರ ಮಹಾಮಳೆಗೆ ಭರ್ತಿಯಾಗಿದ್ದಲ್ಲದೆ, ಕೋಡಿಬಿದ್ದಿದ್ದವು. ಅದರಲ್ಲೂ ಸಂತೇಬಾಚಹಳ್ಳಿ, ದೊಡ್ಡಕ್ಯಾತನಹಳ್ಳಿ, ಲೋಕನಹಳ್ಳಿ, ಮಾವಿನಕಟ್ಟೆಕೊಪ್ಪಲು, ಅಘಲಯ ಮುಂತಾದ ಕೆರೆಗಳು ಒಡೆದು ಅಪಾರ ಪ್ರಮಾಣದ ಹಾನಿ ಉಂಟಾಗಿತ್ತು. ಸಂತೇಬಾಚಹಳ್ಳಿ ಮತ್ತು ದೊಡ್ಡಕ್ಯಾತನಹಳ್ಳಿ ಕೆರೆಗಳನ್ನು ಹೊರತುಪಡಿಸಿದರೆ ಉಳಿದಂತೆ ಹೆಚ್ಚಿನ ಕೆರೆಗಳು ಇದುವರೆಗೂ ದುರಸ್ತಿಯಾಗಿಲ್ಲ.

ಇನ್ನು ಲೋಕನಹಳ್ಳಿ ಕೆರೆ, ಮಾವಿನಕಟ್ಟೆ ಕೊಪ್ಪಲು ಕೆರೆಗಳು, ಅಘಲಯ ಕೆರೆ ಕೋಡಿ ರಸ್ತೆ ಸೇರಿದಂತೆ ಹಲವು ರಸ್ತೆ ಮತ್ತು ಸೇತುವೆಗಳು ಪುನರ್ ನಿರ್ಮಾಣಕ್ಕೆ ಕಾಯುತ್ತಿವೆ. ಒಡೆದು ಹೋಗಿರುವ ಕೆರೆಗಳಲ್ಲಿ ನೀರು ಖಾಲಿಯಾಗಿದ್ದು ಜನ- ಜಾನುವಾರುಗಳಿಗೆ ಕುಡಿಯುವ ನೀರಿನ ಸಮಸ್ಯೆ ಎದುರಾಗಿದೆ. ಕೆರೆ ಬಯಲಿನ ತೆಂಗು ಮತ್ತಿತರ ಬೆಳೆಗಳು ನೀರಿಲ್ಲದೆ ಒಣಗುತ್ತಿವೆ. ಕೆರೆ ಸುತ್ತಮುತ್ತ ಪ್ರದೇಶದಲ್ಲಿನ ರೈತರು ಸಂಕಷ್ಠಕ್ಕೆ ಸಿಲುಕಿದ್ದು ಜೀವನ ಸಾಗಿಸುವುದು ಹೇಗೆ ಎಂಬ ಚಿಂತೆಯಲ್ಲಿದ್ದಾರೆ.
ಈ ಬಾರಿ ಕೆರೆ ದುರಸ್ತಿ ಮಾಡುತ್ತಾರಾ?
ಇನ್ನೊಂದೆಡೆ ಸರ್ಕಾರದ ಇತ್ತ ಗಮನಹರಿಸದ ಕಾರಣ ಸದ್ಯ ಜೆಡಿಎಸ್ ಪಕ್ಷದ ಜಿಲ್ಲಾ ಮುಖಂಡರು ಸಂತೇಬಾಚಹಳ್ಳಿ ಹೋಬಳಿಯ ಹಾನಿಗೀಡಾದ ಕೆರೆಗಳು ಮತ್ತು ರಸ್ತೆಗಳ ಪರಿಶೀಲನೆ ಮಾಡಿ ರಾಜ್ಯ ಸರ್ಕಾರಕ್ಕೆ ವರದಿ ನೀಡಿದ್ದಾರೆ. ಕ್ಷೇತ್ರದ ಶಾಸಕನಾಗಿ ನಾನೂ ಕೂಡ ಒಡೆದು ಹೋದ ಕೆರೆಗಳು ಮತ್ತು ತಾಲೂಕಿನಲ್ಲಿ ಸ್ಥಗಿತಗೊಂಡಿರುವ ನೀರಾವರಿ ಯೋಜನೆಗಳ ಬಗ್ಗೆ ಸದನದಲ್ಲಿ ಮಾತನಾಡಿ ಸರ್ಕಾರದ ಗಮನ ಸೆಳೆದಿದ್ದು, ಜಿಲ್ಲಾ ಉಸ್ತುವಾರಿ ಸಚಿವರಾದ ಎನ್.ಚಲುವರಾಯಸ್ವಾಮಿ ಅವರ ಗಮನಕ್ಕೂ ಸಮಸ್ಯೆಗಳನ್ನು ತಂದಿರುವುದಾಗಿ ಕೆ.ಆರ್.ಪೇಟೆ ಶಾಸಕ ಹೆಚ್.ಟಿ.ಮಂಜು ಹೇಳಿದ್ದಾರೆ.
ಒಡೆದು ಹೋಗಿರುವ ಲೋಕನಹಳ್ಳಿ ಮತ್ತು ಮಾವಿನಕಟ್ಟೆ ಕೊಪ್ಪಲು ಕೆರೆಗಳು ಜಿಲ್ಲಾ ಪಂಚಾಯಿತಿ ವ್ಯಾಪ್ತಿಗೆ ಸೇರಿದ್ದು ಪುನರ್ ನಿರ್ಮಾಣಕ್ಕಾಗಿ ಇವುಗಳನ್ನು ಸಣ್ಣ ನೀರಾವರಿ ಇಲಾಖೆಗೆ ವಹಿಸಲಾಗಿದೆ. ಇದಕ್ಕಾಗಿ ಅಂದಾಜು ವೆಚ್ಚದ ಪಟ್ಟಿ ಮಾಡಲಾಗುತ್ತಿದ್ದು ತಾಲೂಕಿನ ಎಲ್ಲಾ ನೀರಾವರಿ ಯೋಜನೆಗಳನ್ನು ಪೂರ್ಣಗೊಳಿಸಲು ಶಕ್ತಿ ಮೀರಿ ಪ್ರಯತ್ನಿಸುತ್ತಿದ್ದೇನೆ ಎಂಬ ಭರವಸೆಯನ್ನು ನೀಡಿದ್ದಾರೆ. ಅದು ಏನೇ ಇರಲಿ ಕೆರೆಯ ನೀರನ್ನು ನಂಬಿ ಬದುಕುತ್ತಿದ್ದ ರೈತರು ಇವತ್ತು ಸಂಕಷ್ಟದಲ್ಲಿದ್ದಾರೆ. ಈ ಬಾರಿಯಾದರೂ ಸರ್ಕಾರ ಇತ್ತ ಗಮನಹರಿಸಿ ಕೆರೆಕಟ್ಟೆಗಳನ್ನು ದುರಸ್ತಿಗೊಳಿಸಿ ಬರಲಿರುವ ಮುಂಗಾರಿಗೆ ಕೆರೆಯಲ್ಲಿ ನೀರು ನಿಲ್ಲುವಂತೆ ಮಾಡುತ್ತಾರಾ? ಎಂದು ಜನ ಕಾಯುತ್ತಿದ್ದಾರೆ.












Click it and Unblock the Notifications