ಕಾಂಗ್ರೆಸ್ ಪಾಲಿಗೆ ತಲೆನೋವಾದ ಮಂಡ್ಯ ಲೋಕಸಭೆ ಉಪ ಚುನಾವಣೆ
ಮಂಡ್ಯ, ಅಕ್ಟೋಬರ್ 24 : ಮಂಡ್ಯ ಲೋಕಸಭಾ ಕ್ಷೇತ್ರದ ಉಪ ಚುನಾವಣೆ ಕಾಂಗ್ರೆಸ್ ಪಕ್ಷದ ಪಾಲಿಗೆ ಬಿಸಿ ತುಪ್ಪವಾಗುತ್ತಿದೆ. ಸ್ಥಳೀಯ ಕಾಂಗ್ರೆಸ್ ನಾಯಕರು ಜೆಡಿಎಸ್ ಅಭ್ಯರ್ಥಿ ಬೆಂಬಲಿಸಲು ನಿರಾಕರಿಸುತ್ತಿದ್ದು, ಇದರ ಉಪಯೋಗ ಬಿಜೆಪಿಗೆ ಆಗಲಿದೆಯೇ? ಎಂದು ಕಾದು ನೋಡಬೇಕಿದೆ.
ನವೆಂಬರ್ 3ರಂದು ಮಂಡ್ಯ ಲೋಕಸಭಾ ಕ್ಷೇತ್ರದ ಉಪ ಚುನಾವಣೆ ನಡೆಯಲಿದೆ. ಕಾಂಗ್ರೆಸ್-ಜೆಡಿಎಸ್ ಮೈತ್ರಿ ಅಭ್ಯರ್ಥಿಯಾಗಿ ಎಲ್.ಆರ್.ಶಿವರಾಮೇಗೌಡ ಮತ್ತು ಬಿಜೆಪಿಯಿಂದ ಡಾ.ಸಿದ್ದರಾಮಯ್ಯ ಕಣದಲ್ಲಿದ್ದಾರೆ. ನವೆಂಬರ್ 6ರಂದು ಫಲಿತಾಂಶ ಪ್ರಕಟವಾಗಲಿದೆ.
ಚುನಾವಣೆಯಲ್ಲಿ ಕಾಂಗ್ರೆಸ್-ಜೆಡಿಎಸ್ ಮೈತ್ರಿಗೆ ತೀವ್ರ ವಿರೋಧ ವ್ಯಕ್ತವಾಗಿದೆ. ಉಪ ಚುನಾವಣೆಯಲ್ಲಿ ಎಲ್.ಆರ್.ಶಿವರಾಮೇಗೌಡ ಬೆಂಬಲಿಸುವುದಿಲ್ಲ ಎಂದು ಹಲವು ನಾಯಕರು ಹೇಳಿದ್ದು, ಪ್ರಚಾರಕ್ಕೂ ಗೈರಾಗುತ್ತಿದ್ದಾರೆ.
'ಯಾವ ಮುಖ ಹೊತ್ತು ಜನರ ಬಳಿ ಹೋಗಿ ಜೆಡಿಎಸ್ ಪರವಾಗಿ ಮತ ಕೇಳಬೇಕು?' ಎಂಬುದು ಸ್ಥಳೀಯ ನಾಯಕರ ಪ್ರಶ್ನೆ. ಆದರೆ, ರಾಜ್ಯ ನಾಯಕರು ಇದು ಹೈಕಮಾಂಡ್ ತೀರ್ಮಾನ ಎಂದು ಹೇಳುತ್ತಿದ್ದಾರೆ. ಆದ್ದರಿಂದ ಮಂಡ್ಯ ಚುನಾವಣೆ ಪಕ್ಷದ ಪಾಲಿಗೆ ತಲೆನೋವಾಗಿದೆ...

ವಿದೇಶಕ್ಕೆ ಹೊರಟ ನಾಯಕರು
ಮಂಡ್ಯ ಜಿಲ್ಲೆಯ ಕೆಲವು ಕಾಂಗ್ರೆಸ್ ನಾಯಕರು ಉಪ ಚುನಾವಣೆ ಪ್ರಚಾರಕ್ಕೆ ಗೈರಾಗಿದ್ದು ವಿದೇಶ ಪ್ರವಾಸ ಹೋಗಲು ಸಿದ್ಧರಾಗುತ್ತಿದ್ದಾರೆ. ಉಪ ಚುನಾವಣೆಯಿಂದ ದೂರವುಳಿಯಲು ವಿದೇಶ ಪ್ರವಾಸದ ಯೋಜನೆ ಹಾಕಿಕೊಂಡಿದ್ದಾರೆ. ಮಂಡ್ಯದಲ್ಲಿಯೇ ಇದ್ದರೆ ವರಿಷ್ಠರ ಸೂಚನೆಯಂತೆ ಎಲ್.ಆರ್.ಶಿವರಾಮೇಗೌಡ ಪರವಾಗಿ ಕೆಲಸ ಮಾಡಬೇಕಾಗುತ್ತದೆ ಆದ್ದರಿಂದ, ಅದರಿಂದ ತಪ್ಪಿಸಿಕೊಳ್ಳುತ್ತಿದ್ದಾರೆ.

ಅನಾರೋಗ್ಯದ ನೆಪ
ಎಲ್.ಆರ್.ಶಿವರಾಮೇಗೌಡ ಅವರು ಜಿಲ್ಲೆಯ ಪ್ರಮುಖ ಕಾಂಗ್ರೆಸ್ ನಾಯಕರಿಗೆ ದೂರವಾಣಿ ಕರೆ ಮಾಡಿ ಪ್ರಚಾರಕ್ಕೆ ಬನ್ನಿ, ಚುನಾವಣೆಯಲ್ಲಿ ಸಹಕಾರ ನೀಡಿ ಎಂದು ಮನವಿ ಮಾಡಿದ್ದಾರೆ. ಆದರೆ, ಕೆಲವು ನಾಯಕರು ಅನಾರೋಗ್ಯದ ನೆಪ ಹೇಳುತ್ತಿದ್ದು, ಪ್ರಚಾರಕ್ಕೆ ಬರುವುದಿಲ್ಲ ಎಂದು ತಿಳಿಸಿದ್ದಾರೆ. ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸ್ಥಳೀಯ ನಾಯಕರಲ್ಲಿ ಅಸಮಾಧಾನಕ್ಕೆ ಕಾರಣವಾಗಿದೆ.

ಸ್ವಾಭಿಮಾನಕ್ಕೆ ಧಕ್ಕೆಯಾಗಿದೆ
ಜೆಡಿಎಸ್ ಪಕ್ಷದ ಜೊತೆಗಿನ ಮೈತ್ರಿ ವಿಧಾನಸೌಧಕ್ಕೆ ಮಾತ್ರ ಸೀಮಿತ ಎಂದು ಅಂದುಕೊಂಡಿದ್ದೆವು. ಆದರೆ, ಈಗ ಲೋಕಸಭೆ ಉಪ ಚುನಾವಣೆಗೂ ಮೈತ್ರಿ ಮುಂದುವರೆದಿದೆ. ಆದ್ದರಿಂದ ಚುನಾವಣೆಯಿಂದ ದೂರವುಳಿಯಲು ವಿದೇಶಕ್ಕೆ ತೆರಳುತ್ತಿದ್ದೇನೆ ಎಂದು ಹೆಸರು ಹೇಳಲು ಇಚ್ಛಿಸಿದ ಕಾಂಗ್ರೆಸ್ ನಾಯಕರು ಹೇಳಿದ್ದಾರೆ. ಈ ಎಲ್ಲಾ ಬೆಳವಣಿಗೆಗಳು ಕಾಂಗ್ರೆಸ್ ಪಾಲಿಗೆ ಬಿಸಿ ತುಪ್ಪವಾಗಿದೆ.

ದಿನೇಶ್ ಗುಂಡೂರಾವ್ ಸಭೆ
ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಅವರು ಮಂಡ್ಯ ಜಿಲ್ಲಾ ಕಾಂಗ್ರೆಸ್ ನಾಯಕರ ಜೊತೆ ಬೆಂಗಳೂರಿನಲ್ಲಿ ಉಪ ಚುನಾವಣೆ ಬಗ್ಗೆ ಸಭೆ ನಡೆಸಿದ್ದರು. ಸಭೆಯಲ್ಲಿ ಕಾಂಗ್ರೆಸ್ ನಾಯಕರು ಜೆಡಿಎಸ್ ನಾಯಕರ ವರ್ತನೆ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದರು. ಚುನಾವಣೆಯಲ್ಲಿ ಮೈತ್ರಿ ಮಾಡಿಕೊಂಡ ಕುರಿತು ಅಸಮಾಧಾನ ಹೊರಹಾಕಿದ್ದರು. ಆಗ ದಿನೇಶ್ ಗುಂಡೂರಾವ್ ಅವರು ಹೈಕಮಾಂಡ್ ನಿರ್ಧಾರ ಎಂದು ಹೇಳಿದ್ದರು.

ಬಿಜೆಪಿಗೆ ಬೆಂಬಲವಿಲ್ಲ
ಮತ್ತೊಂದು ಕಡೆ ಎಲ್.ಆರ್.ಶಿವರಾಮೇಗೌಡ ಅವರನ್ನು ಬೆಂಬಲಿಸಲು ಮಾಜಿ ಸಂಸದೆ ರಮ್ಯಾ ಅಭಿಮಾನಿಗಳು ನಿರಾಕರಿಸಿದ್ದಾರೆ. ಉಪ ಚುನಾವಣೆಯಲ್ಲಿ ಬಿಜೆಪಿ ಬೆಂಬಲಿಸುತ್ತೇವೆ ಎಂದು ಅವರು ಘೋಷಣೆ ಮಾಡಿದ್ದಾರೆ. 2014ರ ಚುನಾವಣೆಯಲ್ಲಿ ರಮ್ಯಾ ಅವರು ಸೋಲಲು ಶಿವರಾಮೇಗೌಡ ಅವರು ಕಾರಣ. ಆದ್ದರಿಂದ, ಉಪ ಚುನಾವಣೆಯಲ್ಲಿ ಅವರನ್ನು ಬೆಂಬಲಿಸುವುದಿಲ್ಲ ಎಂದು ರಮ್ಯಾ ಅಭಿಮಾನಿಗಳು ಹೇಳಿದ್ದಾರೆ.












Click it and Unblock the Notifications