ಸಕ್ಕರೆ ನಾಡು ಮಂಡ್ಯ ಜಿಲ್ಲೆಯ 7 ವಿಧಾನಸಭಾ ಕ್ಷೇತ್ರಗಳ ಫಲಿತಾಂಶ ಹೀಗಿದೆ, ಜೆಡಿಎಸ್ ಭದ್ರಕೋಟೆ "ಕೈ" ತೆಕ್ಕೆಗೆ
ಮಂಡ್ಯ, ಮೇ, 13: ವಿಧಾನಸಭೆ ಚುನವಾಣೆಯ ಮತ ಎಣಿಕೆ ಮುಕ್ತಾಯವಾಗಿದ್ದು, ಎಲ್ಲಾ ಕ್ಷೇತ್ರಗಳ ಅಭ್ಯರ್ಥಿಗಳ ಹಣೆಬರಹ ನಿರ್ಧಾರವಾಗಿದೆ. ಹಾಗೆಯೆ ಸಕ್ಕರೆ ನಾಡು ಮಂಡ್ಯ ಜಿಲ್ಲೆಯ ಏಳೂ ಕ್ಷೇತ್ರಗಳ ಪೈಕಿ ಐದು ಕಾಂಗ್ರೆಸ್, ಒಂದು ಸರ್ವೋದಯ ಕರ್ನಾಟಕ ಪಕ್ಷ ಹಾಗೂ ಒಂದು ಜೆಡಿಎಸ್ ಕ್ಷೇತ್ರದಲ್ಲಿ ಅಭ್ಯರ್ಥಿ ಗೆಲುವು ಸಾಧಿಸಿದ್ದಾರೆ.
ಕಳೆದ ಬಾರಿ ಏಳೂ ಕ್ಷೇತ್ರಗಳೂ ಜೆಡಿಎಸ್ ತೆಕ್ಕೆಗೆ ಸೇರ್ಪಡೆ ಆಗಿದ್ದವು. ಆಪರೇಷನ್ ಕಮಲದ ನಂತರ ಕೆ.ಆರ್.ಪೇಟೆ ಕ್ಷೇತ್ರದಿಂದ ಆಯ್ಕೆಯಾಗಿದ್ದ ಕೆ.ಸಿ.ನಾರಾಯಣಗೌಡ ಅವರು ರಾಜೀನಾಮೆ ನೀಡಿ ಉಪಚುನಾವಣೆಯಲ್ಲಿ ಮತ್ತೆ ಆಯ್ಕೆಯಾಗುವ ಮೂಲಕ ಬಿಜೆಪಿ ಪ್ರಥಮ ಬಾರಿಗೆ ಖಾತೆ ತೆರೆದಿತ್ತು. ಆದರೆ ಈ ಬಾರಿ ನಾರಾಯಣಗೌಡ ಸೋಲುವ ಮೂಲಕ ಬಿಜೆಪಿ ಸಂಪೂರ್ಣವಾಗಿ ಜಿಲ್ಲೆಯಲ್ಲಿ ನೆಲಕಚ್ಚಿದೆ.

ಮಂಡ್ಯ ವಿಧಾನಸಭೆ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ರವಿಕುಮಾರ್ ಗೌಡ 61,411 ಮತಗಳನ್ನು ಪಡೆಯುವ ಮೂಲಕ ಗೆಲುವಿ ಸಾಧಿಸಿದ್ದರೆ, ಪ್ರತಿಸ್ಪರ್ಧಿಯಾದ ಜೆಡಿಎಸ್ ಅಭ್ಯರ್ಥಿ ಬಿ.ಆರ್. ರಾಮಚಂದ್ರ ಸೋಲುಂಡಿದ್ದಾರೆ. ಇನ್ನು ಶ್ರೀರಂಗಪಟ್ಟಣ ವಿಧಾನಸಭೆ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಎ.ಬಿ. ರಮೇಶ್ ಬಂಡಿಸಿದ್ದೇಗೌಡ 72,817 ಮತಗಳನ್ನು ಪಡೆಯುವ ಮೂಲಕ ಗೆಲುವು ಸಾಧಿಸಿದ್ದು, ಪ್ರತಿಸ್ಪರ್ಧಿಯಾಗಿ ಸ್ಪರ್ಧಿಸಿದ್ದ ಜೆಡಿಎಸ್ ಅಭ್ಯರ್ಥಿ ರವೀಂದ್ರ ಶ್ರೀಕಂಠಯ್ಯ ಅವರು ಸೋಲನುಭವಿಸಿದ್ದಾರೆ.
ಮದ್ದೂರು ವಿಧಾನಸಭೆ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಉದಯ್ ಕೆ.ಎಂ. 87,019 ಮತಗಳನ್ನು ಪಡೆಯುವ ಗೆಲುವು ಸಾಧಿಸಿದ್ದು, ಪ್ರತಿಸ್ಪರ್ಧಿಯಾಗಿದ್ದ ಜೆಡಿಎಸ್ ಅಭ್ಯರ್ಥಿ ಡಿ.ಸಿ. ತಮ್ಮಣ್ಣನವರು ಸೋಲನುಭವಿಸಿದ್ದಾರೆ. ಮತ್ತೊಂದೆಡೆ ಮಳವಳ್ಳಿ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಪಿ.ಎಂ. ನರೇಂದ್ರಸ್ವಾಮಿ 1,06,498 ಮತಗಳನ್ನು ಪಡೆಯುವ ಮೂಲಕ ಗೆಲುವು ಸಾಧಿಸಿದ್ದು, ಪ್ರತಿಸ್ಪರ್ಧಿಯಾಗಿದ್ದ ಡಾ.ಕೆ. ಜೆಡಿಎಸ್ ಅಭ್ಯರ್ಥಿ ಅನ್ನದಾನಿ ಸೋಲನುಭವಿಸಿದ್ದಾರೆ.
ಮೇಲುಕೋಟೆ ವಿಧಾನಸಭಾ ಕ್ಷೇತ್ರದಲ್ಲಿ ಸರ್ವೋದಯ ಕರ್ನಾಟಕ ಪಕ್ಷದ ಅಭ್ಯರ್ಥಿ ದರ್ಶನ್ ಪುಟ್ಟಣ್ಣಯ್ಯ 91,151 ಮತಗಳಳನ್ನು ಪಡೆಯುವ ಮೂಲಕ ಗೆಲುವು ಸಾಧಿಸಿದ್ದು, ಪ್ರತಿಸ್ಪರ್ಧಿ ಜೆಡಿಎಸ್ ಅಭ್ಯರ್ಥಿ ಸಿ.ಎಸ್. ಪುಟ್ಟರಾಜು ಸೋಲು ಕಂಡಿದ್ದಾರೆ. ಹಾಗೆಯೆ ಕೆ.ಆರ್. ಪೇಟೆ ವಿಧಾನಸಭಾ ಕ್ಷೇತ್ರದಲ್ಲಿ ಜೆಡಿಎಸ್ ಅಭ್ಯರ್ಥಿ ಎಚ್.ಟಿ. ಮಂಜು 80,646 ಮತಗಳನ್ನು ಪಡೆಯುವ ಮೂಲಕ ಗೆಲುವು ಸಾಧಿಸಿದ್ದಾರೆ. ಪ್ರತಿಸ್ಪರ್ಧಿಯಾಗಿದ್ದ ಕಾಂಗ್ರೆಸ್ ಅಭ್ಯರ್ಥಿ ಬಿ.ಎಲ್. ದೇವರಾಜು ಪರಾಭವಗೊಂಡಿದ್ದಾರೆ.
ಹಾಗೆಯೆ ನಾಗಮಂಗಲ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಎನ್. ಚಲುವರಾಯಸ್ವಾಮಿ 90,634 ಮತಗಳನ್ನು ಪಡೆಯುವ ಮೂಲಕ ಗೆಲುವು ಸಾಧಿಸಿದ್ದು, ಪ್ರತಿಸ್ಪರ್ಧಿಯಾಗಿದ್ದ ಜೆಡಿಎಸ್ ಅಭ್ಯರ್ಥಿ ಸುರೇಶ್‌ಗೌಡ ಸೋಲನುಭವಿಸಿದ್ದಾರೆ.












Click it and Unblock the Notifications