KRS Dam: ಕೆಆರ್‌ಎಸ್ ಹಿನ್ನೀರಿಗೆ ಹೊಂದಿಕೊಂಡಂತಿರುವ ರಸ್ತೆ ಬದಿಯ ಮಣ್ಣು ಕುಸಿತ
ಮಂಡ್ಯ ಜಿಲ್ಲೆಯ ಕೆ.ಆರ್.ಪೇಟೆ ತಾಲೂಕಿನ ಬೂಕನಕೆರೆ ಹೋಬಳಿಯ ಗಂಜಿಗೆರೆ ಬಳಿ ಕೆಆರ್‌ಎಸ್ ಹಿನ್ನೀರಿಗೆ ಹೊಂದಿಕೊಂಡಂತಿರುವ ರಸ್ತೆ ಬದಿಯ ಮಣ್ಣು ಕುಸಿತವಾಗುತ್ತಿದ್ದು ರಸ್ತೆಯಲ್ಲಿ ಸಂಚರಿಸುವ ವಾಹನ ಚಾಲಕರಲ್ಲಿ ಆತಂಕ ಮೂಡಿಸಿದೆ.
ಕಾವೇರಿ ಜಲಾನಯನ ಪ್ರದೇಶದಲ್ಲಿ ಸುರಿಯುತ್ತಿರುವ ಸತತ ಮಳೆಗೆ ಜಿಲ್ಲೆಯ ಜೀವನಾಡಿ ಕೃಷ್ಣರಾಜ ಸಾಗರ ಜಲಾಶಯ ಭರ್ತಿಯಾಗಿದೆ. ಕೆಆರ್‌ಎಸ್ ಭರ್ತಿಯಾದ ಪರಿಣಾಮ ಜಲಾಶಯದ ಹಿನ್ನೀರು ತಾಲೂಕಿನ ಗಂಜೀಗೆರೆ ಹಾಗೂ ಸುತ್ತಮುತ್ತಲ ಪ್ರದೇಶಗಳಿಗೂ ವ್ಯಾಪಿಸಿದೆ. ಹಿನ್ನೀರಿಗೆ ಹೊಂದಿಕೊಂಡಂತೆ ಬಸ್ತಿ ಗೊಮ್ಮಟ ಕ್ಷೇತ್ರ, ಭೂ ವರಾಹನಾಥ ಕ್ಷೇತ್ರ, ಅಂಬಿಗರಹಳ್ಳಿಯ ತ್ರಿವೇಣಿ ಸಂಗಮ ಕ್ಷೇತ್ರಗಳಿದ್ದು ನಿತ್ಯ ನೂರಾರು ಪ್ರವಾಸಿಗರು ಗಂಜೀಗೆರೆ ಬಳಿಯ ಹಿನ್ನೀರು ಪ್ರದೇಶದ ರಸ್ತೆಯಲ್ಲಿ ಸಂಚರಿಸುತ್ತಾರೆ.

ಹಿನ್ನೀರಿನ ಅಲೆಗಳು ರಸ್ತೆ ಬದಿಗೆ ಅಪ್ಪಳಿಸುತ್ತಿರುವುದರಿಂದ ರಸ್ತೆಯ ಒಂದು ಭಾಗದ ಮಣ್ಣು ಕುಸಿತವಾಗುತ್ತಿದೆ. ಮಣ್ಣು ಕುಸಿತವಾಗುವ ಅರಿವಿಲ್ಲದೆ ವಾಹನ ಚಾಲಕರು ರಸ್ತೆ ಬದಿಗೆ ಬಂದರೆ ವಾಹನ ಸಮೇತ ಹಿನ್ನೀರಿಗೆ ಬೀಳುವ ಅಪಾಯ ಎದುರಾಗಿದೆ.
2022 ರಲ್ಲಿ ಅಂಬಿಗರಹಳ್ಳಿಯ ತ್ರಿವೇಣಿ ಸಂಗಮದಲ್ಲಿ ನಡೆದ ಐತಿಹಾಸಿಕ ಕುಂಬಮೇಳ ಹಾಗೂ ಧಾರ್ಮಿಕ ಸಮ್ಮೇಳನದ ಸಂದರ್ಭದಲ್ಲಿ ಕಿರಿದಾಗಿದ್ದ ಇಲ್ಲಿನ ರಸ್ತೆಯ ಅಗಲೀಕರಣ ಮಾಡಲಾಗಿತ್ತು. ಅಗಲೀಕರಣದ ಸಂದರ್ಭದಲ್ಲಿ ಹಿನ್ನೀರು ಅಪ್ಪಳಿಸುವ ರಸ್ತೆ ಬದಿಗೆ ಮಣ್ಣು ಸುರಿಯಲಾಯಿತಾದರೂ ರಸ್ತೆ ಬದಿಯ ಮಣ್ಣು ಕುಸಿಯದಂತೆ ಲೋಕೋಪಯೋಗಿ ಇಲಾಖೆ ಪಿಚಿಂಗ್(ಕಲ್ಲಿನ ಕಾಂಕ್ರೀಟ್) ಮಾಡಲಿಲ್ಲ. ಇದರ ಪರಿಣಾಮ ಕೆ.ಆರ್.ಎಸ್ ಜಲಾಶಯದ ಹಿನ್ನೀರಿನ ಅಲೆಗಳ ರಭಸಕ್ಕೆ ರಸ್ತೆ ಬದಿಯ ಮಣ್ಣು ಕುಸಿಯುತ್ತಿದೆ.
ಈ ರಸ್ತೆಯಲ್ಲಿ ನಿತ್ಯ ನೂರಾರು ಪ್ರವಸಿಗರ ವಾಹನಗಳು ಸಂಚರಿಸುತ್ತಿದ್ದರೂ ಲೋಕೋಪಯೋಗಿ ಇಲಾಖೆ ಹಿನ್ನೀರಿನ ಭಾಗದಲ್ಲಿ ರಕ್ಷಣಾ ತಡೆಗೋಡೆಗಳನ್ನು ನಿರ್ಮಿಸಿಲ್ಲ. ತಡೆಗೋಡೆಗಳಿಲ್ಲದ ಪರಿಣಾಮ ವಾಹನ ಚಾಲಕರು ಸ್ವಲ್ಪ ಎಚ್ಚರ ತಪ್ಪಿದರೂ ಕುಸಿಯುತ್ತಿರುವ ಮಣ್ಣಿನ ಮೂಲಕ ಹಿನ್ನೀರಿನಲ್ಲಿ ವಾಹನ ಸಮೇತ ಬಿದ್ದು ಮಣ್ಣಾಗಿಬಿಡುತ್ತಾರೆ.
ನಾಮಫಲಕ ಹಾಕಿ
ಗಂಜೀಗೆರೆ ಗ್ರಾಮ ಪಂಚಾಯತಿ ವ್ಯಾಪ್ತಿಗೆ ಸೇರಿದಂತೆ ಜೈನರ ಪವಿತ್ರ ತೀರ್ಥ ಕ್ಷೇತ್ರ ಬಸ್ತಿ ಗೊಮ್ಮಟ ಹಾಗೂ ತಿರುಪತಿ ಮಾದರಿಯಲ್ಲಿ ಅಭಿವೃದ್ದಿ ಹೊಂದಿರುವ ಹೊಂದುತ್ತಿರುವ ಪರಕಾಲ ಮಠದ ಭೂ ವರಾಹನಾಥ ಕ್ಷೇತ್ರಗಳಿವೆ. ಅನತಿ ದೂರದಲ್ಲಿಯೇ ಹಿನ್ನೀರಿನ ಮತ್ತೊಂದು ಬದಿಯಲ್ಲಿ ಅಂಬಿಗರ ಹಳ್ಳಿಯ ತ್ರಿವೇಣಿ ಸಂಗಮ ಕ್ಷೇತ್ರವಿದೆ. ಈ ಕ್ಷೇತ್ರಗಳಿಗೆ ಸಂಚರಿಸುವ ರಸ್ತೆಗಳಲ್ಲಿ ಅತಿ ಹೆಚ್ಚು ತಿರುವುಗಳಿವೆ. ಬೆಂಗಳೂರು ಮಹಾನಗರ ಸೇರಿದಂತೆ ರಾಜ್ಯದ ವಿವಿಧ ಭಾಗಗಳಿಂದ ನಿತ್ಯ ನೂರಾರು ಪ್ರವಾಸಿಗರು ಹಾಗೂ ಭಕ್ತರು ಆಗಮಿಸುತ್ತಿದ್ದರೂ ಅವರು ತಲುಪಬೇಕಾದ ತೀರ್ಥ ಕ್ಷೇತ್ರಗಳಿಗೆ ಸುಲುಭವಾಗಿ ತಲುಪಲು ಅಗತ್ಯವಾದ ಮಾರ್ಗಸೂಚಿ ನಾಮ ಫಲಕಗಳಿಲ್ಲದೆ ಸಮಸ್ಯೆಯಾಗಿದೆ.
ಪ್ರತಿ ತಿರುವಿನಲ್ಲಿ ಕೂಡ ಸ್ಥಳೀಯರನ್ನು ಕೇಳಿಕೊಂಡು ಸಂಚರಿಸಬೇಕಾದ ಪಡೆಯಬೇಕಾದಂತ ಪರಿಸ್ಥಿತಿ ನಿರ್ಮಾಣವಾಗಿದೆ. ಕೆಲವು ಗ್ರಾಮಗಳಲ್ಲಿ ನಾಮಫಲಕದ ಬೋರ್ಡ್‌ಗಳು ಮುರಿದು ಬಿದ್ದಿದ್ದರು ಅಧಿಕಾರಿಗಳು ನೋಡಿಯೂ ನೋಡದಂತೆ ಕಣ್ಣು ಮುಚ್ಚಿ ಕುಳಿತ್ತಿದ್ದು ರಾತ್ರಿ ಸಮಯ ವಾಹನ ಸವಾರರು ಅಪಘಾತಕ್ಕೀಡಾಗಿ ಸಾವನ್ನಪ್ಪಿರುವ ಘಟನೆಗಳು ಸಂಭವಿಸಿವೆ.
ಗಂಜೀಗೆರೆ ಹಿನ್ನೀರಿನ ರಸ್ತೆ ಸಮಸ್ಯೆಯ ಬಗ್ಗೆ ಪ್ರತಿಕ್ರಿಯಿಸಿರುವ ಲೋಕೋಪಯೋಗಿ ಇಲಾಖೆಯ ಸಹಾಯಕ ಕಾರ್ಯಪಾಲಕ ಅಭಿಯಂತರ ಮಂಜುನಾಥ್, ಕಳೆದ ಬಾರಿ ಬಿಡುಗಡೆಯಾದ ಕಾಮಗಾರಿ ಅನುದಾನ ತಕ್ಕಂತೆ ಕಾಮಗಾರಿ ನೆರವೇರಿಸಿದ್ದೇವೆ. ಹಿನ್ನೀರಿನ ರಸ್ತೆ ಬದಿಯ ಸ್ಥಳದಲ್ಲಿ ಮಣ್ಣು ಕುಸಿಯುತ್ತಿರುವುದನ್ನು ಪರಿಶೀಲನೆ ಮಾಡಿ ಸಾರ್ವಜನಿಕರಿಗೆ ಅನುಕೂಲ ಆಗುವ ರೀತಿಯಲ್ಲಿ ಶೀಘ್ರವೇ ಕ್ರಮ ವಹಿಸುತ್ತೇನೆ. ಮುಂದಿನ ದಿನದಲ್ಲಿ ಹಿನ್ನೀರಿಗೆ ಹೊಂದಿಕೊಂಡಂತಿರುವ ರಸ್ತೆ ಬದಿಗೆ ಶಾಶ್ವತವಾಗಿ ತಡೆಗೋಡೆ ನಿರ್ಮಾಣ ಮಾಡಲು ಕ್ರಮ ವಹಿಸುವುದಾಗಿ ತಿಳಿಸಿದ್ದಾರೆ.












Click it and Unblock the Notifications