ಮಂಡ್ಯ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಗೆಲ್ಲಲೇ ಬೇಕೆಂದುಕೊಂಡ ಕ್ಷೇತ್ರದಲ್ಲೇ ಜೆಡಿಎಸ್‍ ಅಭ್ಯರ್ಥಿ ವಿರುದ್ಧ ಅಪಸ್ವರ

By ಲವ ಕುಮಾರ್‌
|
Google Oneindia Kannada News

ಬೆಂಗಳೂರು, ಜನವರಿ 20: ರಾಷ್ಟ್ರೀಯ ಪಕ್ಷಗಳಾದ ಬಿಜೆಪಿ ಮತ್ತು ಕಾಂಗ್ರೆಸ್‌ಗೆ ಸೆಡ್ಡು ಹೊಡೆದಿರುವ ಜೆಡಿಎಸ್ ಈಗಾಗಲೇ ಸುಮಾರು 93 ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಘೋಷಿಸಿದೆ. ಆದರೆ ಕೆಲವು ಕ್ಷೇತ್ರಗಳಲ್ಲಿ ಆಕಾಂಕ್ಷಿಗಳ ನಡುವೆ ತೀವ್ರ ಪೈಪೋಟಿ ಇರುವ ಕಾರಣದಿಂದ ಹಾಗೂ ಪಕ್ಷದ ಅಸ್ತಿತ್ವವೇ ಇಲ್ಲದ ಕ್ಷೇತ್ರಗಳಲ್ಲಿ ಅಭ್ಯರ್ಥಿಗಳ ಕೊರತೆಯೂ ಎದ್ದು ಕಾಣಿಸುತ್ತಿರುವುದರಿಂದ. ಎರಡನೇ ಪಟ್ಟಿ ಬಿಡುಗಡೆ ವಿಳಂಬವಾಗುತ್ತಿದೆ.

ಇನ್ನು ಈಗಾಗಲೇ ಅಭ್ಯರ್ಥಿಗಳ ಘೋಷಣೆ ಮಾಡಿದ ಕೆಲವು ಕ್ಷೇತ್ರಗಳಲ್ಲಿ ಭಿನ್ನಾಭಿಪ್ರಾಯಗಳು ಆರಂಭವಾಗಿರುವುದು ಗುಟ್ಟಾಗಿ ಉಳಿದಿಲ್ಲ. ಅದರಲ್ಲೂ ಜೆಡಿಎಸ್‌ನಿಂದ ಹೊರಹೋಗಿ ಮಂಡ್ಯದಲ್ಲಿ ಬಿಜೆಪಿ ಖಾತೆ ತೆರೆಯುವಂತೆ ಮಾಡಿ ದೇವೇಗೌಡರ ಕುಟುಂಬದ ಕೆಂಗಣ್ಣಿಗೆ ಗುರಿಯಾಗಿರುವ ಡಾ.ನಾರಾಯಣಗೌಡರ ಕ್ಷೇತ್ರವಾಗಿರುವ ಕೆ.ಆರ್.ಪೇಟೆಯಲ್ಲಿ ಅಭ್ಯರ್ಥಿ ಆಯ್ಕೆ ವಿಚಾರದಲ್ಲಿ ಭಿನ್ನಾಭಿಪ್ರಾಯಗಳು ಭುಗಿಲೆದ್ದಿದೆ.

ಕಳೆದ 2018ರ ವಿಧಾನಸಭಾ ಚುನಾವಣೆಯಲ್ಲಿ ಮಂಡ್ಯ ಜೆಡಿಎಸ್‌ನ ಭದ್ರಕೋಟೆಯಾಗಿತ್ತು. ಜಿಲ್ಲೆಯ ಎಲ್ಲ ವಿಧಾನಸಭಾಕ್ಷೇತ್ರಗಳಲ್ಲಿಯೂ ಜೆಡಿಎಸ್ ಗೆಲುವು ಸಾಧಿಸುವ ಮೂಲಕ ಗಮನಸೆಳೆದಿತ್ತು. ಇಲ್ಲಿ ಆರಂಭದಿಂದಲೂ ಕಾಂಗ್ರೆಸ್ ಮತ್ತು ಜೆಡಿಎಸ್ ನಡುವೆ ಜಿದ್ದಾಜಿದ್ದಿ ನಡೆಯುತ್ತಿತ್ತು. ಆದರೂ ಕಾಂಗ್ರೆಸ್ ಮಣಿಸಿ ಗೆಲುವಿನ ಬಾವುಟ ಹಾರಿಸಿದ ಜೆಡಿಎಸ್ ಮಂಡ್ಯವನ್ನು ಪಕ್ಷದ ಭದ್ರಕೋಟೆಯನ್ನಾಗಿ ಮಾಡಿಕೊಂಡಿತ್ತು.

 ಮೈತ್ರಿ ಸರ್ಕಾರದ ವೇಳೆ ಕಾರ್ಯಕರ್ತರ ಅಸಮಾಧಾನ

ಮೈತ್ರಿ ಸರ್ಕಾರದ ವೇಳೆ ಕಾರ್ಯಕರ್ತರ ಅಸಮಾಧಾನ

ಇಡೀ ಜಿಲ್ಲೆಯಲ್ಲಿ ಗ್ರಾಮ ಮಟ್ಟದಿಂದಲೇ ಕಾಂಗ್ರೆಸ್ ಮತ್ತು ಜೆಡಿಎಸ್ ನಡುವೆ ನೇರಾನೇರ ಸ್ಪರ್ಧೆ ಎದುರಾಗಿತ್ತು. ಕೊನೆಗೂ ಕಾಂಗ್ರೆಸ್‌ನ್ನು ಮಣಿಸಿದ ಸಂಭ್ರಮದಲ್ಲಿ ತೇಲಾಡುತ್ತಿರುವಾಗಲೇ ಕಾಂಗ್ರೆಸ್ ಮತ್ತು ಜೆಡಿಎಸ್ ಮೈತ್ರಿ ಸರ್ಕಾರವನ್ನು ಆರಂಭಿಸಿದ್ದರು. ವಿಧಾನಸೌಧದ ಮಟ್ಟದಲ್ಲಿ ನಾಯಕರು ಒಂದಾಗಿ ಆಡಳಿತ ನಡೆಸುತ್ತಿದ್ದರೂ ತಳಮಟ್ಟದಲ್ಲಿ ಎರಡು ಪಕ್ಷಗಳ ಕಾರ್ಯಕರ್ತರಲ್ಲಿ ಸಮನ್ವಯತೆ ಇರಲಿಲ್ಲ. ಜೊತೆಗೆ ಅಂದಿನ ಮುಖ್ಯಮಂತ್ರಿಯಾಗಿದ್ದ ಹೆಚ್.ಡಿ.ಕುಮಾರಸ್ವಾಮಿ ಅವರು ಮಾಡಿದ ನಿರ್ಧಾರ ಜೆಡಿಎಸ್‌ನ ಕಾರ್ಯಕರ್ತರು ತಟಸ್ಥರಾಗುವಂತೆ ಮಾಡಿತ್ತು.

ಲೋಕಸಭಾ ಚುನಾವಣೆಯಲ್ಲಿ ಸುಮಲತಾ ಅಂಬರೀಶ್ ಅವರ ವಿರುದ್ಧ ಪುತ್ರ ನಿಖಿಲ್ ಕುಮಾರಸ್ವಾಮಿ ಅವರನ್ನು ಸ್ಪರ್ಧೆಗೆ ಇಳಿಸಿದ್ದು ಮತ್ತು ಜೆಡಿಎಸ್ ನಾಯಕರು ದ್ವೇಷದ ರಾಜಕಾರಣ ಮಾಡಿದ್ದು, ಎಲ್ಲವೂ ಪಕ್ಷದ ಹಿನ್ನಡೆಗೆ ಕಾರಣವಾಗಿದೆ. ಪರಿಣಾಮ 2018ರ ನಂತರ ನಡೆದ ಚುನಾವಣೆಯನ್ನು ಗಮನಿಸಿದರೆ ಉಪಚುನಾವಣೆಯಲ್ಲಿ ಕೆ.ಆರ್.ಪೇಟೆ ಕ್ಷೇತ್ರ ಕೈಬಿಟ್ಟು ಹೋಗಿದ್ದಲ್ಲದೆ, ಎಂಲ್‌ಸಿ ಸ್ಥಾನ ಕಾಂಗ್ರೆಸ್ ಪಾಲಾಗಿದೆ.

 ಹಳೆ ಮೈಸೂರನ್ನು ಟಾರ್ಗೆಟ್ ಮಾಡಿದ ಬಿಜೆಪಿ

ಹಳೆ ಮೈಸೂರನ್ನು ಟಾರ್ಗೆಟ್ ಮಾಡಿದ ಬಿಜೆಪಿ

ಮುಂದಿನ ವಿಧಾನಸಭಾ ಚುನಾವಣೆಗೆ ಮಂಡ್ಯ ಜಿಲ್ಲೆಯಲ್ಲಿ ಕೆ.ಆರ್,ಪೇಟೆ ಕ್ಷೇತ್ರ ಹೊರತುಪಡಿಸಿ ಉಳಿದ ಎಲ್ಲ ಕ್ಷೇತ್ರಗಳಲ್ಲಿ ಹಾಲಿ ಶಾಸಕರಿಗೆ ಟಿಕೆಟ್ ನೀಡಲಾಗಿದೆ. ಈ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ಯಾವ ನಾಯಕರಿಗೆ ಟಿಕೆಟ್ ನೀಡುತ್ತಾರೆ ಎನ್ನುವುದರ ಮೇಲೆ ರಾಜಕೀಯ ಜಿದ್ದಾಜಿದ್ದಿ ಶುರುವಾಗಲಿದೆ. ಇದುವರೆಗೆ ಜೆಡಿಎಸ್ ಮತ್ತು ಕಾಂಗ್ರೆಸ್ ನಡುವೆ ಮಾತ್ರ ತೀವ್ರ ಪೈಪೋಟಿ ನಡೆಯುತ್ತಿತ್ತು. ಆದರೆ ಈ ಬಾರಿ ಬಿಜೆಪಿ ಮಂಡ್ಯವನ್ನು ಗಂಭೀರವಾಗಿ ಪರಿಗಣಿಸಿದೆ. ಈಗಾಗಲೇ ಬಿಜೆಪಿಯ ಚುನಾವಣಾ ಚಾಣಕ್ಯ ಎಂದು ಕರೆಯುವ ಅಮಿತ್ ಶಾ ಮಂಡ್ಯಕ್ಕೆ ಭೇಟಿ ನೀಡಿ ಹೋಗಿದ್ದಾರೆ.

ಬಿಜೆಪಿ ಹಳೆ ಮೈಸೂರನ್ನು ಟಾರ್ಗೆಟ್ ಮಾಡಿದ್ದು, ಬಿಜೆಪಿ ನಾಯಕರು ಇತ್ತ ಹೆಚ್ಚಿನ ನಿಗಾವಹಿಸುವ ಸಾಧ್ಯತೆಯಿದೆ. ಹೀಗಾಗಿ ಇಡೀ ಜಿಲ್ಲೆಯಲ್ಲಿ ತ್ರಿಕೋನ ಸ್ಪರ್ಧೆ ಏರ್ಪಡುವ ಲಕ್ಷಣಗಳು ಕಾಣಿಸುತ್ತಿದೆ. ಕಳೆದ ಚುನಾವಣೆಯಲ್ಲಿ ಬಿಜೆಪಿ ಜೆಡಿಎಸ್ ಬಗ್ಗೆ ಮೆಧುಧೋರಣೆ ತಳೆದಿತ್ತು. ಆದರೆ ಈ ಬಾರಿ ಆ ರೀತಿಯ ಯಾವ ಲಕ್ಷಣಗಳು ಕಾಣಿಸುತ್ತಿಲ್ಲ. ಈಗಾಗಲೇ ಮಂಡ್ಯಕ್ಕೆ ಆಗಮಿಸಿದ್ದ ಅಮಿತ್ ಶಾ ಜೆಡಿಎಸ್ ವಿರುದ್ಧ ಆರೋಪಗಳ ಸುರಿಮಳೆಗೈದು ರಾಜಕೀಯ ಜಿದ್ದಾಜಿದ್ದಿಗೆ ಮುನ್ನುಡಿ ಬರೆದು ಹೋಗಿದ್ದಾರೆ. ಚುನಾವಣೆ ಹತ್ತಿರವಾಗುತ್ತಿದ್ದಂತೆಯೇ ಬಿಜೆಪಿಯ ಘಟಾನುಘಟಿ ನಾಯಕರು ಕ್ಷೇತ್ರಗಳಲ್ಲಿ ಬೀಡು ಬಿಡುವ ಸಾಧ್ಯತೆ ಹೆಚ್ಚಾಗಿದೆ. ಹೀಗಾಗಿ ಈ ಬಾರಿಯ ಚುನಾವಣೆಯನ್ನು ಮೂರು ಪಕ್ಷಗಳು ಹಗುರವಾಗಿ ತೆಗೆದುಕೊಳ್ಳಲು ಸಾಧ್ಯವೇ ಇಲ್ಲದಂತಾಗಿದೆ.

 ಜೆಡಿಎಸ್ ಪಕ್ಷದ ಪ್ರಬಲ ಟಿಕೆಟ್ ಆಕಾಂಕ್ಷಿ ದೇವರಾಜು

ಜೆಡಿಎಸ್ ಪಕ್ಷದ ಪ್ರಬಲ ಟಿಕೆಟ್ ಆಕಾಂಕ್ಷಿ ದೇವರಾಜು

ಕೆ.ಆರ್.ಪೇಟೆ ಕ್ಷೇತ್ರದಲ್ಲಿ ಜೆಡಿಎಸ್ ನಿಂದ ಸ್ಪರ್ಧಿಸಲು ಹೆಚ್ಚಿನ ಸಂಖ್ಯೆಯಲ್ಲಿ ಆಕಾಂಕ್ಷಿಗಳಿದ್ದರು. ಇವರ ನಡುವೆ ಜೆಡಿಎಸ್ ಅಭ್ಯರ್ಥಿಯಾಗಿ ಹೆಚ್.ಟಿ.ಮಂಜು ಅವರ ಹೆಸರನ್ನು ಪ್ರಕಟಿಸಿದ್ದು ಅವರು ಈಗಾಗಲೇ ಪ್ರಚಾರವನ್ನು ಆರಂಭಿಸಿದ್ದಾರೆ. ಆದರೆ ಪಕ್ಷದ ವರಿಷ್ಟರು ನಿರ್ಧಾರವನ್ನು ಮರು ಪರಿಶೀಲಿಸುವಂತೆ ಟಿಕೆಟ್ ಆಕಾಂಕ್ಷಿಯಾಗಿದ್ದ ಟಿ.ಎ.ಪಿ.ಸಿ.ಎಂ.ಎಸ್ ಅಧ್ಯಕ್ಷ ಬಿ.ಎಲ್.ದೇವರಾಜು ಪಕ್ಷದ ವರಿಷ್ಠರನ್ನು ಒತ್ತಾಯಿಸುತ್ತಿರುವುದು ಕ್ಷೇತ್ರದಲ್ಲಿ ಸುದ್ದಿ ಮಾಡುತ್ತಿದೆ.

ಇದೀಗ ತನ್ನ ಅಳಲನ್ನು ಸಾರ್ವಜನಿಕವಾಗಿ ತೋಡಿಕೊಳ್ಳುತ್ತಿರುವ ದೇವರಾಜು ಅವರು ನಾನು ಜೆಡಿಎಸ್ ಪಕ್ಷದ ಪ್ರಬಲ ಟಿಕೆಟ್ ಆಕಾಂಕ್ಷಿ. ನನ್ನ ಜೊತೆ ಪಕ್ಷದ ಮುಖಂಡರಾದ ಬಸ್ ಕೃಷ್ಣೇಗೌಡ ಮತ್ತು ಬಸ್ ಸಂತೋಷ್‌ಕುಮಾರ್ ಕೂಡ ಆಕಾಂಕ್ಷಿಗಳಾಗಿದ್ದರು. ಕಳೆದ ಎಂಟು ತಿಂಗಳ ಹಿಂದೆ ಕೆ.ಆರ್.ಪೇಟೆ ಕ್ಷೇತ್ರದ ಅಭ್ಯರ್ಥಿ ಆಯ್ಕೆ ಸಂಬಂಧ ಪಕ್ಷದ ವರಿಷ್ಠರು ನಮ್ಮ ಜೊತೆ ಸಮಾಲೋಚನೆ ಮಾಡಿದ್ದರು. ಆ ನಂತರ ಯಾವುದೇ ಅಭಿಪ್ರಾಯವನ್ನು ಕೇಳದೆ ಹೆಚ್.ಟಿ.ಮಂಜು ಅವರನ್ನು ಅಭ್ಯರ್ಥಿಯೆಂದು ಪ್ರಕಟಿಸಿದ್ದಾರೆ. ಎಲ್ಲರ ಸಹಮತ ಪಡೆದು ಅಭ್ಯರ್ಥಿಯ ಆಯ್ಕೆ ಮಾಡಬೇಕಾಗಿತ್ತು ಎಂದು ನೋವನ್ನು ತೋಡಿಕೊಳ್ಳುತ್ತಿದ್ದಾರೆ.

 ಕರುಬ ಸಮುದಾಯದ ನಾಯಕನಿಂದ ವರಿಷ್ಠರಿಗೆ ಮನವಿ

ಕರುಬ ಸಮುದಾಯದ ನಾಯಕನಿಂದ ವರಿಷ್ಠರಿಗೆ ಮನವಿ

ನಾನು ಪಕ್ಷದ ನಿಷ್ಠಾವಂತ ಕಾರ್ಯಕರ್ತ. ಕರುಬ ಸಮುದಾಯದ ಕೆ.ಎನ್.ಕೇಂಗೇಗೌಡರಿಗೆ ಸಮಾಜವಾದಿ ಜನತಾ ಪಕ್ಷದಿಂದ ದೇವೇಗೌಡರು ಟಿಕೆಟ್ ನೀಡಿದಾಗಲೂ ನಾನು ದೇವೇಗೌಡರ ಪಕ್ಷದ ಪರವಾಗಿಯೇ ಕೆಲಸ ಮಾಡಿದ್ದೇನೆ. ಮಾಜಿ ಸ್ಪೀಕರ್ ಕೃಷ್ಣರವರು ದೇವೇಗೌಡರ ಪಾಳಯವನ್ನು ತ್ಯಜಿಸಿದಾಗಲೂ ನಾನು ಕ್ಷೇತ್ರದಲ್ಲಿ ದೇವೇಗೌಡರ ಪರವಾಗಿ ಪಕ್ಷವನ್ನು ಸಂಘಟಿಸಿದ್ದೇನೆ. ಬೂಕನಕೆರೆಯ ಬಿ.ಜವರಾಯಿಗೌಡರಿಗೆ ಪಕ್ಷದ ಟಿಕೆಟ್ ನೀಡಿದಾಗಲೂ ನಾನು ದೇವೇಗೌಡರ ಅಣತಿಯನ್ನು ಪಾಲಿಸಿದ್ದೇನೆ.

2013ರಲ್ಲಿ ಮುಂಬೈನಿಂದ ಕೆ.ಸಿ.ನಾರಾಯಣಗೌಡರನ್ನು ಕರೆತಂದು ಟಿಕೆಟ್ ನೀಡಿದಾಗಲೂ ನಾನು ಪಕ್ಷದ ಪರವಾಗಿಯೇ ಕೆಲಸ ಮಾಡಿದ್ದೇನೆ. 2018 ರಲ್ಲಿ ನನಗೆ ಬಿ.ಫಾರಂ ನೀಡಿ ನಾಮಿನೇಷನ್ ಸಲ್ಲಿಸುವ ಸಂದರ್ಭದಲ್ಲಿ ಟಿಕೆಟ್ ತಪ್ಪಿಸಿ ಕೆ.ಸಿ.ನಾರಾಯಣಗೌಡರಿಗೆ ಸಿ.ಫಾರಂ ನೀಡಿದಾಗಲೂ ನಾನು ಪಕ್ಷದ ವರಿಷ್ಠರ ವಿರುದ್ದ ಅಪಸ್ವರ ಎತ್ತಿಲ್ಲ. ನನ್ನ ಜೀವನದಲ್ಲಿ ಎಂದೂ ನಾನು ಪಕ್ಷ ವಿರೋಧಿ ಚಟುವಟಿಕೆ ಮಾಡಿಲ್ಲ. ಈಗಲೂ ಬಂಡಾಯದ ಪ್ರಶ್ನೆಯೇ ಇಲ್ಲ. ನಾನು ಪಕ್ಷದ ಹಿರಿಯ ಮುಖಂಡನಾಗಿದ್ದೇನೆ. ನನಗೆ ವಯಸ್ಸಾಗಿದೆ. ಇದು ನನ್ನ ಕೊನೆಯ ಚುನಾವಣೆ. ನನಗೆ ಟಿಕೆಟ್ ನೀಡಿ ಎನ್ನುವುದಷ್ಟೆ ಮನವಿ ಎಂದಿದ್ದಾರೆ.

ಜೆಡಿಎಸ್ ವರಿಷ್ಟರು ಸಮಸ್ಯೆ ಬಗೆಹರಿಸುತ್ತಾರಾ.?

ಜೆಡಿಎಸ್‌ ಗೆಲ್ಲಲೇ ಬೇಕೆಂದು ಪಣತೊಟ್ಟಿರುವ ಕ್ಷೇತ್ರದಲ್ಲಿಯೇ ಈಗ ಪಕ್ಷದೊಳಗೆ ಭಿನ್ನಾಭಿಪ್ರಾಯಗಳು ಎದ್ದಿರುವುದು ವಿರೋಧಿ ಪಕ್ಷಗಳಾಗಿರುವ ಕಾಂಗ್ರೆಸ್ ಮತ್ತು ಬಿಜೆಪಿಗೆ ಖುಷಿ ತಂದಿದೆ. ಈ ಸಮಸ್ಯೆಯನ್ನು ಜೆಡಿಎಸ್ ಪಕ್ಷದ ವರಿಷ್ಟರು ಯಾವ ರೀತಿಯಲ್ಲಿ ಇತ್ಯರ್ಥಗೊಳಿಸಿ ಚುನಾವಣೆಗೆ ಸಿದ್ದಗೊಳಿಸುತ್ತಾರೆ ಎಂಬುದನ್ನು ಕಾದು ನೋಡಬೇಕಿದೆ.

English summary
JDS ticket aspirants misunderstanding in Mandya KR Pete constituency.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X