Mandya: ಕೆರಗೋಡು ಹನುಮ ಧ್ವಜ ವಿವಾದದ ಬಳಿಕ ಧ್ವಜಸ್ತಂಭವನ್ನೇ ತೆರವು ಮಾಡಲು ಆದೇಶ
ಮಂಡ್ಯ : ತಾಲೂಕಿನ ಕೆರಗೋಡು ಗ್ರಾಮದಲ್ಲಿ ನಿರ್ಮಿಸಲಾಗಿದ್ದ ವಿವಾದಿತ ಧ್ವಜಸ್ತಂಭವನ್ನೇ ತೆರವುಗೊಳಿಸುವಂತೆ ತಾಲೂಕು ಪಂಚಾಯಿತಿ ಆಡಳಿತಾಧಿಕಾರಿ ಆದೇಶ ನೀಡಿದ್ದಾರೆ. ಈ ಮೂಲಕ ಮತ್ತೊಂದು ವಿವಾದ ಆರಂಭವಾಗುವ ಸಾಧ್ಯತೆ ಇದೆ.
ಗ್ರಾಮದ ವಿವಾದಿತ ಸ್ಥಳದಲ್ಲಿರುವ ಧ್ವಜಸ್ತಂಭವನ್ನು ತೆರವುಗೊಳಿಸಿ ಗ್ರಾಮ ಪಂಚಾಯಿತಿ ಆಸ್ತಿಯನ್ನು ಸುಪರ್ದಿಗೆ ಪಡೆದು ಯತಾಸ್ಥಿತಿ ಕಾಪಾಡಲು ಕ್ರಮ ವಹಿಸುವಂತೆ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗೆ ತಾಲೂಕು ಪಂಚಾಯಿತಿ ಆಡಳಿತಾಧಿಕಾರಿ ಎಂ. ಬಾಬು ಅವರು ಸೂಚನೆ ನೀಡಿ ಆದೇಶ ಹೊರಡಿಸಿದ್ದಾರೆ.

ಧ್ವಜಸ್ತಂಭದಲ್ಲಿ ರಾಷ್ಟ್ರಧ್ವಜ ಹಾಗೂ ಕರ್ನಾಟಕದ ಕನ್ನಡ ಬಾವುಟವನ್ನು ಹಾರಿಸುವುದಕ್ಕೆ ಮಾತ್ರ ಅವಕಾಶವಿದ್ದು, ಬೇರೆ ಯಾವುದೇ ಧಾರ್ಮಿಕ/ರಾಜಕೀಯ ಪಕ್ಷದ ಭಾವುಟವನ್ನು ಹಾರಿಸುವಂತಿಲ್ಲ. ಧ್ವಜಾರೋಹಣ ಮಾಡುವ ಸಮಯ ಬೆಳಗ್ಗೆ 7 ರಿಂದ 8 ರಿಂದ ಬಳಿಕ ಸಂಜೆ 5.30 ರಿಂದ 5.45ರೊಳಗೆ ಇಳಿಸಬೇಕು ಎಂದು ಷರತ್ತು ವಿಧಿಸಲಾಗಿತ್ತು.
ಕೇಸರಿ ಧ್ವಜ ಹಾರಿಸಿದ ಬಳಿಕ ವಿವಾದ
ಧ್ವಜಾರೋಹಣಕ್ಕೆ ಸಂಬಂಧಿಸಿದಂತೆ ಸರ್ಕಾರ ಮಾರ್ಪಾಡು ಮಾಡುವ ಸುತ್ತೋಲೆಗಳಿಗೆ ಬದ್ಧರಾಗತಕ್ಕದ್ದು. ಯಾವುದೇ ಗಲಭೆಗಳಿಗೆ ಅವಕಾಶ ಕೊಡಬಾರದು. ಧ್ವಜಾರೋಹಣ ಮಾಡುವ 6 ರಿಂದ 7 ದಿನಗಳ ಮುಂಚಿತವಾಗಿ ಗ್ರಾಮ ಪಂಚಾಯಿತಿ ಹಾಗೂ ಕೆರಗೋಡು ಪೊಲೀಸ್ ಠಾಣೆಗೆ ಮಾಹಿತಿ ನೀಡಬೇಕು ಸೂಚನೆ ನೀಡಲಾಗಿತ್ತು. ಆದರೆ ಗೌರಿಶಂಕರ ಸೇವಾಟ್ರಸ್ಟ್‌ನವರು ಷರತ್ತುಗಳನ್ನು ಉಲ್ಲಂಘಿಸಿ ಧ್ವಜಸ್ತಂಭದಲ್ಲಿ ಕೇಸರಿ ಧ್ವಜವನ್ನು ಹಾರಿಸಿರುವುದು ನಿಯಮಬಾಹಿರವಾಗಿರುತ್ತದೆ ಎಂದು ಆದೇಶದಲ್ಲಿ ತಿಳಿಸಿದ್ದಾರೆ.
ಷರತ್ತುಗಳನ್ನು ಉಲ್ಲಂಘಿಸಿರುವ ಬಗ್ಗೆ ಸಂಬಂಧಿಸಿದವರನ್ನು ಕರೆಯಿಸಿ ತಿಳುವಳಿಕೆ ಹೇಳಿದರೂ ಸಹ ಕೇಸರಿ ಧ್ವಜವನ್ನು ಯತಾಸ್ಥಿತಿಯಲ್ಲಿ ಹಾರಿಸಲಾಗಿದೆ ಎಂಬ ಅಂಶವನ್ನು ತಿಳಿಸಲಾಗಿತ್ತು. ಆದರೆ ಅವರು ಪಂಚಾಯತ್ ರಾಜ್ ಅಧಿನಿಯಮ 1993ರ ನಿಯಮಗಳನ್ನು ಉಲ್ಲಂಘಿಸಿರುವುದರಿಂದ ಅಧಿನಿಯಮ 57ರ ಪ್ರಕರಣ 237ನೇ ಪ್ರಕರಣದ ಅಡಿಯಲ್ಲಿ ಕ್ರಮ ತೆಗೆದುಕೊಳ್ಳುವುದಕ್ಕಾಗಿ ತಾಲೂಕು ಪಂಚಾಯಿತಿ ಆಡಳಿತಾಧಿಕಾರಿಯಾದ ನನಗೆ ಕಾರ್ಯನಿರ್ವಾಹಕ ಅಧಿಕಾರಿಯವರಿಗೆ ಶಿಫಾರಸ್ಸು ಮಾಡಿದ್ದರ ಜೊತಗೆ ಸಂಬಂಧಿಸಿದ ಗ್ರಾ.ಪಂ. ಪಿಡಿಓಗೂ ಸಹ ಧ್ವಜಸ್ತಂಭ ತೆರವುಗೊಳಿಸಲು ಸೂಚನೆ ನೀಡಲಾಗಿದೆ ಎಂದು ತಾ.ಪಂ. ಆಡಳಿತಾಧಿಕಾರಿ ಎಂ. ಬಾಬು ಆದೇಶದಲ್ಲಿ ತಿಳಿಸಿದ್ದಾರೆ.












Click it and Unblock the Notifications