ದಳಪತಿಗಳ ಕೋಟೆ ಮಂಡ್ಯಕ್ಕೆ ಲಗ್ಗೆಯಿಡಲು "ಕೈ", "ಕಮಲ" ಕಸರತ್ತು, ಭದ್ರಕೋಟೆ ಕಾಪಾಡಿಕೊಳ್ಳುವತ್ತ ಜೆಡಿಎಸ್ ಚಿತ್ತ
ಮಂಡ್ಯ, ಏಪ್ರಿಲ್, 10: ಜಿಲ್ಲೆಯಲ್ಲಿ ಚುನಾವಣಾ ಕಾವು ಹೆಚ್ಚಾಗುತ್ತಿದ್ದು, ದಳಪತಿಗಳ ಭದ್ರಕೋಟೆಗೆ ಲಗ್ಗೆಯಿಡಲು ಕಾಂಗ್ರೆಸ್ ಮತ್ತು ಜೆಡಿಎಸ್ ತಯಾರಿ ನಡೆಸುತ್ತಿದ್ದರೆ, ಜೆಡಿಎಸ್ ತನ್ನ ಅಸ್ತಿತ್ವವನ್ನು ಉಳಿಸಿಕೊಳ್ಳಲು ಹೋರಾಟಕ್ಕಿಳಿದಿದೆ. ಏಳು ವಿಧಾನಸಭಾ ಕ್ಷೇತ್ರಗಳ ಪೈಕಿ ಕೆ.ಆರ್.ಪೇಟೆಗೆ ಹೊಸ ಮುಖವನ್ನು ಕಣಕ್ಕಿಳಿಸಿರುವುದನ್ನು ಹೊರತುಪಡಿಸಿದರೆ ಉಳಿದಂತೆ ಎಲ್ಲಾ ಕ್ಷೇತ್ರಗಳಲ್ಲಿ ಹಾಲಿ ಶಾಸಕರೇ ಮತ್ತೊಮ್ಮೆ ಅದೃಷ್ಟ ಪರೀಕ್ಷೆಗೆ ಮುಂದಾಗಿದ್ದಾರೆ.
ಹಾಗೆ ನೋಡಿದರೆ ಮಂಡ್ಯ ಜಿಲ್ಲೆ ಜೆಡಿಎಸ್ ಪಕ್ಷದ ಭದ್ರಕೋಟೆ ಎನ್ನುವುದನ್ನು ತಳ್ಳಿಹಾಕುವಂತಿಲ್ಲ. ಈ ಹಿಂದೆ ಕಾಂಗ್ರೆಸ್ ಅಧಿಪತ್ಯ ಸಾಧಿಸಿತ್ತಾದರೂ, 2018ರ ಚುನಾವಣೆಯಲ್ಲಿ ಎಚ್.ಡಿ.ಕುಮಾರಸ್ವಾಮಿ ಅವರ ನಿರಂತರ ಶ್ರಮ ಮತ್ತು ಬರಗಾಲದಲ್ಲಿ ರೈತರಿಗೆ ಒತ್ತಾಸೆಯಾಗಿ ನಿಂತಿದ್ದು, ಸಾಲಬಾಧೆಯಿಂದ ಆತ್ಮಹತ್ಯೆಗೆ ಶರಣಾದ ರೈತರ ನೆರವಿಗೆ ಬಂದು ವೈಯಕ್ತಿಕವಾಗಿ ಪರಿಹಾರವನ್ನು ಒದಗಿಸಿದ್ದರು. ಮತ್ತು ಕಷ್ಟದಲ್ಲಿಯೂ ಜೊತೆಗಿದ್ದ ಕಾರಣದಿಂದ ಮಂಡ್ಯದ ಜನ ಜೆಡಿಎಸ್‌ನತ್ತ ಒಲವು ತೋರುವಂತಾಯಿತು. ಪರಿಣಾಮವಾಗಿ ಏಳಕ್ಕೆ ಏಳು ಸ್ಥಾನವನ್ನು ಜೆಡಿಎಸ್ ಗೆಲ್ಲುವಂತಾಯಿತು.

ಇನ್ನು 2018ರ ಚುನಾವಣೆ ವೇಳೆಗೆ ಮಂಡ್ಯದಲ್ಲಿ ರಾಜಕೀಯವಾಗಿ ಒಂದಷ್ಟು ಬೆಳವಣಿಗೆಗಳು ನಡೆದಿದ್ದವು. ಜೆಡಿಎಸ್‌ನಲ್ಲಿದ್ದ ಘಟಾನುಘಟಿ ನಾಯಕರು ಅಂದು ಅಧಿಕಾರದಲ್ಲಿದ್ದ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾಗಿದ್ದರು. ಹೀಗಾಗಿ ಮಂಡ್ಯದಲ್ಲಿ ಮತ್ತೆ ಕಾಂಗ್ರೆಸ್ ಜಯಭೇರಿ ಬಾರಿಸುತ್ತದೆ ಎಂಬ ನಂಬಿಕೆಯಿತ್ತು. ಆದರೆ ಜೆಡಿಎಸ್‌ನಿಂದ ಕಾಂಗ್ರೆಸ್‌ಗೆ ವಲಸೆ ಹೋದ ನಾಯಕರನ್ನೇ ಜಿಲ್ಲೆಯ ಜನತೆ ಮನೆಗೆ ಕಳುಹಿಸಿದ್ದು ಇತಿಹಾಸವಾಗಿದೆ.
ಕಾಂಗ್ರೆಸ್‌ನ ಹೀನಾಯ ಸೋಲಿಗೆ ಕಾರಣವೇನು?
ಹಾಗಾದರೆ ಕಾಂಗ್ರೆಸ್ 2018ರ ಚುನಾವಣೆಯಲ್ಲಿ ಅಷ್ಟೊಂದು ಹೀನಾಯವಾಗಿ ಸೋಲಲು ಕಾರಣಗಳು ಹಲವು ಸಿಗಬಹುದು. ಆದರೂ ಪ್ರಮುಖ ಕಾರಣ ಅಂಬರೀಶ್ ಅವರನ್ನು ಅಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸಚಿವ ಸಂಪುಟದಿಂದ ಕೈಬಿಟ್ಟಿದ್ದಾಗಿತ್ತು.

ಆಗ ಮಂಡ್ಯದ ಜನ ಅಂಬರೀಶ್ ಅವರನ್ನು ಸಚಿವ ಸ್ಥಾನದಿಂದ ಹೊರಗೆ ಕಳುಹಿಸಿದ್ದನ್ನು ಗಂಭೀರವಾಗಿ ಪರಿಗಣಿಸಿದ್ದರು. ಅದನ್ನು ಮಂಡ್ಯಕ್ಕೆ ಮಾಡಿದ ಅವಮಾನ ಎಂದೇ ನಂಬಿದ್ದರು. ಸಚಿವ ಸಂಪುಟದಿಂದ ಹೊರಬಿದ್ದ ನಂತರ ಅಂಬರೀಶ್ ಅವರು ಕೂಡ ತಟಸ್ಥರಾದರು. ಅಷ್ಟೇ ಅಲ್ಲದೆ 2018ರ ಚುನಾವಣೆಯಿಂದ ಅವರು ದೂರ ಉಳಿದರು. ಇದರ ಪರಿಣಾಮ ಮಂಡ್ಯದಲ್ಲಿ ಕಾಂಗ್ರೆಸ್ ಮಕಾಡೆ ಮಲಗುವಂತಾಯಿತು.
ಬಿಜೆಪಿಯಿಂದ ಮತ ಸೃಷ್ಟಿ ಸಾಧ್ಯನಾ?
ಅಂದಿಗೂ, ಇಂದಿಗೂ ಪಕ್ಷಗಳು ಯಾವುದೇ ಇರಲಿ, ಅದರಲ್ಲಿ ಅಂಬರೀಶ್ ಅವರ ಅಭಿಮಾನಿಗಳು ಇದ್ದಾರೆ ಎನ್ನುವುದು ಕಳೆದ ವಿಧಾನಸಭಾ ಚುನಾವಣೆ ಮತ್ತು ನಂತರ ನಡೆದ ಲೋಕಸಭಾ ಚುನಾವಣೆಯಲ್ಲಿಯೂ ಸಾಬೀತಾಗಿದೆ. ಈಗ ಅಂಬರೀಶ್ ಅವರ ಧರ್ಮಪತ್ನಿ ಸಂಸದೆ ಸುಮಲತಾ ಅವರು ಬಿಜೆಪಿಗೆ ಬೆಂಬಲ ನೀಡಿದ್ದಾರೆ. ಹೀಗಾಗಿ ಮಂಡ್ಯ ಅಂದರೆ ಜೆಡಿಎಸ್ ವರ್ಸಸ್ ಕಾಂಗ್ರೆಸ್ ಎನ್ನುವುದು ಬದಲಾಗುವ ಸಾಧ್ಯತೆಯಿದೆ.
ರಾಜಕೀಯ ಇತಿಹಾಸದಲ್ಲಿ ಈಗಾಗಲೇ ಮಂಡ್ಯದಲ್ಲಿ ಖಾತೆ ತೆರೆದಿರುವ ಬಿಜೆಪಿ ನಿಧಾನವಾಗಿ ಮಂಡ್ಯದಲ್ಲಿ ನೆಲೆಯೂರಲು ಪ್ರಯತ್ನಿಸುತ್ತಿದೆ. ಇದರ ಪರಿಣಾಮ ಈ ಬಾರಿಯ ವಿಧಾನಸಭಾ ಚುನಾವಣೆ ಹಿಂದಿನಷ್ಟು ಸುಲಭವಾಗಿಲ್ಲ. ಒಂದಷ್ಟು ಮತಗಳನ್ನು ಕಸಿದರೂ ಅಚ್ಚರಿಯಿಲ್ಲ. ಹಾಗಾದರೆ ಬಿಜೆಪಿ ಕಸಿಯಲಿರುವ ಮತಗಳು ಯಾವುವು ಎಂಬುದೇ ಇದೀಗ ಅಚ್ಚರಿಯ ಪ್ರಶ್ನೆ ಆಗಿದೆ.
ಈ ಬಾರಿ ತೀವ್ರ ಪೈಪೋಟಿ ಖಚಿತ
ಕ್ಷೇತ್ರದಲ್ಲಿ ಮತಗಳು ಬೇರೆ ಬೇರೆ ಕಾರಣಕ್ಕೆ ಹಂಚಿಕೆಯಾಗುತ್ತವೆ. ಮತದಾರರ ಪೈಕಿ ವ್ಯಕ್ತಿ, ಜಾತಿ, ಪಕ್ಷ ಹೀಗೆ ಅಳೆದು ತೂಗಿ ಮತ ಹಾಕುವವರು ಇದ್ದಾರೆ. ಆದರೆ ಯಾವುದೇ ಅಭ್ಯರ್ಥಿ ನಿಂತರೂ ಅಲ್ಲಿ ಕನಿಷ್ಠ ಮತಗಳು ಬಂದೇ ಬರುತ್ತವೆ. ಇದು ಸಾಧ‍್ಯವಾಗಬೇಕಾದರೆ ಪಕ್ಷ ತಳಮಟ್ಟದಿಂದ ಪಕ್ಷ ಸಂಘಟನೆ ಆಗಬೇಕಿದೆ.
2018ರಲ್ಲಿ ಅಂತಹದೊಂದು ವಾತಾವರಣವನ್ನು ಜೆಡಿಎಸ್ ಸೃಷ್ಟಿ ಮಾಡಿತ್ತು. ಆದರೆ ಈ ಬಾರಿ ಅದು ಮುಂದುವರೆಯುತ್ತಾ? ಹಾಗೂ ಮತದಾರರು ಯಾರ ಪರ ಒಲವು ತೋರುತ್ತಾರೆ ಎಂಬುದನ್ನು ಸುಲಭವಾಗಿ ಈಗಲೇ ಹೇಳಲು ಸಾಧ್ಯವಿಲ್ಲದಂತಾಗಿದೆ. ಆದರೆ ಜೆಡಿಎಸ್ ಮತ್ತು ಕಾಂಗ್ರೆಸ್ ನಡುವೆ ಬಿಜೆಪಿಯೂ ಸ್ಪರ್ಧೆ ನೀಡಲಿರುವುದರಿಂದ ಒಂದಷ್ಟು ಕ್ಷೇತ್ರಗಳಲ್ಲಿ ತೀವ್ರ ಪೈಪೋಟಿ ಏರ್ಪಡುವ ಸಾಧ್ಯತೆ ಹೆಚ್ಚಾಗಿದೆ ಎನ್ನುವ ಮಾತುಗಳು ಕೇಳಿಬರುತ್ತಿವೆ.
ಜಿದ್ದಾ ಜಿದ್ದಿಗೆ ಅಖಾಡ ತಯಾರಿ
ಜೆಡಿಎಸ್‌ನ ಭದ್ರಕೋಟೆ ಎಂಬ ಹಣೆಪಟ್ಟಿಯನ್ನು ಕಿತ್ತು ಹಾಕಿ ಪ್ರಾಬಲ್ಯ ಸಾಧಿಸಲು ಕಾಂಗ್ರೆಸ್ ನಾಯಕರು ಮುಂದಾಗಿದ್ದರೆ, ಸಂಸದೆ ಸುಮಲತಾ ಮತ್ತು ಸಚಿವ ನಾರಾಯಣ ಗೌಡರು ಮತ್ತು ಇತ್ತೀಚೆಗಷ್ಟೇ ಪಕ್ಷ ಸೇರಿದ ಎಲ್.ಆರ್.ಶಿವರಾಮೇಗೌಡರು ಸೇರಿದಂತೆ ಒಂದಷ್ಟು ನಾಯಕರನ್ನಿಟ್ಟುಕೊಂಡು ಮಂಡ್ಯ ರಾಜಕೀಯದಲ್ಲಿ ಹೊಸ ಇತಿಹಾಸ ಸೃಷ್ಟಿ ಮಾಡುವ ಕನಸು ಬಿಜೆಪಿಯದ್ದಾಗಿದೆ.
ಬಿಜೆಪಿಯಿಂದ ಯಾವ ಕ್ಷೇತ್ರಕ್ಕೆ ಯಾರು ಕಣಕ್ಕಿಳಿಯುತ್ತಾರೆ? ಯಾವ ನಾಯಕರಿಗೆ ಮಣೆ ಹಾಕಲಾಗಿದೆ ಎಂಬುದರ ಮೇಲೆ ಮುಂದಿನ ಜಿದ್ದಾಜಿದ್ದಿಗೆ ಅಖಾಡ ತಯಾರಾಗಲಿದೆ. ಒಟ್ಟಾರೆಯಾಗಿ ಮಂಡ್ಯದ ಮತದಾರರು ಯಾರನ್ನು ಬೆಂಬಲಿಸುತ್ತಾರೆ ಎಂಬುದರ ಮೇಲೆ ಮೂರು ಪಕ್ಷಗಳ ಭವಿಷ್ಯ ನಿಂತಿದೆ. ಜೊತೆಗೆ ಮೂರು ಪಕ್ಷಗಳ ಪೈಕಿ ಪ್ರಾಬಲ್ಯ ಸಾಧಿಸುವವರು ಯಾರು ಎಂಬುದು ಪ್ರಶ್ನೆಯಾಗಿಯೇ ಉಳಿದಿದೆ. ನಮ್ಮ ಎಲ್ಲ ಪ್ರಶ್ನೆಗಳಿಗೆ ಇನ್ನು ಒಂದು ತಿಂಗಳೊಳಗೆ ಉತ್ತರ ಸಿಗಲಿದೆ. ಅಲ್ಲಿಯವರೆಗೂ ಕಾದುನೋಡಬೇಕಿದೆ ಅಷ್ಟೇ.












Click it and Unblock the Notifications