Get Updates
Get notified of breaking news, exclusive insights, and must-see stories!

ಕೆ.ಆರ್.ಪೇಟೆಯಲ್ಲಿ ಸಿದ್ಧವಾಯ್ತು ಚುನಾವಣಾ ಅಖಾಡ: ಗೆಲುವು ಯಾರಿಗೆ?

ಮಂಡ್ಯ, ಏಪ್ರಿಲ್‌ 8: ಜಿಲ್ಲೆಯ ಮಟ್ಟಿಗೆ ಕೆ.ಆರ್.ಪೇಟೆ ವಿಧಾನಸಭಾ ಕ್ಷೇತ್ರ ಹೆಚ್ಚು ಸುದ್ದಿಗೆ ಗ್ರಾಸವಾಗಿತ್ತು. ಇಲ್ಲಿನ ಹಾಲಿ ಶಾಸಕ, ಸಚಿವರೂ ಆಗಿದ್ದ ಡಾ.ನಾರಾಯಣಗೌಡ ಬಿಜೆಪಿ ತೊರೆದು ಕೈ ಹಿಡಿಯುತ್ತಾರೆಂಬ ಸುದ್ದಿ ಬಹಳ ದಿನಗಳ ಕಾಲ ಚರ್ಚೆಯಲ್ಲಿತ್ತು. ಆದರೀಗ ಕಾಂಗ್ರೆಸ್ ಮತ್ತು ಜೆಡಿಎಸ್ ತಮ್ಮ ಅಭ್ಯರ್ಥಿಗಳನ್ನು ಘೋಷಿಸಿರುವ ಕಾರಣ ನಾರಾಯಣ ಗೌಡರು ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿಯಾಗಿಯೇ ಉಳಿಯುತ್ತಾರೆ ಎಂಬುದು ಖಾತರಿಯಾಗಿದೆ.

ಬಿಜೆಪಿ ವಿಧಾನಸಭಾ ಚುನಾವಣೆಗೆ ಸಂಬಂಧಿಸಿದಂತೆ ಇದುವರೆಗೆ ಯಾವುದೇ ಅಭ್ಯರ್ಥಿಗಳನ್ನು ಘೋಷಣೆ ಮಾಡಿಲ್ಲವಾದರೂ ಡಾ.ನಾರಾಯಣಗೌಡರು ಬಿಜೆಪಿಯ ಅಭ್ಯರ್ಥಿ ಎನ್ನುವುದು ಖಚಿತವಾಗಿದೆ. ಅವರನ್ನು ಹೊರತುಪಡಿಸಿ ಕ್ಷೇತ್ರದಲ್ಲಿ ಪ್ರಭಾವಿ ನಾಯಕರು ಬಿಜೆಪಿಯಲ್ಲಿಲ್ಲ. ಮತ್ತು ಡಾ.ನಾರಾಯಣಗೌಡರಿಗೆ ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷದ ಬಾಗಿಲು ಮುಚ್ಚಿರುವುದರಿಂದ ಬಿಜೆಪಿಯಲ್ಲಿ ಉಳಿಯುವುದು ಅನಿವಾರ್ಯವಾಗಿದೆ.

Karnataka Election: Who Will Win In Mandya KR Pete

ಕ್ಷೇತ್ರದ ಸದ್ಯದ ರಾಜಕೀಯ ವಾತಾವರಣವನ್ನು ಗಮನಿಸಿದರೆ ಕಾಂಗ್ರೆಸ್, ಜೆಡಿಎಸ್ ತನ್ನ ಅಭ್ಯರ್ಥಿಗಳನ್ನು ಘೋಷಿಸಿದ ಬಳಿಕ ಕ್ಷೇತ್ರದಲ್ಲಿ ಹೈವೋಲ್ಟೇಜ್ ಬಂದಿರುವುದಂತು ನಿಜ. ಹೀಗಾಗಿ ಕ್ಷೇತ್ರದಲ್ಲಿ ಜಿದ್ದಾಜಿದ್ದಿ ಏರ್ಪಡುವ ಎಲ್ಲ ಲಕ್ಷಣಗಳು ಕಂಡು ಬಂದಿವೆ. ಅಭ್ಯರ್ಥಿಗಳು ಮೂರು ಪಕ್ಷಗಳಲ್ಲಿದ್ದರೂ ಅವರೆಲ್ಲರೂ ಮೂಲವಾಗಿ ಜನತಾ ಪರಿವಾರದವರಾಗಿದ್ದು, ಗೆಲುವಿಗಾಗಿ ಪರಸ್ಪರ ಹೋರಾಟಕ್ಕಿಳಿದಿದ್ದಾರೆ.

ಅದೃಷ್ಟ ಪರೀಕ್ಷೆಗಿಳಿದ ಅಭ್ಯರ್ಥಿಗಳು

ಅಭ್ಯರ್ಥಿಗಳ ಅಧಿಕೃತ ಘೋಷಣೆಯಾಗದಿದ್ದರೂ ಡಾ.ನಾರಾಯಣಗೌಡ ಅವರು ಬಿಜೆಪಿ ಪಕ್ಷದ ಅಭ್ಯರ್ಥಿ ಎನ್ನುವುದರಲ್ಲಿ ಎರಡು ಮಾತಿಲ್ಲ. ಹೀಗಾಗಿ ಅವರು ಮತ್ತೊಮ್ಮೆ ಬಿಜೆಪಿ ಪಕ್ಷದಿಂದಲೇ ಅದೃಷ್ಠ ಪರೀಕ್ಷೆಗೆ ತಯಾರಾಗಿದ್ದಾರೆ. ಕೆಲವು ಸಮಯಗಳ ಹಿಂದೆಯೇ ಜೆಡಿಎಸ್ ಅಧಿಕೃತ ಅಭ್ಯರ್ಥಿಯನ್ನು ಘೋಷಣೆ ಮಾಡಿರುವುದರಿಂದ ಅಭ್ಯರ್ಥಿ ಹೆಚ್.ಟಿ.ಮಂಜು ಅವರು ಈಗಾಗಲೇ ತಾಲೂಕಿನಾದ್ಯಂತ ಪ್ರತೀ ಗ್ರಾಮಗಳಿಗೆ ತೆರಳಿ ಮತದಾರರ ಮನವೊಲಿಸುವ ಪ್ರಯತ್ನ ಮಾಡುತ್ತಿದ್ದಾರೆ. ಇವರ ಗೆಲುವಿಗೆ ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ನಾಮಬಲವೇ ಶ್ರೀರಕ್ಷೆಯಾಗಿದ್ದು, ಪಂಚರತ್ನ ಕಾರ್ಯಕ್ರಮಗಳು ಅವರ ಕೈಹಿಡಿಯುತ್ತಾ ಎಂಬುದನ್ನು ಕಾದು ನೋಡಬೇಕಿದೆ.

ಇವರಿಗೆ ಆರಂಭದಲ್ಲಿ ಜೆಡಿಎಸ್ ನ ಮತ್ತೊಬ್ಬ ಆಕಾಂಕ್ಷಿಯಾಗಿದ್ದ ಬಿ.ಎಲ್.ದೇವರಾಜು ಅವರು ತಮ್ಮ ಆಕ್ರೋಶವನ್ನು ಬಹಿರಂಗವಾಗಿಯೇ ಹೊರಹಾಕಿದ್ದರಲ್ಲದೆ, ಜೆಡಿಎಸ್ ನ ರಾಜ್ಯ ನಾಯಕರ ಧೋರಣೆ ಖಂಡಿಸಿ ಪಕ್ಷದಿಂದ ಹೊರ ನಡೆದಿದ್ದರು. ಅವರನ್ನು ಮನವೊಲಿಸುವ ಕೆಲಸವನ್ನು ಜೆಡಿಎಸ್ ನ ಯಾವ ನಾಯಕರೂ ಮಾಡಲಿಲ್ಲ. ಆದರೆ ಜೆಡಿಎಸ್ ನಲ್ಲಿದ್ದ ಒಳಜಗಳವನ್ನು ಕಾಂಗ್ರೆಸ್ ಬಳಸಿಕೊಂಡಿದ್ದು, ಜೆಡಿಎಸ್ ಬಂಡಾಯ ಅಭ್ಯರ್ಥಿ ಬಿ.ಎಲ್.ದೇವರಾಜ್ ಅವರನ್ನು ಪಕ್ಷಕ್ಕೆ ಸೇರಿಸಿಕೊಂಡು ಟಿಕೆಟ್ ಕೂಡ ನೀಡಿದೆ. ಇದರಿಂದ ಕೆ.ಆರ್.ಪೇಟೆ ಕ್ಷೇತ್ರದ ಮೂಲ ಕಾಂಗ್ರೆಸ್ಸಿಗರು ಅಸಮಾಧಾನಗೊಂಡಿದ್ದಾರೆ ಎನ್ನುವುದನ್ನು ಪ್ರತ್ಯೇಕವಾಗಿ ಹೇಳಬೇಕಾಗಿಲ್ಲ.

Karnataka Election: Who Will Win In Mandya KR Pete

ನಾಲ್ಕು ದಶಕಗಳ ಸಂಬಂಧ ಕಳೆದುಕೊಂಡ ದೇವರಾಜು

ಅಂದು ಜೆಡಿಎಸ್ ಪಕ್ಷದ ಟಿಕೆಟ್ ವಂಚಿತರಾಗಿ ಇಂದು ಕಾಂಗ್ರೆಸ್ ನ ಅಭ್ಯರ್ಥಿಯಾಗಿರುವ ಹಿರಿಯ ರಾಜಕಾರಣಿ ದೇವರಾಜು ಅವರು 40ವರ್ಷಗಳ ಜೆಡಿಎಸ್ ಪಕ್ಷದೊಂದಿಗಿನ ಸಂಬಂಧವನ್ನು ಕಡಿದುಕೊಂಡು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾಗಿ ಕೇವಲ 15 ದಿನಕ್ಕೆ ಕಾಂಗ್ರೆಸ್ ಅಭ್ಯರ್ಥಿಯಾಗಿ ಟಿಕೆಟ್ ಪಡೆದಿರುವುದು ಕ್ಷೇತ್ರದಲ್ಲಿ ಸಂಚಲನ ಮೂಡಿಸಿದೆ.

ಆದರೆ ಈ ಬಾರಿ ಅಭ್ಯರ್ಥಿಯಾಗ ಬೇಕೆಂದು ಪಕ್ಷಕ್ಕೆ 2ಲಕ್ಷ ರೂ ಠೇವಣಿಯೊಂದಿಗೆ ಅರ್ಜಿ ಸಲ್ಲಿಸಿದ್ದ ಮಾಜಿಶಾಸಕರಾದ ಕೆ.ಬಿ.ಚಂದ್ರಶೇಖರ್, ಬಿ.ಪ್ರಕಾಶ್, ವಿಜಯರಾಮೇಗೌಡ, ಮತ್ತಿಘಟ್ಟ ಕೃಷ್ಣಮೂರ್ತಿ, ಬಿ.ನಾಗೇಂದ್ರಕುಮಾರ್, ಕಿಕ್ಕೇರಿ ಸುರೇಶ್ ಅವರು ತಮಗಾದ ಆಘಾತದಿಂದ ಹೊರ ಬರದ ಪರಿಸ್ಥಿತಿಯಲ್ಲಿದ್ದಾರೆ.

ಕಾಂಗ್ರೆಸ್ ಪಕ್ಷಕ್ಕಾಗಿ ಹಲವು ವರ್ಷಗಳಿಂದ ಸೇವೆ ಮಾಡುತ್ತಾ ಬಂದಿರುವ ನಾಯಕರಿಗೆ ಹೊರಗಿನ ಅಭ್ಯರ್ಥಿಗೆ ಮಣೆ ಹಾಕಿರುವುದು ಅಸಮಾಧಾನವನ್ನು ತಂದಿದೆ. ಅದರಲ್ಲೂ ಮಾಜಿ ಶಾಸಕ ಕೆ.ಬಿ.ಚಂದ್ರಶೇಖರ್ ಅವರಿಗೆ ಇದೊಂದು ಭಾರೀ ಆಘಾತ ಎಂದರೆ ತಪ್ಪಾಗಲಾರದು. ಇದುವರೆಗೆ ಜೆಡಿಎಸ್ ನಲ್ಲಿದ್ದು ಈಗ ಕಾಂಗ್ರೆಸ್ ಅಭ್ಯರ್ಥಿಯಾಗಿರುವ ದೇವರಾಜ್ ಅವರು ಕ್ಷೇತ್ರದ ಕಾಂಗ್ರೆಸ್ ನಾಯಕರನ್ನು ಒಟ್ಟಾಗಿ ತೆಗೆದುಕೊಂಡು ಹೋಗಿ ಗೆಲುವು ಸಾಧಿಸುವುದು ಸವಾಲ್ ಆಗಿದೆ.

ಅನುಕಂಪ ಮತವಾಗಿ ಪರಿವರ್ತನೆಯಾಗುತ್ತಾ?

ಆದರೂ ಜೆಡಿಎಸ್ ಟಿಕೆಟ್ ವಂಚಿತರಾಗಿರುವ ದೇವರಾಜು ಅವರು ಹಿರಿಯ ರಾಜಕಾರಣಿ, ಸಹಕಾರ ಕ್ಷೇತ್ರದ ದಿಗ್ಗಜ, ದಕ್ಷ ಆಡಳಿತಗಾರ ಎಂಬ ಹೆಸರಿದೆ. ಹೀಗಾಗಿ ಅವರ ಪರವಾಗಿ ಕ್ಷೇತ್ರದಲ್ಲಿ ಅನುಕಂಪವಿದೆ. ತಮ್ಮ ಹೆಸರನ್ನು ಕೆಡೆಸಿಕೊಳ್ಳದೇ ಪ್ರಾಮಾಣಿಕ ರಾಜಕಾರಣಿ ಎಂಬ ಹೆಸರನ್ನು ಗಳಿಸಿದ್ದಾರೆ. ಈ ಅನುಕಂಪವೇ ಮತವಾಗಿ ಪರಿವರ್ತನೆಯಾದರೆ ಗೆಲುವು ಸುಲಭವಾಗಲಿದೆ.

ರಾಜ್ಯದ ಬಿಜೆಪಿ ಸರ್ಕಾರದಲ್ಲಿ ಸಚಿವರಾಗಿದ್ದ ನಾರಾಯಣಗೌಡ ಅವರು ಆಡಳಿತ ವಿರೋಧಿ ಅಲೆಗೆ ಸಿಲುಕಿರುವುದು ಕ್ಷೇತ್ರದಲ್ಲಿ ಎದ್ದು ಕಾಣುತ್ತಿದೆ. ವಿರೋಧ ಪಕ್ಷಗಳು ಕ್ಷೇತ್ರದ ಶಾಸಕರಾಗಿ ಸಚಿವರಾಗಿರುವ ನಾರಾಯಣಗೌಡರು ತಾಲೂಕಿನ ಅಭಿವೃದ್ಧಿಯನ್ನು ಕಡೆಗಣಿಸಿದ್ದಾರೆ. ಸಚಿವರಾಗಿ ತಾಲೂಕಿನ ಅಭಿವೃದ್ಧಿಗೆ ಸಚಿವರ ಕೊಡುಗೆ ಶೂನ್ಯ ಎಂದು ಪ್ರಚಾರ ನಡೆಸುತ್ತಿರುವುದು ನುಂಗಲಾರದ ಬಿಸಿತುಪ್ಪವಾಗಿ ಪರಿಣಮಿಸಿದೆ.

ಕ್ಷೇತ್ರದಲ್ಲಿ ತ್ರಿಕೋನ ಸ್ಪರ್ಧೆಯಂತು ಖಚಿತ

ಒಟ್ಟಾರೆಯಾಗಿ ಹೇಳಬೇಕೆಂದರೆ ಕೆ.ಆರ್.ಪೇಟೆ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ, ಜೆಡಿಎಸ್ ಹಾಗೂ ಕಾಂಗ್ರೆಸ್ ನ ಅಭ್ಯರ್ಥಿಗಳ ನಡುವೆ ಭಾರೀ ಸ್ಪರ್ಧೆಯಿದ್ದು, ತ್ರಿಕೋನ ಸ್ಪರ್ಧೆ ಏರ್ಪಡುವ ಎಲ್ಲ ಸಾಧ‍್ಯತೆಗಳು ಕಂಡು ಬರಲಿವೆ. ಬಿಜೆಪಿ ಅಭ್ಯರ್ಥಿಗೆ ಆಡಳಿತ ವಿರೋಧಿ ಅಲೆಯ ಭಯವಿದ್ದರೆ, ಜೆಡಿಎಸ್ ಮತ್ತು ಕಾಂಗ್ರೆಸ್ ಅಭ್ಯರ್ಥಿಗಳಿಗೆ ತಮ್ಮ ಪಕ್ಷದಲ್ಲಿರುವ ಭಿನ್ನಾಭಿಪ್ರಾಯಗಳ ಭಯವಿದೆ. ಒಟ್ಟಾರೆ ಎಲ್ಲವನ್ನು ಮೀರಿ ಮೂರು ಪಕ್ಷದ ಅಭ್ಯರ್ಥಿಗಳು ಕಣಕ್ಕಿಳಿದಿದ್ದು, ನಾಮಪತ್ರ ಸಲ್ಲಿಕೆ ಬಳಿಕ ಕ್ಷೇತ್ರದಲ್ಲಿ ಸಂಚಲನ ಆರಂಭವಾಗುವುದಂತು ಖಚಿತ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+