Karnataka Budget 2024: ಈ ಬಾರಿ ಬಜೆಟ್‌ನಲ್ಲಿ ಮಂಡ್ಯ ಜಿಲ್ಲೆಗೆ ಸಿಕ್ಕಿದ್ದೇನು?
ಮಂಡ್ಯ: ಬಜೆಟ್‌ನಲ್ಲಿ ಜಿಲ್ಲೆಗೆ ಯಾವುದೇ ಹೊಸ ಘೋಷಣೆಗಳಿಲ್ಲ. ಎಲ್ಲಾ ಹಳೆಯ ಘೋಷಣೆಗಳೇ. ಹೊಸ ಸಕ್ಕರೆ ಕಾರ್ಖಾನೆ ಸ್ಥಾಪನೆ, ಕೆಆರ್‌ಎಸ್ ಬೃಂದಾವನವನ್ನು ವಿಶ್ವದರ್ಜೆಗೇರಿಸುವುದು, ವಿಶ್ವೇಶ್ವರಯ್ಯ ನಾಲಾ ಆಧುನೀಕರಣ ಇವೆಲ್ಲವೂ ಪ್ರತಿ ಬಾರಿ ಬಜೆಟ್‌ನಲ್ಲಿ ಪುನರಾವರ್ತನೆಯಾಗುತ್ತಲೇ ಇವೆ ಆದರೆ ಯಾವುದು ಕಾರ್ಯರೂಪಕ್ಕೆ ಬಂದಿಲ್ಲ. ಇವುಗಳನ್ನು ಹೊರತುಪಡಿಸಿ ಈ ಬಾರಿ ಮಂಡ್ಯ ಜಿಲ್ಲೆಗೆ ಹೊಸದಾಗಿ ಸಿಕ್ಕಿದ್ದೇನೂ ಇಲ್ಲ.
2018ರಲ್ಲಿ ಎಚ್.ಡಿ.ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿದ್ದಾಗ ಘೋಷಿಸಿದ ಹೊಸ ಸಕ್ಕರೆ ಕಾರ್ಖಾನೆ ಪ್ರಸ್ತಾಪ ಬಜೆಟ್ ಪುಸ್ತಕಕ್ಕಷ್ಟೇ ಸೀಮಿತವಾಗಿದೆ. ಕಾರ್ಖಾನೆ ಸ್ಥಾಪಿಸುವುದಿರಲಿ ಇಂತಿಷ್ಟು ಹಣ ನಿಗದಿ ಕೂಡ ಮಾಡಿಲ್ಲ. ಆರು ವರ್ಷಗಳಿಂದ ಮೂರು ಸರ್ಕಾರಗಳು ಬದಲಾದರೂ ಹೊಸ ಸಕ್ಕರೆ ಕಾರ್ಖಾನೆ ಎಂದು ದೂರದ ಬೆಟ್ಟವನ್ನು ಜಿಲ್ಲೆಯ ಜನತೆಗೆ ತೋರಿಸಲಾಗುತ್ತಿದೆ.

ಸರ್ಕಾರ ಹೊಸದಾಗಿ ಅಧಿಕಾರಕ್ಕೆ ಬಂದ ಬಿರುಸಲ್ಲಿ ₹50 ಕೋಟಿ ಹಣ ಕೊಟ್ಟಿದ್ದಷ್ಟೇ. ಈ ಬಜೆಟ್‌ನಲ್ಲಿ ಕಾರ್ಖಾನೆಗೆ ಹಣವನ್ನೇ ಕೊಟ್ಟಿಲ್ಲ. ಉಪ ಉತ್ಪನ್ನಗಳ ಘಟಕಗಳ ಸ್ಥಾಪನೆಗೆ ಆಸಕ್ತಿ ತೋರಿಲ್ಲ. ಕಾರ್ಖಾನೆಯಲ್ಲಿ ಒ ಅಂಡ್ ಎಂ ಕಾರ್ಯಾಚರಣೆ ಮುಂದುವರೆಯಲಿದೆಯೇ ಎನ್ನುವುದನ್ನೂ ಸರ್ಕಾರ ಖಚಿತಪಡಿಸದೆ ವೌನಕ್ಕೆ ಶರಣಾಗಿದೆ.
ಎಲ್ಲವೂ ಹಳೆಯ ಘೋಷಣೆಗಳೇ!
ಕೆಆರ್‌ಎಸ್ ಬೃಂದಾವನವನ್ನು ವಿಶ್ವದರ್ಜೆಗೇರಿಸುವ ಪ್ರಸ್ತಾವವೂ ಈಗಿನದ್ದೇನಲ್ಲ. ಬಹಳ ವರ್ಷಗಳಿಂದಲೂ ಈ ಘೋಷಣೆ ಮತ್ತೆ ಮತ್ತೆ ಪುನರಾವರ್ತನೆಯಾಗುತ್ತಲೇ ಇದೆ. ಬಿಜೆಪಿ ಸರ್ಕಾರದ ಅವಧಿಯಲ್ಲೇ ₹300 ಕೋಟಿ ವೆಚ್ಚದಲ್ಲಿ ನಾಲೆಗಳ ಆಧುನೀಕರಣ ಕೈಗೊಳ್ಳಲಾಗಿತ್ತು. ಇದೀಗ ಮಳವಳ್ಳಿ ತಾಲೂಕಿನ ಮಾಧವ ಮಂತ್ರಿ, ಮದ್ದೂರು ತಾಲೂಕಿನ ಕೆಮ್ಮಣ್ಣು ನಾಲಾ ಆಧುನೀಕರಣ, ವಿಶ್ವೇಶ್ವರಯ್ಯ ನಾಲಾ ಜಾಲದ ಹೆಬ್ಬಕವಾಡಿ, ನಿಡಘಟ್ಟ ನಾಲೆಗಳ ಆಧುನೀಕರಣ ಮಾಡಲಾಗುವುದು ಎಂದು ಹೇಳಿದೆ. ಈ ನಾಲೆಗಳ ಆಧುನೀಕರಣಕ್ಕೆ ಎಷ್ಟು ಕೋಟಿ ರು. ಹಣ ಮೀಸಲಿರಿಸಲಾಗಿದೆ ಎನ್ನುವುದನ್ನು ನಿರ್ದಿಷ್ಟವಾಗಿ ಹೇಳಿಲ್ಲ.
ಮಂಡ್ಯ ಜಿಲ್ಲೆಗೆ ಘೋಷಣೆಗಳೇನು
ಮಂಡ್ಯದ ವಿ.ಸಿ.ಫಾರಂನಲ್ಲಿ ಕೃಷಿ ವಿಶ್ವವಿದ್ಯಾಲಯ ಸ್ಥಾಪಿಸುವ ಕುರಿತು ತಜ್ಞರ ಸಮಿತಿ ರಚಿಸಲಾಗುವುದು ಎಂಬ ಭರವಸೆ ಕೊಟ್ಟಿದೆಯಷ್ಟೇ. ರಾಜ್ಯದ ಕಬ್ಬು ಬೆಳೆಗಾರರ ಹಿತದೃಷ್ಟಿಯಿಂದ ಸಕ್ಕರೆ ಕಾರ್ಖಾನೆಗಳ ಬಳಿ ಎಪಿಎಂಸಿ ವತಿಯಿಂದ ವೇ-ಬ್ರಿಡ್ಜ್ ಸ್ಥಾಪಿಸುವುದಾಗಿ ಹೇಳಿದೆ. ರಾಜ್ಯದಲ್ಲಿ ತೀವ್ರ ಅಸ್ವಸ್ತತೆಯಿಂದ ಬಳಲುತ್ತಿರುವ ರೋಗಿಗಳಿಗೆ ಉತ್ತಮ ಚಿಕಿತ್ಸೆ ನೀಡಿ ಪ್ರಾಣ ಉಳಿಸುವ ಉದ್ದೇಶದಿಂದ ಪ್ರತಿ ಜಿಲ್ಲಾ ಆಸ್ಪತ್ರೆಯಲ್ಲಿ ಕ್ರಿಟಿಕಲ್ ಕೇರ್ ಬ್ಲಾಕ್‌ಗಳನ್ನು ಸ್ಥಾಪಿಸುವುದಾಗಿ ಘೋಷಿಸಿದೆ.
ಇವುಗಳನ್ನು ಹೊರತುಪಡಿಸಿದಂತೆ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ, ಬೈಪಾಸ್ ರಸ್ತೆ, ನಗರಾಭಿವೃದ್ಧಿಗೆ ವಿಶೇಷ ಅನುದಾನ, ಹೊಸ ಕೈಗಾರಿಕೆಗಳ ಸ್ಥಾಪನೆ, ಶೀತಲೀಕರಣ ಕೇಂದ್ರಗಳು ಸೇರಿದಂತೆ ಜಿಲ್ಲೆಯ ಜನರ ಹಲವಾರು ನಿರೀಕ್ಷೆಗಳು ಹುಸಿಯಾಗಿವೆ.












Click it and Unblock the Notifications