Kannada Sahitya Sammelana Controversy : ಕನ್ನಡ ಸಾಹಿತ್ಯ ಸಮ್ಮೇಳನ; ಕನ್ನಡ ಭಾಷೆಗಿಂತ ಬಾಡೂಟದ ಚರ್ಚೆಯೇ ಜೋರು!
Kannada Sahitya Sammelana Controversy: ಕನ್ನಡ ಸಾಹಿತ್ಯ ಸಮ್ಮೇಳನ ಈ ಬಾರಿ ಮಂಡ್ಯದಲ್ಲಿ ನಡೆಯಲಿದೆ. ಡಿಸೆಂಬರ್ 20ರಿಂದ ಮೂರು ದಿನಗಳ ಕಾಲ ಸಾಹಿತ್ಯ ಸಮ್ಮೇಳನ ನಡೆಯಲಿದೆ. ಆದರೆ, ಈ ಬಾರಿ ಸಾಹಿತ್ಯ ಸಮ್ಮೇಳನ ಪ್ರಾರಂಭವಾಗುವುದಕ್ಕೆ ಮುಂಚೆಯೇ ವಿವಾದ ಶುರುವಾಗಿದೆ. ಪ್ರತಿ ಬಾರಿಯೂ ಸಾಹಿತ್ಯ ಸಮ್ಮೇಳನದಲ್ಲಿ ಕೆಲವು ವಿಚಾರಗಳ ಬಗ್ಗೆ ಪರ - ವಿರೋಧ ಚರ್ಚೆಯಾಗುತ್ತದೆ.
ಆದರೆ, ಈ ಬಾರಿ ಸಮ್ಮೇಳನ ಶುರುವಾಗುವ ಮೊದಲೇ ಅದೂ ಆಹಾರ ವಿಚಾರವಾಗಿ ವಿವಾದ ಶುರುವಾಗಿದೆ. ಸಾಹಿತ್ಯ ಸಮ್ಮೇಳನದಲ್ಲಿ ಮಾಂಸಾಹಾರ ನಿಷೇಧ ಮಾಡಿರುವುದು ಈಗಾಗಲೇ ವಿವಾದಕ್ಕೆ ಕಾರಣವಾಗಿದೆ. ಮಂಡ್ಯ ಸೇರಿದಂತೆ ವಿವಿಧ ಭಾಗದಲ್ಲಿ ಈ ಸಂಬಂಧ ಅಭಿಯಾನ ಶುರುವಾಗಿದೆ. ಈ ನಡುವೆ ಕೆಲವು ಕನ್ನಡಪರ ಸಾಹಿತಿಗಳು ಭಿನ್ನ ಹಾಗೂ ವಿಚಾರವಂತ ಅಭಿಪ್ರಾಯಗಳನ್ನು ಮಂಡಿಸಿದ್ದಾರೆ.

ಸಾಹಿತ್ಯ ಸಮ್ಮೇಳನ ಎಂದ ಮೇಲೆ ಅಲ್ಲಿ ಕನ್ನಡ ಸಾಹಿತ್ಯ, ಅದರ ಭವಿಷ್ಯ, ಕನ್ನಡಿಗರ ಉದ್ಯೋಗ ಹಾಗೂ ಕನ್ನಡ ಭಾಷೆಗೆ ಕೊಡುಗೆ ನೀಡಿರುವ ಮಹನೀಯರ ವಿಚಾರ ಚರ್ಚೆಯಾಗಬೇಕು. ಆದರೆ, ಈ ಬಾರಿಯ ಮಂಡ್ಯ ಸಾಹಿತ್ಯ ಸಮ್ಮೇಳನ ಪ್ರಾರಂಭವಾಗುವುದಕ್ಕೂ ಮುನ್ನವೇ ಆಹಾರ ವಿಚಾರವಾಗಿ ಹೆಚ್ಚು ಚರ್ಚೆಯಾಗುತ್ತಿದೆ.
ನಾನ್‌ವೆಜ್ ಇರಬೇಕು ಎನ್ನುವ ವಿಚಾರದಲ್ಲಿ ಅಭಿಯಾನ ಹಾಗೂ ಚರ್ಚೆಗಳು ನಡೆಯುತ್ತಿವೆ. ಕವಿ ರಾಜೇಂದ್ರ ಪ್ರಸಾದ್ ಅವರು ಮಂಡ್ಯ ಸಾಹಿತ್ಯ ಸಮ್ಮೇಳನದ ಆಹಾರ ವಿಚಾರವಾಗಿ ತಮ್ಮ ಅಭಿಪ್ರಾಯವನ್ನು ಹಂಚಿಕೊಂಡಿದ್ದಾರೆ.
ಈ ವಿಚಾರವಾಗಿ ನಾಲ್ಕು ಅಂಶಗಳ ಮೂಲಕ ಅವರು ತಮ್ಮ ಅಭಿಪ್ರಾಯವನ್ನು ಹಂಚಿಕೊಂಡಿದ್ದಾರೆ. ಅದರಲ್ಲಿ ಆಹಾರ ವ್ಯರ್ಥವಾಗಬಾರದು, ಸರಳ ಊಟ ಇರಲಿ ಹಾಗೂ ಊಟವನ್ನು ನಿಷೇಧಿಸುವ ಹಕ್ಕು ಯಾರಿಗೂ ಇಲ್ಲಿ ಎಂದಿದ್ದಾರೆ.
* ಸಾಹಿತ್ಯ ಪರಿಷತ್ತಿಗೆ ಯಾವುದೇ ಊಟವನ್ನು ನಿಷೇಧಿಸುವ ಹಕ್ಕು ಇಲ್ಲ. ಅಂತಹ ನಿಯಮಗಳನ್ನು ವಾಪಾಸು ತೆಗೆದುಕೊಳ್ಳಬೇಕು. ವಾಣಿಜ್ಯ ಮಳಿಗೆಗಳಲ್ಲಿ ಮಾಂಸಾಹಾರ, ಸಸ್ಯಾಹಾರ ಮತ್ತು ಮೊಟ್ಟೆ ಸಂಬಂಧಿ ತಿನಸುಗಳಿಗೆ ಮುಕ್ತವಾದ ಅವಕಾಶವಿರಬೇಕು.
* ಸಾಹಿತ್ಯ ಸಮ್ಮೇಳನದಲ್ಲಿ ವೆಜ್ ಊಟವೋ ಬಾಡೂಟವೋ ಎನ್ನುವುದಕ್ಕಿಂತ ಸರಳವಾದ ಊಟ ಆಗಬೇಕು ಎಂದು ನಾವೆಲ್ಲಾ ಬಯಸಬೇಕು. ಊಟದ ಹೆಸರಿನಲ್ಲಿ ಮಿತಿಯಿಲ್ಲದೇ ಮಾಡುತ್ತಿರುವ ಖರ್ಚನ್ನು ನಿಲ್ಲಿಸಬೇಕು.
* ಲಕ್ಷಾಂತರ ಜನರಿಗೆ ಸರ್ಕಾರದ ಹಣದಲ್ಲಿ ಹತ್ತಾರು ಬಗೆಯ ಊಟತಿಂಡಿಗಳನ್ನು ಮಾಡುವ ಆಡಂಬರ ಏಕೆ?! ಸಾಹಿತ್ಯ ಮತ್ತು ಪುಸ್ತಕ ನಮಗೆ ಬಹುಮುಖ್ಯ ಎನಿಸಬೇಕೇ ಹೊರತು ಅಲ್ಲಿ ಯಾವ ಊಟ ಇದೆ ಎಂಬುದಲ್ಲ.
* ಮಾಂಸದ ಊಟದ ಬಗೆಗೆ ಮಾಂಸಾಹಾರಿಗಳಲ್ಲೇ ಹತ್ತಾರು ಬಗೆಯ ತಕರಾರುಗಳಿವೆ. ಕೆಲ ಬಗೆಯ ಮಾಂಸಗಳನ್ನು ಕೆಲವು ಜಾತ್ಯಸ್ಥರು ತಿನ್ನುವುದಿಲ್ಲ. ಕೆಲವರು ಹಲಾಲ್ ಮಾಡದ ಮಾಂಸ ಸೇವಿಸುವುದಿಲ್ಲ. ಹಲಾಲ್ ಮಾಡಿದರೆ ಉಳಿದ ಜಾತಿಗರು ತಕರಾರು ತಗೆಯುತ್ತಾರೆ. ಇಷ್ಟೆಲ್ಲಾ ಮೂಲಭೂತ ಸಮಸ್ಯೆ ಇಟ್ಟುಕೊಂಡು ಮಾಂಸದೂಟ ಮಾಡಿಯೂ ಅದರಿಂದ ಎಲ್ಲರಿಗೂ ನ್ಯಾಯವೇನು ದೊರೆಯುವುದಿಲ್ಲ ಎಂದು ರಾಜೇಂದ್ರ ಪ್ರಸಾದ್ ಅವರು ಹೇಳಿದ್ದಾರೆ.
ಸಾಹಿತ್ಯ ಸಮ್ಮೇಳದನ ಆಹಾರ ವಿಚಾರವಾಗಿ ಹಲವು ಸಾಹಿತಿಗಳು ಅವರ ಅಭಿಪ್ರಾಯವನ್ನು ಹಂಚಿಕೊಳ್ಳುತ್ತಿದ್ದಾರೆ. ಒಟ್ಟಾರೆಯಾಗಿ ಈ ಬಾರಿ ಸಾಹಿತ್ಯ ಸಮ್ಮೇಳನ ಕನ್ನಡದ ವಿಚಾರಕ್ಕಿಂತ ಆಹಾರ ವಿಚಾರದಿಂದಲೇ ಹೆಚ್ಚು ಚರ್ಚೆಗೆ ಗ್ರಾಸವಾಗುವಂತೆ ಆಗಿದೆ.












Click it and Unblock the Notifications