ಕೆ.ಆರ್.ಪೇಟೆ ಉದ್ಯೋಗ ಮೇಳ: 12 ಸಾವಿರ ಅಭ್ಯರ್ಥಿಗಳು ಭಾಗಿ
ಮಂಡ್ಯ, ಮಾ.19: ಮಂಡ್ಯ ಜಿಲ್ಲೆಯ ಯುವಕರು ದೇಶ ವಿದೇಶಗಳಲ್ಲಿ ಎಲ್ಲೆಲ್ಲಿ ಉದ್ಯೋಗಾವಕಾಶಗಳಿವೆಯೋ ಅಲ್ಲಿಗೆ ತೆರಳಿ ಅವನ್ನು ಬಳಸಿಕೊಳ್ಳಲು ಮುಂದಾಗಬೇಕು ಎಂದು ಕೌಶಾಲಾಭಿವೃದ್ಧಿ, ಉದ್ಯಮಶೀಲತೆ ಹಾಗೂ ಜೀವನೋಪಾಯ ಸಚಿವ ಡಾ.ಸಿ.ಎನ್. ಅಶ್ವತ್ಥನಾರಾಯಣ ಅಭಿಪ್ರಾಯಪಟ್ಟರು.
ಪಟ್ಟಣದ ಸರ್ಕಾರಿ ಎಂಜಿನಿಯರಿಂಗ್ ಕಾಲೇಜು ಆವರಣದಲ್ಲಿ ಶನಿವಾರ ಏರ್ಪಡಿಸಿದ್ದ ಬೃಹತ್ ಉದ್ಯೋಗ ಮೇಳದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ಮಂಡ್ಯ ಜಿಲ್ಲೆಯು ವ್ಯವಸಾಯ ಪ್ರಧಾನವಾದ ಜಿಲ್ಲೆಯಾಗಿದೆ. ಇಲ್ಲಿನ ಯುವಕರು ವಿದ್ಯಾಭ್ಯಾಸ ಮುಗಿಸಿದ ಮೇಲೆ ಹೆಚ್ಚಾಗಿ ತಾವಿದ್ದಲ್ಲಿಯೇ ದುಡಿಮೆಯ ಮಾರ್ಗ ಕಂಡುಕೊಂಡು ಹುಟ್ಟಿ ಬೆಳೆದ ಊರಿನಲ್ಲೇ ಇರಲು ಬಯಸುತ್ತಾರೆ. ಆದರೆ ಇದಕ್ಕೆ ಬದಲಾಗಿ, ಎಲ್ಲೆಲ್ಲಿ ಉದ್ಯೋಗಾವಕಾಶಗಳಿವೆಯೋ ಅಲ್ಲಿಗೆ ಹೋಗಿ ಆದಾಯ ಗಳಿಸುವ ಜೊತೆಗೆ ತಿಳಿವಳಿಕೆ ಹೆಚ್ಚಿಸಿಕೊಳ್ಳಬೇಕು ಎಂದರು.

ಯುವಕ, ಯುವತಿಯರಿಗೆ ಕೌಶಲಗಳನ್ನು ಕಲಿಸುವುದಕ್ಕೆ ಹಾಗೂ ದುಡಿಯುವ ಜನಕ್ಕೆ ಜೀವನೋಪಾಯದ ಮಾರ್ಗಗಳನ್ನು ಹೆಚ್ಚಿಸಲು ಸರ್ಕಾರ ಹಲವು ಕಾರ್ಯಗಳನ್ನು ರೂಪಿಸುತ್ತಿದೆ. ಗ್ರಾಮೀಣ ಹಾಗೂ ನಗರ ಪ್ರದೇಶವೆನ್ನದೆ ಎಲ್ಲೆಡೆ ಸಮಾನ ಆರ್ಥಿಕ ಚಲನಶೀಲತೆಯನ್ನು ಉಂಟುಮಾಡಲು ಯೋಜನೆಗಳನ್ನು ಕಾರ್ಯಗತಗೊಳಿಸಲಿದೆ ಎಂದು ಅಶ್ವತ್ಥನಾರಾಯಣ ಹೇಳಿದರು.
ಕೌಶಲಾಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆ, ಸಂಜೀವಿನಿ-ರಾಷ್ಟ್ರೀಯ ಗ್ರಾಮೀಣ ಜೀವನೋಪಾಯ ಅಭಿಯಾನ, ಮಂಡ್ಯ ಉದ್ಯೋಗ ವಿನಿಮಯ ಕಚೇರಿ ಹಾಗೂ ಸರ್ಕಾರಿ ಎಂಜಿನಿಯರಿಂಗ್ ಕಾಲೇಜುಗಳ ವತಿಯಿಂದ ಈ ಉದ್ಯೋಗಮೇಳ ಆಯೋಜಿಸಲಾಗಿತ್ತು. ಮೇಳದಲ್ಲಿ 12,000ಕ್ಕೂ ಹೆಚ್ಚು ಉದ್ಯೋಗಾಕಾಂಕ್ಷಿಗಳು ಪಾಲ್ಗೊಂಡಿದ್ದರು. ಈ ಮೇಳವನ್ನು ಏರ್ಪಡಿಸುವಲ್ಲಿ ಆಸಕ್ತಿ ವಹಿಸಿದ ಸ್ಥಳೀಯ ಶಾಸಕರೂ ಆದ ಸಚಿವ ನಾರಾಯಣಗೌಡ ಅವರ ಬಗ್ಗೆ ಮೆಚ್ಚುಗೆಯ ಮಾತುಗಳನ್ನಾಡಿದರು.

ಮಂಡ್ಯ ಜಿಲ್ಲೆಯ ಸಮಗ್ರ ಅಭಿವೃದ್ಧಿಗೆ ಬದ್ದ:
ಜಿಲ್ಲೆಯ ಸಮಗ್ರ ಅಭಿವೃದ್ಧಿಗೆ ರಾಜ್ಯ ಸರ್ಕಾರ ಅಗತ್ಯ ಕ್ರಮಗಳನ್ನು ಕೈಗೊಂಡಿದೆ. ಜಿಲ್ಲೆಯ ಅಭಿವೃದ್ಧಿ ಮತ್ತು ಅನುದಾನ ಸಂಬಂಧ ಮುಖ್ಯಮಂತ್ರಿ ಗಳೊಂದಿಗೆ ಈಗಾಗಲೇ ಚರ್ಚೆ ನಡೆಸಲಾಗಿದ್ದು, ಜಿಲ್ಲೆಯ ಸಮಗ್ರ ಅಭಿವೃದ್ಧಿಗೆ ಸಿಎಂ ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ ಎಂದು ಎಂದು ಜಿಲ್ಲಾ ಉಸ್ತುವಾರಿ ಮತ್ತು ಅಬಕಾರಿ ಸಚಿವ ಕೆ.ಗೋಪಾಲಯ್ಯ ಹೇಳಿದರು.
ಕಳೆದ ಬಾರಿ ಸಹ ಸಚಿವ ನಾರಾಯಣ ಗೌಡ್ರು ಆರೋಗ್ಯ ಮೇಳ ಮಾಡಿದ್ದರು. ಇದೀಗ ಉದ್ಯೋಗ ಮೇಳ ನಡೆದಿದೆ. ಬರುವ ದಿನಗಳಲ್ಲಿ ಸ್ತ್ರೀ ಶಕ್ತಿ ಸಂಘಗಳ ಕಾರ್ಯಕ್ರಮಗಳನ್ನು ಮಾಡಿ ಮಹಿಳೆಯರನ್ನು ಸಬಲೀಕರಣ ಮಾಡುವ ಚಿಂತನೆಯನ್ನು ನಾರಾಯಣ ಗೌಡರು ಮಾಡಿದ್ದು, ಈ ಮೂಲಕ ಜಿಲ್ಲೆಯ ಜನರ ಋಣ ತೀರಿಸುವ ಕೆಲಸ ಮಾಡುತ್ತಿದ್ದಾರೆ ಎಂದರು.
ರಾಜ್ಯದ ಎಲ್ಲ ಜಿಲ್ಲೆಗಳಲ್ಲೂ ಸರ್ಕಾರ ಉದ್ಯೋಗ ಮೇಳಗಳನ್ನು ನಡೆಸಿ ಸಾವಿರಾರು ಜನರಿಗೆ ಉದ್ಯೋಗ ಅವಕಾಶಗಳನ್ನು ನೀಡುತ್ತಿದೆ. ಇಂಥಹ ಮೇಳಗಳಲ್ಲಿ ಭಾಗವಹಿಸುವ ನೂರಾರು ಖಾಸಗಿ ಕಂಪನಿಗಳು ಅರ್ಹರಿಗೆ ಉತ್ತಮ ಸಂಬಳದ ಉದ್ಯೋಗ ಅವಕಾಶ ನೀಡುತ್ತಿವೆ ಎಂದು ಹೇಳಿದರು.












Click it and Unblock the Notifications