ಸುಮಲತಾ ಸವಾಲು ಸ್ವೀಕರಿಸಿ, ಮೇಲುಕೋಟೆಯಲ್ಲಿ ಆಣೆ ಮಾಡಲು ಸಿದ್ಧ ಎಂದ ಜೆಡಿಎಸ್ ಶಾಸಕ ಪುಟ್ಟರಾಜು
ಪಾಂಡವಪುರ, ಸೆಪ್ಟೆಂಬರ್ 19: ''ಜೆಡಿಎಸ್ ಶಾಸಕರನ್ನು ಟಾರ್ಗೆಟ್ ಮಾಡಿದರೆ ತಾನು ಹೀರೋ ಆಗಬಹುದು ಎಂಬ ಭಾವನೆಯನ್ನು ಸಂಸದೆ ಸುಮಲತಾ ಅವರದ್ದು, ಸುಮಲತಾ ಹೇಳಿದ ದಿನ ನಾನು ಮೇಲುಕೋಟೆಯಲ್ಲಿ ಆಣೆ ಮಾಡಲು ಸಿದ್ದನಿದ್ದೇನೆ'' ಎಂದು ಮೇಲುಕೋಟೆ ಸನ್ನಿಧಿಯಲ್ಲಿ ನಿಂತು ಶಾಸಕ ಪುಟ್ಟರಾಜು ಸಂಸದೆ ಸುಮಲತಾ ಸವಾಲು ಸ್ವೀಕರಿಸಿದ್ದಾರೆ
ತಾಲೂಕಿನ ಮೇಲುಕೋಟೆಯಲ್ಲಿ ಶ್ರೀ ಚಲುವನಾರಾಯಣಸ್ವಾಮಿ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜನ ಅವರನ್ನು ಆಯ್ಕೆ ಮಾಡಿರುವುದು ಕೆಲಸ ಮಾಡಲು. ಅಂಬರೀಶ್ ಅವರ ಪತ್ನಿ ಎನ್ನುವ ಕಾರಣಕ್ಕೆ ಅವರು ಚುನಾವಣೆಯಲ್ಲಿ ಗೆದ್ದಿದ್ದಾರೆ ಅಷ್ಟೇ ಎಂದರು.
ನಮ್ಮ ಬಗ್ಗೆ ಮಾತನಾಡಿದರೆ ಹೀರೋ ಆಗುವ ಬಯಕೆ ಸುಮಲತಾರಿಗಿದೆ. ಮಾತನಾಡುವುದರಿಂದಲೇ ದೊಡ್ಡ ಲೀಡರ್ ಆಗುತ್ತೀನಿ ಅಂದು ಕೊಂಡಿದ್ರೆ ಅದನ್ನು ಮೊದಲು ಬಿಡಬೇಕು. ಗೌರವದಿಂದ ರಾಜಕಾರಣ ಮಾಡಿ. ಗಾಳಿಯಲ್ಲಿ ಗುಂಡು ಹೊಡೆಯುವ ಸಂಸ್ಕ್ರತಿ ನನ್ನದಲ್ಲ, ನೇರ ಎದೆಗೆ ಗುಂಡು ಹೊಡೆಯುವಂತದ್ದು ಎಂದು ತೀವ್ರ ವಾಗ್ದಾಳಿ ನಡೆಸಿದರು.

ಅಂಬರೀಶ್ ಜೊತೆ ದೀಪಾವಳಿ ಆಚರಿಸಿದ್ದೆ
ನನ್ನ ವ್ಯಕ್ತಿತ್ವ ಅಂಬರೀಶ್ ಅವರಿಗೆ ಗೊತ್ತಿತ್ತು. ಕಡೇ ದೀಪಾವಳಿ ನಾನು ಅವರ ಜತೆ ಆಚರಿಸಿದ್ದೇನು. ಅಂಬರೀಶ್ ಹಾಗೂ ನನ್ನ ಸಂಬಂಧ ಎಂತದ್ದು ಅನ್ನೋದನ್ನಾ ರಾಕ್‌ಲೈನ್ ವೆಂಕಟೇಶ್ ಅವರನ್ನೇ ಕೇಳಿ. ನನ್ನ ಮನೆ ದುಡ್ಡು ಹಾಕಿ ಅಂಬರೀಶ್ ಅವರಿಗೆ ಚುನಾವಣೆ ಮಾಡಿದ್ದೆ. ಶಾಸಕನಾಗಿ ನಾನು ಸದನದಲ್ಲಿ ಯಾವ ರೀತಿ ಮಾತನಾಡಿದ್ದೇನೆ ಎಂಬುದನ್ನು ಇತಿಹಾಸ ತೆಗೆದು ನೋಡಲಿ ಎಂದರು.

ಎಲ್ಲಾ ರಾಜಕಾರಣಿಗಳು ಮೂಡಾ ನಿವೇಶನ ಪಡೆದಿದ್ದಾರೆ
ಅಂಬರೀಶ್ ಕುಟುಂಬ ಸೇರಿದಂತೆ ಜಿಲ್ಲೆಯ ಎಲ್ಲಾ ರಾಜಕಾರಣಿಗಳು ಮೂಡಾ ನಿವೇಶನ ಪಡೆದಿದ್ದಾರೆ. ಈ ವಿಚಾರವಾಗಿ ನನ್ನ ವಿರುದ್ಧ ಕೋರ್ಟ್ ಕೇಸ್ ಇದೆ. ಜನಪ್ರತಿನಿಧಿಗಳ ನ್ಯಾಯಾಲಯ ಹೊರ ದೇಶಕ್ಕೆ ಹೋಗುವುದಾದರೆ ಅನುಮತಿ ಪಡೆಯುವಂತೆ ಹೇಳಿದೆ. ನನ್ನ ದಂತ ಚಿಕಿತ್ಸೆಗೆ ವಿದೇಶಕ್ಕೆ ಹೋಗಲು ಅನುಮತಿ ಕೇಳಿದ್ದೆ. ದಾಖಲೆಗಳಿದ್ರೆ ತರಲಿ, ಅವರ ವಿರುದ್ಧ ನಮ್ಮ ಬಳಿಯೂ ದಾಖಲೆಗಳಿವೆ. ಅವರ ಕುಟುಂಬವೂ ಮೂಡಾ ಸೈಟ್ ಪಡೆದಿದೆ ಅಲ್ವಾ.? ಚುನಾವಣೆ ಬಂದಾಗಲೆಲ್ಲಾ ಈ ಸೈಟ್ ವಿಚಾರ ತೆಗೆಯುತ್ತಾರೆ. ಇದು ನನ್ನ ವಿರುದ್ಧ ದೊಡ್ಡ ಷಡ್ಯಂತ್ರ ಎಂದರು.

ರಾಜಕೀಯದಲ್ಲಿ ಸಂಪಾದನೆಗಿಂತ ಕಳೆದಿದ್ದೆ ಹೆಚ್ಚು
ಚೆಲುವನಾರಾಯಣನ ಸನ್ನಿಧಿಯಲ್ಲಿ ನಿಂತು ಮಾತನಾಡುತ್ತಿದ್ದೇನೆ. ಮೂಡಾ ಸೈಟ್ ಹಗರಣದಲ್ಲಿ ನಮ್ಮ ಎಳ್ಳಷ್ಟು ಪಾತ್ರವಿಲ್ಲ. ನ್ಯಾಯಾಲಯದಲ್ಲಿ ನಮ್ಮ ಪರ ತೀರ್ಪು ಬರಲಿದೆ. ಅಜಾತ ಶತ್ರು ಅಂಬರೀಶ್ ಅಣ್ಣನ ನೆನೆದು ಸುಮಲತಾ ಕೆಲಸ ಮಾಡಲಿ. ಲಘು ಮಾತು ಅವರಿಗೆ ಶೋಭೆ ತರುವುದಿಲ್ಲ. ನನ್ನ ದುಡಿದ ದೊಡ್ಡಿನಿಂದ ನನ್ನ ಕ್ಷೇತ್ರದಲ್ಲಿ ಜನಪರ ಕೆಲಸ ಮಾಡಿದ್ದೇನೆ. ರಾಜಕೀಯದಲ್ಲಿ ಸಂಪಾದನೆಗಿಂತ ನಾನು ಕಳೆದಿದ್ದೆ ಹೆಚ್ಚು. ಅವರ ಬಳಿ ದಾಖಲೆಗಳಿದ್ದರೆ ತಂದು ದಿನಾಂಕ ನಿಗಧಿ ಮಾಡಲಿ. ನಾನು ಚರ್ಚೆಗೆ ಸಿದ್ಧನಿದ್ದೇನೆ ಎಂದು ಸವಾಲೆಸೆದರು.

ಅಕ್ರಮ ಗಣಿಗಾರಿಕೆ ನಿಲ್ಲಿಸಿದ್ದು ಮೊದಲು ನಾನು
ನಾನು ಅಧಿಕಾರಕ್ಕೆ, ಕಮಿಷನ್‌ಗೆ ಆಸೆ ಪಟ್ಟಿದ್ದರೆ ಕ್ಷೇತ್ರದಲ್ಲಿ ಉಳಿಯಲು ಸಾಧ್ಯವಿರಲಿಲ್ಲ. ಕೆ.ಎಸ್.ಪುಟ್ಟಣ್ಣಯ್ಯ ಅವರಂತಹ ದೊಡ್ಡ ಹೋರಾಟಗಾರರೇ ನನ್ನನ್ನು ಹಿಮ್ಮೆಟಿಸಲು ಆಗಲಿಲ್ಲ. ಮೈಶುಗರ್ ಕಾರ್ಖಾನೆ ಪುನರಾರಂಭ ಬಗ್ಗೆ ರೈತರು ಧರಣಿ ಮಾಡಿದ್ದರು. ಆದರೆ ಯಾರು ಯಾರಿಗೆ ಕಾರ್ಖಾನೆ ಮಾರಲು ಹೋಗಿದ್ದರು ಎನ್ನೋದು ಗೊತ್ತಿದೆ ಎಂದರು.
ಕೆಆರ್‌ಎಸ್ ಬಿರುಕು ಚರ್ಚೆ ಬಂದಾಗ ಅಕ್ರಮ ಗಣಿಗಾರಿಕೆ ನಿಲ್ಲಿಸಿದ್ದು ಮೊದಲು ನಾನು. ಯಾರ ಯಾರ ಬಂಡವಾಳ ಏನೇನು ಅನ್ನೋದು ಗೊತ್ತಿದೆ. ಬೆಂಗಳೂರು-ಮೈಸೂರು ಹೆದ್ದಾರಿ ಕಾಮಗಾರಿಯಲ್ಲಿ ಸುಮಲತಾ ಕಮಿ?ನ್ ಕೇಳಿರುವ ಆರೋಪದ ಬಗ್ಗೆ ನಿತೀನ್ ಗಡ್ಕರಿ ಅವರನ್ನ ಹಾಗೂ ಅಧಿಕಾರಿಗಳನ್ನ ಕೇಳಿದ್ರೆ ಗೊತ್ತಾಗುತ್ತದೆ ಎಂದರು.











Click it and Unblock the Notifications