ಸಿದ್ದರಾಮಯ್ಯಗೂ ಜಗ್ಗುತ್ತಿಲ್ಲ: ಮಂಡ್ಯದಲ್ಲಿ ಮೈತ್ರಿಧರ್ಮ ಔಟ್ ಆಫ್ ಕಂಟ್ರೋಲ್
Recommended Video

ತುಮಕೂರು, ಮೈಸೂರು, ಹಾಸನದಲ್ಲೂ ಕಾಂಗ್ರೆಸ್ ಮತ್ತು ಜೆಡಿಎಸ್ ನಡುವೆ ಗೊಂದಲಗಳಿದ್ದರೂ, ಮಂಡ್ಯದ ಎರಡು ಪಕ್ಷಗಳ ಭಿನ್ನಾಭಿಪ್ರಾಯ ಸರಿದಾರಿಗೆ ಬರುತ್ತಿಲ್ಲ. ಬಹುತೇಕ, ಇದರ ಬಿಸಿಯನ್ನು ದೇವೇಗೌಡ ಮತ್ತು ಅವರ ಕುಟುಂಬ ಎದುರಿಸದೇ ಬೇರೆ ದಾರಿಯಿಲ್ಲ ಎನ್ನುವ ಮಟ್ಟಿಗೆ, ಎರಡು ಪಕ್ಷಗಳ ನಡುವಿನ ವೈಮನಸ್ಸು ಕೊತಕೊತ ಕುದಿಯುತ್ತಿದೆ.
ಲೋಕಸಭಾ ಚುನಾವಣೆ 2019 : ವಿಶೇಷ ಪುಟ | ಗ್ಯಾಲರಿ
ಮಂಡ್ಯದಲ್ಲಿ ಯಾವುದೂ ಸರಿಯಿಲ್ಲ ಎನ್ನುವುದನ್ನು ದೇವೇಗೌಡ, ಎಚ್ ಡಿ ಕುಮಾರಸ್ವಾಮಿ ಮತ್ತು ಜಿ ಟಿ ದೇವೇಗೌಡ ಬಹಿರಂಗವಾಗಿಯೇ ಒಪ್ಪಿಕೊಂಡಿದ್ದಾರೆ. ಸುಮಲತಾ ಪ್ರಚಾರದ ವೇಳೆ, ಕಾಂಗ್ರೆಸ್ ಬಾವುಟ ಹಾರುತ್ತಿದ್ದು, ಬಿಜೆಪಿಯ ನಂತರ ಸುಮಲತಾಗೆ ಕಾಂಗ್ರೆಸ್ ನಿಂದ ಇನ್ನಷ್ಟು ಬಲ ಸಿಕ್ಕಂತಾಗಿದೆ.
ಇದುವರೆಗಿನ ಮಾಹಿತಿಯ ಪ್ರಕಾರ, ಮೈತ್ರಿಧರ್ಮ ಕರ್ನಾಟಕದಲ್ಲಿ ಬೇಕಾದರೆ ಇರಲಿ, ಮಂಡ್ಯದಲ್ಲಿ ಬೇಡ ಎನ್ನುವ ಖಡಕ್ ನಿರ್ಧಾರವನ್ನು ಮಂಡ್ಯ ಜಿಲ್ಲಾ ಕಾಂಗ್ರೆಸ್ ಮುಖಂಡರು ಸಿದ್ದರಾಮಯ್ಯನವರಿಗೆ ನೇರಾನೇರಾ ಹೇಳಿದ್ದಾರೆ.
ಪ್ರಮುಖವಾಗಿ, ಸಿಎಂ ಕುಮಾರಸ್ವಾಮಿಯವರ ಜೊತೆಗಿನ ಕಾಂಗ್ರೆಸ್ ಮುಖಂಡರ ಹಿಂದಿನ ವೈಮನಸ್ಸು, ಮಂಡ್ಯ ಚುನಾವಣೆಯ ವೇಳೆ ಭೋರ್ಗರೆಯುತ್ತಿದೆ. ಪಕ್ಷದಿಂದ ಉಚ್ಚಾಟಿಸುವುದಿದ್ದರೆ ಉಚ್ಚಾಟಿಸಿ ಎಂದು ಜಿಲ್ಲಾ ಕಾಂಗ್ರೆಸ್ ಮುಖಂಡರ ಓಪನ್ ಚಾಲೆಂಜ್, ಕಾಂಗ್ರೆಸ್ ವರಿಷ್ಠರ ನಿದ್ದೆಗೆಡಿಸಿದೆ.

ಕಾಂಗ್ರೆಸ್ ಪಕ್ಷಕ್ಕೆ ನುಂಗಲಾರದ ತುತ್ತಾಗುತ್ತಿರುವ ಮೈತ್ರಿಧರ್ಮ
ಈ ಹಿಂದೆ ಡಿ ಕೆ ಶಿವಕುಮಾರ್ ಅವರ ಎರಡು ಬಾರಿಯ ಪ್ರಯತ್ನ, ಇದಾದ ನಂತರ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಅವರ ಮಾತುಕತೆ, ಇವೆಲ್ಲಕ್ಕಿಂತ ಹೆಚ್ಚಾಗಿ, ಸಿದ್ದರಾಮಯ್ಯನವರು, ಚೆಲುವರಾಯಸ್ವಾಮಿ ಆದಿಯಾಗಿ ಜಿಲ್ಲಾ ಕಾಂಗ್ರೆಸ್ ಮುಖಂಡರ ಜೊತೆ ಸಾಲುಸಾಲು ಮಾತುಕತೆ ನಡೆಸಿದ್ದಾರೆ. ಆದರೆ, ಅದ್ಯಾವುದನ್ನೂ ಕಾಂಗ್ರೆಸ್ ಮುಖಂಡರು ಕಿವಿಯೊಳಗೆ ಹಾಕಿಕೊಳ್ಳದೇ ಇರುವುದು, ಚುನಾವಣೆಗೆ ಇನ್ನೇನು ಹತ್ತುದಿನ ಇರುವಾಗ, ಕಾಂಗ್ರೆಸ್ ಪಕ್ಷಕ್ಕೆ ನುಂಗಲಾರದ ತುತ್ತಾಗುತ್ತಿದೆ.

ಅಂಬರೀಶ್ ದೇಹಕ್ಕೆ ಅಗ್ನಿಸ್ಪರ್ಶ ಆದ ಕೂಡಲೇ ಅಲ್ಲಿ ರಾಜಕೀಯ ಆರಂಭವಾಗಿದೆ
ಮಂಡ್ಯದಲ್ಲಿ ಅಂಬರೀಶ್ ಅವರ ದೇಹಕ್ಕೆ ಅಗ್ನಿಸ್ಪರ್ಶ ಆದ ಕೂಡಲೇ ಅಲ್ಲಿ ರಾಜಕೀಯ ಆರಂಭವಾಗಿದೆ. ಅಲ್ಲಿನ ರಾಜಕೀಯವೇ ಬೇರೆ ಎಂದಿರುವ ಕುಮಾರಸ್ವಾಮಿ, ಮಂಡ್ಯಕ್ಕಾಗಿ ಬೇರೆ ಕಾರ್ಯತಂತ್ರ ರೂಪಿಸುವ ಅಗತ್ಯವಿಲ್ಲ. ಅಲ್ಲಿ ನನ್ನನ್ನು ಸೋಲಿಸಲು ಎಲ್ಲರೂ ಒಂದಾಗಿದ್ದಾರೆ. ನಾನು ಕ್ಷೇತ್ರದ ನನ್ನ ಕಾರ್ಯಕರ್ತರನ್ನು ನಂಬಿದ್ದೇನೆ. ಮೈತ್ರಿಧರ್ಮ ಪಾಲನೆಯಾಗುತ್ತಿಲ್ಲ ಎಂದು ನಾನು ಮತ್ತೆಮತ್ತೆ ಹೇಳಬೇಕಾಗಿಲ್ಲ ಎಂದು ಕುಮಾರಸ್ವಾಮಿ ಪ್ರತಿಕ್ರಿಯಿಸಿದ್ದಾರೆ.

ಜೆಡಿಎಸ್ ಸಭೆಯಲ್ಲಿ ಮೋದಿಗೆ ಜೈಕಾರ
ಮಂಡ್ಯದಲ್ಲಿ ನಮ್ಮ ಅಭ್ಯರ್ಥಿಗೆ ಬೆಂಬಲ ಸಿಗಲಿಲ್ಲ ಎಂದಾದರೆ, ಮೈಸೂರಲ್ಲಿ ನಾವು ಆಟವಾಡುತ್ತೇವೆ ಎಂದು ಸಚಿವ ಸಾ.ರಾ. ಮಹೇಶ್ ಹೇಳಿದ್ದರೂ, ಕಾಂಗ್ರೆಸ್ ಬೆಂಬಲ ಸುಮಲತಾ ಕಡೆಗೆ ಹರಿದು ಹೋಗುತ್ತಿದೆ. ಮೈಸೂರಿನಲ್ಲಿ ಕಾಂಗ್ರೆಸ್ ಅಭ್ಯರ್ಥಿ ವಿಜಯಶಂಕರ್ ಅವರಿಗೆ ಬೆಂಬಲ ನೀಡಬೇಕು ಎನ್ನುವ ಜೆಡಿಎಸ್ ಕಾರ್ಯಕರ್ತರ ಸಭೆಯಲ್ಲಿ ಜಿ ಟಿ ದೇವೇಗೌಡ ಮಾಡಿದ ಮನವಿಗೆ, ಹೋಗ್ರಿರೀ.. ನಾವು ಬಿಜೆಪಿಗೆ ಬೆಂಬಲ ನೀಡುತ್ತೇವೆ ಎಂದು ಕಾರ್ಯಕರ್ತರು ಮೋದಿಗೆ ಜೈ ಎಂದಿದ್ದಾರೆ.

ಮೈತ್ರಿಧರ್ಮ ಪಾಲನೆ ಮಾಡಲು ಸಾಧ್ಯವಿಲ್ಲ - ದೇವೇಗೌಡ್ರು
ಮಂಡ್ಯದಲ್ಲಿ ಮೈತ್ರಿ ಕಗ್ಗಂಟು ವಿಚಾರದ ಗೊಂದಲವನ್ನ ಕೂಡಲೇ ಬಗೆಹರಿಸಬೇಕು. ಯಾವುದೇ ಕಾರಣಕ್ಕೂ ಮೈತ್ರಿಗೆ ಧಕ್ಕೆ ಆಗಬಾರದು ಎಂದು ಕೆಪಿಸಿಸಿ ಉಸ್ತುವಾರಿ ವೇಣುಗೋಪಾಲ್ ಸೂಚನೆಯನ್ನೇನೋ ಹೊರಡಿಸುತ್ತಾರೆ, ಆದರೆ ಮಂಡ್ಯ ಕಾಂಗ್ರೆಸ್ ಮುಖಂಡರು ಅದನ್ನು ಆಲಿಸಬೇಕಲ್ಲವೇ, ಪಾಲಿಸಬೇಕಲ್ಲವೇ? ಇದನ್ನರಿತೋ ಏನೋ, ಸಿದ್ದರಾಮಯ್ಯನವರು ಬಂದರೂ, ಮಂಡ್ಯದಲ್ಲಿ ಮೈತ್ರಿಧರ್ಮ ಪಾಲನೆ ಮಾಡಲು ಸಾಧ್ಯವಿಲ್ಲ ಎನ್ನುವ ಮಾತನ್ನು ದೇವೇಗೌಡ್ರು ಹೇಳಿರುವುದು.

ರೇವಣ್ಣ ಪಕ್ಷಾತೀತವಾಗಿ ಎಲ್ಲರಲ್ಲೂ ಉತ್ತಮ ಬಾಂಧವ್ಯ ಹೊಂದಿರುವುದು
ಹಾಸನದಲ್ಲೂ ಗೊಂದಲವಿದ್ದರೂ ಅದನ್ನು ತಹಬಂದಿಗೆ ತರಲು ಸಿದ್ದರಾಮಯ್ಯ ಶಕ್ತರಾಬಹುದು. ಯಾಕೆಂದರೆ, ರೇವಣ್ಣ ಪಕ್ಷಾತೀತವಾಗಿ ಎಲ್ಲರಲ್ಲೂ ಉತ್ತಮ ಬಾಂಧವ್ಯ ಹೊಂದಿರುವುದು, ಅದೇ ಕುಮಾರಸ್ವಾಮಿಗೆ ಈ ಮಾತು ಅನ್ವಯಿಸದೇ ಇರುವುದು. ಚೆಲುವರಾಯಸ್ವಾಮಿ, ಬಂಡೇಸಿದ್ದೇಗೌಡ ಮುಂತಾದವರಿಂದ ಏನು ಮಂಡ್ಯದಲ್ಲಿ ಮೈತ್ರಿಧರ್ಮಕ್ಕೆ ಅಡ್ಡಿಯಾಗುತ್ತಿದೆಯೋ, ಅದಕ್ಕೆ ಕುಮಾರಸ್ವಾಮಿ ಜೊತೆಗಿನ ಅವರ ರಾಜಕೀಯ ಸಂಬಂಧವೇ ಕಾರಣ ಎನ್ನುವುದು ಮತ್ತೆ ಹೇಳಬೇಕಾಗಿಲ್ಲ.












Click it and Unblock the Notifications