ಮಂಡ್ಯ ಜಿಲ್ಲೆಯ ಸಾಹಿತ್ಯ ಪರಂಪರೆ ತುಂಬಾ ದೊಡ್ಡದು-ಜಯರಾಂ ರಾಯಪುರ
ಮಂಡ್ಯ, ಜನವರಿ 5: ಜಿಲ್ಲೆಯ ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ಡಾ.ಬಿ.ಆರ್.ಅಂಬೇಡ್ಕರ್ ಭವನದಲ್ಲಿ ನಡೆದ ಮಂಡ್ಯ ನಗರ 5 ನೇ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಮುಖ್ಯಮಂತ್ರಿಗಳ ಕಾರ್ಯದರ್ಶಿ ಹಾಗೂ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಜಯರಾಂ ರಾಯಪುರ ಉದ್ಘಾಟಿಸಿದರು.
ಬಳಿಕ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಸಾಹಿತ್ಯ ಕ್ಷೇತ್ರದಲ್ಲಿ ನೂರು ವರ್ಷಗಳ ಹಿಂದೆ ಸಾಹಿತ್ಯ ರಚಿಸಿದ ಸಾಹಿತಿ ಎಂ.ಎಲ್.ಶ್ರೀಕಂಠೇಶಗೌಡ ಅವರಿಂದ ಹಿಡಿದು ಇಂದು ಪುಸ್ತಕ ಬಿಡುಗಡೆ ಮಾಡಿದ ಸಾಹಿತಿಗಳವರೆಗೆ ಹೋಬಳಿ ಮಟ್ಟದಿಂದ ರಾಷ್ಟ್ರಮಟ್ಟದವರೆಗೆ ಖ್ಯಾತರಾದ ಸಾಹಿತಿಗಳಿದ್ದಾರೆ. ಹೀಗಾಗಿ ಜಿಲ್ಲೆಯ ಸಾಹಿತ್ಯ ಪರಂಪರೆ ತುಂಬಾ ದೊಡ್ಡದು ಎಂದರು.
ಮಂಡ್ಯದಲ್ಲಿ ಪುಸ್ತಕ ಪ್ರೇಮಿಗಳು ಹೆಚ್ಚಾಗಿದ್ದಾರೆ. ಕುವೆಂಪು ಭಾಷಾ ಪ್ರಾಧಿಕಾರದವರು ಒಂದು ವಾರದಲ್ಲಿ ನಾಲ್ಕುವರೆ ಲಕ್ಷ ರೂಪಾಯಿಗಳ ಪುಸ್ತಕಗಳನ್ನು ಮಾರಾಟ ಮಾಡಿದ ದಾಖಲೆ ಇದೆ. ಜಿಲ್ಲೆಯಲ್ಲಿ ಕುವೆಂಪು ಅಭಿಮಾನಿಗಳು ಸಹ ಹೆಚ್ಚಾಗಿದ್ದಾರೆ. ಕನ್ನಡ ಸಾಹಿತ್ಯದ ಜೊತೆಗೆ ಸಂಸ್ಕೃತಿ ಮತ್ತು ಪರಂಪರೆ ಸಹ ಸಹಜವಾಗಿ ಬೆಳೆಯುತ್ತದೆ. ಭಾಷೆ ಬೆಳೆಸುವ ವಿಚಾರದಲ್ಲಿ ನಮ್ಮ ಮನೋಭಾವ ಬದಲಾಗಬೇಕು. ಕನ್ನಡ ಭಾಷೆ ನಮ್ಮ ಅಸ್ಮಿತೆಯಾಗಿದ್ದು, ಆ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿರುವವರನ್ನು ಗೌರವಿಸಬೇಕು ಎಂದರು.

ಭಾಷೆಯನ್ನು ಸ್ಪಷ್ಟವಾಗಿ ಶುದ್ಧತೆಯಿಂದ ಬಳಸುವ ಮನೋಭಾವ ಬೆಳೆಸಿಕೊಳ್ಳಬೇಕು. ಆಗ ಭಾಷೆಯ ಜೊತೆಗೆ ಇಂಗ್ಲಿಷ್ ಸಹ ಶುದ್ಧವಾಗುತ್ತದೆ. ಬೆರಕೆ ಭಾಷೆಯ ಬಳಕೆಯ ಅಗತ್ಯವಿಲ್ಲ. ಕನ್ನಡವಾದರೆ ಕನ್ನಡ, ಇಂಗ್ಲಿಷ್ ಆದರೆ ಇಂಗ್ಲಿಷ್‌ಅನ್ನು ಸಮರ್ಪಕವಾಗಿ ಬಳಸಬೇಕು. ಮಂಡ್ಯದಲ್ಲಿ ಸಾಂಸ್ಕೃತಿಕ ಶ್ರೀಮಂತ ವಾತಾವರಣವಿದೆ ಎನ್ನುವ ಅಭಿಮಾನ ವ್ಯಕ್ತಪಡಿಸಿದರು.
ಮಾತು ಮುಂದುವರಿಸಿದ ಅವರು, ಸಾಹಿತ್ಯ ಕಲೆ ಜೊತೆಗೆ ಜಿಲ್ಲೆಯಲ್ಲಿ ಕೃಷಿ ಹೈನುಗಾರಿಕೆಗೆ ಪ್ರಧಾನವಾದುದು.ಇದರ ಜೊತೆಗೆ ಪ್ರವಾಸೋದ್ಯಮ ಅಭಿವೃದ್ಧಿಗೆ ಸಾಕಷ್ಟು ಅವಕಾಶಗಳಿವೆ. ಅವುಗಳನ್ನು ಆಕರ್ಷಣೀಯ ಕೇಂದ್ರಗಳಾಗಿ ಮಾಡಬೇಕಾಗಿದೆ. ಮತ್ಸ್ಯೋದ್ಯಮಕ್ಕೂ ಉತ್ತಮ ಅವಕಾಶಗಳಿವೆ. ಬೇರೆ ಕಡೆ ನೆಲೆಸಿರುವ ಜಿಲ್ಲೆಯ ಪ್ರತಿಭಾವಂತರು ಮಂಡ್ಯಕ್ಕೆ ಹಿಂತಿರುಗಿದರೆ ಆರ್ಥಿಕ ಪ್ರಗತಿ ಸಾಧಿಸಬಹುದು ಎಂದರು.
ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಧನಂಜಯ ಮಾತನಾಡಿ ಜಿಲ್ಲೆಯ ಆರೋಗ್ಯ ಇಲಾಖೆ ಕಾರ್ಯವೈಖರಿ ಹಾಗೂ ಜನತೆ ಆರೋಗ್ಯದ ವಿಷಯದಲ್ಲಿ ಕಾಳಜಿ ವಹಿಸಬೇಕು. ಬೂಸ್ಟರ್ ಡೋಸ್‌ಗಳನ್ನು ಪಡೆದುಕೊಳ್ಳಿ. ಕೋವಿಡ್‌ಗೆ ಹೆದರುವ ಅಗತ್ಯವಿಲ್ಲ ಎಂದು ತಿಳಿಸಿದರು.
ಯುವ ಸಾಹಿತಿ ಡಾ.ಹೆಚ್.ಆರ್.ಕನ್ನಿಕಾ ಅವರಿಗೆ ನಿಕಟ ಪೂರ್ವ ಸಮ್ಮೇಳನಾಧ್ಯಕ್ಷೆ ಡಾ.ಪಿ.ಸುಮಾರಾಣಿ ಶಂಭು ಕನ್ನಡ ಧ್ವಜ ನೀಡುವ ಮೂಲಕ ಅಧಿಕಾರ ಹಸ್ತಾಂತರಿಸಿದರು.
ಈ ಸಂದರ್ಭದಲ್ಲಿ ಪತ್ರಕರ್ತ ಹೊಳಲು ಶ್ರೀಧರ್ ಅವರ 'ಪದ ಸಂಚಯ' ಕೃತಿ ಹಾಗೂ ಸಮ್ಮೇಳನಾಧ್ಯಕ್ಷೆ ಹೆಚ್.ಆರ್.ಕನ್ನಿಕಾ ಅವರ 'ಹಣತೆ' ಕವನ ಸಂಕಲನವನ್ನು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಶಾಂತ ಎಲ್ ಹುಲ್ಮನಿ ಹಾಗೂ ಜಯರಾಂ ರಾಯಪುರ ಬಿಡುಗಡೆ ಮಾಡಿದರು.












Click it and Unblock the Notifications