ಐಟಿ ಅಧಿಕಾರಿಗಳೇನು ನಮ್ಮ ಮನೆಯ ಆಳುಗಳಾ? ಸುಮಲತಾ ಪ್ರಶ್ನೆ
Recommended Video

ಮಂಡ್ಯ, ಮಾರ್ಚ್ 28: ಐಟಿ ಅಧಿಕಾರಿಗಳೇನು ನಮ್ಮ ಮನೆಯ ಆಳುಗಳಾ ಎಂದು ಬಿಜೆಪಿ ಬೆಂಬಲಿತ ಲೋಕಸಭಾ ಸ್ವತಂತ್ರ ಅಭ್ಯರ್ಥಿ ಸುಮಲತಾ ಅಂಬರೀಶ್ ಪ್ರಶ್ನೆ ಮಾಡಿದ್ದಾರೆ.
ಲೋಕಸಭಾ ಚುನಾವಣೆ 2019 : ವಿಶೇಷ ಪುಟ | ಗ್ಯಾಲರಿ
ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ಮಾಡಿದ ದಾಳಿಯ ಹಿಂದೆ ಬಿಜೆಪಿ ಬೆಂಬಲಿತ ಪಕ್ಷೇತರ ಅಭ್ಯರ್ಥಿಯ ಕೈವಾಡವೂ ಇದೆ ಎಂಬ ಸಚಿವ ಸಿ.ಎಸ್ಪುಟ್ಟರಾಜು ಅವರ ಆರೋಪವನ್ನು ನಟಿ ಸುಮಲತಾ ಅಂಬರೀಶ್ ಅವರು ತಳ್ಳಿಹಾಕಿದ್ದಾರೆ.
ಸಚಿವ ಸಿಎಸ್ ಪುಟ್ಟರಾಜು ಅವರು ಐಟಿ ದಾಳಿಯನ್ನು ಸುಮಲತಾ ಅವರೇ ಮಾಡಿಸಿದ್ದಾರೆ ಇದೆಲ್ಲಾ ಅವರ ಕುತಂತ್ರ ಎಂದು ಪರೋಕ್ಷವಾಗಿ ಹೇಳಿದ್ದರು. ಇದಕ್ಕೆ ಕೆಂಡಾಮಂಡಲವಾದ ಸುಮಲತಾ ಅವರು ಐಟಿ ಅಧಿಕಾರಿಗಳೇನು ನಮ್ಮ ಮನೆಯ ಆಳುಗಳಾ ಎಂದು ಪ್ರಶ್ನೆ ಮಾಡಿದ್ದಾರೆ.

ಕೇಂದ್ರದ ಐಟಿ ಅಧಿಕಾರಿಗಳು ಮಾಡುವಂತಹ ಕೆಲಸ ಇದು, ನನಗೆ ಐಟಿ ದಾಳಿಗೂ ಸಂಬಂಧವಿಲ್ಲ, ಐಟಿ ದಾಳಿ ಮಾಡಿಸುವಂತಹ ಪವರ್ ನನಗಿಲ್ಲ, ನಾನು ಲೋಕಸಭಾ ಪಕ್ಷೇತರ ಅಭ್ಯರ್ಥಿ ಅಷ್ಟೆ, ಈ ಆರೋಪದಲ್ಲಿ ಯಾವುದೇ ಹುರುಳಿಲ್ಲ ಎಂದಿದ್ದಾರೆ.
ಐಟಿ ಅಧಿಕಾರಿಗಳು ಸತತ ಮೂರ್ನಾಲ್ಕುತಿಂಗಳುಗಳ ಕಾಲ ಒಬ್ಬರ ಮೇಲೆ ನಿಗಾ ಇಟ್ಟು ಅವರ ವಿರುದ್ಧ ಇರುವ ಆರೋಪದಲ್ಲಿ ಹುರುಳಿದೆಯೇ ಎಂದು ತಿಳಿದುಕೊಂಡು ದಾಖಲೆ ಸಮೇತರಾಗಿ ದಾಳಿ ಮಾಡುತ್ತಾರೆ. ನಾವು ಅಂದುಕೊಂಡಾಕ್ಷಣ ದಾಳಿ ನಡೆಯುವುದಿಲ್ಲ. ಹಾಗಾದರೆ ಯಶ್ ಮನೆಯ ಮೇಲೂ ದಾಳಿ ನಡೆದಿದೆ ಅದನ್ನು ಮೈತ್ರಿ ಪಕ್ಷದ ಕುತಂತ್ರ ಎಂದು ಕರೆಯಲಾಗುತ್ತದೆಯೇ ಎಂದು ಪ್ರಶ್ನಿಸಿದರು.
ಸಿಎಂ ಕುಮಾರಸ್ವಾಮಿ ಅವರ ಬಳಿಯೇ ಎಲ್ಲಾ ಗುಪ್ತಚರ ಇಲಾಖೆ ಇದೆ. ಪ್ರತಿಯೊಂದು ಮಾಹಿತಿಯೂ ಕೂಡ ಅವರಿಗೆ ಸಿಗುತ್ತದೆ. ಅದೆಲ್ಲವನ್ನೂ ಉಪಯೋಗಿಸಿ ದಾಳಿ ಬಗ್ಗೆ ತಿಳಿದುಕೊಳ್ಳಲಿ, ಪುಟ್ಟರಾಜು ಅವರು ಯಾವ ಲಾಜಿಕ್ ಮೇಲೆ ಈ ಹೇಳಿಕೆ ಕೊಟ್ಟಿದ್ದಾರೆ ನನಗೆ ಗೊತ್ತಿಲ್ಲ ಎಂದರು.












Click it and Unblock the Notifications