ತಮಿಳುನಾಡಿಗೆ ನೀರು ಹರಿಸದಿದ್ದರೆ ನ್ಯಾಯಾಂಗ ನಿಂದನೆಗೆ ಗುರಿಯಾಗುವುದಿಲ್ಲ-ಕುಮಾರಸ್ವಾಮಿ
ಮಂಡ್ಯ, ಸೆಪ್ಟೆಂಬರ್ 24: ಸುಪ್ರೀಂ ಕೋರ್ಟ್ ಆದೇಶದಂತೆ ತಮಿಳುನಾಡಿಗೆ ನಿತ್ಯ 5 ಸಾವಿರ ಕ್ಯೂಸೆಕ್ ನೀರನ್ನು ಹರಿಸದಿದ್ದರೆ, ಸರ್ಕಾರ ನ್ಯಾಯಾಂಗ ನಿಂದನೆಗೆ ಗುರಿಯಾಗುವುದಿಲ್ಲ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಹೇಳಿದ್ದಾರೆ.
ಜಿಲ್ಲಾ ರೈತ ಹಿತರಕ್ಷಣಾ ಸಮಿತಿ ವತಿಯಿಂದ ನಡೆಯುತ್ತಿರುವ ಕಾವೇರಿ ಹೋರಾಟಕ್ಕೆ ಬೆಂಬಲ ವ್ಯಕ್ತಪಡಿಸಿ ಮಾತನಾಡಿದ ಅವರು, ಪಾಲಿಸಲು ಸಾಧ್ಯವಾಗದ ಆದೇಶವನ್ನು ಪಾಲಿಸದಿದ್ದರೆ ಅದು ನ್ಯಾಯಾಂಗ ನಿಂದನೆ ಎಂದು ಹೇಳಲಾಗುವುದಿಲ್ಲ ಎಂದು ಬೇರೊಂದು ಪ್ರಕರಣಕ್ಕೆ ಸಂಬಂಧಿಸಿದಂತೆ ಸುಪ್ರೀಂಕೋರ್ಟ್‌ನ ಮುಖ್ಯ ನ್ಯಾಯಾಧೀಶರಾದ ಉದಯ್ ಉಮೇಶ್ ಲಲಿತ್ ಸೆ.20, 2016ರಲ್ಲಿ ತೀರ್ಪು ನೀಡಿದ್ದಾರೆ. ತಮಿಳುನಾಡಿಗೆ ನಿತ್ಯ 5 ಸಾವಿರ ಕ್ಯೂಸೆಕ್ ನೀರು ಬಿಡುವಂತೆ ಆದೇಶಿಸಿರುವುದು ಪಾಲಿಸಲಾಗದ ಆದೇಶ. ಹಾಗಾಗಿ ನೀರು ಬಿಡದಿದ್ದರೆ ನ್ಯಾಯಾಂಗ ನಿಂದನೆಯಾಗದು. ಈ ಪ್ರಕರಣಕ್ಕೂ ತೀರ್ಪು ಅನ್ವಯವಾಗಲಿದೆ ಎಂದು ಹೇಳಿದರು.

ಕಾಂಗ್ರೆಸ್ ಸರ್ಕಾರ ಕಾನೂನು ತಜ್ಞರನ್ನಾಗಿ ಇಟ್ಟುಕೊಂಡಿರುವವರನ್ನು ಆ ದೇವರೇ ಕಾಪಾಡಬೇಕು. ಅವರೆಲ್ಲ ಏನು ಅಧ್ಯಯನ ಮಾಡಿದ್ದಾರೆ. ನೀರಾವರಿ ಅಧಿಕಾರಿಗಳೂ ಸರಿಯಾದ ಮಾಹಿತಿ ಕೊಡುತ್ತಿಲ್ಲ. ಸರ್ಕಾರವೂ ಸಮರ್ಥವಾದ ಮಂಡಿಸುವ ತಜ್ಞರನ್ನು ಇಟ್ಟುಕೊಂಡಿಲ್ಲ. ಇವೆಲ್ಲವೂ ಕರ್ನಾಟಕಕ್ಕೆ ನಿರಂತರ ಅನ್ಯಾಯವಾಗಲು ಕಾರಣವಾಗಿದೆ ಎಂದು ದೂರಿದರು.
2007ರಲ್ಲಿ ನಾನು ಮುಖ್ಯಮಂತ್ರಿಯಾಗಿದ್ದಾಗ ಕಾವೇರಿ ನ್ಯಾಯಮಂಡಳಿ ಅಂತಿಮ ತೀರ್ಪು ಹೊರಬಿದ್ದಾಗ ನೀರು ಹಂಚಿಕೆ ಸಮರ್ಪಕವಾಗಿಲ್ಲ ಎಂದು ಪುನರ್‌ಪರಿಶೀಲನಾ ಅರ್ಜಿ ಸಲ್ಲಿಸಿದ್ದೆ. 2018ರಲ್ಲಿ ಮತ್ತೆ ನಾನೇ ಮುಖ್ಯಮಂತ್ರಿಯಾಗಿದ್ದಾಗ 14.75 ಟಿಎಂಸಿ ನೀರು ರಾಜ್ಯಕ್ಕೆ ಹೆಚ್ಚುವರಿಯಾಗಿ ಸಿಕ್ಕಿತ್ತು. ಆ ವೇಳೆ ಸುಪ್ರೀಂಕೋರ್ಟ್ ಇನ್ನು ಮುಂದೆ ಜಲವಿವಾದಕ್ಕೆ ಸಂಬಂಧಿಸಿದಂತೆ ವ್ಯಾಜ್ಯವನ್ನು ನನ್ನ ಮುಂದೆ ತರಬೇಡಿ. ಪ್ರಾಧಿಕಾರದ ಮುಂದೆ ಹೋಗುವಂತೆ ತಿಳಿಸಿತ್ತು. ಆಗಲೂ ನಾನು ಪ್ರತಿಭಟನೆ ನಡೆಸಿದ್ದೆ ಎಂದರು.
ಪ್ರಾಧಿಕಾರಕ್ಕೆ ಸದಸ್ಯರನ್ನೂ ಕಳುಹಿಸಿಕೊಡಲಿಲ್ಲ. ಸಂಕಷ್ಟ ಸೂತ್ರ ರಚನೆಯಾಗಿಲ್ಲ. ನಮಗೆ ನೀರಿನ ಮೇಲಿನ ಹಕ್ಕು ಇನ್ನೂ ಸಿಗಬೇಕು ಎಂದು ಹೋರಾಟ ನಡೆಸಿದ್ದೆ. ಆದರೆ, ಈ ಸರ್ಕಾರಕ್ಕೆ ರೈತರು, ಸಾಮಾನ್ಯ ಜನರ ಬಗ್ಗೆ ಕಾಳಜಿಯೇ ಇಲ್ಲದಂತೆ ವರ್ತಿಸುತ್ತಿದೆ ಎಂದು ಕಾಂಗ್ರೆಸ್ ಸರ್ಕಾರವನ್ನು ದೂರಿದರು.
ಸಂಕಷ್ಟ ಸೂತ್ರದ ಬಗ್ಗೆ ಈಗ ಎಲ್ಲರೂ ಧ್ವನಿ ಎತ್ತುತ್ತಿದ್ದಾರೆ. ನಾನು ಅಂದೇ ಇದರ ಬಗ್ಗೆ ಹೋರಾಟ ನಡೆಸಿದ್ದೆ. ಈಗಲೂ ಸರ್ಕಾರ ಸಂಕಷ್ಟ ಸೂತ್ರ ರಚನೆಗೆ ಬಿಗಿಪಟ್ಟು ಹಿಡಿಯಬೇಕು. ನಮ್ಮಲ್ಲಿ ನೀರಿಲ್ಲ. ಒಂದು ಬೆಳೆ ಬೆಳೆಯಲಾಗದ ಸ್ಥಿತಿಯಲ್ಲಿದ್ದೇವೆ. ಸುಪ್ರೀಂ ಕೋರ್ಟ್ ಹೊರಡಿಸಿರುವ ಆದೇಶ ಪಾಲಿಸಲು ಸಾಧ್ಯವಾಗದಿರುವುದರಿಂದ ನೀರನ್ನು ಸ್ಥಗಿತಗೊಳಿಸಿ ಕಾನೂನು ಹೋರಾಟ ಮುಂದುವರೆಸುವಂತೆ ಕಾಂಗ್ರೆಸ್ ಸರ್ಕಾರಕ್ಕೆ ಸಲಹೆ ನೀಡಿದರು.
ಈ ವೇಳೆ ಶಾಸಕರಾದ ಜಿ.ಟಿ.ದೇವೇಗೌಡ, ಮುನಿರತ್ನ, ಮಾಜಿ ಶಾಸಕರಾದ ಸಿ.ಎಸ್.ಪುಟ್ಟರಾಜು, ಡಿ.ಸಿ.ತಮ್ಮಣ್ಣ, ರವೀಂದ್ರ ಶ್ರೀಕಂಠಯ್ಯ, ಕೆ.ಸುರೇಶ್‌ಗೌಡ, ಡಾ.ಕೆ.ಅನ್ನದಾನಿ, ವಿಧಾನಪರಿಷತ್ ಮಾಜಿ ಸದಸ್ಯರಾದ ಕೆ.ಟಿ.ಶ್ರೀಕಂಠೇಗೌಡ, ಜಿ.ಬಿ.ಶಿವಕುಮಾರ್, ನಿಖಿಲ್ ಕುಮಾರಸ್ವಾಮಿ, ಜೆಡಿಎಸ್ ಜಿಲ್ಲಾಧ್ಯಕ್ಷ ಡಿ.ರಮೇಶ್, ಮನ್‌ಮುಲ್ ಮಾಜಿ ಅಧ್ಯಕ್ಷ ಬಿ.ಆರ್.ರಾಮಚಂದ್ರ ಸೇರಿದಂತೆ ಇತರರು ಉಪಸ್ಥಿತರಿದ್ದರು.












Click it and Unblock the Notifications