ನಿಸರ್ಗದ ಚೆಲುವಿನ ತಾಣ ಮಂಡ್ಯದ ಹೇಮಗಿರಿಯಲ್ಲಿ ಜಾತ್ರೆ ಆರಂಭ: ವಿಶೇಷತೆ ತಿಳಿಯಿರಿ
ಮಂಡ್ಯ, ಜನವರಿ 30: ಮಂಡ್ಯ ಜಿಲ್ಲೆಯ ಕೆ.ಆರ್.ಪೇಟೆ ತಾಲೂಕಿನ ಪುರಾಣ ಪ್ರಸಿದ್ದ ಹೇಮಗಿರಿ ಜಾತ್ರೆ ಮೂಲಕ ಚಾಲನೆ ದೊರೆತಿದೆ. ರೈತರು ತಮ್ಮ ಜಾನುವಾರುಗಳೊಂದಿಗೆ ಹೇಮಗಿರಿ ಬೆಟ್ಟದ ಸುತ್ತ ನೆರೆದಿದ್ದು, ದನಗಳ ಜಾತ್ರೆ ಆರಂಭಕ್ಕೆ ಮುನ್ನವೇ ರೈತರು ಜಾನುವಾರುಗಳೊಂದಿಗೆ ಬಂದಿರುವುದು ಜಾತ್ರೆಗೆ ಕಳೆಕಟ್ಟಿದೆ. ಹಾಗೆಯೇ ಜಾತ್ರೆಗೆ ಸಂಬಂಧಿಸಿದಂತೆ ವಿವಿಧ ಕೈಂಕರ್ಯಗಳಿಗೂ ವೇಗ ದೊರೆತಿದೆ. ಹೀಗಾಗಿ ಎಲ್ಲಿ ನೋಡಿದರಲ್ಲಿ ಜಾತ್ರಾ ಸಂಭ್ರಮ ಮನೆಮಾಡಿದೆ.
ಹೇಮಗಿರಿ ಜಾತ್ರೆಯಲ್ಲಿ ಹತ್ತು ಹಲವು ಕಾರ್ಯಕ್ರಮಗಳು ಇವೆಯಾದರೂ ದನಗಳ ಜಾತ್ರೆ ವಿಶೇಷವಾಗಿದೆ. ರೈತರ ಒಡನಾಡಿಯಾಗಿರುವ ದನಗಳಿಗೆ ಜಾತ್ರೆಯಲ್ಲಿ ಹಿಂದಿನಿಂದಲೂ ಆದ್ಯತೆ ನೀಡಲಾಗಿರುವುದರಿಂದ ಸುತ್ತಮುತ್ತಲಿನ ಹತ್ತೂರಿನ ರೈತರಲ್ಲದೆ, ದೂರದ ಊರುಗಳಿಂದಲೂ ಜಾನುವಾರುಗಳೊಂದಿಗೆ ರೈತರು ಆಗಮಿಸಿ ಜಾತ್ರೆ ಕಳೆಕಟ್ಟುವುದು ಗಮನಾರ್ಹವಾಗಿದೆ.

ಹಾಗೆಯೇ ಇಲ್ಲಿ ಜಾನುವಾರುಗಳ ಮಾರಾಟವೂ ಜೋರಾಗಿಯೇ ನಡೆಯುತ್ತದೆ. ಸದ್ಯ ಹೇಮಗಿರಿ ಬೆಟ್ಟದ ಸುತ್ತಲೂ ದನಗಳೇ ಕಾಣಿಸುತ್ತಿದ್ದು, ಈ ಪೈಕಿ ಬಂಡೀಹೊಳೆ ಗ್ರಾಮದ ಬಿ.ಆರ್.ದರ್ಶನ್ ಎನ್ನುವವರಿಗೆ ಸೇರಿದ ಸುಮಾರು 3.5 ಲಕ್ಷ ಬೆಲೆ ಬಾಳುವ ಹಳ್ಳಿಕಾರ್ ತಳಿಯ ಎತ್ತುಗಳು ಜಾತ್ರೆಯ ಆಕರ್ಷಣೆಯಾಗಿವೆ.
ಇನ್ನು ಹೇಮಗಿರಿ ಜಾತ್ರೆ ಬಗ್ಗೆ ಹೇಳಬೇಕೆಂದರೆ ಇಲ್ಲಿ ನಡೆಯುವ ಕಲ್ಯಾಣ ವೆಂಕಟರಮಣ ಸ್ವಾಮಿಯ ಬ್ರಹ್ಮರಥೋತ್ಸವ ಪ್ರಮುಖವಾಗಿದ್ದು, ಈ ರಥೋತ್ಸವ ಬಾರಿ ಫೆ.05 ಬುಧವಾರ ಬೆಳಿಗ್ಗೆ 10 ರಿಂದ 10.20 ಗಂಟೆಯೊಳಗೆ ನಡೆಯಲಿದೆ. ಬ್ರಹ್ಮ ರಥೋತ್ಸವದ ಹಿನ್ನಲೆಯಲ್ಲಿ ಕಲ್ಯಾಣ ವೆಂಟಕರಮಣ ಸ್ವಬಾಮಿಯ ಉತ್ಸವ ಮೂರ್ತಿಯನ್ನು ಬಂಡೀಹೊಳೆ ಗ್ರಾಮದಿಂದ ಹೇಮಗಿರಿ ಬೆಟ್ಟಕ್ಕೆ ತಂದು ಪೂಜಾ ಕೈಂಕರ್ಯಗಳನ್ನು ನಡೆಸಲಾಗಿದೆ. ಪ್ರತಿದಿನವೂ ಒಂದೊಂದು ರೀತಿಯ ಕೈಂಕರ್ಯಗಳು ನಡೆಯುತ್ತಿವೆ.

ಫೆ.5, ಕಲ್ಯಾಣ ವೆಂಕಟರಮಣ ಸ್ವಾಮಿ ರಥೋತ್ಸವ
ಜ.31ರ ಶುಕ್ರವಾರ ರಾತ್ರಿ ಉತ್ಸವ ಅಂಕುರಾರ್ಪಣ ಕಾರ್ಯಕ್ರಮ, ಫೆ.01 ರ ಶನಿವಾರ ಮತ್ತು ಫೆ.02 ರ ಭಾನುವಾರ ರಾತ್ರಿ 08 ಗಂಟೆಗೆ ದೇವರ ಉತ್ಸವ, ಫೆ.03 ಸೋಮುವಾರ ರಾತ್ರಿ 08 ಗಂಟೆಗೆ ಕಲ್ಯಾಣ ವೆಂಕಟರಮಣ ಸ್ವಾಮಿಯ ಪ್ರಹ್ಲಾದೋತ್ಸವ ಹಾಗೂ ರಾತ್ರಿ ಉತ್ಸವ, ಪುಷ್ಪ ಮಂಟಪೋತ್ಸವ, ಫೆ.04 ಮಂಗಳವಾರ ಮಧ್ಯಾಹ್ನ 01 ಗಂಟೆಗೆ ಕಲ್ಯಾಣ ವೆಂಕಟರಮಣ ಸ್ವಾಮಿಯ ದೇವರ ಉತ್ಸವವನ್ನು ಮಂಟಪಕ್ಕೆ ಕೊಂಡೊಯ್ಯುವುದು ಮತ್ತು ಬ್ರಾಹ್ಮಣರಿಗೆ ಅನ್ನಸಂತರ್ಪಣೆ ನಡೆಯಲಿದೆ. ಅದೇ ದಿನ ರಾತ್ರಿ 08 ಗಂಟೆಗೆ ದೇವರ ಉತ್ಸವ, ಕಲ್ಯಾಣೋತ್ಸವ ಮತ್ತು ಕಲ್ಯಾಣ ಮಂಟಪ ಸೇವೆ ನಡೆಯಲಿದೆಯಲ್ಲದೆ ದೇವಾಲಯದ ಆವರಣದಲ್ಲಿರುವ ಮೂಲ ಅಮ್ಮನವರಿಗೆ ಅಲಂಕಾರ ಸೇವೆಗಳು ನಡೆಯಲಿವೆ.
ಫೆ.05ರಂದು ಬ್ರಹ್ಮ ರಥೋತ್ಸವ ವೈದಿಕ ವಿಧಿ ವಿಧಾನಗಳ ಅನುಸಾರ ನಡೆಯಲಿದೆ. ರಥೋತ್ಸವದ ನಂತರವೂ ಫೆ.06 ಗುರುವಾರ, ಫೆ,07ರ ಶುಕ್ರವಾರ ಮತ್ತು ಫೆ.08ರ ಶನಿವಾರದ ವರೆಗೆ ಕಲ್ಯಾಣ ವೆಂಕಟರಮಣ ಸ್ವಾಮಿ ದೇವಾಲಯದ ಆವರಣದಲ್ಲಿ ಸ್ವಾಮಿಯ ಮಂಟಪೋತ್ಸವ, ಶಯನೋತ್ಸವ, ಅನ್ನ ಸಂತರ್ಪಣೆ ಮುಂತಾದ ಕಾರ್ಯಕ್ರಮ ನಡೆಯಲಿದ್ದು ಫೆ.09ರ ಭಾನುವಾರ ರಾತ್ರಿ 08 ಗಂಟೆಗೆ ಹೇಮಾವತಿ ನದಿಯಲ್ಲಿ ತೆಪ್ಪೋತ್ಸವ ನಡೆಯಲಿದೆ. ಫೆ.10 ಸೋಮುವಾರ ಕಲ್ಯಾಣ ವೆಂಕಟರಮಣ ಸ್ವಾಮಿಯ ಮೂಲ ವಿಗ್ರಹಕ್ಕೆ ಪಂಚಾಮೃತ ಅಭಿಷೇಕ ನಡೆಸಿ ಸಂಜೆ ಉತ್ಸವ ಮೂರ್ತಿಯನ್ನು ಬಂಡಿಹೊಳೆ ಗ್ರಾಮದ ಸ್ವಸ್ಥಾನಕ್ಕೆ ತರುವ ಮೂಲಕ ಜಾತ್ರಾ ಮಹೋತ್ಸವಕ್ಕೆ ತೆರೆಬೀಳಲಿದೆ.

ಹೇಮಗಿರಿ ಕ್ಷೇತ್ರ ನಿಸರ್ಗ ಸುಂದರ ತಾಣ
ಇನ್ನು ಹೇಮಗಿರಿ ಕ್ಷೇತ್ರದ ಬಗ್ಗೆ ಹೇಳಬೇಕೆಂದರೆ ಇದೊಂದು ನಿಸರ್ಗ ಸುಂದರ ತಾಣವಾಗಿದ್ದು, ಇಲ್ಲಿನ ಬೆಟ್ಟ ಸಾಲುಗಳು ಅದರಾಚೆಗೆ ಬೆಟ್ಟಗಳನ್ನು ಸುತ್ತುವರಿದು ವಿಶಾಲವಾಗಿ ಹರಿಯುವ ಹೇಮಾವತಿ ನದಿ ಎಲ್ಲವೂ ಆಕರ್ಷಕವಾಗಿದೆ. ಇಲ್ಲಿಯ ಗುಡ್ಡದ ಮೇಲಿರುವ ವೆಂಕಟರಮಣ ಸ್ವಾಮಿ ಗುಡಿಯು ಆಧುನಿಕ ಕಾಲದಾಗಿದ್ದು, ವೈಕುಂಠವಾಸಿ ವಿಷ್ಣುವು ಇಲ್ಲಿಗೆ ಬಂದು ವಿಶ್ರಾಂತಿ ಪಡೆಯುತ್ತಿದ್ದ ಪುಣ್ಯಕ್ಷೇತ್ರ ಎಂಬ ನಂಬಿಕೆ ಜನರಲ್ಲಿದೆ. ಇಲ್ಲಿನ ಬೆಟ್ಟಗುಡ್ಡಗಳು, ದೇಗುಲ, ನದಿ ಮಾತ್ರವಲ್ಲದೆ ನದಿಯಿಂದ ಸೃಷ್ಟಿಯಾಗಿರುವ ನೀರಿನ ಝರಿ ಭಕ್ತರು, ಪ್ರವಾಸಿಗರು ಎಲ್ಲರನ್ನು ಸೆಳೆಯುತ್ತದೆ.
ಇಲ್ಲಿ ಹೇಮಾವತಿ ನದಿಗೆ 1880ರಲ್ಲಿ 415 ಮೀ. ಉದ್ದದ ಅಣೆಕಟ್ಟನ್ನು ನಿರ್ಮಿಸಲಾಗಿದ್ದು, ಇದರಿಂದ ಸುಮಾರು 310 ಎಕರೆಯಷ್ಟು ವಿಶಾಲವಾದ ದ್ವೀಪ (ಹೊಸಪಟ್ಟಣ) ವನ್ನು ಸೃಷ್ಟಿ ಮಾಡಲಾಗಿದೆ. ಇಲ್ಲಿ ಪ್ರಾಚೀನ ಕಾಲದ ಕೋಟೆಯ ಅವಶೇಷಗಳಿದ್ದು, ಮರಗಿಡಗಳಿಂದ ಆವೃತ್ತವಾಗಿರುವ ಇಲ್ಲಿ ಹಲವು ಬಗೆಯ ಪಕ್ಷಿಗಳು ನೆಲೆನಿಂತಿವೆ. ಹೇಮಗಿರಿ ಕ್ಷೇತ್ರವು ಕೆ.ಆರ್.ಪೇಟೆಯಿಂದ 10 ಕಿ.ಮೀ ದೂರದಲ್ಲಿದ್ದು, ಮೈಸೂರಿಗೆ 65 ಕಿ.ಮೀ ಹಾಗೂ ಮಂಡ್ಯಕ್ಕೆ 70 ಕಿ.ಮೀ ದೂರದಲ್ಲಿದೆ.












Click it and Unblock the Notifications