ಮಂಡ್ಯ ಬಾಲಕಿ ಕೊಲೆ ಆರೋಪಿಗೆ ಕ್ಷಮೆ ಎನ್ನುವುದೇ ಇರಬಾರದು-ಕುಮಾರಸ್ವಾಮಿ
ಮಂಡ್ಯ, ಅಕ್ಟೋಬರ್ 13: ಮಂಡ್ಯ ಜಿಲ್ಲೆಯ ಮಳವಳ್ಳಿ ಪಟ್ಟಣದಲ್ಲಿ ನಡೆದ ವಿದ್ಯಾರ್ಥಿನಿ ಕೊಲೆ ಪ್ರಕರಣಕ್ಕೆ ಆರೋಪಿಯನ್ನು ಮಂಡ್ಯ ಪೊಲೀಸರು ಬಂಧಿಸಿದ್ದಾರೆ. ಆರೋಪಿಯನ್ನು ಪೊಲೀಸರು ಗುರುವಾರ ನ್ಯಾಯಾಲಯಕ್ಕೆ ಹಾಜರು ಪಡಿಸಲಿದ್ದಾರೆ.
ಮಂಡ್ಯದಲ್ಲಿ ಬಾಲಕಿ ಕೊಲೆ ಪ್ರಕರಣದ ಬಗ್ಗೆ ಮಾಜಿ ಮುಖ್ಯಮಂತ್ರಿ ಎಚ್.ಡಿ ಕುಮಾರಸ್ವಾಮಿ ಪ್ರತಿಕ್ರಿಯಿಸಿದ್ದು, ಆರೋಪಿಗೆ ತಕ್ಕ ಶಿಕ್ಷೆಯಾಗಬೇಕು ಎಂದು ಒತ್ತಾಯಿಸಿದ್ದಾರೆ.
ಈ ಬಗ್ಗೆ ಟ್ವೀಟ್ ಮಾಡಿರುವ ಕುಮಾರಸ್ವಾಮಿ, "ಮಳವಳ್ಳಿಯಲ್ಲಿ ಟ್ಯೂಶನ್‌ಗೆ ಬಂದ ಶಾಲಾ ಬಾಲಕಿಯ ಮೇಲೆ ಅತ್ಯಾಚಾರ ಎಸಗಿ ಬರ್ಬರವಾಗಿ ಕೊಲೆ ಮಾಡಿರುವ ಘಟನೆ ನಾಗರೀಕ ಸಮಾಜ ತಲೆ ತಗ್ಗಿಸುವಂತಹ ಹೇಯ ಘಟನೆ. ಇಂಥ ಪಾತಕ ಕೃತ್ಯವನ್ನು ನಾನು ಖಂಡಿಸುತ್ತೇನೆ" ಎಂದಿದ್ದಾರೆ.

ಇಂತಹ ಘಟನೆ ನಡೆಯದಂತೆ ಕಟ್ಟೆಚ್ಚರ ವಹಿಸಬೇಕು
"ತಪ್ಪು ಮಾಡಿದ ಅಪರಾಧಿಗೆ ಕಠಿಣ ಶಿಕ್ಷೆ ಆಗಲೇಬೇಕು ಹಾಗೂ ಆ ಪಾತಕಿಗೆ ಕ್ಷಮೆ ಎನ್ನುವುದೇ ಇರಬಾರದು. ಭವಿಷ್ಯದಲ್ಲಿ ಇಂಥ ನೀಚ ಘಟನೆಗಳು ಮರುಕಳಿಸದಂತೆ ಪೊಲೀಸರು ಕಟ್ಟೆಚ್ಚರ ವಹಿಸಬೇಕು. ಹೆತ್ತ ಮಗುವನ್ನು ಕಳೆದುಕೊಂಡು ಶೋಕದಲ್ಲಿರುವ ಆ ಬಾಲಕಿಯ ಪೋಷಕರ ದುಃಖದಲ್ಲಿ ನಾನೂ ಭಾಗಿ. ನೂರುಕಾಲ ಬಾಳಿ ಬದುಕಬೇಕಿದ್ದ ಮಗುವಿನ ದುರ್ಮರಣ ನನಗೆ ಅತೀವ ನೋವುಂಟು ಮಾಡಿದೆ ಆ ಬಾಲಕಿಯ ಆತ್ಮಕ್ಕೆ ಚಿರಶಾಂತಿ ಸಿಗಲಿ ಹಾಗೂ ದುಃಖವನ್ನು ಭರಿಸುವ ಶಕ್ತಿಯನ್ನು ಆ ತಂದೆ ತಾಯಿಗೆ ಭಗವಂತ ಕರುಣಿಸಲಿ ಎಂದು ಪ್ರಾರ್ಥಿಸುತ್ತೇನೆ," ಎಂದಿದ್ದಾರೆ.

ನಾಗರೀಕ ಸಮಾಜವೇ ತಲೆತಗ್ಗಿಸುವ ಕೆಲಸ
ಮಳವಳ್ಳಿ ಘಟನೆ ಬಗ್ಗೆ ಶಾಸಕ ಕೆ.ಅನ್ನದಾನಿ ಪ್ರತಿಕ್ರಿಯಿಸಿದ್ದಾರೆ. "ನೆನ್ನೆ ನಡೆದ ಬಾಲಕಿ ಸಾವು ನಿಜಕ್ಕೂ ನನ್ನ ಮನಸ್ಸನ್ನು ತುಂಬಾ ಗಾಸಿಗೊಳಿಸಿದೆ. ಬಾಳಿ ಬದುಕಬೇಕಿದ್ದ ಬಾಲಕಿ ಇಂದು ಶವವಾಗಿ ಸಿಕ್ಕಿರುವುದು ನಿಜಕ್ಕೂ ದುರಂತವೇ ಸರಿ. ಮಗಳೇ ನಿನ್ನ ರೀತಿಯ ಸಾವು ಇನ್ನು ಯಾರಿಗೂ ಬಾರದಿರಲಿ. ಇಂತಹ ನೀಚ ಕೃತ್ಯವೆಸಗಿರುವ ಪಾಪಿಗೆ ತಕ್ಕ ಶಿಕ್ಷೆಯಾಗಲೇಬೇಕು. ಇದು ನಾಗರೀಕ ಸಮಾಜವೇ ತಲೆತಗ್ಗಿಸುವ ಕೆಲಸ ಈ ರೀತಿ ಘಟನೆಗಳು ಮತ್ತೆ ನಡೆಯದಿರಲಿ," ಎಂದು ತಮ್ಮ ಸಾಮಾಜಿಕ ಜಾಲತಾಣದಲ್ಲಿ ಬರೆದು ಕೊಂಡಿದ್ದಾರೆ.

ಮಗಳೇ ನಿನ್ನ ಆತ್ಮಕ್ಕೆ ಶಾಂತಿ ದೊರಕಲಿ
"ಈ ದುರಂತ ಘಟನೆ ನಡೆಯಬಾರದಿತ್ತು ನಡೆದುಹೋಗಿದೆ ಈ ಘಟನೆ ನಾಗರೀಕ ಸಮಾಜ ತಲೆ ತಗ್ಗಿಸುವ ಕೆಲಸ. ಆರೋಪಿಗೆ ಶಿಕ್ಷೆಯಾಗಲೇಬೇಕು. ನಿನ್ನ ಸಾವಿಗೆ ನ್ಯಾಯ ಸಿಗುವವರೆಗೂ ನಾನು ನಿನ್ನ ಕುಟುಂಬದ ಜೊತೆಗೆ ಇರುತ್ತೇನೆ. ಮಗಳೇ ನಿನ್ನ ಆತ್ಮಕ್ಕೆ ಶಾಂತಿ ದೊರಕಲಿ. ನಿನ್ನ ತಂದೆ ತಾಯಿ ಹಾಗೂ ನಿನ್ನ ಬಂಧು ಬಾಂಧವರಿಗೆ ದುಃಖ ಭರಿಸುವ ಶಕ್ತಿಯನ್ನು ದೇವರು ಕರುಣಿಸಲಿ ಎಂದು ದೇವರಲ್ಲಿ ಬೇಡುತ್ತೇನೆ. ನಿನ್ನ ಆತ್ಮಕ್ಕೆ ಶಾಂತಿಸಿಗಲಿ," ಎಂದು ಶಾಸಕ ಅನ್ನದಾನಿ ಸಂತಾಪ ವ್ಯಕ್ತಪಡಿಸಿದ್ದಾರೆ.

ಮಾನವ ಕುಲಕ್ಕೆ ನಾಚಿಕೆಯ ಸಂಗತಿ ಎಂದ ನಿಖಿಲ್
ಇನ್ನು ಘಟನೆಯ ಬಗ್ಗೆ ಜೆಡಿಎಸ್ ಯುವ ಘಟಕದ ಅಧ್ಯಕ್ಷ, ನಿಖಿಲ್ ಕುಮಾರಸ್ವಾಮಿ ಬೇಸರ ವ್ಯಕ್ತಪಡಿಸಿದ್ದಾರೆ. "ಮಂಡ್ಯ ಜಿಲ್ಲೆ ಮಳವಳ್ಳಿ ತಾಲೂಕಿನಲ್ಲಿ ಟ್ಯೂಶನ್‍ಗೆ ಹೋಗಿದ್ದ ಬಾಲಕಿಯನ್ನು ಕರೆದೊಯ್ದು ಅತ್ಯಾಚಾರ ವೆಸಗಿ ಕೊಲೆ ಮಾಡಿರುವ ವಿಷಯ ತಿಳಿದು ಮನಸ್ಸಿಗೆ ತೀವ್ರ ಆಘಾತವಾಗಿದೆ. ಇಂತಹ ಘಟನೆಗಳು ಮಾನವ ಕುಲಕ್ಕೆ ನಾಚಿಕೆಯ ಸಂಗತಿ. ಇಂತಹ ನೀಚ ಕಾರ್ಯವೆಸಗಿರುವ ಪಾಪಿಗಳಿಗೆ ಯಾವ ಶಿಕ್ಷೆ ಕೊಟ್ಟರೂ ಕಡಿಮೆಯೇ. ರಾಜ್ಯ ಸರ್ಕಾರ ಕೂಡಲೇ ಆರೋಪಿ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಿ. ಕಂದ ನಿನ್ನ ಸಾವಿಗೆ ನ್ಯಾಯ ದೊರಕಲಿ ಯಾವ ಹೆಣ್ಣು ಮಕ್ಕಳಿಗೂ ಈ ರೀತಿ ಅನ್ಯಾಯವಾಗದಿರಲಿ," ಎಂದಿದ್ದಾರೆ.












Click it and Unblock the Notifications