ಮಂಡ್ಯ: ಮುಚ್ಚುವ ಹಂತದಲ್ಲಿ ಸಿಎಂ ಬಿಎಸ್ವೈ ಓದಿದ ಸರ್ಕಾರಿ ಶಾಲೆ
ಮಂಡ್ಯ, ಸೆಪ್ಟೆಂಬರ್ 10: ಕಳೆದ ಇಪ್ಪತ್ತು ವರ್ಷಗಳ ಹಿಂದೆ ಮಂಡ್ಯ ಜಿಲ್ಲೆಯಲ್ಲಿ ಅತೀ ಹೆಚ್ಚು ವಿದ್ಯಾರ್ಥಿಗಳಿದ್ದ ಶಾಲೆ ಅದು. ಆ ಶಾಲೆಯಲ್ಲಿ ಸಿಎಂ ಯಡಿಯೂರಪ್ಪನವರು ಸಹ ಅಭ್ಯಾಸ ಮಾಡಿದ್ದರು. ಸದ್ಯ ಈ ಶಾಲೆಯಲ್ಲಿ ಇರುವುದು ಕೇವಲ 8 ವಿದ್ಯಾರ್ಥಿಗಳು ಮತ್ತು 4 ಜನ ಶಿಕ್ಷಕರಿದ್ದಾರೆ.
ಮಂಡ್ಯ ನಗರದ ಆನೆಕೆರೆ ಬೀದಿಯಲ್ಲಿರುವ ಈ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಸಿಎಂ ಬಿ.ಎಸ್ ಯಡಿಯೂರಪ್ಪನವರು ವ್ಯಾಸಂಗ ಮಾಡಿದ್ದರು. ಅವರು 1954-55 ರಲ್ಲಿ ಮೂರನೇ ತರಗತಿ ದಾಖಲಾಗಿ ವ್ಯಾಸಂಗ ಮಾಡಿದ್ದರು. ಆದರೆ ಸದ್ಯ ಈ ಶಾಲೆ ಮುಚ್ಚುವ ಹಂತದಲ್ಲಿದೆ.
ಆಗ ಸಿಎಂ ಯಡಿಯೂರಪ್ಪ ಓದಿದ್ದ ಇದೇ ಶಾಲೆ ಇಂದು ಮುಚ್ಚುವ ದುಸ್ಥಿತಿಗೆ ತಲುಪಿದೆ. ಸರಿಯಾದ ನಿರ್ವಹಣೆ ಇಲ್ಲದೆ ಶಾಲೆಯ ಕಟ್ಟಡ ಶಿಥಿಲವಾಗಿದ್ದರೆ, ಮತ್ತೊಂದು ಕಡೆ ಶಾಲೆಗೆ ಓದಲು ಮಕ್ಕಳಿಲ್ಲದ ಪರಿಸ್ಥಿತಿ ಎದುರಾಗಿದೆ. ಸದ್ಯ ಈ ಶಾಲೆಯಲ್ಲಿ ಕೇವಲ 8 ಜನ ಮಕ್ಕಳಿದ್ದರೆ, ಅವರಿಗೆ 4 ಜನ ಶಿಕ್ಷಕರಿದ್ದಾರೆ. ಈ ಹಿಂದೆ 800 ರಿಂದ 900 ಮಕ್ಕಳು ಈ ಶಾಲೆಯಲ್ಲಿ ಕಲಿಯುತ್ತಿದ್ದರು.

ಈ ಕುರಿತು ಶಿಕ್ಷಣ ಇಲಾಖೆಯ ಅಧಿಕಾರಿಗಳನ್ನು ಈ ಶಾಲೆಯಲ್ಲಿ ಮಕ್ಕಳ ಸಂಖ್ಯೆ ಏಕೆ ಕಡಿಮೆಯಾಗಿದೆ ಎಂದು ಕೇಳಿದರೆ, ಸದ್ಯ ಈ ಶಾಲೆ ಇರುವ ಪ್ರದೇಶ ವಾಣಿಜ್ಯ ವಹಿವಾಟಿನ ಕೇಂದ್ರವಾಗಿದೆ. ಹೀಗಾಗಿ ಇಲ್ಲಿಗೆ ವಿದ್ಯಾರ್ಥಿಗಳು ಬರುತ್ತಿಲ್ಲ. ಮುಂದಿನ ದಿನಗಳಲ್ಲಿ ಈ ಶಾಲೆಗೆ ಹೆಚ್ಚು ವಿದ್ಯಾರ್ಥಿಗಳು ಬರುವಂತೆ ಅನೇಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವುದಾಗಿ ಹೇಳಿದರು.
ಶಾಲೆಯ ಕಟ್ಟಡ ಅಭಿವೃದ್ಧಿಯ ಕುರಿತು ಕೇಳಿದರೆ, ಹೀಗಾಗಲೇ ನಾವು 6 ಲಕ್ಷ ರುಪಾಯಿಯನ್ನು ಶಾಲೆಯ ಅಭಿವೃದ್ಧಿಗೆ ನೀಡಿದ್ದು, ನಿರ್ಮಿತಿ ಕೇಂದ್ರದ ಮೂಲಕ ಅಭಿವೃದ್ಧಿ ಪಡಿಸಲಾಗುತ್ತಿದೆ ಎಂದು ತಿಳಿಸಿದರು.
ಕೆಲವೇ ದಿನಗಳಲ್ಲಿ ಶಾಲೆಯ ಕಟ್ಟಡವನ್ನು ದುರಸ್ಥಿಪಡಿಸಿ, ಹೆಚ್ಚು ಮಕ್ಕಳು ಈ ಶಾಲೆಗೆ ಬರುವಂತಹ ವಾತಾವರಣವನ್ನು ಸೃಷ್ಟಿ ಮಾಡುತ್ತೇವೆ ಎನ್ನುತ್ತಾರೆ. ಸಿಎಂ ಯಡಿಯೂರಪ್ಪ ನವರು ಓದಿದ ಶತಮಾನದ ಶಾಲೆಯಾಗಿದೆ. ಆದರೆ ಇದರ ಘನತೆ ಮಾತ್ರ ಈಗ ಶಾಲೆಗೆ ಇಲ್ಲದಂತಾಗಿದೆ.












Click it and Unblock the Notifications