ಮಂಡ್ಯ: ಮಹಾಕುಂಭಮೇಳಕ್ಕೆ ಸರ್ಕಾರಿ ಆದೇಶ, ಬಸವರಾಜ ಬೊಮ್ಮಾಯಿ ಭರವಸೆ
ಮಂಡ್ಯ, ಅಕ್ಟೋಬರ್, 16; ಪ್ರತಿ 12 ವರ್ಷಕ್ಕೊಮ್ಮೆ ತ್ರಿವೇಣಿ ಸಂಗಮದಲ್ಲಿ ಕುಂಭಮೇಳ ನಡೆಯುವಂತೆ ಸರ್ಕಾರಿ ಆದೇಶ ಹೊರಡಿಸುವುದಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಘೋಷಿಸಿದರು.
ಭಾನುವಾರ (ಅಕ್ಟೋಬರ್ 16) ಕೆ.ಆರ್. ಪೇಟೆಯ ತ್ರಿವೇಣಿ ಸಂಗಮದಲ್ಲಿ ಮಹಾಕುಂಭಮೇಳದ ಸಮಾರೋಪದ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಇದೊಂದು ಪವಿತ್ರ ಕ್ಷೇತ್ರವಾಗಿದೆ. ಅಲ್ಲದೆ ಪ್ರವಾಸೋದ್ಯಮ ಕ್ಷೇತ್ರವಾಗಿ ಅಭಿವೃದ್ಧಿಪಡಿಸುವ ನಿಟ್ಟಿನಲ್ಲಿ ಅಗತ್ಯ ಕ್ರಮ ವಹಿಸುತ್ತೇನೆ. ಇಲ್ಲಿ ಪ್ರತಿ ನಿತ್ಯ ಧಾರ್ಮಿಕ ಕೈಂಕರ್ಯ ನಡೆಯಲು ಹಾಗೂ ಸಂಗಮದ ಅಭಿವೃದ್ಧಿಗೆ ಅಗತ್ಯವಿರುವಷ್ಟು ಅನುದಾನ ಕೊಡುವುದಾಗಿ ಭರವಸೆ ನೀಡಿದರು.
ಕುಂಭಮೇಳದಿಂದ ಪುಣ್ಯ ಫಲ
ಕುಂಭಮೇಳದ ಪ್ರಾಪ್ತಿ ಪುಣ್ಯಫಲದಿಂದ ಬರುತ್ತದೆ. ಪಾಪವನ್ನು ಕಳೆದು ಪುಣ್ಯವನ್ನು ಬರಿಸಿಕೊಳ್ಳುವ ಧಾರ್ಮಿಕ ವಿಧಿವಿಧಾನ ಕುಂಭಮೇಳ ಆಗಿದೆ. ನದಿಗಳು ಸಂಗಮವಾಗುವದೇ ತೀರ್ಥ ಕ್ಷೇತ್ರ. ನಿಂತ ನೀರಿನಿಂದ ಸಾಧನೆ ಆಗುವುದಿಲ್ಲ. ಹಾಗೆಯೇ ಮನಷ್ಯರು ಚಲನಶಕ್ತಿಯಿಂದ ಆಧ್ಯಾತ್ಮಿಕವಾಗಿ ಮುಂದೆ ಹೋಗಬೇಕು. ಆತ್ಮಸಾಕ್ಷಿ ಇದ್ದರೇ ಆತ್ಮಗೌರವ ಬರಲಿದೆ. ಆತ್ಮಗೌರವ ಇದ್ದವನಿಗೆ ಆತ್ಮ ಶಾಂತಿಯಿದ್ದು, ಅಂತವಹವರು ಸ್ಥಿತಪ್ರಜ್ಞನಾಗುತ್ತಾರೆ. ಇದು ಪ್ರಾಪ್ತಿ ಆಗಬೇಕಾದರೆ ಒಂದು ಗುರು, ಇನ್ನೊಂದು ಗುರಿ ಇರಬೇಕು. ಕರಾರುರಹಿತ ಪ್ರೀತಿಯೇ ಭಕ್ತಿ ಆಗಿರುತ್ತದೆ. ಈ ಭಕ್ತಿಯನ್ನು ಗುರುವಿನಲ್ಲಿ ಇಡಬೇಕು. ಗುರುವಿನಲ್ಲಿ ಭಕ್ತಿ ಸಮರ್ಪಣೆ ಮಾಡಿ ಲೀನವಾಗಬೇಕು. ಗುರುವಿನ ಆಶೀರ್ವಾದ ಇದ್ದರೆ ಮನುಷ್ಯನಲ್ಲಿ ತ್ರಿವೇಣಿ ಸಂಗಮವಾಗಿ ಮೋಕ್ಷ, ಸಾಕ್ಷತ್ಕಾರ ಸಿಗಲಿದೆ ಎಂದರು.

ಈ ಸಂದರ್ಭದಲ್ಲಿ ಆದಿಚುಂಚನಗಿರಿ ನಿರ್ಮಲಾನಂದನಾಥ ಸ್ವಾಮೀಜಿ, ಸುತ್ತೂರು ಮಠದ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ, ಅವಧೂತ ವಿನಯ್ ಗುರೂಜಿ, ಚಂದ್ರವನ ಆಶ್ರಮದ ತ್ರಿನೇತ್ರ ಮಹಾಂತ ಶಿವಯೋಗಿ ಸ್ವಾಮೀಜಿ, ಪೇಜಾವರ ಮಠದ ವಿಶ್ವಪ್ರಸನ್ನತೀರ್ಥ ಪಾದರು, ಮಾದರಚನ್ನಯ್ಯ ಗುರುಪೀಠದ ಬಸವಮೂರ್ತಿ ಮಾದರಚನ್ನಯ್ಯ ಸ್ವಾಮೀಜಿ, ಗುಜರಾತ್‌ನ ಹಿಂದೂ ಧರ್ಮ ಆಚಾರ್ಯ ಸಭಾದ ಪರಮಾತ್ಮಾನಂದ ಸರಸ್ವತಿ ಸ್ವಾಮೀಜಿ, ಶಾಸಕ ಹರ್ಷವರ್ಧನ್, ಮಾಜಿ ಸಚಿವ ಬಿ.ಸೋಮಶೇಖರ್, ಮಾಜಿ ಶಾಸಕ ಡಿ.ಮಾದೇಗೌಡ, ಪ್ರವಾಸೋದ್ಯಮ ಅಭಿವೃದ್ಧಿ ನಿಗಮದ ಅಧ್ಯಕ್ಷ ಕಾ.ಪು.ಸಿದ್ಧಲಿಂಗಸ್ವಾಮಿ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.












Click it and Unblock the Notifications