ಅಂಬರೀಶ್‌ಗೆ 'ಮಂಡ್ಯದ ಗಂಡು' ಎಂದು ಬಿರುದು ಕೊಟ್ಟಿದ್ದು ಇದೇ ವ್ಯಕ್ತಿ
ಮಂಡ್ಯ, ನವೆಂಬರ್ 25: ಅಂಬರೀಶ್ ಅವರು 'ಮಂಡ್ಯದ ಗಂಡು' ಎಂದೇ ನಾಡಿಗೆ ಚಿರಪರಿತ. ಅಂಬರೀಶ್ ಹೆಸರು ಹೇಳುವಾಗ 'ಮಂಡ್ಯದ ಗಂಡು' ಅನ್ವರ್ಥ ನಾಮ ತಾನೇ ತಾನಾಗಿ ಬಂದು ಬಿಡುತ್ತದೆ. ಆದರೆ ಈ ಬಿರುದು ಕೊಟ್ಟವರು ಯಾರು ಗೊತ್ತೇ?
ಅವರೇ ಅಂಬರೀಶ್‌ಗೆ ಗುರು ಸಮಾನರಾಗಿದ್ದ ರೈತ ಹೋರಾಟಗಾರ, ಮಾಜಿ ಸಂಸದ ಜಿ.ಮಾದೇಗೌಡ ಅವರು. ತಾವೇ ಅಂಬರೀಶ್‌ಗೆ 'ಮಂಡ್ಯದ ಗಂಡು' ಎಂದು ಬಿರುದು ಕೊಟ್ಟಿದ್ದು ಎಂದು ಮಾದೇಗೌಡ ಅವರೇ ಹೇಳಿಕೊಂಡಿದ್ದಾರೆ.
ಅಂಬರೀಶ್ ನಿಧನದ ಬಗ್ಗೆ ಸುದ್ದಿವಾಹಿನಿಗಳಿಗೆ ಪ್ರತಿಕ್ರಿಯೆ ನೀಡಿರುವ ಅವರು, ಅಂಬರೀಶ್ ಸದಾ ಉತ್ಸಾಹಿ. ಅವರೊಂದಿಗೆ ಬೇಸರದ ಕ್ಷಣಗಳು ನೆನಪೇ ಇಲ್ಲ. ಅವರು ಇದ್ದ ಕಡೆ ಸಂತಸವೇ ಇರುತ್ತಿತ್ತು ಎಂದು ಅವರು ನೆನಪಿಸಿಕೊಂಡಿದ್ದಾರೆ.

ಜಿ.ಮಾದೇಗೌಡ ಅವರು ಅಂಬರೀಶ್ ಅವರ ರಾಜಕೀಯ ಗುರುಗಳು ಎಂದೂ ಹೇಳಲಾಗುತ್ತದೆ. ಹಲವು ಸಂದರ್ಭದಲ್ಲಿ ಮಾದೇಗೌಡ ಅವರ ಬಳಿ ಅಂಬರೀಶ್ ಅವರು ಸಲಹೆಗಳನ್ನು ಪಡೆದಿದ್ದರು. ಕಾವೇರಿ ಹೋರಾಟಕ್ಕೆ ಮಾದೇಗೌಡ ಅವರಿಗೆ ಅಂಬರೀಶ್ ಅವರು ಬೆಂಬಲ ನೀಡಿದ್ದರು. ಸಂಸದ ಸ್ಥಾನಕ್ಕೆ ರಾಜೀನಾಮೆ ಸಹ ಸಲ್ಲಿಸಿದ್ದರು.
ಅಂಬರೀಶ್‌ಗೆ ಬೈಯ್ಯುವಷ್ಟು ಸಲುಗೆ ಇದ್ದದ್ದು ಮಾದೇಗೌಡರಿಗೆ ಮಾತ್ರ, ಅಂಬರೀಶ್ ಅವರು ಮಾದೇಗೌಡ ಅವರ ಮಾತನ್ನು ಕೇಳುತ್ತಾರೆ ಎಂಬ ಮಾತುಗಳು ಮಂಡ್ಯದಲ್ಲಿ ಆಗಾಗ್ಗೆ ಕೇಳಿಬರುತ್ತಿದ್ದವು.












Click it and Unblock the Notifications