ಮಂಡ್ಯ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬರ ಪರಿಹಾರಕ್ಕೆ ಮಾನದಂಡ ಬದಲಾವಣೆ ಅವಶ್ಯ: ಎಸ್.ಎಂ.ಕೃಷ್ಣ

ಬರ ಪರಿಸ್ಥಿತಿಗೆ ಹಾಗೂ ಬೆಳೆ ಪರಿಹಾರ ವಿತರಣೆಗೆ ಸಂಬಂಧಿಸಿದಂತೆ ಹಾಲಿ ಇರುವ ಮಾನದಂಡ ಬದಲಾವಣೆಯಾಗಬೇಕಾಗಿದೆ ಎಂದು ಮಾಜಿ ಮುಖ್ಯಮಂತ್ರಿ ಎಸ್.ಎಂ. ಕೃಷ್ಣ ಅಭಿಪ್ರಾಯಪಟ್ಟರು

By ಮಂಡ್ಯ ಪ್ರತಿನಿಧಿ
|
Google Oneindia Kannada News

ಮಂಡ್ಯ, ನವೆಂಬರ್,4 : ಬರ ಪರಿಸ್ಥಿತಿಗೆ ಹಾಗೂ ಬೆಳೆ ಪರಿಹಾರ ವಿತರಣೆಗೆ ಸಂಬಂಧಿಸಿದಂತೆ ಹಾಲಿ ಇರುವ ಮಾನದಂಡ ಬದಲಾವಣೆಯಾಗಬೇಕಾಗಿದೆ ಎಂದು ಮಾಜಿ ಮುಖ್ಯಮಂತ್ರಿ ಎಸ್.ಎಂ. ಕೃಷ್ಣ ಅಭಿಪ್ರಾಯ ಪಟ್ಟರು

ನಗರದ ಹರಿಪ್ರಿಯ ಹೊಟೇಲ್ ನ ಚಾಣಕ್ಯ ಸಭಾಂಗಣದಲ್ಲಿ ಮಾತನಾಡಿದ ಅವರು, ಬರ ಪರಿಸ್ಥಿತಿ ಹಾಗೂ ಬೆಳೆ ಪರಿಹಾರಕ್ಕೆ ಸಂಬಂಧಿಸಿದಂತೆ ರಾಜ್ಯ, ಕೇಂದ್ರ ಸರ್ಕಾರಗಳ ಮಾನದಂಡ ಬದಲಾವಣೆಯಾಗುವುದರ ಮೂಲಕ ರೈತರ ನೆರವಿಗೆ ಮುಂದಾಗಬೇಕು ಎಂದರು.

ನಾನು ಮುಖ್ಯಮಂತ್ರಿಯಾಗಿದ್ದ ವೇಳೆ ಮೂರು ವರ್ಷಗಳ ಕಾಲ ಬರ ಕಾಡಿತ್ತು. ಆಗಲೂ ನಾನು ಗಮನಿಸಿದ್ದೆ. ಬರ ಪರಿಸ್ಥಿತಿಗೆ ಅನುಗುಣವಾಗಿ ಹಳೆಯ ಮಾನದಂಡದ ಆಧಾರದ ಮೇರೆಗೆ ಪರಿಹಾರ ವಿತರಿಸಲಾಗುತ್ತಿತ್ತು. ಇದು ಸರಿಯಲ್ಲ. ಬರ ಪರಿಸ್ಥಿತಿಯ ಮಾನದಂಡ ಬದಲಾವಣೆಯಾಗಬೇಕಾಗಿದೆ.[ಸಿದ್ದರಾಮಯ್ಯ ಅವರಿಗೆ ನಾಲ್ಕು ಸಲಹೆ ನೀಡಿದ ಎಸ್ಸೆಂ ಕೃಷ್ಣ]

Former chief minister S.M.Krishna response to the drought

ಸರ್ಕಾರಗಳು ಮಾನದಂಡ ಬದಲಿಸಿ ರೈತಾಪಿ ಜನರು ಯಾವ ರೀತಿ ಕಷ್ಟದಲ್ಲಿದ್ದಾರೆ ಎಂಬುದರ ಕುರಿತು ಅಧ್ಯಯನ ನಡೆಸಿ ಅವರ ಕಷ್ಟಕ್ಕೆ ಸ್ಪಂದಿಸಬೇಕು ಎಂದು ತಿಳಿಸಿದರು.

ಹೆಚ್ಚು ಪರಿಹಾರ ಅಗತ್ಯ:
ಪ್ರಸ್ತುತ ತೀವ್ರ ಬರ ಪರಿಸ್ಥಿತಿ ರಾಜ್ಯ ಎದುರಿಸುತ್ತಿದೆ. ಕೃಷ್ಣರಾಜ ಸಾಗರ ಜಲಾಶಯದಲ್ಲಿ ನೀರಿನ ಸಂಗ್ರಹ ಕಡಿಮೆ ಇದೆ. ಬರ ಅಧ್ಯಯನ ಸಮಿತಿಯವರು ಈ ವಿಚಾರಗಳನ್ನು ಸೂಕ್ಷ್ಮವಾಗಿ ಗಮನಿಸಿ ಕೇಂದ್ರ ಸರ್ಕಾರದಿಂದ ಬರ ಪರಿಹಾರ ನೀಡಬೇಕಿದೆ ಎಂದರು.

ಸಾಲ-ಬಡ್ಡಿ ಮರುಪಾವತಿ ಮುಂದೂಡಿಕೆ:
ರಾಜ್ಯದಲ್ಲಿ ಬರ ಪರಿಸ್ಥಿತಿ ಇರುವ ಕಾರಣ ರೈತಾಪಿ ವರ್ಗದವರು ಕಷ್ಟದಲ್ಲಿರುವುದನ್ನು ಗಮನಿಸಿದ ರಾಜ್ಯ ಸರ್ಕಾರ ಸಾಲ ಮತ್ತು ಬಡ್ಡಿ ಮರುಪಾವತಿಯನ್ನು ಮುಂದೂಡಿದೆ. ಬರುವ ಮಾರ್ಚ್‍ವರೆಗೆ ಮುಂದುವರಿಸಿದೆ ಎಂದು ಸ್ಪಷ್ಟಪಡಿಸಿದರು.[ಕಾವೇರಿ ನಾಯಕತ್ವ ಎಸ್ಸೆಂ ಕೃಷ್ಣ ವಹಿಸಲಿ : ಶಿವರಾಮೇಗೌಡ]

ಮೊಕದ್ದಮೆ ವಾಪಸ್:
ಕಾವೇರಿ ವಿವಾದಕ್ಕೆ ಸಂಬಂಧಿಸಿದಂತೆ ರೈತರು, ಹೋರಾಟಗಾರರು ಚಳವಳಿಯಲ್ಲಿ ಭಾಗವಹಿಸಿದ್ದಾರೆ. ಅಂತಹ ಹೋರಾಟಗಾರರ ಮೇಲಿನ ಮೊಕದ್ದಮೆಗಳನ್ನು ರಾಜ್ಯ ಸರ್ಕಾರ ವಾಪಸ್ ಪಡೆದಿದೆ. ಉಳಿದಿರುವ ಪ್ರಕರಣಗಳನ್ನು ವಾಪಸ್ ಪಡೆಯುವ ಕುರಿತಂತೆ ಚಿಂತಿಸಲಿದೆ.

ಕೆರೆಗಳ ಅಭಿವೃದ್ಧಿ ಅಗತ್ಯ:
ಕೆರೆಗಳ ಅಭಿವೃದ್ಧಿಗೆ ಸಂಬಂಧಿಸಿದಂತೆ ಪ್ರತಿ ವರ್ಷವೂ ಕಾರ್ಯಕ್ರಮ ರೂಪಿಸುವುದು ಸರಿಯಲ್ಲ. ಅದಕ್ಕೊಂದು ಶಾಶ್ವತವಾದ ಪರಿಹಾರ ಒದಗಿಸಬೇಕಾಗಿದೆ. ಈ ನಿಟ್ಟಿನಲ್ಲಿ ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ಗಂಭೀರ ಚಿಂತನೆ ನಡೆಸಬೇಕು ಎಂದು ಸಲಹೆ ನೀಡಿದರು.

ಈ ಬಗ್ಗೆ ಮಾಜಿ ಪ್ರಧಾನಿ ವಿ.ಪಿ. ಸಿಂಗ್ ಅವರ ಗಮನ ಸೆಳೆದಿದ್ದೆ. ಕೆರೆಗಳನ್ನು ನಾವು ನಿರ್ಮಿಸಲು ಸಾಧ್ಯವಿಲ್ಲ. ಅದಕ್ಕೆ ಅಗತ್ಯ ಸಂಪನ್ಮೂಲವೂ ನಮ್ಮಲ್ಲಿ ಇಲ್ಲ. ಪೂರ್ವಿಕರು ಮಾಡಿರುವ ಕೆರೆಗಳನ್ನು ಉಳಿಸುವ ಅಗತ್ಯತೆ ಇದೆ. ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ಕೈ ಜೋಡಿಸಿ ಹಂತ ಹಂತವಾಗಿ ಹೂಳು ತೆಗೆದು ಅಭಿವೃದ್ಧಿಪಡಿಸುವ ಮೂಲಕ ಕೆರೆಗಳನ್ನು ಸಂರಕ್ಷಿಸುವ ಚಳವಳಿ ನಡೆಸಬೇಕು ಎಂದರು.

ಚಳವಳಿ ಎಂದರೆ ಕೇವಲ ಹೋರಾಟ ಎಂದು ಅರ್ಥೈಸಬೇಕಿಲ್ಲ. ವಿನೋಭಾಬಾವೆ ಅವರಂತೆ ಜೀವಿತ ಕಾಲದ ಚಳವಳಿಯನ್ನು ಕೆರೆಗಳ ಅಭಿವೃದ್ಧಿಗೆ ನಡೆಸಬೇಕಿದೆ ಎಂದರು.

ಟಿಪ್ಪು ಜಯಂತಿ ಈಗ ಹೇಳಿಕೆ ಸಲ್ಲ:
ಟಿಪ್ಪು ಜಯಂತಿ ಕುರಿತಂತೆ ಈಗಾಗಲೇ ರಾಜ್ಯ ಸರ್ಕಾರ ನಿರ್ಧಾರ ಮಾಡಿಯಾಗಿದೆ. ಈ ಹೊತ್ತಿನಲ್ಲಿ ಅದರ ಬಗ್ಗೆ ನನ್ನ ಅನಿಸಿಕೆಗಳನ್ನು ಹೇಳುವುದು ಸರಿಯಲ್ಲ ಎಂದು ತಿಳಿಸಿದರು.

ಮೂಲ ಕಾಂಗ್ರೆಸ್ಸಿಗರನ್ನು ಕಡೆಗಣಿಸಿಲ್ಲ:
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಎಲ್ಲಾ ಕಾಂಗ್ರೆಸ್ಸಿಗರನ್ನು ಸಮಾನ ದೃಷ್ಟಿಯಿಂದ ನೋಡುತ್ತಾರೆ. ಮೂಲ ಕಾಂಗ್ರೆಸ್ಸಿಗರನ್ನು ಕಡೆಗಣಿಸಿದ್ದಾರೆ ಎಂಬುದು ಸರಿಯಲ್ಲ. ಅಂತಹ ಬೆಳವಣಿಗೆ ಕಂಡುಬಂದಾಗ ಅದನ್ನು ಆಂತರಿಕವಾಗಿ ಪಕ್ಷದ ವೇದಿಕೆಗಳಲ್ಲಿ ಚರ್ಚೆ ಮಾಡಿ ಅಲ್ಲಿ ಸರಿಪಡಿಸಲಾಗುತ್ತದೆ. ಎಂದರು.

ಮಠಾಧಿಪತಿಗಳ ರಾಜಕೀಯ ಪ್ರವೇಶ ಸಲ್ಲ:
ಮಠಾಧಿಪತಿಗಳು, ಸ್ವಾಮೀಜಿಗಳನ್ನು ರಾಜಕೀಯಕ್ಕೆ ಕರೆತರುವುದು ಸರಿಯಲ್ಲ. ಅವರ ಕರ್ತವ್ಯಗಳೇ ಬೇರೆ. ಆಧ್ಯಾತ್ಮಿಕತೆಯಲ್ಲಿ ಅವರು ಬೆರೆತುಹೋಗಿರುತ್ತಾರೆ. ದಿನನಿತ್ಯ ಜನರೊಟ್ಟಿಗೆ ಬಡಿದಾಡುವ ಜನಪ್ರತಿನಿಧಿಗಳೇ ಬೇರೆ. ಹೀಗಾಗಿ ಸ್ವಾಮೀಜಿಗಳನ್ನು ರಾಜಕೀಯಕ್ಕೆ ಬನ್ನಿ ಎನ್ನುವುದು ಸರಿಯಲ್ಲ ಎಂದು ರಾಜರಾಜೇಶ್ವರಿ ಕ್ಷೇತ್ರದ ಶಾಸಕ ಮುನಿರಾಜು ಹೇಳಿಕೆಗೆ ತಿರುಗೇಟು ನೀಡಿದರು.

English summary
Former chief minister of Karnataka SM Krishna told, drought The criteria for such a change is necessary to fix. this situation central and state government Join work with change the drought rules.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X