ರಾಜ್ಯದಲ್ಲಿ ಮತ್ತೊಂದು ಅಗ್ನಿ ದುರಂತ: ಮನ್‌ಮುಲ್‌ಗೆ ಭಾರೀ ನಷ್ಟ
ಮಂಡ್ಯ, ಅಕ್ಟೋಬರ್ 09: ಮದ್ದೂರು ತಾಲೂಕಿನ ಗೆಜ್ಜಲಗೆರೆಯ ಮನ್‌ಮುಲ್‌ನಲ್ಲಿ ಇತ್ತೀಚೆಗೆ ಆರಂಭಗೊಂಡ ಮೆಗಾಡೇರಿ ಘಟಕದಲ್ಲಿ ಭಾನುವಾರ ಮುಂಜಾನೆ ಅಗ್ನಿ ಅವಘಡ ಸಂಭವಿಸಿದೆ. ಬೆಂಕಿ ಕಾಣಿಸಿಕೊಂಡ ಕಟ್ಟಡದಲ್ಲಿ ದಟ್ಟಹೊಗೆ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಕರ್ತವ್ಯದಲ್ಲಿದ್ದ ಐವರು ಸಿಬ್ಬಂದಿ ಕಟ್ಟಡ ಗಾಜುಗಳನ್ನು ಒಡೆದು ಹೊರಬರುವ ಮೂಲಕ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಮೆಗಾಡೇರಿಯ ಮೊದಲ ಅಂತಸ್ತಿನಲ್ಲಿರುವ ನಂದಿನಿ ಸಿಹಿ ಉತ್ಪನ್ನ ಪ್ಯಾಕಿಂಗ್ ವಸ್ತುಗಳ ಘಟಕದಲ್ಲಿ ವಿದ್ಯುತ್ ಶಾರ್ಟ್‌ಸರ್ಕ್ಯೂಟ್‌ನಿಂದ ಬೆಂಕಿ ಕಾಣಿಸಿಕೊಂಡು ಕೆಲವು ಯಂತ್ರೋಪಕರಣಗಳು ಸೇರಿದಂತೆ ಇತರೆ ವಸ್ತುಗಳು ಸುಟ್ಟು ಕರಕಲಾಗಿದ್ದು, ಲಕ್ಷಾಂತರ ರೂಪಾಯಿ ಹಾನಿ ಸಂಭವಿಸಿದೆ.

ಅಗ್ನಿ ಅವಘಡ ಸಮಯದಲ್ಲಿ ಪಕ್ಕದ ಗೋದಾಮಿನಲ್ಲಿದ್ದ ಕೋಟ್ಯಂತರ ರೂಪಾಯಿ ಮೌಲ್ಯದ ತುಪ್ಪ, ಬೆಣ್ಣೆ, ಮತ್ತಿತರ ವಸ್ತುಗಳಿಗೆ ಯಾವುದೇ ಹಾನಿಯಾಗಿಲ್ಲ. ಮನ್‌ಮುಲ್ ನೌಕರರ ಸಮಯಪ್ರಜ್ಞೆಯಿಂದಾಗಿ ಹೆಚ್ಚಿನ ಹಾನಿ ಸಂಭವಿಸುವುದು ತಪ್ಪಿದೆ.
ಘಟನೆಯಲ್ಲಿ ಓರ್ವ ಫೈರ್‌ವ್ಯಾನ್, ಮನ್‌ಮುಲ್‌ನ ಏಳು ಮಂದಿ ಖಾಯಂ ಹಾಗೂ ಹಂಗಾಮಿ ನೌಕರರಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಎಲ್ಲರೂ ಆರೋಗ್ಯ ಕೇಂದ್ರದಲ್ಲಿ ಚಿಕಿತ್ಸೆ ಪಡೆದುಕೊಂಡಿದ್ದಾರೆ.

ಮೆಗಾಡೇರಿ ಘಟಕದಲ್ಲಿ ಮೊದಲ ಪಾಳಿಯ ಕರ್ತವ್ಯಕ್ಕೆ ಆಗಮಿಸಿದ್ದ ಹಂಗಾಮಿ ನೌಕರರಾದ ಸಿದ್ದಪ್ಪ, ಪ್ರಸನ್ನ,ಲೋಕೇಶ್, ಶಿವಣ್ಣ ನಂದೀಶ್ ಸೇರಿದಂತೆ ಸುಮಾರು 20 ಜನರು ಕರ್ತವ್ಯದಲ್ಲಿದ್ದಾಗ ಘಟಕದಲ್ಲಿ ಇದ್ದಕ್ಕಿದ್ದಂತೆ ಬೆಂಕಿ ಕಾಣಿಸಿಕೊಂಡು ದಟ್ಟ ಹೊಗೆ ಬರುತ್ತಿರುವುದನ್ನು ಗಮನಿಸಿದ್ದಾರೆ.
ಈ ಬಗ್ಗೆ ನೌಕರರು ಮನ್‌ಮುಲ್ ವ್ಯವಸ್ಥಾಪಕ ನಿರ್ದೇಶಕ ಡಾ.ಮಂಜೇಶ್ ಹಾಗೂ ಒಕ್ಕೂಟದ ಅಧ್ಯಕ್ಷ ಹಾಗೂ ನಿರ್ದೇಶಕರಿಗೆ ಮಾಹಿತಿ ನೀಡಿದ್ದಾರೆ. ನಂತರ ಮದ್ದೂರು ಅಗ್ನಿಶಾಮಕ ಠಾಣೆಗೆ ದೂರವಾಣಿ ಕರೆ ಮಾಡಿದ್ದಾರೆ. ಮಂಡ್ಯ, ಶ್ರೀರಂಗಪಟ್ಟಣ, ಮೈಸೂರು ಹೆಬ್ಬಾಳ ಮತ್ತು ಮದ್ದೂರಿನಿಂದ ಆರು ವಾಹನಗಳಲ್ಲಿ ಆಗಮಿಸಿದ್ದಾರೆ.
ಅಗ್ನಿಶಾಮಕದಳದ ಸಿಬ್ಬಂದಿ ಪ್ರಾದೇಶಿಕ ಅಧಿಕಾರಿ ನವೀನ್ ಮತ್ತು ಮಂಡ್ಯ ಜಿಲ್ಲಾ ಅಗ್ನಿಶಾಮಕ ಅಧಿಕಾರಿ ಕೆ.ಪಿ.ಗುರುರಾಜ್ ಹಾಗೂ ಮುಖ್ಯ ಅಧಿಕಾರಿ ಜಯರಾಮಯ್ಯ ನೇತೃತ್ವದಲ್ಲಿ ಸುಮಾರು ಮೂರು ಗಂಟೆಗಳ ಕಾಲ ಕಾರ್ಯಾಚರಣೆ ನಡೆಸಿ ಬೆಂಕಿಯ ಕೆನ್ನಾಲಿಗೆ ಆವರಣದಲ್ಲಿದ್ದ ಅಮೋನಿಯಂ ಸಿಲಿಂಡರ್‌ಗಳು ಹಾಗೂ ಮತ್ತಿತರ ಘಟಕಗಳಿಗೆ ಹಬ್ಬದಂತೆ ತಡೆಯುವಲ್ಲಿ ಯಶಸ್ವಿಯಾಗಿದರು. ನಂತರ ಒಕ್ಕೂಟದ ಖಾಯಂ ಸಿಬ್ಬಂದಿಗಳು ಗೆಜ್ಜಲಗೆರೆ ಆಸುಪಾಸಿನ ಜನರ ನೆರವಿನಿಂದ ಬೆಂಕಿ ನಂದಿಸಿದ್ದಾರೆ.
ಘಟನೆಯ ವಿವರ
ಭಾನುವಾರ ಸಿಹಿ ಉತ್ಪನ್ನ ಪ್ಯಾಕಿಂಗ್ ವಸ್ತುಗಳ ದಾಸ್ತಾನು ಕಟ್ಟಡದ ಮೂಲೆಯಲ್ಲಿ ಯಂತ್ರವೊಂದಕ್ಕೆ ವಿದ್ಯುತ್ ಶಾರ್ಟ್‌ಸರ್ಕ್ಯೂಟ್‌ನಿಂದ ಬೆಂಕಿ ಕಾಣಿಸಿಕೊಂಡಿದೆ. ಈ ಸಮಯದಲ್ಲಿ ಸಿಬ್ಬಂದಿ ಉಪಹಾರ ಸೇವನೆಗೆ ತೆರಳಿದ್ದರು. ಬೆಂಕಿಯ ಜ್ವಾಲೆ ಇಡೀ ಘಟಕವನ್ನು ಆವರಿಸಿಕೊಂಡಾಗ ಬೀರುವಿನಲ್ಲಿದ್ದ ದಾಖಲೆಗಳು, ಪ್ಯಾಕಿಂಗ್ ವಸ್ತುಗಳನ್ನು ಆವರಿಸಿಕೊಂಡಿದೆ. ನಂತರ ಸಿಬ್ಬಂದಿ ಬೆಂಕಿ ನಂದಿಸಲು ಯತ್ನಿಸಿದರಾದರೂ ಜ್ವಾಲೆ ತೀವ್ರಗೊಂಡು ಅನಾಹುತ ತಡೆಯಲು ಸಾಧ್ಯವಾಗಲಿಲ್ಲ. ನಂತರ ಗಾಜುಗಳನ್ನು ಒಡೆದು ಹೊಗೆ ಹೊರಗೆ ಹೋಗುವಂತೆ ಮಾಡಿದರು. ಅಷ್ಟರಲ್ಲಿ ಅಗ್ನಿಶಾಮಕ ದಳದ ಸಿಬ್ಬಂದಿ ಆಗಮಿಸಿ ಬೆಂಕಿಯನ್ನು ಹತೋಟಿಗೆ ತಂದರು.
ಘಟನಾ ಸ್ಥಳಕ್ಕೆ ಜಿಲ್ಲಾಧಿಕಾರಿ ಭೇಟಿ
ಅಗ್ನಿ ಅವಘಡ ಸಂಭವಿಸಿದ ಮನ್‌ಮುಲ್‌ಗೆ ಜಿಲ್ಲಾಧಿಕಾರಿ ಡಾ.ಕುಮಾರ್ , ಜಿಲ್ಲಾ ಪೊಲೀಸ್ ಅಧೀಕ್ಷಕ ಎನ್.ಯತೀಶ್ ಅವರೊಂದಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ನಂದಿನಿ ಸಿಹಿ ಉತ್ಪನ್ನ ಪ್ಯಾಕಿಂಗ್ ಘಟಕದಲ್ಲಿ ವಸ್ತುಗಳು ಹಾನಿಗೊಳಗಾಗಿರುವ ಬಗ್ಗೆ ವ್ಯವಸ್ಥಾಪಕ ನಿರ್ದೇಶಕ ಡಾ.ಮಂಜೇಶ್ ಅವರಿಂದ ಮಾಹಿತಿ ಪಡೆದುಕೊಂಡರು.
ಬಳಿಕ ಸಿಹಿ ಉತ್ಪನ್ನಗಳ ಪ್ಯಾಕಿಂಗ್ ವ್ಯವಸ್ಥೆ ಕುರಿತಂತೆ ಮುನ್ನೆಚ್ಚರಿಕೆ ಕ್ರಮ ವಹಿಸುವಂತೆ ತಾಕೀತು ಮಾಡಿದರು. ಮನ್‌ಮುಲ್ ಅಧ್ಯಕ್ಷ ಬೋರೇಗೌಡ, ನಿರ್ದೇಶಕಿ ರೂಪಾ, ಒಕ್ಕೂಟದ ವಿವಿಧ ವಿಭಾಗಗಳ ವ್ಯವಸ್ಥಾಪಕರು ಮತ್ತು ಅಧಿಕಾರಿಗಳಿದ್ದರು.
ಬೆಂಕಿ ಅವಘಡ ತಡೆಗೆ ಸುರಕ್ಷತಾ ಕ್ರಮಗಳಿಲ್ಲ:ಕೆ.ಪಿ ಗುರುರಾಜ್
ಮನ್‌ಮುಲ್ ಮೆಗಾಡೇರಿ ಕಟ್ಟಡದಲ್ಲಿ ಬೆಂಕಿ ಅವಘಡ ಸಂಭವಿಸಿರುವ ಬಗ್ಗೆ ಒಕ್ಕೂಟದ ಆಡಳಿತ ಮಂಡಳಿ ಯಾವುದೇ ಸುರಕ್ಷತಾ ಕ್ರಮ ಕೈಗೊಳ್ಳದೆ ಕಟ್ಟಡ ನಿರ್ಮಿಸಿದೆ ಎಂದು ಜಿಲ್ಲಾ ಅಗ್ನಿಶಾಮಕ ಅಧಿಕಾರಿ ಕೆ.ಪಿ.ಗುರುರಾಜ್ ಆಕ್ಷೇಪ ವ್ಯಕ್ತಪಡಿಸಿದರು.
ಮೆಗಾಡೇರಿ ಕಟ್ಟಡ ನಿರ್ಮಾಣದ ನಂತರ ಬೆಂಕಿ ಅವಘಡ ಸಂಬಂಧ ಸುರಕ್ಷತಾ ಕ್ರಮಗಳ ಬಗ್ಗೆ ಅಗ್ನಿಶಾಮಕ ದಳದಿಂದ ಯಾವುದೇ ನಿರಾಕ್ಷೇಪಣಾ ಪತ್ರ ಪಡೆದಿಲ್ಲ. ಡೈರಿ ಸುರಕ್ಷತೆ ಬಗ್ಗೆ ಮಾತ್ರ ಎನ್‌ಒಸಿ ಪಡೆದಿದ್ದಾರೆ. ಅಗ್ನಿ ಸುರಕ್ಷತೆ ಬಗ್ಗೆ ಆಡಳಿತ ಮಂಡಳಿ ಎನ್‌ಒಸಿ ಪಡೆದುಕೊಂಡಿಲ್ಲ. ಆ ಹಿನ್ನೆಲೆಯಲ್ಲಿ ಮುಂಜಾಗ್ರತೆ ಕ್ರಮ ಕೈಗೊಳ್ಳದಿರುವ ಬಗ್ಗೆ ಮನ್‌ಮುಲ್ ಆಡಳಿತ ಮಂಡಳಿಗೆ ನೋಟೀಸ್ ಜಾರಿ ಮಾಡಬಹುದು. ಈ ಬಗ್ಗೆ ಇಲಾಖೆಯ ಮೇಲಾಧಿಕಾರಿಗಳ ಗಮನಕ್ಕೆ ತಂದು ಕ್ರಮ ಕೈಗೊಳ್ಳುವ ಬಗ್ಗೆ ತೀರ್ಮಾನಿಸಲಾಗುವುದು ಎಂದರು.












Click it and Unblock the Notifications