ದರ್ಶನ್ ವಿರುದ್ಧ ರೈತ ಸಂಘದಿಂದ ಭಾರಿ ಪ್ರತಿಭಟನೆ; ಪ್ರಕರಣ ಸಿಬಿಐಗೆ ಒಪ್ಪಿಸಲು ಆಗ್ರಹ
ಚಿತ್ರದುರ್ಗದ ರೇಣುಕಾಸ್ವಾಮಿಯನ್ನು ಅಪಹರಿಸಿ ಹತ್ಯೆ ಮಾಡಿರುವ ಪ್ರಕರಣವನ್ನು ಸಿಬಿಐ ತನಿಖೆಗೆ ವಹಿಸಬೇಕು ಎಂದು ಒತ್ತಾಯಿಸಿ ಕರ್ನಾಟಕ ರಾಜ್ಯ ರೈತಸಂಘ ರೈತ ಬಣ ಕಾರ್ಯಕರ್ತರು ಮಂಡ್ಯದಲ್ಲಿ ಪ್ರತಿಭಟನೆ ನಡೆಸಿದ್ದಾರೆ.
ನಗರದ ಜೆ.ಸಿ.ವೃತ್ತದಲ್ಲಿ ಜಮಾಯಿಸಿದ ಕಾರ್ಯಕರ್ತರು, ಬೆಂಗಳೂರು-ಮೈಸೂರು ಹೆದ್ದಾರಿ ಮಾರ್ಗವಾಗಿ ಜಿಲ್ಲಾಧಿಕಾರಿ ಕಚೇರಿಗೆ ತೆರಳಿ ಜಿಲ್ಲಾಧಿಕಾರಿ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿದರು.

ದರ್ಶನ್ ಒಬ್ಬ ಪ್ರಭಾವಿ ನಟ. ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ಈತ ಭಾಗಿಯಾಗಿರುವ ಕಾರಣ, ಬಲಾಢ್ಯರು, ಪ್ರಭಾವಿಗಳು, ಪ್ರಕರಣವನ್ನು ಮುಚ್ಚಿಹಾಕುವ ಸಂಶಯ ಇರುವುದರಿಂದ ಈ ಪ್ರಕರಣವನ್ನು ಸಿಬಿಐ ತನಿಖೆಗೆ ವಹಿಸಬೇಕು ಎಂದು ಒತ್ತಾಯಿಸಿದ್ದಾರೆ.
ಆರೋಪಿಗಳನ್ನು ರಕ್ಷಿಸಬೇಡಿ
ರೇಣುಕಾಸ್ವಾಮಿಯನ್ನು ಚಿತ್ರಹಿಂಸೆ ನೀಡಿ ಕೊಲೆ ಮಾಡಲಾಗಿದೆ. ಆತ ಯಾವುದೇ ತಪ್ಪು ಮಾಡಿದ್ದರೆ ಪೊಲೀಸರಿಗೆ ದೂರು ನೀಡಲು ಅವಕಾಶವಿತ್ತು. ಆದರೆ, ಕಾನೂನು ಕೈಗೆತ್ತಿಕೊಂಡಿರುವ ದರ್ಶನ್ ಮತ್ತು ಇತರೆ ಆರೋಪಿಗಳಿಗೆ ಕಠಿಣ ಶಿಕ್ಷೆ ವಿಧಿಸಬೇಕು. ಪೊಲೀಸರು ಆರೋಪಿಗಳನ್ನು ಬಂಧಿಸಿ ಒಳ್ಳೆಯ ಕೆಲಸ ಮಾಡಿದ್ದಾರೆ. ಆದರೆ ಮುಂದೆ ಆರೋಪಿಗಳನ್ನು ರಕ್ಷಿಸುವ ಕೆಲಸ ಮಾಡುವುದು ಸರಿಯಲ್ಲ, ಮುಖ್ಯಮಂತ್ರಿ, ಗೃಹಸಚಿವರು ಈ ನಿಟ್ಟಿನಲ್ಲಿ ಪೊಲೀಸರಿಗೆ ಸಂಪೂರ್ಣ ಸ್ವಾತಂತ್ರ್ಯ ನೀಡಬೇಕು ಎಂದು ಆಗ್ರಹಿಸಿದರು.
ರೌಡಿ ಶೀಟ್ ತೆರೆಯಲು ಆಗ್ರಹ
ಕಾನೂನು ಎಲ್ಲರಿಗೂ ಒಂದೇ ದರ್ಶನ್ ಅವರ ಪ್ರಭಾವಕ್ಕೆ ಸರ್ಕಾರ ಮತ್ತು ಪೊಲೀಸರು ಮಣಿಯಬಾರದು. ನಟ ದರ್ಶನ್ ಮೇಲೆ ಈ ಹಿಂದೆಯೂ ಹಲವು ಪ್ರಕರಣಗಳು ದಾಖಲಾಗಿವೆ. ಅವರ ರೌಡಿ ಶೀಟ್ ಓಪನ್ ಮಾಡಬೇಕು. ಈ ಹಿಂದೆ ಅವರು ರೇವ್ ಪಾರ್ಟಿಯಲ್ಲಿ ಭಾಗವಹಿಸಿ ಡ್ರಗ್ಸ್ ಸೇವಿಸಿ ಮೈಸೂರಿನಲ್ಲಿ ಕಾರು ಅಪಘಾತ ಮಾಡಿದ್ದರು. ಆಗಲೇ ಇವರ ವಿರುದ್ಧ ಕ್ರಮ ಕೈಗೊಂಡು ಬುದ್ಧಿ ಕಲಿಸಿದ್ದರೆ ಇಂತಹ ಕೃತ್ಯ ನಡೆಯುತ್ತಿರಲಿಲ್ಲ ಎಂದಿದ್ದಾರೆ.
ಸಿನಿಮಾ ಸಮಾಜದಲ್ಲಿ ಬದಲಾವಣೆ ತರುವಂತಹುದ್ದು. ಇದಕ್ಕೆ ಡಾ. ರಾಜ್‌ಕುಮಾರ್ ಅವರ ಬಂಗಾರದ ಮನುಷ್ಯ ಇಂದಿಗೂ ಸರ್ವಕಾಲಿಕ ಉದಾಹರಣೆ ನೀಡುವ ಚಿತ್ರವಾಗಿದೆ. ಈ ಚಿತ್ರದಿಂದ ಸ್ಪೂರ್ತಿ ಪಡೆದ ನೂರಾರು ಜನರು ತಮ್ಮ ಬದುಕಿನಲ್ಲಿ ಬದಲಾವಣೆ ಕಂಡುಕೊಂಡಿದ್ದಾರೆ. ಒಬ್ಬ ನಟ ಸಮಾಜದಲ್ಲಿ ಬದಲಾವಣೆ ತರಲು ಸಾಧ್ಯವಿದೆ. ಆದರೆ ನಾಯಕನಂತೆ ನಟಿಸುವ ದರ್ಶನ್ ನಿಜ ಜೀವನದಲ್ಲಿ ಖಳನಾಯಕನಿಗಿಂತಲೂ ಕ್ರೂರವಾಗಿ ನಡೆದುಕೊಂಡಿದ್ದಾರೆ, ಕೊಲೆಯಂತಹ ಘೋರ ಕೃತ್ಯ ಎಸಗಿರುವ ನಟ ದರ್ಶನ್‌ನನ್ನು ಚಿತ್ರೋದ್ಯಮದಿಂದ ಶಾಶ್ವತವಾಗಿ ನಿಷೇಧ ಮಾಡಬೇಕು ಎಂದು ಆಗ್ರಹಿಸಿದರು.












Click it and Unblock the Notifications