ಮಂಡ್ಯದಲ್ಲಿ ಸತ್ತವರ ಹೆಸರಿನಲ್ಲಿ ನಕಲಿ ಆಧಾರ್ ಕಾರ್ಡ್: ಕ್ರಮ ಕೈಗೊಳ್ಳದ ಪೊಲೀಸರು, ಜನಾಕ್ರೋಶ

ಮಂಡ್ಯ, ನವೆಂಬರ್‌ 21: ರಾಷ್ಟ್ರದ ಜನರ ಭದ್ರತೆಯ ದೃಷ್ಟಿಯಿಂದ ವಿಶಿಷ್ಟ ಗುರುತಿನ ಸಂಖ್ಯೆಯೊಂದಿಗೆ ಆಧಾರ್ ಕಾರ್ಡ್‌ ರೂಪುಗೊಂಡಿತ್ತು. ಆದರೆ ಇದೀಗ ಆ ಆಧಾರ್‌ ಕಾರ್ಡ್‌ ಅನ್ನೇ ನಕಲು ಮಾಡುವ ದಂಧೆ ಸದ್ದಿಲ್ಲದೆ ನಡೆಯುತ್ತಿದೆ. ಅಕ್ರಮಗಳು, ಭಯೋತ್ಪಾದನೆಯಂತಹ ಚಟುವಟಿಕೆಗಳಿಗೆ ನಕಲಿ ಆಧಾರ್ ಕಾರ್ಡ್ ಬಳಕೆ ಆಗುತ್ತಿದ್ದರೂ ಕೂಡ ಪೊಲೀಸ್ ಇಲಾಖೆ, ಗುಪ್ತದಳ ಕಣ್ಮುಚ್ಚಿ ಕುಳಿತಿರುವುದು ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಂತಿದೆ. ಹಾಗೆಯೇ ಮಂಡ್ಯ ನಗರದಲ್ಲಿ ಸತ್ತವನ ಹೆಸರಿನಲ್ಲಿ ಆಧಾರ್ ಕಾರ್ಡ್ ನಕಲು ಮಾಡಿ ಸರ್ಕಾರಿ ಜಮೀನನ್ನೇ ಪರಭಾರೆ ಮಾಡಿಸಿಕೊಂಡಿರುವುದು ಇದೀಗ ಬೆಳಕಿಗೆ ಬಂದಿದೆ.

ಮಂಗಳೂರಿನಲ್ಲಿ ಕುಕ್ಕರ್ ಬಾಂಬ್ ಸ್ಫೋಟ ಪ್ರಕರಣದ ಪ್ರಮುಖ ಆರೋಪಿ ಬಳಿ ಹುಬ್ಬಳ್ಳಿ ಮೂಲದ ವ್ಯಕ್ತಿಯ ಹೆಸರಿನ ನಕಲಿ ಆಧಾರ್ ಕಾರ್ಡ್ ಇರುವುದು ಬೆಳಕಿಗೆ ಬಂದಿದೆ. ನಕಲಿ ಆಧಾರ್ ಕಾರ್ಡ್ ಉಗ್ರರು, ಭಯೋತ್ಪಾದಕರ ಕೈವಶ ಆಗುತ್ತಿರುವುದು ಆತಂಕಕಾರಿ ಬೆಳವಣಿಗೆಯಾಗಿದೆ.

ಸತ್ತವನ ಹೆಸರಿನಲ್ಲಿ ಆಧಾರ್ ಕಾರ್ಡ್ ಸೃಷ್ಟಿಯಾಗಿರುವ ಬಗ್ಗೆ ಜಿಲ್ಲಾ ಪೊಲೀಸ್ ಅಧೀಕ್ಷಕರಲ್ಲಿ ದೂರು ದಾಖಲಾಗಿದೆ. ದೂರು ದಾಖಲಾಗಿ ತಿಂಗಳಾದರೂ ಇದುವರೆಗೂ ತನಿಖೆಯನ್ನು ಕೈಗೆತ್ತಿಕೊಳ್ಳುವ ಕೆಲಸವೂ ಆಗಿಲ್ಲ. ನಕಲಿ ಆಧಾರ್ ಕಾರ್ಡ್ ಬಳಸಿ ಸರ್ಕಾರಿ ಜಮೀನನ್ನೇ ಖಾತೆ ಮಾಡಿಕೊಟ್ಟಿದ್ದರೂ ಕೂಡ ಪೊಲೀಸರು ಪ್ರಕರಣವನ್ನು ಗಂಭೀರವಾಗಿ ಪರಿಗಣಿಸದೇ ಮೂಲೆಗೆ ತಳ್ಳಿದ್ದಾರೆ ಎನ್ನುವ ಆರೋಪಗಳು ಕೇಳಿಬರುತ್ತಿವೆ.

ಆರೋಪಿಗಳನ್ನು ಪತ್ತೆ ಹಚ್ಚದ ಪೊಲೀಸರು

ಆರೋಪಿಗಳನ್ನು ಪತ್ತೆ ಹಚ್ಚದ ಪೊಲೀಸರು

ನಕಲಿ ಆಧಾರ್ ಕಾರ್ಡ್ ಎಲ್ಲಿ ಸೃಷ್ಟಿ ಆಗುತ್ತಿದೆ? ಹೇಗೆ ದಂಧೆ ನಡೆಯುತ್ತಿದೆ? ಅದರ ಮೂಲ ಯಾವುದು? ಆಧಾರ್ ಕಾರ್ಡ್‌ನ ತಿದ್ದುಪಡಿ ಮಾಡಲು ಅನುಮತಿ ಪಡೆದ ಕೇಂದ್ರಗಳಲ್ಲಿ ಈ ಕೃತ್ಯ ನಡೆಯುತ್ತಿದೆಯೇ? ನಕಲಿ ಆಧಾರ್ ಕಾರ್ಡ್ ಹಿಂದೆ ದೊಡ್ಡ ಜಾಲವಿದೆಯೇ? ಎನ್ನುವ ರೀತಿಯಲ್ಲಿ ಪೊಲೀಸರು ತನಿಖೆಯನ್ನೇ ಕೈಗೆತ್ತಿಕೊಳ್ಳದಿರುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ. ಸತ್ತವನ ಹೆಸರಿನಲ್ಲಿ ನಕಲಿ ಆಧಾರ್ ಕಾರ್ಡ್ ಸೃಷ್ಟಿಯಾಗಿ ಅದರಿಂದ ಸರ್ಕಾರಿ ಜಮೀನನ್ನು ಕಬಳಿಕೆ ಮಾಡಿದ್ದಾರೆ. ಜಿಲ್ಲಾಧಿಕಾರಿಗಳಿಗೆ ಸಲ್ಲಿಕೆಯಾಗುವ ವರದಿಯನ್ನು ಕಾದುನೋಡಲಾಗುತ್ತಿದೆ ಎಂದು ಹೇಳುತ್ತಿದ್ದಾರೆ.

ಎಚ್ಚೆತ್ತುಕೊಳ್ಳದ ಪೊಲೀಸ್‌ ಇಲಾಖೆ

ಎಚ್ಚೆತ್ತುಕೊಳ್ಳದ ಪೊಲೀಸ್‌ ಇಲಾಖೆ

ಸರ್ಕಾರಿ ಜಮೀನು ಹೇಗೆ ಕಬಳಿಕೆಯಾಗಿದೆ. ಅದಕ್ಕೆ ಹೊಣೆಗಾರರು ಯಾರು ಎನ್ನುವ ಬಗ್ಗೆ ಉಪವಿಭಾಗಾಕಾರಿ, ಭೂ ದಾಖಲೆಗಳ ಉಪ ನಿರ್ದೇಶಕರು ವರದಿ ನೀಡುತ್ತಾರೆ. ನಕಲಿ ಆಧಾರ್ ಸೃಷ್ಟಿ ಕ್ರಿಮಿನಲ್ ಅಪರಾಧ. ಇದರ ಬಗ್ಗೆ ಪೊಲೀಸರು ತನಿಖೆ ನಡೆಸುವವರೇ ಅಥವಾ ಕಂದಾಯ ಇಲಾಖೆಯವರು ತನಿಖೆ ನಡೆಸುವರೇ? ಎಂಬ ಪ್ರಶ್ನೆ ಸಾರ್ವಜನಿಕರನ್ನು ಕಾಡುತ್ತಿದೆ. ಒಂದು ದೂರಿನಲ್ಲಿ ರಾಷ್ಟ್ರ ದ್ರೋಹ ನಡೆದಿರುವ ಸೂಕ್ಷ್ಮ ಸಂಗತಿಯನ್ನು ದೇಶದ ಜನರ ಪ್ರಾಣ, ಕಾನೂನು-ಸುವ್ಯವಸ್ಥೆಯನ್ನು ಕಾಪಾಡುವ ಜವಾಬ್ದಾರಿ ಹೊತ್ತ ಪೊಲೀಸ್ ಇಲಾಖೆ ಅಧಿಕಾರಿಗಳೇ ಗಂಭೀರವಾಗಿ ಪರಿಗಣಿಸುತ್ತಿಲ್ಲ. ಈ ರೀತಿಯ ನಿರ್ಲಕ್ಷ್ಯವೇ ಕುಕ್ಕರ್ ಬಾಂಬ್ ಸ್ಫೋಟ ದುಷ್ಕೃತ್ಯ ನಡೆಯುವುದಕ್ಕೆ ಕಾರಣವಾಗಿದೆ. ಇದಕ್ಕೆ ಪೊಲೀಸ್ ಇಲಾಖೆ ಅಧಿಕಾರಿಗಳ ಬೇಜವಾಬ್ದಾರಿ ನಡೆಯೂ ಕಾರಣವಾಗಿದೆ ಎಂದು ಜನಸಾಮಾನ್ಯರು ಆರೋಪಿಸುತ್ತಿದ್ದಾರೆ.

ಪೊಲೀಸ್‌ ಇಲಾಖೆ ವಿರುದ್ಧ ಜನಾಕ್ರೋಶ

ಪೊಲೀಸ್‌ ಇಲಾಖೆ ವಿರುದ್ಧ ಜನಾಕ್ರೋಶ

ನಕಲಿ ಆಧಾರ್ ಕಾರ್ಡ್ ಸೃಷ್ಟಿ ಆಗಿರುವ ಬಗ್ಗೆ ನಿರ್ದಿಷ್ಟ ದೂರನ್ನು ದಾಖಲಿಸಲಾಗಿದೆ. ಆದರೂ ಪ್ರಕರಣದಲ್ಲಿ ಭಾಗಿಯಾಗಿರುವ ವ್ಯಕ್ತಿಗಳನ್ನು ಕರೆದು ವಿಚಾರಣೆ ನಡೆಸಿ ಕಾನೂನು ಕ್ರಮ ಕೈಗೊಳ್ಳುವ ಕೆಲಸಕ್ಕೂ ಪೊಲೀಸ್ ಇಲಾಖೆ ಮುಂದಾಗಿಲ್ಲ. ಇದನ್ನು ನೋಡಿದಾಗ ನಕಲಿ ಆಧಾರ್ ಕಾರ್ಡ್ ದಂಧೆಯಲ್ಲಿ ಪೊಲೀಸರು ಶಾಮೀಲಾಗಿದ್ದಾರೆಯೇ ಎಂಬ ಶಂಕೆ ಎಲ್ಲರಲ್ಲೂ ಮೂಡಿದೆ.

ನಕಲಿಗಳ ಅಸಲಿ ಸತ್ಯ ಹೊರಬಂದಿಲ್ಲ ಏಕೆ?

ನಕಲಿಗಳ ಅಸಲಿ ಸತ್ಯ ಹೊರಬಂದಿಲ್ಲ ಏಕೆ?

ಕನಿಷ್ಠ ಪಕ್ಷ ನಕಲಿ ಆಧಾರ್ ಕಾರ್ಡ್ ಕುರಿತಂತೆ ಪತ್ರಿಕೆಗಳು, ಮಾಧ್ಯಮಗಳ ಮೂಲಕ ಸಾರ್ವಜನಿಕ ಪ್ರಕಟಣೆ ನೀಡುವ ಮೂಲಕ ಜನರನ್ನು ಜಾಗೃತಗೊಳಿಸುವ ಕೆಲಸವನ್ನೂ ಸಹ ಪೊಲೀಸ್ ಇಲಾಖೆ ಮಾಡುತ್ತಿಲ್ಲ. ಒಬ್ಬರ ಹೆಸರಿನಲ್ಲಿರುವ ಆಧಾರ್ ಕಾರ್ಡ್ ಮತ್ತೊಬ್ಬರ ಹೆಸರಿಗೆ ಹೇಗೆ ಬದಲಾಗುತ್ತಿದೆ? ಆಧಾರ್ ಕಾರ್ಡ್ ನಕಲಾಗದಂತೆ ವಹಿಸಬೇಕಾದ ಮುಂಜಾಗ್ರತೆಗಳು ಏನು? ವಿಶಿಷ್ಟ ಗುರುತಿನ ಚೀಟಿಯ ಸುರಕ್ಷತೆ ಕಾಪಾಡುವುದು ಹೇಗೆ? ಎನ್ನುವುದನ್ನು ಜನರಿಗೆ ತಿಳಿಸಿಲ್ಲ. ಹೀಗೆ ಪೊಲೀಸರು ಮೌನಕ್ಕೆ ಶರಣಾಗಿರುವುದರಿಂದ ಜನರಲ್ಲಿ ನಕಲಿ ಆಧಾರ್ ಕಾರ್ಡ್‌ಗಳ ಬಗೆಗಿನ ಆತಂಕ ದಿನೇ ದಿನೇ ಹೆಚ್ಚಾಗುತ್ತಲೇ ಇದೆ.

ನಿವೇಶನವೊಂದರ ಅಕ್ರಮ ಖಾತೆ ಪ್ರಕರಣಕ್ಕೆ ಸಂಬಂಧಿಸಿದಂತೆ ಜಿಲ್ಲಾಧಿಕಾರಿಗಳು ಜಂಟಿ ತನಿಖೆಗೆ ಆದೇಶ ನೀಡಿದ್ದಾರೆ. ವರದಿ ಬಂದ ಬಳಿಕ ದೂರು ನೀಡಿದಲ್ಲಿ ನಕಲಿ ಆಧಾರ್ ಕಾರ್ಡ್ ಬಗ್ಗೆ ತನಿಖೆ ನಡೆಸಲಾಗುವುದು ಎಂದು ಜಿಲ್ಲಾ ಪೊಲೀಸ್ ಅಧೀಕ್ಷಕ ಎನ್. ಯತೀಶ್ ತಿಳಿಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+