ಮಂಡ್ಯ: 54 ಕೆರೆಗಳಿಗೆ ನೀರು ಹರಿಸುವ ಏತ ನೀರಾವರಿ ಯೋಜನೆಗೆ ನಾಳೆ ಚಾಲನೆ
ಮಂಡ್ಯ ಜಿಲ್ಲೆಯ ದುದ್ದ ಹೋಬಳಿಯ 54 ಕೆರೆಗಳಿಗೆ ನೀರು ಹರಿಸುವ ಯೋಜನೆಗೆ ನಾಳೆ (ಮಾರ್ಚ್3) ವಿದ್ಯುಕ್ತ ಚಾಲನೆ ದೊರೆಯಲಿದೆ ಎಂದು ಮೇಲುಕೋಟೆ ಕ್ಷೇತ್ರದ ಶಾಸಕ ಸಿ.ಎಸ್.ಪುಟ್ಟರಾಜು ತಿಳಿಸಿದ್ದಾರೆ.
ಮಂಡ್ಯ, ಮಾರ್ಚ್ 2: ಶ್ರೀರಂಗಪಟ್ಟಣದ ಶ್ರೀನಿವಾಸ ಅಗ್ರಹಾರ ಗ್ರಾಮದ ಬಳಿ ಲೋಕಪಾವನಿ ನದಿಯಿಂದ ಮೇಲುಕೋಟೆ ವಿಧಾನಸಭಾ ಕ್ಷೇತ್ರಕ್ಕೆ ಸೇರಿದ ದುದ್ದ ಹೋಬಳಿಯ 54 ಕೆರೆಗಳಿಗೆ ನೀರು ಹರಿಸುವ ಯೋಜನೆಗೆ ನಾಳೆ (ಮಾರ್ಚ್3) ವಿದ್ಯುಕ್ತ ಚಾಲನೆ ದೊರೆಯಲಿದೆ ಎಂದು ಮೇಲುಕೋಟೆ ಕ್ಷೇತ್ರದ ಶಾಸಕ ಸಿ.ಎಸ್.ಪುಟ್ಟರಾಜು ತಿಳಿಸಿದ್ದಾರೆ.
ಈ ಬಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕ್ಷೇತ್ರ ವ್ಯಾಪ್ತಿಗೆ ಸೇರಿದ ಕಾಳೇನಹಳ್ಳಿ ಗ್ರಾಮದಲ್ಲಿ ಸಣ್ಣ ನೀರಾವರಿ ಮತ್ತು ಅಂತರ್ಜಲ ಅಭಿವೃದ್ಧಿ ಇಲಾಖೆ ಸಚಿವ ಜಿ.ಸಿ.ಮಾಧುಸ್ವಾಮಿ ಅವರು ದುದ್ದ ಏತ ನೀರಾವರಿ ಯೋಜನೆಯನ್ನು ಉದ್ಘಾಟಿಸಲಿದ್ದಾರೆ. 185 ಕೋಟಿ ರೂಪಾಯಿ ವೆಚ್ಚದಲ್ಲಿ ಲೋಕಪಾವನಿ ನದಿಯಿಂದ 19 ಕ್ಯೂಸೆಕ್ ನೀರನ್ನು ಹರಿಸಿ ಕುಡಿಯುವ ನೀರಿಗೆ ಅನುಕೂಲ ಮಾಡಿಕೊಡುವುದು ಯೋಜನೆಯ ಮುಖ್ಯ ಉದ್ದೇಶವಾಗಿದೆ ಎಂದು ತಿಳಿಸಿದರು.

ಸಣ್ಣ ನೀರಾವರಿ ಮತ್ತು ಅಂತರ್ಜಲ ಅಭಿವೃದ್ಧಿ ಇಲಾಖೆಯಿಂದ ಮೇಘಾ ಇಂಜಿನಿಯರಿಂಗ್ ಇನ್‌ಫ್ರಾಸ್ಟ್ರಕ್ಚರ್ ಪ್ರೈವೇಟ್ ಲಿಮಿಟೆಡ್‌ನವರು ಕಾಮಗಾರಿಯನ್ನು ನಿರ್ವಹಿಸುತ್ತಿದ್ದಾರೆ. ಮೊದಲ ಹಂತದಲ್ಲಿ 20 ಕೆರೆಗಳಿಗೆ ಮತ್ತು ಎರಡನೇ ಹಂತದಲ್ಲಿ 34 ಕೆರೆಗಳಿಗೆ ನೀರು ತುಂಬಿಸಿ ಅಂತರ್ಜಲ ಅಭಿವೃದ್ಧಿ ಮತ್ತು ಸುತ್ತಮುತ್ತಲಿನ ಹಳ್ಳಿಗಳಿಗೆ ಕುಡಿಯುವ ನೀರನ್ನು ಒದಗಿಸುವ ಯೋಜನೆಯಾಗಿದೆ. ಇದೇ ನೀರನ್ನು ಬಳಸಿಕೊಂಡು ಹೆಚ್ಚುವರಿಯಾಗಿ ಇನ್ನೂ 24 ಕೆರೆಗಳಿಗೆ ಸಂಪರ್ಕ ಕಲ್ಪಿಸಲಾಗುವುದು ಎಂದರು.
ದುದ್ದ ಏತ ನೀರಾವರಿ ಯೋಜನೆಗೆ ಶ್ರೀರಂಗಪಟ್ಟಣ ವ್ಯಾಪ್ತಿಯಲ್ಲಿ 150 ಮೀ. ಉದ್ದಕ್ಕೆ ಏರು ಕೊಳವೆ ಮಾರ್ಗ ನಿರ್ಮಿಸಿ ಶ್ರೀನಿವಾಸ ಅಗ್ರಹಾರದ ಬಳಿ ಜಾಕ್‌ವೆಲ್, ಪಂಪ್‌ಹೌಸ್ ಕಾಮಗಾರಿ, ಪಂಪ್, ಮೋಟಾರ್ ಅಳವಡಿಸಲಾಗಿದೆ. ಮೊದಲ ಹಂತದಲ್ಲಿ 5.50 ಕ್ಯೂಸೆಕ್ ನೀರನ್ನು ಮೇಲೆತ್ತಿ 20 ಕೆರೆಗಳಿಗೆ ಹರಿಸಿದರೆ, ಎರಡನೇ ಹಂತದಲ್ಲಿ ಪಾಂಡವಪುರ ತಾಲೂಕಿನ ಕಾಳೇನಹಳ್ಳಿ ಕೆರೆ ಬಳಿ ಪಂಪ್‌ಹೌಸ್, ಜಾಕ್‌ವೆಲ್ ನಿರ್ಮಾಣ ಕಾಮಗಾರಿ, ಪಂಪ್ ಮತ್ತು ಮೋಟಾರ್‌ಗಳ ಅಳವಡಿಕೆ ಕಾರ್ಯ ಪೂರ್ಣಗೊಳಿಸಿ ಅಲ್ಲಿಂದ 13.50 ಕ್ಯುಸೆಕ್ ನೀರನ್ನು ಮೇಲೆತ್ತುವುದರೊಂದಿಗೆ 34 ಕೆರೆಗಳನ್ನು ತುಂಬಿಸಲಾಗುತ್ತಿದೆ ಎಂದು ವಿವರಣೆ ನೀಡಿದರು.

ದುದ್ದ ಹೋಬಳಿ ಮಳೆಯಾಶ್ರಿತ ಪ್ರದೇಶವಾಗಿದ್ದು, ಸಮರ್ಪಕ ಮಳೆಯಿಲ್ಲದ ಕಾರಣ ಕೆರೆಗಳು ಭರ್ತಿಯಾಗುತ್ತಿರಲಿಲ್ಲ. ಈ ಪ್ರದೇಶದಲ್ಲಿ ಅಂತರ್ಜಲ ಮಟ್ಟವೂ ಪಾತಾಳ ಸೇರಿದೆ. ಈ ಯೋಜನೆಯಿಂದ ಕೆರೆಗಳು ಭರ್ತಿಯಾಗಲಿದ್ದು, ಸುತ್ತಮುತ್ತಲಿನ ಪ್ರದೇಶದಲ್ಲಿ ಅಂತರ್ಜಲ ಅಭಿವೃದ್ಧಿಗೆ ಹೆಚ್ಚಿನ ಅನುಕೂಲವಾಗಲಿದೆ. ಜನ-ಜಾನುವಾರುಗಳ ಕುಡಿಯುವ ನೀರಿಗೂ ಬಳಸಬಹುದಾಗಿದೆ ಎಂದು ಹೇಳಿದರು.
ಹೆಚ್.ಡಿ.ಕುಮಾರಸ್ವಾಮಿ ಅವರು ಮುಖ್ಯಮಂತ್ರಿಯಾಗಿದ್ದ ಸಮಯದಲ್ಲಿ ಲೋಕಪಾವನಿ ನೀರಿನಿಂದ ದುದ್ದ ಹೋಬಳಿಯ 54 ಕೆರೆಗಳಿಗೆ ನೀರು ತುಂಬಿಸುವ ಯೋಜನೆಗೆ 25.8.2018ರಲ್ಲಿ ಮಂಜೂರಾತಿ ದೊರಕಿಸಿಕೊಟ್ಟರು. ಸಣ್ಣ ನೀರಾವರಿ ಸಚಿವನಾಗಿ ಯೋಜನೆಗೆ ಅನುಮೋದನೆ ದೊರಕಿಸಿಕೊಂಡು ಕಾಮಗಾರಿ ನಿರ್ವಹಿಸಿದ್ದಾಗಿ ಹೇಳಿದ ಸಿ.ಎಸ್.ಪುಟ್ಟರಾಜು, ಮಳೆಯಾಶ್ರಿತ ಪ್ರದೇಶವಾಗಿರುವ ದುದ್ದ ಹೋಬಳಿಯ ಜನ-ಜಾನುವಾರುಗಳ ಕುಡಿಯುವ ನೀರು ಪೂರೈಸುವ ದೃಷ್ಟಿಯಿಂದ ಇದೊಂದು ಮಹತ್ವದ ಯೋಜನೆಯಾಗಿದೆ ಎಂದು ಹೇಳಿದರು.
ನನ್ನ ಕೆಲಸಗಳ ಬಗ್ಗೆ ಜನರಿಗೆ ಚೆನ್ನಾಗಿ ಗೊತ್ತಿದೆ
ದುದ್ದ ಏತ ನೀರಾವರಿ ಯೋಜನೆ ರೂಪಿಸಿದ್ದು ಮಾಜಿ ಶಾಸಕ ಕೆ.ಎಸ್.ಪುಟ್ಟಣ್ಣಯ್ಯ ಎಂದು ಹೇಳುವ ಮೂಲಕ ರೈತಸಂಘದವರು ಸಣ್ಣತನದ ರಾಜಕಾರಣ ಮಾಡುತ್ತಿದ್ದಾರೆ ಎಂದು ಮೇಲುಕೋಟೆ ಕ್ಷೇತ್ರದ ಶಾಸಕ ಸಿ.ಎಸ್.ಪುಟ್ಟರಾಜು ಟೀಕಿಸಿದರು.
ಯೋಜನೆಗೆ ಅನುಮೋದನೆ ದೊರಕಿದ್ದು ಯಾವಾಗ. ಆಗ ಮುಖ್ಯಮಂತ್ರಿಯಾಗಿದ್ದವರು ಯಾರು ಎನ್ನುವುದನ್ನು ಅರಿತು ಮಾತನಾಡಬೇಕು. ಕೆ.ಎಸ್.ಪುಟ್ಟಣ್ಣಯ್ಯನವರು ಅಭಿವೃದ್ಧಿ ಮಾಡಿದಾಗ ಬೆಂಬಲಿಸುತ್ತಿದ್ದರು. ತಮ್ಮದಲ್ಲದ ಕಾರ್ಯಗಳನ್ನು ತಮ್ಮದೆಂದು ಹೇಳಿಕೊಂಡವರಲ್ಲ. ಆದರೆ, ಅವರ ಹೆಸರನ್ನು ಬಳಸಿಕೊಂಡು ಜನರಿಗೆ ಸುಳ್ಳು ಹೇಳುವುದು ಸರಿಯಲ್ಲ. ಅದರಿಂದಲೇ ಪ್ರಚಾರ ಪಡೆಯುತ್ತೇವೆಂದರೆ ನಾನೇನೂ ಮಾಡಲಾಗುವುದಿಲ್ಲ. ನನ್ನ ಕೆಲಸಗಳ ಬಗ್ಗೆ ಜನರಿಗೆ ಚೆನ್ನಾಗಿ ಗೊತ್ತಿದೆ ಎಂದು ಹೇಳಿದರು.











Click it and Unblock the Notifications