ರಾಜಾಲಂಕಾರದಲ್ಲಿ ಕಂಗೊಳಿಸಿದ ಮೈಸೂರು ಯದುವಂಶದ ಆದಿದೈವ ಚೆಲುವನಾರಾಯಣ
ಮೇಲುಕೋಟೆ, ಅಕ್ಟೋಬರ್, 06: ಭಕ್ತರ ಇಷ್ಟಾರ್ಥ ಕರುಣಿಸಲು ಧರೆಗಿಳಿದ ಚಕ್ರವರ್ತಿಯಂತೆ ಮೇಲುಕೋಟೆ ಶ್ರೀ ಚೆಲುವನಾರಾಯಣಸ್ವಾಮಿ ರಾಜಾಲಂಕಾರದಲ್ಲಿ ಕಂಗೊಳಿಸಿದ್ದಾನೆ. ಮೈಸೂರು ಯದುವಂಶದ ಅದಿದೈವ ಮೇಲುಕೋಟೆ ಶ್ರೀ ಚೆಲುವನಾರಾಯಣಸ್ವಾಮಿಯ ದರ್ಶನ ಮಾಡಿದ ಸಹಸ್ರಾರು ಭಕ್ತರು ಧನ್ಯರಾದರು.
ಕಂಗೊಳಿಸಿದ ಚೆಲುವನಾರಾಯಣಸ್ವಾಮಿ
ವಿಜಯದಶಮಿಯಂದು ಶಂಖ, ಚಕ್ರ, ಗದಾ, ಪದ್ಮ ಕತ್ತಿ, ಬಿಲ್ಲು ಬಾಣ ಮುಂತಾದ ದಿವ್ಯ ಆಯುಧಗಳನ್ನು ಧರಿಸಿ ಮೈಸೂರು ಪೇಟ, ಜರತಾರಿ ರೇಷ್ಮೆ ಪಂಚೆಯೊಂದಿಗೆ ಭವ್ಯವಾಗಿ ಚೆಲುವನಾರಾಯಣಸ್ವಾಮಿಗೆ ಅಲಂಕಾರ ಮಾಡಲಾಗಿತ್ತು. ದಿವ್ಯ ಸುಂದರ ಚೆಲುವನಾರಾಯಣಸ್ವಾಮಿಗೆ ಜಯಘೋಷ ಹಾಕುತ್ತಾ, ವೈಭವವನ್ನು ಭಕ್ತರು ಕಣ್ತುಂಬಿಕೊಂಡರು. ದೇವಾಲಯದಲ್ಲಿ ನಿತ್ಯ ಪೂಜಾ ಕೈಂಕರ್ಯಗಳನ್ನು ಆರಂಭಸಲಾಗಿತ್ತು. ನಂತರ ಭಕ್ತರ ದರ್ಶನಕ್ಕೆ ಮುಕ್ತವಾಗಿ ಅವಕಾಶ ನೀಡಲಾಗಿತ್ತು. ಸಹಸ್ರಾರು ಸಂಖ್ಯೆಯ ಭಕ್ತರು ತಂಡೋಪತಂಡವಾಗಿ ದೇವಸ್ಥಾನಕ್ಕೆ ಆಗಮಿಸಿ ಸರತಿ ಸಾಲಿನಲ್ಲಿ ನಿಂತು ಚೆಲುವನಾರಾಯಣಸ್ವಾಮಿಯ ದರ್ಶನವನ್ನು ಪಡೆದಿದ್ದರು.
ಮಹಾ ವಿಷ್ಣುವಿನ ಅವತಾರ ರೂಪಿಯಾದ ಬೆಟ್ಟದೊಡೆಯ ಕುಂತಸಿಂಗ್ರಿ, ಯೋಗನರಸಿಂಹ ಸ್ವಾಮಿಗೂ ಪಾರಂಪರಿಕವಾದ ಮಹಾರಾಜರ ಅಲಂಕಾರ ಮಾಡಲಾಗಿತ್ತು. ಬೆಟ್ಟದ ದೇವಾಲಯದಲ್ಲೂ ಪೂಜಾ ಕೈಂಕರ್ಯಗಳನ್ನು ಮುಕ್ತಾಯಗೊಳಿಸಿ ಭಕ್ತರ ದರ್ಶನಕ್ಕೆ ವ್ಯವಸ್ಥೆ ಮಾಡಿಕೊಡಲಾಗಿತ್ತು. ಕಲ್ಯಾಣಿ, ಬೆಟ್ಟ, ಹಾಗೂ ದೇವಾಲಯದ ಆವರಣಗಳಲ್ಲಿ ಭಕ್ತಸಾಗರವೇ ತುಂಬಿ ತುಳುಕುತ್ತು.

ಭಕ್ತರಿಗೆ ಅನ್ನದಾನ ಸಂತರ್ಪಣೆ
ಯತಿರಾಜದಾಸರ್ ಗುರುಪೀಠದಲ್ಲಿ ಸ್ಥಾನಾಚಾರ್ಯ ಶ್ರೀನಿವಾಸನರಸಿಂಹನ್ ಗುರೂಜಿ ನೇತೃತ್ವದಲ್ಲಿ ಎರಡೂ ಸಾವಿರಕ್ಕೂ ಅಧಿಕ ಭಕ್ತರಿಗೆ ಸಿಹಿಯೊಂದಿಗೆ ಅನ್ನದಾನ ಮಾಡಲಾಯಿತು. ಇದೇ ವೇಳೆ ಆಂಧ್ರದ ಚಿನ್ನಜೀಯರ್ ಮಠದಲ್ಲೂ ಅನ್ನದಾನ ನಡೆಯಿತು. ಮಹಾನವಮಿಯ ಅಂಗವಾಗಿ ಮಂಗಳವಾರ ದೇವಾಲಯದ ಆಯುಧಗಳು, ಪಲ್ಲಕ್ಕಿ ಕುದುರೆವಾಹನ ದೊಡ್ಡಶೇಷವಾಹನ ಹಾಗೂ ಚೆಲುವನಾರಾಯಣಸ್ವಾಮಿ ದೇಗುಲದ ಸುತ್ತಲಗುಡಿಗಳಿಗೆ ವಿಶೇಷ ಪೂಜಾ ಕೈಂಕರ್ಯಗಳನ್ನು ನೆರವೇರಿಸಲಾಗಿತ್ತು. ವಿಜಯದಶಮಿ ಮೆರವಣಿಗೆಗಾಗಿ ಇದೇ ಪ್ರಥಮ ಬಾರಿಗೆ ಗ್ರಾಮ ಪಂಚಾಯತಿ ಉಪಾಧ್ಯಕ್ಷ ವಾದ್ಯಾರ್ ತಿರುಮಲೈ ಕಾಳಜಿಯ ಪರಿಣಾಮ ಉತ್ಸವ ಬೀದಿಗಳು ಮತ್ತು ಬನ್ನಿಮಂಟಪಕ್ಕೆ ಬೀದಿ ದೀಪಗಳ ಜೊತೆಗೆ ಹೆಚ್ಚುವರಿ ಪೋಕಸ್ ಲೈಟ್‌ಗಳನ್ನು ಅಳವಡಿಸಿದ್ದು, ಗಮನ ಸೆಳೆದಿದೆ.