ಮಂಡ್ಯದಲ್ಲಿ ರಾಜಕೀಯ ನೆಲೆ ಕಂಡುಕೊಳ್ಳಲು ಬಿಜೆಪಿ ಜನರನ್ನು ಎತ್ತಿಕಟ್ಟುತ್ತಿದೆ: ಡಿಸಿಎಂ ಡಿ.ಕೆ. ಶಿವಕುಮಾರ್
ಬೆಂಗಳೂರು, ಜನವರಿ 29: ಮಂಡ್ಯದಲ್ಲಿ ರಾಜಕೀಯ ನೆಲೆ ಇಲ್ಲದ ಬಿಜೆಪಿಯು ಅಸ್ಥಿತ್ವ ಕಂಡುಕೊಳ್ಳಲು ಜನರನ್ನು ಎತ್ತಿಕಟ್ಟಲು ಪ್ರಯತ್ನಿಸುತ್ತಿದೆ ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಟೀಕಿಸಿದ್ದಾರೆ.
ಮಂಡ್ಯದಲ್ಲಿ ಹನುಮಧ್ವಜ ವಿಚಾರವಾಗಿ ಎದ್ದಿರುವ ವಿವಾದದ ಕುರಿತು ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಸಮಾಜದಲ್ಲಿ ಅಶಾಂತಿ ಸೃಷ್ಟಿಸಲು ಬಿಜೆಪಿ ನಾಯಕರು ಪ್ರಯತ್ನಿಸುತ್ತಿದ್ದಾರೆ. ದೇಶದ ಕಾನೂನಿಗೆ ನಾವು ಗೌರವ ನೀಡಬೇಕು. ಬಿಜೆಪಿ ಅಭ್ಯರ್ಥಿಗಳು ಅನೇಕ ಕಡೆಗಳಲ್ಲಿ ಠೇವಣಿ ಕಳೆದುಕೊಂಡಿರುವ ಹಿನ್ನೆಲೆಯಲ್ಲಿ ಜೆಡಿಎಸ್ ಜೊತೆ ಸೇರಿಕೊಂಡಿದ್ದಾರೆ ಎಂದರು.

ಮಂಡ್ಯದಲ್ಲಿ ರಾಜಕೀಯ ನೆಲೆ ಕಂದುಕೊಳ್ಳಲು ಇಂತಹ ಪ್ರಯತ್ನಕ್ಕೆ ಮುಂದಾಗಿದ್ದಾರೆ. ಇದರಿಂದ ಏನೂ ಪ್ರಯೋಜನವಿಲ್ಲ. ಮಂಡ್ಯದ ಜನರು ಬಹಳ ಸಹಿಷ್ಣುತೆಯುಳ್ಳವರು, ಜಾತ್ಯಾತೀತರಾಗಿದ್ದಾರೆ. ಅವರು ಇಂತಹ ವಿಚಾರಗಳಿಗೆ ಮಾರುಹೋಗುವುದಿಲ್ಲ. ನಮಗೆ ನಮ್ಮದೇ ಆದ ಸಂವಿಧಾನವಿದೆ. ಈ ಭಾಗವನ್ನು ನಮ್ಮ ಮಹಾರಾಜರು ಹೇಗೆ ಆಳ್ವಿಕೆ ನಡೆಸಿದ್ದಾರೆ ಎಂಬ ಇತಿಹಾಸವಿದೆ. ಈ ಎಲ್ಲಾ ಗೊಂದಲಗಳು ಬಿಜೆಪಿಯ ಸೃಷ್ಟಿ. ರಾಜ್ಯದಲ್ಲಿ ಶಾಂತಿ ಸ್ಥಾಪನೆ ಮಾಡುವುದು ನಮ್ಮ ಆದ್ಯತೆ ಎಂದು ಹೇಳಿದರು.
ಹಿಂದೂ ವಿರೋಧಿ ಕಾಂಗ್ರೆಸ್ ಸರ್ಕಾರ ಎಂಬ ಬಿಜೆಪಿ ನಾಯಕರ ಟೀಕೆಗೆ ತಿರುಗೇಟು ನೀಡಿದ ಅವರು, ಯಾರು ಹಿಂದೂ ವಿರೋಧಿ? ನಾವೆಲ್ಲರೂ ಮೊದಲು ಭಾರತೀಯರು. ಅಲ್ಲಿ ದಲಿತ ಸಂಘರ್ಷ ಸಮಿತಿ, ಕೆಂಪೇಗೌಡ ಸಮಿತಿ ಸೇರಿದಂತೆ ಅನೇಕರು ನಾವು ಬಾವುಟ ಹಾಕುತ್ತೇವೆ ಎಂದು ಕೇಳುತ್ತಿದ್ದಾರೆ. ನಾವೆಲ್ಲರೂ ಹಿಂದೂಗಳಲ್ಲವೇ? ನಮ್ಮ ಹಳ್ಳಿಯಲ್ಲಿರುವ ಜನ ಹಿಂದೂಗಳಲ್ಲವೇ? ಸಮಾಜದಲ್ಲಿ ಅಶಾಂತಿ ಮೂಡಿಸಲು ಬಿಜೆಪಿ ಈ ಪ್ರಯತ್ನ ಮಾಡುತ್ತಿದೆ ಎಂದು ಹೇಳಿದರು.
ಕೆರಗೋಡು ಗ್ರಾಮದಲ್ಲಿ ನಡೆದಿದ್ದೇನು..?
ಮಂಡ್ಯ ತಾಲೂಕಿನ ಕೆರಗೋಡು ಗ್ರಾಮದಲ್ಲಿ ಅಳವಡಿಸಲಾಗಿದ್ದ 108 ಅಡಿ ಎತ್ತರದ ಧ್ವಜಸ್ತಂಭದಲ್ಲಿ ಹಾರಿಸಲಾಗಿದ್ದ ಶ್ರೀ ಆಂಜನೇಯ ಅರ್ಜುನ ಧ್ವಜವನ್ನು ಪೊಲೀಸ್ ಸರ್ಪಗಾವಲಿನಲ್ಲಿ ಗ್ರಾಮಸ್ಥರ ವಿರೋಧದ ನಡುವೆ ಅಧಿಕಾರಿಗಳು ತೆರವು ಮಾಡಿದರು. ಇದರಿಂದ ರೊಚ್ಚಿಗೆದ್ದ ಗ್ರಾಮಸ್ಥರು ಹಾಗೂ ಹಿಂದೂ ಕಾರ‌್ಯಕರ್ತರು ಪೊಲೀಸರು, ಜಿಲ್ಲಾಡತ ಹಾಗೂ ಸ್ಥಳೀಯ ಶಾಸಕ ಪಿ. ರವಿಕುಮಾರ್ ವಿರುದ್ಧ ಘೋಷಣೆ ಕೂಗಿದರು.

ಧ್ವಜ ಇಳಿಸಲು ಬಂದ ಪೊಲೀಸರು ಮತ್ತು ಅಧಿಕಾರಿಗಳ ವಿರುದ್ಧ ಅಧಿಕಾರಿಗಳೇ ಗೋಬ್ಯಾಕ್ ಎಂದು ಘೋಷಣೆ ಕೂಗಿದರಲ್ಲದೆ, ಯಾವುದೇ ಕಾರಣಕ್ಕೂ ಧ್ವಜ ಇಳಿಸಲು ಬಿಡುವುದಿಲ್ಲ ಎಂದು ಸ್ತಂಭದ ಕೆಳಗೆ ಕುಳಿತು ಆಕ್ರೋಶ ವ್ಯಕ್ತಪಡಿಸಿದರು.
ಪೊಲೀಸರ ಸರ್ಪಗಾವಲಿನಲ್ಲಿ ಧ್ವಜ ಇಳಿಸಲು ಅಧಿಕಾರಿಗಳು ನಿರ್ಧರಿಸಿದರು. ಗ್ಯಾಸ್ ಕಟ್ಟರ್‌ನಿಂದ ಧ್ವಜಸ್ತಂಭವನ್ನೇ ತುಂಡರಿಸಿ ತೆರವುಗೊಳಿಸಲು ಪೊಲೀಸರು ಮುಂದಾದರೂ. ಇದಕ್ಕೆ ಗ್ರಾಮಸ್ಥರು ವಿರೋಧ ವ್ಯಕ್ತಪಡಿಸಿದರು. ನಂತರ ಇದನ್ನು ಪೊಲೀಸರು ಕೈಬಿಟ್ಟರು. ಪೊಲೀಸರು ಧ್ವಜವನ್ನು ಇಳಿಸಲು ಮುಂದಾದರು. ಈ ವೇಳೆ ನೂಕು ನುಗ್ಗಲು ಉಂಟಾಯಿತು. ಬಳಿಕ ಲಘು ಲಾಠಿ ಪ್ರಹಾರ ನಡೆಸಿ ಧ್ವಜ ಸ್ತಂಭದಿಂದ ಗ್ರಾಮಸ್ಥರು ಮತ್ತು ಯುವಜನರನ್ನು ಚದುರಿಸಿ ನಂತರ ಧ್ವಜವನ್ನು ಇಳಿಸಲಾಯಿತು.
ಈ ಸಂದರ್ಭದಲ್ಲಿ ಮಹಿಳೆಯರು ಸೇರಿದಂತೆ ಹಲವಾರು ಮಂದಿ ಬಾಯಿ ಬಡಿದುಕೊಂಡು ಕಣ್ಣೀರು ಹಾಕಿದರು. ಕೆಲವರು ಪೊಲೀಸರು ಮತ್ತು ಅಧಿಕಾರಿಗಳತ್ತ ಮಣ್ಣು ತೂರಿ ಹಿಡಿಶಾಪ ಹಾಕಿದರು. ಇಳಿಸಿದ ಧ್ವಜವನ್ನು ಪೊಲೀಸರೇ ಕೊಂಡೊಯ್ಯಲು ಯತ್ನಿಸಿದರು. ಆದರೆ ಧ್ವಜವನ್ನು ನಮಗೇ ಕೊಡುವಂತೆ ಗ್ರಾಮಸ್ಥರು ಪಟ್ಟು ಹಿಡಿದರು. ನಂತರ ಅದನ್ನು ಗ್ರಾಮಸ್ಥರ ವಶಕ್ಕೆ ಒಪ್ಪಿಸಿದರು. ನಂತರ ಅದೇ ಧ್ವಜಸ್ತಂಭಕ್ಕೆ ರಾಷ್ಟ್ರ ಧ್ವಜವನ್ನು ಹಾರಿಸಲು ಮುಂದಾದರು. ಈ ಸಂದರ್ಭದಲ್ಲಿ ವಿದ್ಯುತ್ ಫ್ಯೂಸ್ ಕಿತ್ತು ಕೊಂಡೊಯ್ಯುವ ಮೂಲಕ ಪೊಲೀಸರಿಗೆ ಧ್ವಜ ಹಾರಿಸುವ ಯತ್ನಕ್ಕೆ ಬ್ರೇಕ್ ಹಾಕಲಾಯಿತು.
ಈ ಸುದ್ಧಿ ತಿಳಿಯುತ್ತಿದ್ದಂತೆ ಸುತ್ತಮುತ್ತಲ ಗ್ರಾಮಸ್ಥರು ಕೆರಗೋಡು ಗ್ರಾಮಕ್ಕೆ ಆಗಮಿಸಿ ಪೊಲೀಸರು, ಜನಪ್ರತಿನಿಧಿಗಳು, ಸಚಿವರು, ಜಿಲ್ಲಾಡಳಿತದ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ಪೊಲೀಸ್ ಬ್ಯಾರಿಕೇಡ್‌ಗಳನ್ನು ಕಿತ್ತೆಸೆದರು.












Click it and Unblock the Notifications