ಮಂಡ್ಯದಲ್ಲಿ ಗೋವುಗಳಿಗೂ ಹುಟ್ಟುಹಬ್ಬ ಆಚರಣೆ ಮಾಡಿ ಗಮನ ಸೆಳೆದ ಸಾವಯವ ಕೃಷಿಕರು
ಮಂಡ್ಯ, ಏಪ್ರಿಲ್, 02: ನಾವು ಸಾಮಾನ್ಯವಾಗಿ ಮನುಷ್ಯರ ಹುಟ್ಟಹಬ್ಬ ಆಚರಣೆ ಮಾಡುವುದನ್ನು ನೋಡಿರುತ್ತೇವೆ. ಆದರೆ ಮಂಡ್ಯದಲ್ಲಿ ಸಾವಯವ ಕೃಷಿಕರೆಲ್ಲ ಸೇರಿ ಗೋವಿಗೆ ಹುಟ್ಟುಹಬ್ಬ ಆಚರಣೆ ಮಾಡುವ ಮೂಲಕ ಗಮನ ಸೆಳೆದಿದ್ದಾರೆ.
ನಾಗರೀಕತೆ ಬೆಳೆದಂತೆಲ್ಲಾ ಆಧುನೀಕತೆಯೂ ಜೊತೆ ಆಗುತ್ತದೆ. ಪಾಶ್ಚಿಮಾತ್ಯ ಸಂಸ್ಕೃತಿ ಭಾರತದೊಳಗೆ ನುಸುಳಿ ಹಲವು ದಶಕಗಳೇ ಕಳೆದಿವೆ. ಇದರ ಪರಿಣಾಮ ಪಾಶ್ಚಾತ್ಯ ಹುಟ್ಟುಹಬ್ಬಗಳ ಆಚರಣೆ ನಮ್ಮಲ್ಲೂ ಎಗ್ಗಿಲ್ಲದೆ ನಡೆಯುತ್ತಿದೆ. ಕೇವಲ ಮನುಷ್ಯರಿಗೆ ಮಾತ್ರ ಸೀಮಿತವಾಗಿದ್ದ ಈ ಹಬ್ಬವನ್ನು ಕೃಷಿಕರು ತಮ್ಮ ಗೋವುಗಳಿಗೂ ಆಚರಿಸುವ ಹೊಸ ಪದ್ಧತಿಗೆ ಮುನ್ನುಡಿ ಬರೆದಿದ್ದಾರೆ.

ಬಯಲು ಸೀಮೆ ಸಾವಯವ ಕೃಷಿಕರ ಸಂಘದವರು ಗೋವುಗಳಿಗೂ ಹುಟ್ಟುಹಬ್ಬ ಆಚರಿಸುವ ಹೊಸ ಪದ್ದತಿ ಆರಂಭಿಸಿದ್ದಾರೆ.
ಸಸ್ಯ ಜೀನೋಮ್ ಸಂರಕ್ಷಕ ರಾಷ್ಟ್ರ ಪ್ರಶಸ್ತಿ ಪುರಸ್ಕೃತ ಶಿವಳ್ಳಿ ಬೋರೇಗೌಡ, ಕೃಷಿ ಪಂಡಿತ ರಾಜ್ಯಪ್ರಶಸ್ತಿ ವಿಜೇತ ಸಿ.ಪಿ.ಕೃಷ್ಣ, ರಾಜ್ಯ ಪ್ರಶಸ್ತಿ ವಿಜೇತ ಮಾರಗೌಡನಹಳ್ಳಿ ಶಿವಣ್ಣಗೌಡ ಅವರು ಈ ಹೊಸ ಹಬ್ಬ ಆಚರಣೆಗೆ ಮುನ್ನುಡಿ ಬರೆದಿದ್ದಾರೆ.
ಇನ್ನು ಕೃಷಿ ಪಂಡಿತ ಪ್ರಶಸ್ತಿ ಪುರಸ್ಕೃತ ಶಿವರಾಮೇಗೌಡ ಕೀಲಾರ, ಸೂಪರ್ ಸ್ಟಾರ್ ಖ್ಯಾತಿಯ ರಾಜ್ಯಪ್ರಶಸ್ತಿ ವಿಜೇತ ಮರಿದೇಶಿಗೌಡ, ಗೋ ಸಂರಕ್ಷಣೆಯಲ್ಲಿ ರಾಜ್ಯ ಪ್ರಶಸ್ತಿಗಳಿಸಿದ ಎಂ.ಟಿ.ವೆಂಕಟೇಶ್, ಸಾವಯವ ಬೆಲ್ಲ ತಯಾರಿಕೆಯಲ್ಲಿ ಪ್ರಶಸ್ತಿ ಪಡೆದ ಸುಂಕಾತೊಣ್ಣೂರು ದೇವೇಗೌಡ ಸೇರಿದಂತೆ ಮುಂತಾದವರು ಸೇರಿ ಸುಮಾರು 55ಕ್ಕೂ ಹೆಚ್ಚು ರೈತರು ಈ ಪದ್ಧತಿಯನ್ನು ರೂಢಿಸಿಕೊಂಡು ಬಂದಿದ್ದಾರೆ.
ಪ್ರತಿ ತಿಂಗಳೂ ಒಬ್ಬೊಬ್ಬರ ಜಮೀನಿನಲ್ಲಿ ಸಭೆ ಸೇರುವುದು, ವ್ಯಾಪಾರ ಕೇಂದ್ರದಲ್ಲಿ ಯಾವ ಪದಾರ್ಥಕ್ಕೆ ಹೆಚ್ಚು ಬೇಡಿಕೆ ಇದೆ. ಯಾವುದಕ್ಕೆ ಯಾರೂ ಆಸಕ್ತಿವಹಿಸಿಲ್ಲ, ಇದಕ್ಕೆ ಕಾರಣ ಏನು ಎಂಬುದನ್ನು ಚರ್ಚಿಸಿ ವಿಚಾರ ಮಂಥನ ನಡೆಸುವುದು ಹಿಂದಿನಿಂದಲೂ ನಡದುಕೊಂಡು ಬಂದಿದೆ.

ಕಲ್ಲಂಗಡಿ ಕತ್ತರಿಸಿ ಗೋವಿನ ಹುಟ್ಟುಹಬ್ಬ ಆಚರಣೆ
ಈ ಬಾರಿ ಏಪ್ರಿಲ್ 1ರಂದು ತಾಲೂಕಿನ ತಗ್ಗಹಳ್ಳಿ ಮಲ್ಲಿಗೆರೆಯಲ್ಲಿನ ಸಾವಯವ ಕೃಷಿಕ ವೆಂಕಟೇಶ್ ಅವರ ಮನೆಯಲ್ಲಿ 2 ವರ್ಷದ ಹಸುಗೆ ಹುಟ್ಟುಹಬ್ಬ ಆಚರಿಸಿದ್ದು ವಿಶೇಷವಾಗಿತ್ತು. ಮನೆಯ ಎಲ್ಲರೂ ಮಡಿಯುಟ್ಟು, ಹಸುಗೆ ಸ್ನಾನ ಮಾಡಿಸಿ ಸಾಂಪ್ರದಾಯಿಕವಾಗಿ ಗೋಪೂಜೆ ನೆರವೇರಿಸಿದರು. ಬಳಿಕ ಹಸುವಿನ ಮುಂದೆ ಕಲ್ಲಂಗಡಿ ಕತ್ತರಿಸುವ ಮೂಲಕ ಹುಟ್ಟುಹಬ್ಬದ ಶುಭಾಷಯ ತಿಳಿಸಿ ಕಲ್ಲಂಗಡಿ ತಿನ್ನಿಸಿ ಸಂಭ್ರಮಿಸಿದರು.
ಈ ವೇಳೆ ಕೃಷಿಕರೆಲ್ಲರೂ ಸಭೆ ಸೇರಿ ಸಾವಯವ ಕೃಷಿಯಲ್ಲಿ ಗೋವಿನ ಮಹತ್ವದ ಕುರಿತು ಮಾಹಿತಿ ಹಂಚಿಕೊಂಡರು.
ಬಳಿಕ ಸರ್ವೇಜನಾಃ ಸುಖಿನೋ ಭವಂತು ಜಪಿಸಿದ ಕೃಷಿಕರು ಪ್ರಾಣಾಯಾಮದ ಕುರಿತು ಆಸಕ್ತಿಯಿಂದ ಚಟುವಟಿಕೆ ನಡೆಸಿದರು. ಅಲ್ಲದೆ ಉಸಿರಾಡುವ ಪ್ರಕ್ರಿಯೆಯಲ್ಲಿ ಧ್ಯಾನಿಸುವುದನ್ನು ಶಿವಳ್ಳಿ ಬೋರೇಗೌಡ ತಿಳಿಸಿದರು.
ಗೋವುಗಳ ಹುಟ್ಟುಹಬ್ಬದ ವಿಶೇಷತೆ
ಮೂಲತಃ ನಾವು ನೈಸರ್ಗಿಕ ಕೃಷಿಕರು. ನಮ್ಮ ರೈತರು ಮೊದಲು ಆರೋಗ್ಯದಿಂದ ಇರಬೇಕು. ಅವರಿಂದ ಆರೋಗ್ಯಕರ ಕೃಷಿ, ಆಹಾರ ಉತ್ಪತ್ತಿಯಾಗಬೇಕು. ಇದನ್ನು ಬಳಸುವ ಗ್ರಾಹಕರ ಆರೋಗ್ಯ ವೃದ್ಧಿಸಬೇಕು. ಇದು ನಮ್ಮ ಮೊದಲ ಆದ್ಯತೆಯಾಗಿದೆ. ಸಾವಯವ ಕೃಷಿಗೆ ಮೂಲವಾದುದೇ ಗೋವು. ಇದರ ಉತ್ಪನ್ನಗಳೇ ಜೀವಾಮೃತ. ಹಾಗಾಗಿ ರೈತನ ಜೀವನಾಡಿಯಾದ ಗೋವುಗಳ ಹುಟ್ಟುಹಬ್ಬ ಆಚರಿಸುವುದು ನಮ್ಮ ಜನ್ಮದಿನಾಚರಣೆಗಿಂತಲೂ ಮುಖ್ಯವಾಗಿದೆ ಎಂದು ಶಂಕರಯ್ಯ ತಿಳಿಸಿದರು.
ಈ ಮೂಲಕ ಗೋವುಗಳಿಗೆ ಮಹತ್ವ ನೀಡುವ ಮನೋಭಾವ ವೃದ್ಧಿಸಲೆಂಬುದು ನಮ್ಮ ಆಶಯವಾಗಿದೆ ಎಂದು ಸಂಘದ ಅಧ್ಯಕ್ಷ ನಗರಕೆರೆ ಶಂಕರಯ್ಯ ಗೋವುಗಳ ಹುಟ್ಟುಹಬ್ಬದ ಮಹತ್ವದ ಕುರಿತು ತಿಳಿಸಿದರು.
ಒಟ್ಟಾರೆ ಇಂದು ತಗ್ಗಹಳ್ಳಿಯ ಮಲ್ಲಿಗೆರೆಯಲ್ಲಿ ಆರಂಭವಾದ ಗೋವುಗಳ ಹುಟ್ಟುಹಬ್ಬ ಆಚರಣೆ ಇದೀಗ ಎಲ್ಲೆಡೆ ವ್ಯಾಪಿಸಿದೆ. ಇದರಿಂದ ಮುಂದಿ ದಿನಗಳಲ್ಲಿ ಸಾವಯವ ಕೃಷಿಗೆ ಹೆಚ್ಚು ಮಹತ್ವ ಬರಲಿದೆ. ಇದರಿಂದ ರಾಸಾಯನಿಕಯುಕ್ತ ಆಹಾರ ಪದಾರ್ಥಗಳ ಬೇಡಿಕೆ ಕುಸಿಯುತ್ತದೆ ಎಂಬುದು ಗ್ರಾಮದ ಹಿರಿಯರ ಅನಿಸಿಕೆಯಾಗಿದೆ.












Click it and Unblock the Notifications