2024ರ ಲೋಕಸಭಾ ಚುನಾವಣೆ ನಂತರ ಕಾಂಗ್ರೆಸ್ ಪಕ್ಷ ಇತಿಹಾಸ ಪುಟ ಸೇರಲಿದೆ: ವಿಜಯೇಂದ್ರ
ಮಂಡ್ಯ, ಸೆಪ್ಟಂಬರ್ 10: ಮುಂದಿನ 2024ರ ಲೋಕಸಭಾ ಚುನಾವಣೆಯ ಅನಂತರ ದೇಶದಲ್ಲಿ ಕಾಂಗ್ರೆಸ್ ಪಕ್ಷ ಇತಿಹಾಸ ಪುಟ ಸೇರಲಿದೆ ಎಂದು ರಾಜ್ಯ ಬಿಜೆಪಿ ಉಪಾಧ್ಯಕ್ಷ ಬಿ.ವೈ. ವಿಜಯೇಂದ್ರ ಹೇಳಿದ್ದಾರೆ.
ತಾಲೂಕಿನ ಬೂಕನಕೆರೆಯಲ್ಲಿ ಬಿ.ವೈ.ವಿಜಯೇಂದ್ರ ಅಭಿಮಾನಿ ಪಡೆಯ ಕಾರ್ಯಕರ್ತನೊಬ್ಬನ ಮನೆಯ ಗೃಹ ಪ್ರವೇಶಕ್ಕಾಗಿ ಆಗಮಿಸಿದ್ದ ಬಿ.ವೈ.ವಿಜಯೇಂದ್ರ ಸಮೀಪದ ಭೂ ವರಾಹನಾಥ ಕ್ಷೇತ್ರಕ್ಕೆ ಆಗಮಿಸಿ ಭೂ ವರಾಹನಾಥನಿಗೆ ವಿಶೇಷ ಪೂಜೆ ಸಲ್ಲಿಸಿ ಸುದ್ದಿಗಾರರೊಂದಿಗೆ ಮಾತನಾಡಿದರು.
ದೇಶದ ಉದ್ದಗಲಕ್ಕೂ ಜನ ಬಿಜೆಪಿ ಪರ ಇದ್ದಾರೆ. 2024ಕ್ಕೆ ಮತ್ತೆ ಕೇಂದ್ರದಲ್ಲಿ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬರಲಿದೆ. ನರೇಂದ್ರ ಮೋದಿ ಮೂರನೇ ಬಾರಿಗೆ ಮತ್ತೆ ದೇಶದ ಪ್ರಧಾನಿಯಾಗುವ ಮೂಲಕ ಇತಿಹಾಸದ ಪುಟಗಳಲ್ಲಿ ಸುವರ್ಣಾಕ್ಷರಗಳಿಂದ ಬರೆಯಲ್ಪಡುತ್ತಾರೆಂದ ಬಿ.ವೈ.ವಿಜಯೇಂದ್ರ ಮೋದಿ ಅಲೆಯಿಂದ ದೇಶದಲ್ಲಿ ವಿರೋಧ ಪಕ್ಷಗಳು ಕಂಗಾಲಾಗಿವೆ. ಮೋದಿ ನೇತೃತ್ವದ ಬಿಜೆಪಿಯನ್ನು ನಿಯಂತ್ರಿಸಲು ಸಹಜವಾಗಿಯೇ ಕಾರ್ಯಾಚರಣೆ ಆರಂಭಿಸಿವೆ. ರಾಹುಲ್ ಗಾಂಧಿ ನೇತೃತ್ವದ ಕಾಂಗ್ರೆಸ್ ಜೋಡೋ ಯಾತ್ರೆ ಇದರ ಒಂದು ಭಾಗವೆಂದರು.
ಸುಮಾರು 5 ದಶಕಗಳ ಕಾಲ ದೇಶವನ್ನಾಳಿದ ಕಾಂಗ್ರೆಸ್ ಇತಿಹಾಸದ ಪುಟ ಸೇರುವ ಕಾಲ ಸನ್ನಿಹಿತವಾಗಿದೆ. ದೇಶದ ಒಂದೆರಡು ರಾಜ್ಯಗಳನ್ನು ಹೊರತುಪಡಿಸಿದರೆ ಉಳಿದೆಲ್ಲಾ ಕಡೆ ಜನ ಕಾಂಗ್ರೆಸ್ ಪಕ್ಷವನ್ನು ತಿರಸ್ಕರಿಸಿದ್ದಾರೆ. ಕಾಂಗ್ರೆಸ್ ಮುಕ್ತ ಭಾರತ ನಿರ್ಮಾಣ ನಮ್ಮ ಗುರಿ. ಕಾಂಗ್ರೆಸ್ ಮುಕ್ತವೆಂದರೆ ಕಾಂಗ್ರೆಸ್ ಪಕ್ಷವನ್ನು ನಾಶಪಡಿಸುವುದಲ್ಲ. ಬದಲಾಗಿ ಕಾಂಗ್ರೆಸ್ ಸಂಸ್ಕೃತಿಯನ್ನು ನಾಶ ಮಾಡುವುದು. ಭ್ರಷ್ಟಾಚಾರ, ಸ್ವಜನ ಪಕ್ಷಪಾತ ಮತ್ತು ಪರಂಪರಾಗತ ಅಧಿಕಾರ ಮತ್ತಿತರ ಕಾಂಗ್ರೆಸ್ ನೀತಿಗಳನ್ನು ನಾಶ ಮಾಡುವುದೆಂದು ಬಿ.ವೈ.ವಿಜಯೇಂದ್ರ ಹೇಳಿದರು.

ಸಂಪುಟ ವಿಸ್ತರಣೆ ಸಿಎಂ ನಿರ್ಧಾರ
ಸಚಿವ ಸಂಪುಟದ ವಿಸ್ತರಣೆಯ ಬಗ್ಗೆ ಪತ್ರಕರ್ತರು ಕೇಳಿದ ಪ್ರಶ್ನೆಗಳಿಗೆ ಉತ್ತರಿಸಿದ ಬಿ.ವೈ.ವಿಜಯೇಂದ್ರ ಸಚಿವ ಸಂಪುಟದ ವಿಸ್ತರಣೆ ಮತ್ತು ಪುನರ್ ರಚನೆ ಮುಖ್ಯಮಂತ್ರಿಗಳ ಪರಮಾಧಿಕಾರ. ಮಂತ್ರಿಮಂಡಲದ ಬಗ್ಗೆ ಮುಖ್ಯಮಂತ್ರಿಗಳು ನಿರ್ಧರಿಸುತ್ತಾರೆ ಎಂದರು.

ಬಿಜೆಪಿ ಬೆಳವಣಿಗೆಯ ಹಿಂದೆ ನನ್ನ ತಂದೆಯ ಪರಿಶ್ರಮ
ಮುಂಬರುವ ವಿಧಾನ ಸಭಾ ಚುನಾವಣೆಯಲ್ಲಿ ನಾನು ಶಿಕಾರಿಪುರದಿಂದ ಸ್ಪರ್ಧಿಸಬೇಕೆನ್ನುವುದು ಅಲ್ಲಿನ ಕಾರ್ಯಕರ್ತರ ಅಭಿಪ್ರಾಯ. ಇದರ ಬಗ್ಗೆ ಕಾರ್ಯಕರ್ತರಿಂದ ಒತ್ತಡವಿದೆ. ಆದರೆ ನಾನು ಶಿಕಾರಿಪುರದಿಂದ ಸ್ಪರ್ಧಿಸಬೇಕೋ ಅಥವಾ ಬೆಡವೋ ಎನ್ನುವುದನ್ನು ಪಕ್ಷ ನಿರ್ಧರಿಸುತ್ತದೆ. ಪಕ್ಷದ ನಿರ್ಧಾರಕ್ಕೆ ನಾನು ಬದ್ದನಾಗಿದ್ದೇನೆ. ನನ್ನ ತಂದೆ ಬಿ.ಎಸ್.ಯಡಿಯೂರಪ್ಪ ರಾಜ್ಯದಲ್ಲಿ ಬಿಜೆಪಿ ಕಟ್ಟಿ ಬೆಳೆಸಿದ್ದಾರೆ. ಬಿಜೆಪಿ ಬೆಳವಣಿಗೆಯ ಹಿಂದೆ ನನ್ನ ತಂದೆಯ ಪರಿಶ್ರಮವೂ ಇದೇ. ಮುಂಬರುವ ಚುನಾವಣೆಯಲ್ಲಿ ರಾಜ್ಯದಲ್ಲಿ ಬಿಜೆಪಿಯನ್ನು ಮತ್ತೆ ಅಧಿಕಾರಕ್ಕೆ ತರುವುದೇ ನಮ್ಮ ಗುರಿಯೆಂದರು.

ಮಳೆ ವಿಷಯವನ್ನು ರಾಜಕೀಯ ಮಾಡುವ ಯತ್ನ
ಬೆಂಗಳೂರಿನಲ್ಲಿ 50 ವರ್ಷಗಳಲ್ಲಿ ಇಷ್ಟು ಪ್ರಮಾಣದ ಮಳೆ ಆಗಿರಲಿಲ್ಲ. ಮಳೆಯಿಂದ ಸಾಕಷ್ಟು ಸಮಸ್ಯೆ ಆಗಿದೆ. ಬಿಜೆಪಿ ಸರಕಾರ ಈ ವಿಚಾರವನ್ನು ಬಹಳ ಗಂಭೀರವಾಗಿ ಪರಿಗಣಿಸಿದೆ. ಈ ವಿಷಯದಲ್ಲಿ ವಿರೋಧ ಪಕ್ಷ ರಾಜಕೀಯ ಮಾಡಲು ಯತ್ನಿಸುತ್ತಿದೆ. ಬೆಂಗಳೂರಿನ ಇವತ್ತಿನ ಪರಿಸ್ಥಿತಿಗೆ ಯಾರು ಕಾರಣ ಅನ್ನೋದು ಎಲ್ಲರಿಗೂ ಗೊತ್ತಿದೆ. ಈ ಸಂದರ್ಭದಲ್ಲಿ ರಾಜಕೀಯ ಮಾಡುವುದು ಸೂಕ್ತವಲ್ಲ. ಹೊರಗಿನ ರಾಜ್ಯದವರನ್ನು ಕನ್ನಡಿಗರು ಪ್ರೀತಿಯಿಂದ ನೋಡಿಕೊಳ್ಳುತ್ತಾರೆ. ಇವತ್ತಿನ ಪರಿಸ್ಥಿತಿಯನ್ನ ನಿಭಾಯಿಸುವುದು ಸರಕಾರದ ಜವಾಬ್ದಾರಿ. ಗಂಭೀರವಾಗಿ ಪರಿಗಣಿಸಿ ಸಮಸ್ಯೆ ಬಗೆಹರಿಸುವತ್ತಾ ಸಿಎಂ ಬೊಮ್ಮಾಯಿ ಗಮನಹರಿಸಲಿದ್ದಾರೆಂದು ವಿಜಯೇಂದ್ರ ವಿಶ್ವಾಸ ವ್ಯಕ್ತಪಡಿಸಿದರು.

ಬಿಎಸ್‌ವೈ ಹುಟ್ಟೂರಿಗೂ ಭೇಟಿ
ಬೂಕನಕೆರೆಗೆ ಬರುವ ಮುನ್ನ ಕೆ.ಆರ್.ಪೇಟೆ ಪಟ್ಟಣಕ್ಕೆ ಆಗಮಿಸಿದ ಬಿ.ವೈ.ವಿಜಯೇಂದ್ರ ಸಚಿವ ಕೆ.ಸಿ.ನಾರಾಯಣಗೌಡರ ನಿವಾಸಕ್ಕೆ ಆಗಮಿಸಿ ಕೆಲಕಾಲ ಸಚಿವ ಹಾಗೂ ಪಕ್ಷದ ಕಾರ್ಯಕರ್ತರೊಂದಿಗೆ ಸಮಾಲೋಚನೆ ನಡೆಸಿದರು. ತಂದೆ ಹುಟ್ಟೂರಿಗೆ ಬಂದಿದ್ದು ಬಹಳ ಸಂತೋಷವಾಗಿದೆ. ನಾರಾಯಣಗೌಡರು ಕೆ.ಆರ್.ಪೇಟೆಯಲ್ಲಿ ಬಿಜೆಪಿ ಬಾವುಟ ಹಾರಿಸಿರುವುದು ಹೆಮ್ಮೆಯಾಗಿದೆ ಎಂದರು.
ಅನಂತರ ಪಟ್ಟಣದ ಮುಖ್ಯರಸ್ತೆಯಲ್ಲಿ ಹಿಂದೂ ಧರ್ಮ ಧ್ವಜ ಸಮಿತಿಯವರು ಪ್ರತಿಷ್ಠಾಪಿಸಿರುವ ಗಣೇಶ ಮಂಟಪಕ್ಕೆ ಆಗಮಿಸಿ ವಿಘ್ನೇಶ್ವರನಿಗೆ ವಿಶೇಷ ಪೂಜೆ ಸಲ್ಲಿಸಿದರು. ಬೂಕನಕೆರೆ ಪಕ್ಕದಲ್ಲಿರುವ ಬೋಳಾರೆ ರಂಗನ ದೇವಾಲಯಕ್ಕೂ ಆಗಮಿಸಿ ವಿಶೇಷ ಪೂಜೆ ಸಲ್ಲಿಸಿದ ಬಿ.ವೈ.ವಿಜಯೇಂದ್ರ ತಮ್ಮ ತಂದೆ ಬಿ.ಎಸ್. ಯಡಿಯೂರಪ್ಪ ಅವರ ಹುಟ್ಟೂರು ಬೂಕನಕೆರೆಗೆ ಆಗಮಿಸಿ ಗ್ರಾಮದೇವತೆ ಗೋಗಾಲಮ್ಮನಿಗೂ ವಿಶೇಷ ಪೂಜೆ ಸಲ್ಲಿಸಿದರು.












Click it and Unblock the Notifications