KRS Dam: ಕೃಷ್ಣರಾಜಸಾಗರದಲ್ಲಿ ಬಾಗಿನ ಸಮರ್ಪಣೆ ಮಾಡಿದ ಸಿಎಂ ಸಿದ್ದರಾಮಯ್ಯ
ಕಳೆದ ವರ್ಷ ಮಳೆ ಕೊರತೆ, ಬರಗಾಲದಿಂದ ಕಂಗಾಲಾಗಿದ್ದ ರಾಜ್ಯದ ಜನತೆಗೆ ಈ ಬಾರಿ ವರುಣನ ಆಶೀರ್ವಾದ ಸಿಕ್ಕಿದೆ. ರಾಜ್ಯದ ಬಹುತೇಕ ಜಲಾಶಯಗಳು ಭರ್ತಿಯಾಗಿದ್ದು, ಹಲವು ಕಡೆ ಪ್ರವಾಹ ಪರಿಸ್ಥಿತಿ ಉಂಟಾಗಿದೆ. ರೈತರ ಜೀವನಾಡಿ ಕೃಷ್ಣರಾಜಸಾಗರ ಭರ್ತಿಯಾಗಿದ್ದು ಸಿಎಂ ಸಿದ್ದರಾಮಯ್ಯ ಮತ್ತು ಸಚಿವರು ಇಂದು ಬಾಗಿನ ಅರ್ಪಿಸಿದರು.
ಬಾಗಿನ ಸಮರ್ಪಣೆ ಮಾಡುವ ಕಾರಣ ಜಲಾಶಯದ ಬಳಿ ವಿಶೇಷ ಅಲಂಕಾರ ಮಾಡಲಾಗಿತ್ತು. ವಿಶೇಷ ಪೂಜೆ ಸಲ್ಲಿಸುವ ಮೂಲಕ ಮುಖ್ಯಮಂತ್ರಿ ಸಿದ್ದರಾಮಯ್ಯ, ನಾಡಿನ ಜನರ ಪರವಾಗಿ ಕಾವೇರಿ ಮಾತೆಗೆ ಬಾಗಿನ ಸಮರ್ಪಣೆ ಮಾಡಿದರು.

ಅರ್ಚಕ ಭಾನುಪ್ರಕಾಶ್ ಶರ್ಮಾ ವಿಶೇಷ ಪೂಜೆ ನೆರವೇರಿಸಿದ ನಂತರ ಸಂಪುಟ ಸಹೋದ್ಯೋಗಿಗಳ ಜೊತೆ ಕಾವೇರಿ ಮಾತೆಗೆ ಪೂಜೆ ಸಲ್ಲಿಸಿ, ತುಂಬಿ ಹರಿಯುತ್ತಿರುವ ಕಾವೇರಿಗೆ ಬಾಗಿನ ಅರ್ಪಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಧನ್ಯತಾ ಬಾವ ಮೆರೆದರು.
ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್, ಜಿಲ್ಲಾ ಉಸ್ತುವಾರಿ ಸಚಿವ ಎನ್.ಚೆಲುವರಾಯಸ್ವಾಮಿ,ಡಾ. ಹೆಚ್.ಸಿ. ಮಹದೇವಪ್ಪ, ವೆಂಕಟೇಶ್, ಶಾಸಕರಾದ ತನ್ವಿರ್ ಸೇಠ್, ರಮೇಶ್ ಬಂಡಿಸಿದ್ದೇಗೌಡ, ನರೇಂದ್ರಸ್ವಾಮಿ, ರವಿ ಕುಮಾರ್ ಗಣಿಗ, ಕದಲೂರುಉದಯ್, ದರ್ಶನ್ ಧ್ರುವನಾರಾಯಣ, ಜಲ ಸಂಪನ್ಮೂಲ ಇಲಾಖೆ ಅಪರ ಮುಖ್ಯ ಕಾರ್ಯದರ್ಶಿ ಗೌರವ್ ಗುಪ್ತ, ಕಾವೇರಿ ನೀರಾವರಿ ನಿಗಮದ ಎಂಡಿ ಮಹೇಶ್ ಇತರರಿದ್ದರು.
ಜಲಾಶಯದಲ್ಲಿ ಕಣ್ಮನ ಸೆಳೆದ ಕನ್ನಡ ಬಾವುಟ
ಮಳೆ ಕೊರತೆ ಮತ್ತು ಬರಗಾಲದ ಹಿನ್ನೆಲೆಯಲ್ಲಿ ಕಳೆದ ಎರಡು ವರ್ಷ ಕೆಆರ್ ಎಸ್ ಭರ್ತಿಯಾಗಿರಲಿಲ್ಲ ಆದರೆ ಈ ಬಾರಿ ಆಷಾಢ ಮಾಸದಲ್ಲಿ ಜಲಾಶಯಕ್ಕೆ ಹೆಚ್ಚಿನ ಪ್ರಮಾಣದ ನೀರು ಹರಿದು ಬಂದ ಹಿನ್ನೆಲೆಯಲ್ಲಿ ಸಂಪೂರ್ಣ ಭರ್ತಿಯಾಗಿದ್ದು ಆ ಹಿನ್ನೆಲೆಯಲ್ಲಿ ಕಾವೇರಿಗೆ ಬಾಗಿನ ಅರ್ಪಿಸುವ ವೇಳೆ ಸಂಭ್ರಮ ಮನೆ ಮಾಡಿತ್ತು.
ಜಲಾಶಯದ ಮೇಲ್ಭಾಗದಲ್ಲಿ ಕನ್ನಡ ಬಾವುಟಗಳ ಹಾರಾಟ ಭಾಷಾಭಿಮಾನದ ಜೊತೆಗೆ ಕನ್ನಡಿಗರ ಮನ ತಣಿಸಿತು, ಕಣ್ಣು ಹಾಯಿಸುವ ಉದ್ದಕ್ಕೂ ಕನ್ನಡ ಬಾವುಟ ರಾರಾಜಿಸಿದವು. ತಳಿರು ತೋರಣಗಳ ಸಿಂಗಾರ ಬಾಗಿನಕ್ಕೆ ಮೆರಗು ನೀಡಿದರೆ ಜಲಾಶಯದ ಕೆಳ ಭಾಗದಲ್ಲಿರುವ ಅಲಂಕೃತ ಕಾವೇರಿ ಮಾತೆ ಕಣ್ಮನ ಸೆಳೆಯಿತು.
ತಣ್ಣಗಾದ ಜಲವಿವಾದ
ಕರ್ನಾಟಕ ತಮಿಳುನಾಡು ನಡುವಿನ ಜಲವಿವಾದಕ್ಕೆ ತಾತ್ಕಾಲಿಕವಾಗಿ ಬ್ರೇಕ್ ಬಿದ್ದಿದೆ. ಬೇಸಿಗೆಯಲ್ಲಿ ನೀರಿನ ಕೊರತೆಯಿಂದಾಗಿ ಕರ್ನಾಟಕ ಮತ್ತು ತಮಿಳುನಾಡು ನಡುವೆ ನೀರಿಗಾಗಿ ಕಿತ್ತಾಟ ನಡೆದಿತ್ತು. ಈಗ ರಾಜ್ಯದ ಕಾವೇರಿ ಕೊಳ್ಳದ ಜಲಾಶಯಗಳು ಭರ್ತಿಯಾಗಿದ್ದು, ತಮಿಳುನಾಡಿಗೂ ಅಪಾರ ಪ್ರಮಾಣದ ನೀರು ಹರಿದಿದೆ. ಮೆಟ್ಟೂರು ಜಲಾಶಯ ಕೂಡ ಭರ್ತಿಯಾಗಿದ್ದು ನದಿಗೆ ನೀರು ಬಿಡಲಾಗಿದೆ.












Click it and Unblock the Notifications