ಸಿಎಂ ಬದಲಾವಣೆ ವಿಚಾರ: ಸತೀಶ್ ಜಾರಕಿಹೊಳಿಗೆ ತಿರುಗೇಟು ನೀಡಿದ ಶಾಸಕ ನರೇಂದ್ರಸ್ವಾಮಿ
ಮಂಡ್ಯ, ನವೆಂಬರ್ 21: ಮುಖ್ಯಮಂತ್ರಿ ಬದಲಾವಣೆ ಬಗ್ಗೆ ಮಾತನಾಡುವುದಕ್ಕೆ ಯಾರಿಗೂ ಯೋಗ್ಯತೆ ಇಲ್ಲ. ಈ ಬಗ್ಗೆ ಯಾರಿಗೂ ಹಕ್ಕು ಕೊಟ್ಟಿಲ್ಲ. ಸಿಎಂ ವಿಚಾರ ಏನಿದ್ದರೂ ಹೈಕಮಾಂಡ್‌ಗೆ ಬಿಟ್ಟಿದ್ದು ಎಂದು ಮಳವಳ್ಳಿ ಶಾಸಕ ಪಿ.ಎಂ. ನರೇಂದ್ರಸ್ವಾಮಿ ವಾಗ್ದಾಳಿ ನಡೆಸಿದರು.
ಸುದ್ಧಿಗಾರರೊಂದಿಗೆ ಮಾತನಾಡಿದ ಅವರು, ಸಿಎಂ ಬದಲಾವಣೆ ಏನಿದ್ದರೂ ಎಐಸಿಸಿ ಅಧ್ಯಕ್ಷರು, ಸೋನಿಯಾಗಾಂಧಿ, ರಾಹುಲ್‌ಗಾಂಧಿ ಅವರಿಗೆ ಬಿಟ್ಟ ವಿಚಾರ. ಇದು ಬಹಿರಂಗವಾಗಿ ಸಿಎಂ ವಿಚಾರ ಮಾತನಾಡೋ ಯೋಗ್ಯತೆ ನಮಗೆ ಯಾರಿಗೂ ಇಲ್ಲ. ಮಾತನಾಡುವುದು ಅಕ್ಷಮ್ಯ ಎಂದು ಸಚಿವ ಸತೀಶ್‌ಜಾರಿಕಿಹೊಳಿ ಅವರಿಗೆ ತಿರುಗೇಟು ನೀಡಿದರು.

ಸಹಜವಾಗಿ ಕೆಲವರಿಗೆ ರಾಜಕೀಯ ಅನುಭವ ಇಲ್ಲ. ಆಡಳಿತದ ಅನುಭವವೇ ಬೇರೆ, ಇತರೆ ಪಕ್ಷದ ರಾಜಕೀಯ ಅನುಭವವೇ ಬೇರೆ. ಈ ವಿಚಾರದಲ್ಲಿ ಕೆಲವರಿಗೆ ಅನುಭವದ ಕೊರತೆ ಇದೆ. ಅದಕ್ಕಾಗಿ ಆಗಾಗ್ಗೆ ಇಂತಹ ವಿಚಾರ ಕೇಳಿ ಬರುತ್ತಿದೆ. ಅವರು ತವರು ಜಿಲ್ಲೆಯ ಲೀಡರ್‌ಗಾಗಿ ಈ ರೀತಿಯ ಮಾತುಗಳನ್ನಾಡುತ್ತಿದ್ದಾರೆ ಎಂದು ಹೇಳಿದರು.
ಎಂಪಿ ಚುನಾವಣೆ ಬಳಿಕ ಸಂಪುಟ ಪುನಾರಚನೆ :
ಲೋಕಸಭಾ ಚುನಾವಣೆ ಬಳಿಕ ಸಂಪುಟ ಪುನಾರಚನೆ ಆಗಲಿದೆ ಎಂದು ಸ್ಪೋಟಕ ಹೇಳಿಕೆ ನೀಡಿದ ಅವರು, ಪಾರ್ಲಿಮೆಂಟ್ ಚುನಾವಣೆ ನಂತರ ನಾನು ಮಂತ್ರಿ ಆಗುತ್ತೇನೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ರಾಹುಲ್ ಗಾಂಧಿ ಪ್ರಧಾನಿ ಆಗಬೇಕು ಅಂದುಕೊಂಡಿದ್ದರೆ ಮನ್‌ಮೋಹನ್‌ಸಿಂಗ್ ಕಾಲದಲ್ಲಿಯೇ ಆಗಬಹುದಿತ್ತು. ಒಂದೊಂದೇ ವಿಚಾರದಲ್ಲಿ ಒಂದು ಕಾರಣ ಇರುತ್ತದೆ. ಕಳೆದ ಬಾರಿ ಮಂಡ್ಯ ಜಿಲ್ಲೆಯಿಂದ ಅಂಬರೀಶ್ ಮಂತ್ರಿ ಆದರು. ಈಗ ಚಲುವರಾಯಸ್ವಾಮಿ ಮಂತ್ರಿ ಆಗಿದ್ದಾರೆ. ರಾಜಕೀಯ ವಿಶ್ಲೇಷಣೆ ಮಾಡಲು ಹೋದರೆ ಬೇರೆ ಬೇರೆ ಇರುತ್ತದೆ ಎಂದು ಹೇಳಿದರು.
ನನಗೂ ಸಂದರ್ಭ ಒದಗಿ ಬರುತ್ತದೆ. ನನ್ನ ಖೋಟೋ 2016ರಲ್ಲಿಯೇ ಮಿಸ್ ಆಗಿತ್ತು. ಈಗಲೂ ಒಂದು ಬಾರಿ ಮಿಸ್ ಆಗಿದೆ. ನಾನು ಶಿಸ್ತನ್ನು ಉಲ್ಲಂಘನೆ ಮಾಡುವುದಿಲ್ಲ. ನನ್ನ ಬೇಡಿಕೆಯನ್ನು ಹೈಕಮಾಂಡ್ ಬಳಿ ಹೇಳಿಕೊಂಡಿದ್ದೇನೆ. ಭಗವಂತ ನನ್ನ ಪಾಲಿಗೂ ಇದ್ದಾನೆ ಎಂದು ಪ್ರತಿಕ್ರಿಯಿಸಿದರು.
ನನಗೆ ಎಷ್ಟೇ ಅನ್ಯಾಯವಾದರೂ ಅಂಬೇಡ್ಕರ್ ಹೆಸರಿನಲ್ಲಿ ಪ್ರಮಾಣ ವಚನ ಸ್ವೀಕರಿಸಿದ್ದನ್ನು ಯಾರೂ ತಡೆಯಲಾಗಲಿಲ್ಲ. ನಾನು ಕೇಳದೆ ಇರುವ ಅದೃಷ್ಟ 2016ರಲ್ಲೇ ಬಂದಿತ್ತು. ಈಗಲೂ ಆ ಅದೃಷ್ಟ ಬರುತ್ತದೆ.ನನ್ನ ಮೇಲೆ ಪಕ್ಷದ ವಿಶ್ವಾಸವೂ ಇದೆ ಎಂದು ಹೇಳಿದರು.
ಒಂದು ಅನಿವಾರ‌್ಯ ಸಂದರ್ಭದಿಂದ ನನಗೆ ಮಂತ್ರಿ ಸ್ಥಾನ ಮಿಸ್ ಆಗಿದೆ. ಇವತ್ತು ಆ ಸಂದರ್ಭ ಇದೆ ಆದರೂ ಬಹಿರಂಗಪಡಿಸುವುದಿಲ್ಲ. ನಾನು ಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸುವ ಮೊದಲು ಆ ಸಂದರ್ಭವನ್ನು ಹೇಳುತ್ತೇನೆ. ಪಕ್ಷದಲ್ಲಿ ಬಹಳಷ್ಟು ವಿಚಾರಗಳಿವೆ. ನಾನು ಹೊರಗೆ ನಿಂತು ಕಲ್ಲು ಹೊಡೆಯುವುದಿಲ್ಲ. ಲೋಕಸಭೆ ಚುನಾವಣೆ ಬಳಿಕ ಎಲ್ಲವೂ ಸ್ಪಷ್ಟವಾಗಲಿದೆ ಎಂದು ಹೇಳಿದರು.












Click it and Unblock the Notifications