ಮಂಡ್ಯ: ವೇದಿಕೆ ಹಂಚಿಕೊಳ್ಳುವ ವಿಚಾರಕ್ಕೆ JDS ಕಾರ್ಯಕರ್ತರು-ಸುಮಲತಾ ಬೆಂಬಲಿಗರ ನಡುವೆ ಸಮರ
ಮಂಡ್ಯ, ಜನವರಿ, 23: ಸಂಸದೆ ಸುಮಲತಾ ಅವರ ಬೆಂಬಲಿಗರು ಮತ್ತು ಜೆಡಿಎಸ್ ಕಾರ್ಯಕರ್ತರ ನಡುವೆ ವೇದಿಕೆ ಹಂಚಿಕೊಳ್ಳುವ ವಿಚಾರದಲ್ಲಿ ಬಡಿದಾಡಿಕೊಂಡ ಘಟನೆ ಮಂಡ್ಯ ತಾಲೂಕಿನ ಬಿ.ಗೌಡಗೆರೆ ಗ್ರಾಮದಲ್ಲಿ ನಡೆದಿದೆ.
ಬಿ.ಗೌಡಗೆರೆ ಗ್ರಾಮದಲ್ಲಿ ದೇವಾಲಯದ ಉದ್ಘಾಟನೆ ಸಮಾರಂಭದಲ್ಲಿ ಸುಮಲತಾ ಅವರ ಬೆಂಬಲಿಗರು ಮತ್ತು ಜೆಡಿಎಸ್ ಕಾರ್ಯಕರ್ತರು ಕುರ್ಚಿಗಳಲ್ಲಿ ಬಡಿದಾಡಿಕೊಂಡಿದ್ದಾರೆ. ಗ್ರಾಮದ ಮಲೈಮಹದೇಶ್ವರ ಸ್ವಾಮಿಯ ನೂತನ ವಿಗ್ರಹ ಪ್ರತಿಷ್ಠಾಪನೆ ಮತ್ತು ದೇವಾಲಯ ಉದ್ಘಾಟನೆ ಕಾರ್ಯಕ್ರಮ ನಡೆದಿತ್ತು. ಇದಕ್ಕೆ ಸಂಸದೆ ಸೇರಿದಂತೆ ಶಾಸಕರು ಹಾಗೂ ಸ್ಥಳೀಯ ಮುಖಂಡರಿಗೆ ಆಹ್ವಾನ ನೀಡಲಾಗಿತ್ತು. ಅದರಂತೆಯೇ ಸುಮಲತಾ ಅವರು ದೇವಾಲಯ ಉದ್ಘಾಟನಾ ಕಾರ್ಯಕ್ರಮದಲ್ಲಿ ಭಾಗವಹಿಸಲು ಗ್ರಾಮಕ್ಕೆ ತೆರಳಿದಾಗ ಜೆಡಿಎಸ್‌ನ ಕೆಲವರು ವೇದಿಕೆ ಹಂಚಿಕೊಳ್ಳದಂತೆ ತಡೆದರು. ಈ ವೇಳೆ ಸುಮಲತಾ ಬೆಂಬಲಿಗರು ಇದನ್ನು ವಿರೋಧಿಸಿದ್ದಾರೆ. ಇದಕ್ಕೂ ಮೊದಲು ಕಾಂಗ್ರೆಸ್ ಮತ್ತು ಜೆಡಿಎಸ್ ಜಟಾಪಟಿಯಂತೆ ನಡೆಯುತ್ತಿದ್ದ ಜಗಳದಲ್ಲಿ ಸಂಸದೆ ಅವರ ಹೆಸರನ್ನು ಹೇಳಿಕೊಂಡು ತಗಾದೆ ತೆಗೆಯಲಾಯಿತು.
ಈ ಜಗಳದಲ್ಲಿ ಸಂಸದರು ವೇದಿಕೆಯನ್ನು ಏರಲೇಬಾರದು ಎಂದು ಕೂಗಾಟ ನಡೆಸಿದ್ದಾರೆ. ಇದನ್ನು ವಿರೋಧಿಸಿದ ಅವರ ಬೆಂಬಲಿಗರು, ಗ್ರಾಮದ ಅಭಿವೃದ್ಧಿ ವಿಚಾರದಲ್ಲಿ ಇಂತಹ ಜಗಳ ಸರಿಯಲ್ಲ ಎಂಬ ಮಾತು ಹೇಳಿಕೊಂಡು ಗ್ರಾಮದ ಕೆಲವು ಮುಖಂಡರು ವೇದಿಕೆ ಏರಲು ಕೊನೆಗೆ ಅವಕಾಶ ಮಾಡಿಕೊಟ್ಟರು.

ನಾನು ಪ್ರಚಾರಕ್ಕಾಗಿ ಇಲ್ಲಿಗೆ ಬಂದಿಲ್ಲ
ಈ ಸಂದರ್ಭದಲ್ಲಿ ಸಂಸದೆ ಸುಮಲತಾ ಮಾತನಾಡಿ, "ಸುಮಲತಾ ಬಂದರೆ ನೋಡುವ ಆಸೆಯಿಂದ ಜನ ಸೇರುತ್ತಾರೆ. ಕೆಲವರು ಪ್ರಚಾರ ತೆಗೆದುಕೊಳ್ಳುವ ದುರಾಸೆಯಿಂದ ಈ ರೀತಿ ಮಾಡಿ ಗದ್ದಲ ಸೃಷ್ಟಿ ಮಾಡುತ್ತಾರೆ. ಇದನ್ನು ನೋಡಿದರೆ ಮನಸಿಗೆ ತುಂಬಾ ನೋವಾಗುತ್ತದೆ. ಪಕ್ಷೇತರ ಸಂಸದೆಗೆ ಒಂದೊಂದು ಕೆಲಸ ಮಾಡಿಸೋದು ಎಷ್ಟು ಸವಾಲಗಿದೆ. ಈ ಬಗ್ಗೆ ನಿಮ್ಮ ಬಳಿ ಹೇಳಿಕೊಂಡಿದ್ದೀನಾ?" ಎಂದು ಪ್ರಶ್ನಿಸಿದರು.

ನೀವೇ ಅವಮಾನ ಮಾಡಿಕೊಳ್ಳುತ್ತಿದ್ದೀರಿ
"ಸರ್ಕಾರ, ಸಚಿವರು ಅಥವಾ ಅಧಿಕಾರಿಗಳಿರಬಹುದು ಅವರಿಂದ ಸಹಕಾರ ಸಿಗುವುದಿಲ್ಲ. ಸ್ಪಂದಿಸದೆ ತೊಂದರೆ ಕೊಡುತ್ತಾರೆ ಎಂಬುದನ್ನು ಈ ಮೂರೂವರೆ ವರ್ಷದಲ್ಲಿ ನೋಡಿದ್ದೀನಿ. ಆದರೆ, ಜನರಿಗೆ ತೊಂದರೆ ಕೊಡಬಾರದು ಅಂತಾ ಹಲ್ಲು ಕಚ್ಚಿಕೊಂಡು ಕೆಲಸ ಮಾಡುತ್ತಿದ್ದೇನೆ. ಸಣ್ಣ ಪುಟ್ಟ ಗೊಂದಲಗಳಿಗೆ ಈ ರೀತಿ ಮಾಡಿಕೊಂಡರೆ ನಿಮಗೆ ನೀವೇ ಅವಮಾನ ಮಾಡಿಕೊಂಡಂತೆ," ಎಂದು ಬುದ್ಧಿವಾದ ಹೇಳಿದರು.

ಸಮಸ್ಯೆಗಳಿಗೆ ಸ್ಪಂದಿಸಿದ್ದೇನೆ
ಗ್ರಾಮಸ್ಥರಿರಲಿ ಅಥವಾ ಮುಖಂಡರಿರಲಿ ರಾಜಕಾರಣ ಬಿಟ್ಟು ಅಭಿವೃದ್ಧಿ ವಿಚಾರ ಕೇಳಿ ಸಂತೋಷದಿಂದ ಮಾಡುತ್ತೇನೆ. ಗೊಂದಲ ಮಾಡಿಕೊಂಡು ಸರಿಮಾಡಿ ಎಂದು ನನ್ನ ಮುಂದೆ ಬರಬೇಡಿ. ಗೊಂದಲ ಸರಿಪಡಿಸಲು ಇದು ಪಂಚಾಯಿತಿ ಅಲ್ಲ. ಹಿಂದೆಯೂ ಈ ಊರಿನ ಕೆಲಸಗಳನ್ನು ಮಾಡಿದ್ದೇನೆ, ಅದಕ್ಕಾಗಿ ಇಲ್ಲಿಗೆ ಬಂದಿದ್ದೀನಿ. ಯಾರೋ ಮಾಡಿದ ಕೆಲಸಕ್ಕೆ ರಿಬ್ಬನ್ ಕಟ್ ಮಾಡುವುದಕ್ಕೆ, ಉದ್ಘಾಟನೆ ಮಾಡುವುದಕ್ಕೆ ಹೋಗುವುದಿಲ್ಲ. ಅಂತಹ ಪ್ರಚಾರ ನನಗೆ ಬೇಕಾಗಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

ಮಾತನಾಡುವುದಕ್ಕೆ ಸಮಯ ಬರುತ್ತದೆ
ನಾನು ಮಾತನಾಡುವಾಗ ಮಧ್ಯೆ ಮಾತನಾಡುವುದು ಸಭ್ಯತೆ ಅಲ್ಲ. ನಿಮಗೂ ಮಾತನಾಡುವುದಕ್ಕೆ ಒಂದು ಸಮಯ ಬರುತ್ತದೆ. ಈ ಗೊಂದಲ ನೋಡಿ ನನಗೆ ಬೇಜಾರ್ ಆಗುತ್ತಿದೆ. ಖುಷಿಯಿಂದ ಬಂದಿರುವುದಕ್ಕೆ ಈ ರೀತಿ ಮಾಡುವುದು ಎಷ್ಟು ಸರಿ. ಮಹಿಳೆಯರು ಆಸೆಯಿಂದ ಬಂದಿದ್ದಾರೆ, ಪ್ರೀತಿಯಿಂದ ಮಾತನಾಡಿಸುತ್ತಾರೆ. ನೀವು ಮಹಿಳೆಯರಿಂದ ಕಲಿಯಬೇಕು. ಊರಿನ ಕೆಲಸವನ್ನು ಜನಪ್ರತಿನಿಧಿಗಳಿಂದ ಮಾಡಿಸಿಕೊಳ್ಳುವುದಕ್ಕೂ ಒಂದು ಬದ್ಧತೆ ಇದೆ ಎಂದು ತಿಳಿ ಹೇಳಿದರು.












Click it and Unblock the Notifications